Thursday, May 2, 2024
Homeರಾಜ್ಯಬೇಸಿಗೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ : ಜಾರ್ಜ್

ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ : ಜಾರ್ಜ್

ಬೆಂಗಳೂರು, ಮಾ.27- ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಇದಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಸಚಿವರು, ಸದ್ಯ ಪರಿಸ್ಥಿತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.

ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದು ನಿರೀಕ್ಷಿತ. ಅದಕ್ಕಾಗಿ ಬಹಳ ಮುಂಚಿತವಾಗಿ ಸರಿಯಾದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಯಾವುದೇ ವರ್ಗದ ಗ್ರಾಹಕರಿಗೆ ಲೋಡ್ ಶೆಡ್ಡಿಂಗ್ ಬಿಸಿ ತಟ್ಟದಂತೆ ಇಲಾಖೆ ಎಚ್ಚರವಹಿಸಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿ ದಿನದ ವಿದ್ಯುತ್ ಬಳಕೆ 329 ಮಿಲಿಯನ್ ಯೂನಿಟ್ನಷ್ಟಿದ್ದು, ಹಿಂದಿನ ವರ್ಷ ಇದೇ ಅವಯ ವಿದ್ಯುತ್ ಬಳಕೆ ಪ್ರಮಾಣ 300 ಮಿ.ಯೂ. ನಷ್ಟಿತ್ತು. ಕಳೆದ ವರ್ಷದ ಗರಿಷ್ಠ ಲೋಡ್ 15300 ಮೆಗಾ ವ್ಯಾಟ್‍ಗಿಂತ ಹೆಚ್ಚಿದ್ದರೆ, ಈ ವರ್ಷದ ಗರಿಷ್ಠ ಲೋಡ್ 17000 ಮೆಗಾ ವ್ಯಾಟ್‍ಗೆ ಏರಿದೆ ಎಂದು ವಿವರಿಸಿದ್ದಾರೆ.

ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಕೃಷಿ ಪಂಪ್‍ಸೆಟ್‍ಳಿಗೆ 7 ತಾಸು ವಿದ್ಯುತ್ ಪೂರೈಕೆಗೆ ಆದೇಶ ನೀಡಲಾಗಿದೆ. ಬೇಸಿಗೆ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು ಭರವಸೆ ನೀಡಿದ್ದಾರೆ.

ವಿದ್ಯುತ್ ಬೇಡಿಕೆ ಪೂರೈಕೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿರುವ ಸಚಿವರು, 2024ನೇ ಸಾಲಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ಉತ್ಪಾದನೆಗೆ ಒತ್ತು ನೀಡಲಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮುಖ್ಯ ಆಧಾರವಾಗಿದ್ದು, ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22 ಸಾವಿರ ಮಿ.ಯೂ. ವಿದ್ಯುತ್ ಉತ್ಪಾದನೆಯಾಗಿದೆ. ಕಳೆದ ವರ್ಷ ಗರಿಷ್ಠ 18 ಸಾವಿರ ಮಿಲಿಯನ್ ಯೂನಿಟ್ ಆಗಿತ್ತು. ಪ್ರಸ್ತುತ 3,250 ಮೆಗಾ ವ್ಯಾಟ್ ಅಥವಾ ದಿನಕ್ಕೆ 75 ಮಿಲಿಯನ್ ಯೂನಿಟ್‍ನಂತೆ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ವಿವರಿಸಿದ್ದಾರೆ.

ಮಳೆ ಅಭಾವದಿಂದ ಪ್ರಸಕ್ತ ವರ್ಷ ಜಲಾಶಯಗಳು ಅರ್ಧದಷ್ಟು ತುಂಬಿರುವ ಕಾರಣ ನೀರನ್ನು ಸಂರಕ್ಷಿಸಿ, ಬಹಳ ಎಚ್ಚರಿಕೆಯಿಂದ ಬಳಸಲಾಗುತ್ತಿದೆ. ಹಾಗಾಗಿ, ಜಲ ವಿದ್ಯುತ್ ಉತ್ಪಾದನೆ ಕೊಂಚ ಮಟ್ಟಿಗೆ ಕುಂಠಿತಗೊಂಡಿದ್ದರೂ, ಮಾರ್ಚ್ ಮತ್ತು ಏಪ್ರಿಲ್‍ನ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ದಿನವೊಂದಕ್ಕೆ 20 ಮಿ.ಯೂ. ಅಥವಾ 1000 ಮೆ.ವ್ಯಾ ವಿದ್ಯುತ್ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ, ಪಂಜಾಬ್ ಜತೆಗೆ 2024ರ ಜೂನ್‍ನಲ್ಲೇ ದ್ವಿಪಕ್ಷೀಯ ವಿನಿಮಯ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ಪ್ರತಿದಿನ ಸರಾಸರಿ 900 ಮೆ.ವ್ಯಾ. ವಿದ್ಯುತ್ ಪಡೆಯಲಾಗುತ್ತಿದೆ. ಮುಂದಿನ ವರ್ಷ ಆ ರಾಜ್ಯಗಳಿಗೆ ಸದರಿ ವಿದ್ಯುತ್ ಅನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದ್ದಾರೆ.

ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿಗೊಳಿಸಿ, ಖಾಸಗಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ 500 ಮೆ.ವ್ಯಾ. ವಿದ್ಯುಚ್ಛಕ್ತಿಯನ್ನು ಖಾಸಗಿ ಉತ್ಪಾದಕರಿಂದ ಪಡೆಯಲಾಗುತ್ತಿದೆ. ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳು (ಬಹುತೇಕ ಖಾಸಗಿ ವಲಯ) ಸಾಮಾನ್ಯವಾಗಿ ಮಸ್ಟ್ ರನ್ ಆಧಾರದ ಮೇಲೆ ನಡೆಯುತ್ತವೆ. ಹವಾಮಾನ ಬದಲಾವಣೆಗೆ ಅನುಗುಣವಾಗಿ ಈ ಸ್ಥಾವರಗಳಿಂದ ಉತ್ಪಾದನೆ ಆಗುವ ವಿದ್ಯುತ್ ರಾಜ್ಯಕ್ಕೆ ಲಭ್ಯವಾಗುತ್ತಿದೆ.

ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ತಿನ ಅಗತ್ಯ ಇದೆ ಎಂದು ಮನವರಿಕೆ ಮಾಡಿಕೊಟ್ಟು, ಕೇಂದ್ರ ಗ್ರಿಡ್‍ನಿಂದ ಈ ವರ್ಷ 302 ಮೆಗಾ ವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದೆ. ಕಳೆದ ವರ್ಷ ಕೇಂದ್ರ ಗ್ರಿಡ್ ಒಪ್ಪಿಸಲಾಗಿದ್ದ 150 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನೂ ವಾಪಸ್ ಪಡೆಯಲಾಗಿದೆ. ಈ ಹೆಚ್ಚುವರಿ ವಿದ್ಯುತ್ ಡಿಸೆಂಬರ್ ತಿಂಗಳಿನಿಂದ ರಾಜ್ಯಕ್ಕೆ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

ಅನಿರೀಕ್ಷಿತ ಅಥವಾ ಹಠಾತ್ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಕೇಂದ್ರ ಸರ್ಕಾರವು ನಿಗದಿಪಡಿಸಿರುವಂತ ವಿದ್ಯುತ್ ವಿನಿಮಯ ಕೇಂದ್ರದಿಂದ ಪಾರದರ್ಶಕವಾಗಿ ವಿದ್ಯುತ್ ಖರೀದಿಸಲಾಗುತ್ತಿದೆ. ರಾಜ್ಯದಾದ್ಯಂತ ಸಮರ್ಪಕ ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಪ್ರತಿ ಜಿಲ್ಲೆಗೆ ಮುಖ್ಯ ಇಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಲ್ಲಿದ್ದಲು ಸಚಿವಾಲಯದಿಂದ ಹೆಚ್ಚುವರಿ ಕಲ್ಲಿದ್ದಲನ್ನು ಸಕಾಲದಲ್ಲಿ ಪಡೆಯಲಾಗಿದೆ, ಆಮದು ಮಾಡಿದ ಹೆಚ್ಚಿನ ವಿದೇಶಿ ಕಲ್ಲಿದ್ದಲನ್ನು ದೇಶೀಯ ಕಲ್ಲಿದ್ದಲಿನೊಂದಿಗೆ ಮಿಶ್ರಣ ಮಾಡಲಾಗುತ್ತಿದೆ. ಯಲಹಂಕ ಬಳಿಯ 370 ಮೆ.ವ್ಯಾ.ಸಾಮರ್ಥ್ಯದ ಅನಿಲ ಸ್ಥಾವರ ಶೀಘ್ರದಲ್ಲೇ ಉತ್ಪಾದನೆ ಆರಂಭವಾಗಲಿದೆ ಎಂದು ಸಚಿವರು ಹರ್ಷ ವ್ಯಕ್ತ ಪಡಿಸಿದ್ದಾರೆ.

RELATED ARTICLES

Latest News