Friday, October 25, 2024
Homeರಾಜಕೀಯ | Politicsಬಿಜೆಪಿ ನಾಯಕರ ಸಲಹೆ ಮೇರೆಗೆ ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಆಯ್ಕೆ

ಬಿಜೆಪಿ ನಾಯಕರ ಸಲಹೆ ಮೇರೆಗೆ ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಆಯ್ಕೆ

Nikhil Kumaraswamy was selected as a candidate on the advice of BJP leaders

ಬೆಂಗಳೂರು, ಅ.25- ಪಕ್ಷದ ಕಾರ್ಯಕರ್ತರ ಒತ್ತಡ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರ ಸಲಹೆ ಮೇರೆಗೆ ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನಾಗಿ ಸ್ಪರ್ಧೆಗಿಳಿಸಲಾಗಿದೆ.

ಆ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರು ಜೆಡಿಎಸ್‌‍ -ಬಿಜೆಪಿ ನಾಯಕರ ಮತ್ತು ಮುಖಂಡರ ಸಮುಖದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನಾಗಿ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ವರಿಷ್ಠರ ಸಲಹೆಯನ್ನು ಕಡೆಗಣಿಸಿ ಬಿಜೆಪಿ ತೊರೆದು ಕಾಂಗ್ರೆಸ್‌‍ಗೆ ಪಕ್ಷಾಂತರಗೊಂಡು ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಬೆನ್ನಲ್ಲೆ ಈ ತೀರ್ಮಾನ ಮಾಡಲಾಗಿದೆ. ಈ ಉಪ ಚುನಾವಣೆಯ ಕಾರ್ಯತಂತ್ರವನ್ನು ಎರಡೂ ಪಕ್ಷಗಳ ನಾಯಕರು ರೂಪಿಸಿದ್ದಾರೆ. ಯಡಿಯೂರಪ್ಪ ಅವರು ಸಹ ಒಗ್ಗಟ್ಟಿನಿಂದ ಚುನಾವಣೆ ಎದುರಿಸೋಣ ಎಂಬ ಧೈರ್ಯ ತುಂಬಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರಿಗೆ ಪ್ರಬಲ ಪ್ರತಿ ಸ್ಪರ್ಧೆ ನೀಡಬೇಕಾದರೆ ಜೆಡಿಎಸ್‌‍ನ ಸ್ಥಳೀಯರಿಂದ ಸಾಧ್ಯವಾಗುವುದಿಲ್ಲ ಎಂಬ ವರದಿ ಬಂದಿದೆ. ಹೀಗಾಗಿ ನಿಮ ಪುತ್ರರನ್ನು ಚುನಾವಣಾ ಕಣಕ್ಕೆ ಇಳಿಸಿ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಬಿಜೆಪಿ ವರಿಷ್ಠರು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

ಕಳೆದ ಮೂರು ತಿಂಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರೊಂದಿಗೆ ನಿಖಿಲ್‌ ಕುಮಾರಸ್ವಾಮಿ ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ ನಿಖಿಲ್‌ ಕುಮಾರಸ್ವಾಮಿ ಅವರು ಕಾಂಗ್ರೆಸ್‌‍ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದಾರೆ ಎಂಬ ಸಲಹೆಯನ್ನು ನೀಡಿದ್ದಾರೆ.
ಅನಂತರ ಪಕ್ಷದ ನಾಯಕರು ಮತ್ತು ಮುಖಂಡರೊಂದಿಗೆ ಚರ್ಚೆ ನಡೆಸಿದ ಜೆಡಿಎಸ್‌‍ ವರಿಷ್ಠರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಚುನಾವಣಾ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ನಾಯಕರು ಸಲಹೆ ನೀಡುವವರೆಗೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಮುಂದಾಗಿರಲಿಲ್ಲ. ಬೇರೆ ಅಭ್ಯರ್ಥಿ ಸ್ಪರ್ಧೆಗಿಳಿಸುವ ಆಲೋಚನೆಯಲ್ಲಿದ್ದರು. ಅಲ್ಲದೆ, ಚನ್ನಪಟ್ಟಣದ ಜೆಡಿಎಸ್‌‍ ಮುಖಂಡರು ಮತ್ತು ಕಾರ್ಯಕರ್ತರ ಒತ್ತಡವು ಸಹ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಸ್ಪರ್ಧೆಗೆ ಇಳಿಸಬೇಕೆಂಬುದಾಗಿತ್ತು.

RELATED ARTICLES

Latest News