Friday, May 3, 2024
Homeರಾಷ್ಟ್ರೀಯಅನುದಾನ ಬಿಡುಗಡೆಯಲ್ಲಿ ತಾರತಮ್ಯ ಎಸಗಿಲ್ಲ : ನಿರ್ಮಲಾ ಸೀತಾರಾಮನ್

ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಎಸಗಿಲ್ಲ : ನಿರ್ಮಲಾ ಸೀತಾರಾಮನ್

ನವದೆಹಲಿ,ಫೆ.5- ಕರ್ನಾಟಕಕ್ಕೆ ಅನುದಾನ ಬಿಡುಗಡೆ ಕುರಿತಾಗಿ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಶೂನ್ಯವೇಳೆಯಲ್ಲಿ ಕಾಂಗ್ರೆಸ್‍ನ ಲೋಕಸಭೆ ಸಂಸದೀಯ ನಾಯಕ ಅದಿರಂಜನ್ ಚೌಧರಿ ವಿಷಯ ಪ್ರಸ್ತಾಪಿಸಿ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಬಿಜೆಪಿಯೇತರ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈ ಆರೋಪಕ್ಕೆ ಸದನದಲ್ಲಿ ಹಾಜರಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಸರ್ಕಾರ ಯಾವುದೇ ರಾಜ್ಯಗಳಿಗೂ ಅನುದಾನ ಬಿಡುಗಡೆ ವಿಷಯದಲ್ಲಿ ಅನ್ಯಾಯ ಮಾಡುತ್ತಿಲ್ಲ. ಹಣಕಾಸು ಆಯೋಗ ನೀಡುವ ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ : ಗೃಹ ಸಚಿವ ಪರಮೇಶ್ವರ್

ನನ್ನ ಮನಸ್ಸಿಗೆ ಬಂದಂತೆ ಅನುದಾನ ಬಿಡುಗಡೆ ಮಾಡಲು ಆಗುವುದಿಲ್ಲ. ಹಣಕಾಸು ಆಯೋಗ ಪ್ರತಿ ವರ್ಷ ಆಯಾ ರಾಜ್ಯಗಳ ಸ್ಥಿತಿಗತಿಗಳನ್ನು ನೋಡಿಕೊಂಡು ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡುತ್ತದೆ. ನಾವು ಅದನ್ನು ಪಾಲನೆ ಮಾಡುತ್ತೇವೆ. ಇದರಲ್ಲಿ ತಾರತಮ್ಯದ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಅದಿರಂಜನ್ ಚೌಧರಿ ಮಾಡಿರುವ ಆರೋಪದಂತೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅನುದಾನ ಬಿಡುಗಡೆ ವಿಷಯದಲ್ಲಿ ಯಾವುದೇ ರಾಜ್ಯಕ್ಕೂ ಅನ್ಯಾಯ ಇಲ್ಲವೇ ಮಲತಾಯಿ ಧೋರಣೆ ಅನುಸರಿಸಿಲ್ಲ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಯಾವ ರಾಜ್ಯಗಳಲ್ಲಿ ತಲಾ ಆದಾಯ ಕಡಿಮೆ ಇರುತ್ತದೆಯೋ ಅವುಗಳನ್ನು ಭೀಮಾರ್ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ. ಅಂತಹ ರಾಜ್ಯಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಹಣಕಾಸು ಆಯೋಗವೇ ಶಿಫಾರಸ್ಸು ಮಾಡುತ್ತದೆ.

ಕರ್ನಾಟಕಕ್ಕೆ ಹಿಂದಿನ ಯುಪಿಎ ಸರ್ಕಾರದ 10 ವರ್ಷದ ಅವಯಲ್ಲಿ ಹಾಗೂ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದನ್ನು ನಾವು ದಾಖಲೆಗಳ ಸಮೇತ ನೀಡಲು ಸಿದ್ದರಿದ್ದೇವೆ ಎಂದರು.

ರಾಜಕೀಯ ಕಾರಣಗಳಿಗಾಗಿ ಆರೋಪ ಮಾಡುವುದಾದರೆ ನಾವು ಕೂಡ ಆರೋಪಿಸಬಹುದು. ಸಭಾಧ್ಯಕ್ಷರು ಅನುಮತಿ ನೀಡಿದರೆ ಯಾರ ಕಾಲದಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬುದನ್ನು ನಾನು ದಾಖಲೆಗಳ ಸಮೇತ ಸದನದಲ್ಲೇ ಚರ್ಚೆ ಮಾಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಅದಿರಂಜನ್ ಚೌಧರಿ ಆರೋಪಕ್ಕೆ ತಿರುಗೇಟು ನೀಡಿದರು.

RELATED ARTICLES

Latest News