ಬೆಂಗಳೂರು, ನ.21- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ನಾನು ಚನ್ನಪಟ್ಟಣ ಕ್ಷೇತ್ರದಲ್ಲಿ 15 ದಿನಗಳ ಕಾಲ ಪ್ರಚಾರದಲ್ಲಿ ಭಾಗವಹಿಸಿದ್ದೆ. ಅಲ್ಲಿನ ಜನರ ಭಾವನೆ ಏನು ಎಂಬುದು ಗೊತ್ತಿದೆ. ಹೀಗಾಗಿ ನಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹೆಚ್ಚು ಜನರ ಆಶೀರ್ವಾದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅವರು ಹೇಳಿದರು.ಕೇಂದ್ರ ಸರ್ಕಾರದ ಮಾನದಂಡದಂತೆ ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಬಂದ ವರದಿ ಆಧಾರದಲ್ಲಿ ಹೇಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಏಕೆ ಈ ವಿಚಾರ ಹೇಳಿರಲಿಲ್ಲ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಜನರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಸರ್ಕಾರದಿಂದ ಸೂಕ್ತ ಉತ್ತರ ಕೊಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಒಂದು ಹೇಳಿಕೆ ಕೊಡುತ್ತಾರೆ. ಸಚಿವರು ಇನ್ನೊಂದು ಹೇಳಿಕೆ ಕೊಡುತ್ತಾರೆ. ಇವರಲ್ಲೇ ಇವರಿಗೆ ಸ್ಪಷ್ಟತೆ ಇಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಲಘುವಾಗಿ ಮಾತಾಡಿಲ್ಲ. ಗ್ಯಾರಂಟಿ ಕೊಡಲು ಆರ್ಥಿಕವಾಗಿ ಸಮಸ್ಯೆ ಇಲ್ಲ. ತೆರಿಗೆ ಮೂಲಕ ಸರ್ಕಾರದ ಖಜಾನೆ ತುಂಬಿಸಿಕೊಂಡಿದ್ದಾರೆ. ನಿರ್ವಹಣೆಯಲ್ಲಿ ಸಮಸ್ಯೆ ಇದೆ. ಇದನ್ನು ಸರಿಪಡಿಸಿ ಎಂದು ಹೇಳಿರುವುದಾಗಿ ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರದಿಂದಲೇ 5 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಐದೂವರೆ ಕೋಟಿ ಎಂದು ಪತ್ರಿಕೆಯಲ್ಲಿ ಬಂದಿರುವುದನ್ನು ನೋಡಿದ್ದೇನೆ. ಕೆಲವು ಮಾರ್ಗಸೂಚಿಯನ್ನು ಅವರೇ ಹೇಳಿದ್ದಾರೆ. ಕೇಂದ್ರ ಹೇಳಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಲಾಗಿದೆ. ಅದರಲ್ಲಿ ಯಾವುದು ನೈಜವಾಗಿದೆ ಅನ್ನೊದು ಗೊತ್ತಾಗುತ್ತಿದೆ. ಅದರ ಆಧಾರದಲ್ಲಿ ಕೆಲವು ತೀರ್ಮಾನ ಆಗಿದೆ. ಮುಂದೆ ಏನು ಪ್ರಕ್ರಿಯೆ ಆಗುತ್ತದೋ ಕಾದು ನೋಡೋಣ ಎಂದರು.