ಬೆಂಗಳೂರು, ಮೇ 13- ನವೀನ್ ಗೌಡ ಎಂಬ ವ್ಯಕ್ತಿಯು ನನಗೆ ಪರಿಚಯವಿಲ್ಲ. ನನಗೆ ಆತ ಪೆನ್ ಡ್ರೈವ್ ಕೊಟ್ಟಿಲ್ಲ. ಈ ಬಗ್ಗೆ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂಬ ಉದ್ದೇಶದಿಂದ ಎಸ್‌ಐಟಿಗೆ ದೂರು ನೀಡಿರುವುದಾಗಿ ಶಾಸಕ ಎ.ಮಂಜು ಹೇಳಿದ್ದಾರೆ. ಎಸ್‌ಐಟಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಅವ್ರ ಫೇಸ್ ಬುಕ್‌ನಲ್ಲಿ ಏ.20 ರಂದು ಪೆನ್‌ಡ್ರೈವ್ ಸಿಗುತ್ತದೆ. 21ರಂದು ಕಲ್ಯಾಣ ಮಂಟಪದಲ್ಲಿ ಸಿಗುತ್ತದೆ ಅಂತಾ ಹೇಳಿದ್ದರು.
ಇವ್ರಿಗೆ ರಸ್ತೆಯಲ್ಲೇ ಪೆನ್‌ಡ್ರೈವ್ ಸಿಕ್ಕಿರಬಹುದು. ಆದರೆ, ಅದನ್ನು ನನಗೆ ಯಾಕೆ ಕೊಡಬೇಕು? ಆ ಮನಸ್ಸು ಅವರಿಗೆ ಯಾಕೆ ಬಂದಿದೆ ಎಂದು ಪ್ರಶ್ನಿಸಿದರು. ನನಗೆ ಆತನ ಬಗ್ಗೆ ಪರಿಚಯವಿಲ್ಲ. ಆತ ಎಸ್‌ಐಟಿ ತನಿಖೆ ದಿಕ್ಕು ತಪ್ಪಿಸೋಕೆ ಈ ರೀತಿ ಮಾಡಿರಬಹುದು.ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಇದರ ಹಿಂದೆ ಯಾರಿದ್ದಾರೆ, ಏನು ಅಂತ ನಾನು ಹೇಳಲ್ಲ ಎಂದರು.
ಆತ ಯಾವುದೇ ರೀತಿಯಿಂದಲೂ ನನಗೆ ಪರಿಚಯ ಇಲ್ಲ.ನನ್ನನ್ನು ಭೇಟಿಯಾಗಿದ್ದು, ಪೆನ್‌ಡ್ರೈವ್ ಕೊಟ್ಟಿದ್ದು ಸುಳ್ಳು. ಇದ್ರ ಬಗ್ಗೆ ತನಿಖೆ ಆಗ್ಲಿ ಅಂತಲೇ ನಾನು ದೂರು ಕೊಟ್ಟಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರ ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ. ನನ್ನ ಅವರ ಕುಟುಂಬದಿಂದ ದೂರ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಏ.21 ರಂದು ನನಗೆ ಪೆನ್‌ಡ್ರೈವ್ ಕೊಟ್ಟಿರುವುದಾದರೆ, ಏ.29ರಂದು ಕೊಟ್ಟ ಅಫಿಡವಿಟ್‌ನಲ್ಲಿ ಯಾಕೆ ಆ ರೀತಿ ಆಗಿದೆ ಎಂದು ಪ್ರಶ್ನಿಸಿದರು.
ಫೇಸ್‌ಬುಕ್ ಅಕೌಂಟ್ ಯಾಕೆ ಇವತ್ತು ಹ್ಯಾಕ್ ಆಗಿದೆ:
ಇದರ ಸತ್ಯಾಸತ್ಯತೆ ಹೊರಬರಬೇಕು.ನವೀನ್ ಅವರನ್ನು ಎಸ್‌ಐಟಿ ಬೇಗ ಬಂಧಿಸಬೇಕು. ಆಗ ಮಾತ್ರ ಇದರ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಅವರು ಹೇಳಿದರು.ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಘಟನೆ ಆದಮೇಲೆ ದೇವೇಗೌಡರನ್ನು ಭೇಟಿಯಾಗಿ ಧೈರ್ಯ ತುಂಬಿದ್ದೇನೆ. ಶಾಸಕ ರೇವಣ್ಣ ಅವರಿಗೂ ಭೇಟಿಯಾಗಿ ಧೈರ್ಯ ಹೇಳಿದ್ದೇನೆ. ಆ ಮಹಿಳೆ ಕೂಡ ದೂರು ಕೊಟ್ಟಿಲ್ಲ ಅಂತಾ ಹೇಳಿದಾರೆ. ಕಾದು ನೋಡೋಣ ಏನಾಗುತ್ತದೆ ಎಂದರು.
ಈ ರೀತಿಯ ಘಟನೆಗಳು ಪ್ರಪಂಚದಲ್ಲಿ ಎಲ್ಲೂ ಆಗಬಾರದು. ಇದರಲ್ಲಿ ರಾಜಕೀಯ ಇದೆ. ಇದರ ಬಗ್ಗೆ ನನ್ನ ಆಕ್ಷೇಪವಿದೆ. ಯಾರು ಇದನ್ನು ಪ್ರಚಾರ ಮಾಡುತ್ತಿದ್ದಾರೆ ಅವರಿಗೂ ಹೆಂಡತಿ, ಮಕ್ಕಳು, ತಾಯಂದರು ಇರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.