ಬೆಳಗಾವಿ, ಡಿ17- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗುವ ಯಾವ ಕೆಲಸಗಳನ್ನೂ ಮಾಡುವುದಿಲ್ಲ. ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆ ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪ ಪಟ್ಟಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ (ಟ್ರಯಲ್ ಕೋರ್ಟ್) ತೀರ್ಮಾನವನ್ನು ಬೆಂಬಲಿಸಿ ಇಂದು ಇಲ್ಲಿನ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರುಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಬೆದರಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಮಾಡಿದೆ ಎಂದು ದೂರಿದರು.
ಇಂತಹ ದ್ವೇಷ ರಾಜಕಾರಣದ ವಿರುದ್ಧ ಕಾಂಗ್ರೆಸ್ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದೆ. ನಾವು ಕೈಕಟ್ಟಿ ಕೂರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಇತಿಹಾಸ ಇದೆ. ಬಿಜೆಪಿಯ ಯಾರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದರು.
ಬಿಜೆಪಿಯವರು ಉದ್ಯೋಗ ಖಾತ್ರಿ ಯೋಜನೆಗೆ ಈಗ ಜಿ ರಾಮ್‌ಜಿ ಎಂದು ಹೆಸರು ಬದಲಾವಣೆ ಮಾಡಿದ್ದಾರೆ. ಮುಂದೆ ಅದನ್ನು ಜಿ ಮೋದಿ ಎಂದು ಬದಲಾವಣೆ ಮಾಡಬಹುದು. ಈ ಮೊದಲು ಯೋಜನಾ ಆಯೋಗದ ಹೆಸರನ್ನು ನೀತಿ ಆಯೋಗ ಎಂದು ಬದಲಾವಣೆ ಮಾಡಿದ್ದರು. ರಾಜ ಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರು ಇರಬಹುದು. ಆದರೆ, ಅದು ರಾಜ್ಯದ ಆಸ್ತಿ. ಹೆಸರನ್ನು ಲೋಕಭವನ ಎಂದು ಬದಲಾವಣೆ ಮಾಡಲು ಅವಕಾಶ ಇಲ್ಲ ಎಂದರು.
ಇಂದು ತಮಗೆ ಆರೋಗ್ಯ ಸರಿಯಿಲ್ಲ. ಹಾಗಾಗಿ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದ ಅವರು, ಎಲ್ಲಾ ಶಾಸಕರು ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೇವೆ. ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಕಾಂಗ್ರೆಸ್ ಪಕ್ಷದವರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದೆ, ತೇಜೋವಧೆ ಮಾಡಿದೆ ಎಂದು ಕಿಡಿಕಾರಿದರು.
ನ್ಯಾಷನಲ್ ಹೆರಾಲ್‌್ಡ ಮತ್ತು ಯಂಗ್ ಇಂಡಿಯಾ ಪ್ರಕರಣದಲ್ಲಿ ಅಸತ್ಯವಾದ ವಿಚಾರವನ್ನು ಮುಂದಿಟ್ಟುಕೊಂಡು ಪ್ರಕರಣ ದಾಖಲಿಸಿತ್ತು. ಕೇಂಧ್ರ ಸರ್ಕಾರ ತನ್ನ ಲೋಪಗಳನ್ನು ಮುಚ್ಚಿಟ್ಟುಕೊಳ್ಳಲು ಇಂತಹ ಆರೋಪಗಳನ್ನು ಮಾಡಿದೆ ಎಂದು ಆರೋಪಿಸಿದರು.
ದೇಶದಲ್ಲಿ ಇಂದು ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ, ನಿರುದ್ಯೋಗ ಹೆಚ್ಚಾಗಿದೆ. ವಿಪರೀತವಾಗಿ ತೆರಿಗೆ ಹೆಚ್ಚಿಸಲಾಗಿದೆ. ರಾಷ್ಟ್ರವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಪ್ರಧಾನಿಯಾಗುವವರೆಗೂ ದೇಶದ ಸಾಲ 53.11 ಲಕ್ಷ ಕೋಟಿ ರೂಪಾಯಿಗಳಿತ್ತು. ಇಂದು ದೇಶದ ಸಾಲ 200 ಲಕ್ಷ ಕೋಟಿ ರೂಪಾಯಿ ದಾಟಿದೆ. ಬಿಜೆಪಿ ನೇತೃತ್ವದ ಸರ್ಕಾರ 11 ವರ್ಷದಲ್ಲಿ 148 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ. ಇದನ್ನು ಮುಚ್ಚಿಟ್ಟುಕೊಳ್ಳಲು ಸುಳ್ಳು ವಿಚಾರಗಳನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
2014ರಲ್ಲಿ ನರೇಂದ್ರ ಮೋದಿ ಅವರು ಚುನಾವಣಾ ಭರವಸೆಯ ಮೂಲಕ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. ಅದ್ಯಾವುದೂ ಈಡೇರಿಲ್ಲ. ಬದಲಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಿದ್ದಾರೆ. ಇದರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸ್ವಾತಂತ್ರ ಹೋರಾಟದ ಬಗ್ಗೆ ಜನರಿಗೆ ಮಾಹಿತಿ ನೀಡಲು ನ್ಯಾಷನಲ್ ಹೆರಾಲ್‌್ಡ ಪತ್ರಿಕೆಯನ್ನು ನೆಹರು ಆರಂಭಿಸಿದ್ದರು. ಅದು ಕಾಂಗ್ರೆಸ್ ಪಕ್ಷದ ಆಸ್ತಿ. ಯಾರಿಗೂ ಸೇರಿದ ಖಾಸಗಿ ಆಸ್ತಿಯಲ್ಲ. ಆದರೂ ಕೇಂದ್ರ ಸರ್ಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಸೇರಿದಂತೆ ಸೇರಿದಂತೆ ಹಲವರ ವಿರುದ್ಧ ಜಾರಿ ನಿರ್ದೇಶನಾಲಯದ ಪ್ರಕರಣ ದಾಖಲಿಸಿತ್ತು. ನೆನ್ನೆ ವಿಚಾರಣಾ ನ್ಯಾಯಾಲಯ ಇಡಿ ಸಲ್ಲಿಸಿದ ದೋಷಾರೋಪಣಾ ಪಟ್ಟಿಯನ್ನು ವಜಾಗೊಳಿಸಿದೆ. ಇದರ ಅರ್ಥ ಅಸತ್ಯ ಮತ್ತು ದ್ವೇಷದ ರಾಜಕಾರಣಕ್ಕೆ ನ್ಯಾಯಾಲಯ ಮಾನ್ಯತೆ ನೀಡಿಲ್ಲ. ಸತ್ಯವನ್ನು ಎತ್ತಿ ಹಿಡಿದಿದೆ ಎಂದರು.
ಮಹಾತ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾವಣೆ ಮಾಡಿ ಜಿ ರಾಮ್‌ಜಿ ಎಂದು ಮರುನಾಮಕರಣ ಮಾಡಿದ್ದಾರೆ. ಮಹಾತ ಗಾಂಧೀಜಿಯವರ ಹೆಸರಿನಲ್ಲೇ ಯೋಜನೆ ಇದ್ದಿದ್ದರೆ ಬಿಜೆಪಿಯವರಿಗೆ ಆಗುತ್ತಿದ್ದ ನಷ್ಟವೇನು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಬಿಜೆಪಿಯವರಿಗೆ ಮಹಾತ ಗಾಂಧೀಜಿ, ಜವಾಹರ್‌ಲಾಲ್ ನೆಹರು, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಡವರನ್ನು ಕಂಡರೆ ಬಿಜೆಪಿಗೆ ಸಹಿಸಲಾಗುವುದಿಲ್ಲ. ಬಡವರು, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ವಿರುದ್ಧವಾದ ಮನಸ್ಥಿತಿಯನ್ನು ಬಿಜೆಪಿ ಹೊಂದಿದೆ. ಎಲ್ಲಾ ಜಾತಿಯಲ್ಲಿರುವ ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ರೂಪಿಸಿದರೆ, ಅದನ್ನು ವಿರೋಧಿಸುವುದು ಬಿಜೆಪಿಯವರ ಧ್ಯೇಯವಾಗಿದೆ ಎಂದರು.
ರಾಜ್ಯದಲ್ಲಿ ಜಾರಿಗೊಳಿಸಿದ ಪಂಚಖಾತ್ರಿ ಯೋಜನೆಗಳನ್ನು ವಿರೋಧ ಮಾಡಿದ ಬಿಜೆಪಿಯವರು, ಈಗ ಬೇರೆ ಬೇರೆ ರಾಜ್ಯಗಳಲ್ಲಿ ಅದನ್ನೇ ಅನುಸರಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಸೇರಿ ಎಲ್ಲಾ ಸಚಿವರು ಮತ್ತು ಶಾಸಕರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಹಾಳುಗೆಡವುತ್ತಿರುವುದರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
