Sunday, September 15, 2024
Homeರಾಜ್ಯವ್ಯಕ್ತಿಗೆ ಆದರ್ಶ ಇಲ್ಲದಿದ್ದರೆ ವ್ಯಕ್ತಿತ್ವ ಬೆಳೆಯಲಾರದು : ನಿರ್ಮಲಾನಂದನಾಥ ಶ್ರೀ

ವ್ಯಕ್ತಿಗೆ ಆದರ್ಶ ಇಲ್ಲದಿದ್ದರೆ ವ್ಯಕ್ತಿತ್ವ ಬೆಳೆಯಲಾರದು : ನಿರ್ಮಲಾನಂದನಾಥ ಶ್ರೀ

ಗೌರಿಬಿದನೂರು, ಆ.18- ವ್ಯಕ್ತಿಗೆ ಆದರ್ಶ ಇಲ್ಲದೆ ಹೋದರೆ ವ್ಯಕ್ತಿತ್ವ ಬೆಳೆಯಲಾರದು. ಹಾಗೇ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿ ಇಲ್ಲದೆ ಹೋದರೆ ಸಮಾಜ ವಿಕಸಿತವಾಗದು. ಈ ನಿಟ್ಟಿನಲ್ಲಿ ಕೆಂಪೇಗೌಡ ಅವರಂತಹ ಆದರ್ಶ ವ್ಯಕ್ತಿಯ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಕೆಂಪೇಗೌಡ ಸಾಂಸ್ಕೃತಿ ವೇದಿಕೆ ಮತ್ತು ತಾಲೂಕು ಆಡಳಿತ ಸಂಯುಕ್ತಾಶ್ರಯ ದಲ್ಲಿ ಹಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಹಾಗೂ ನಾಡಪ್ರಭು ಕೆಂಪೇಗೌಡ ವೃತ್ತ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಪೇಗೌಡ ವೃತ್ತವನ್ನು ಲೋಕಾರ್ಪಣೆ ಮಾಡಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೆಂಪೇಗೌಡರ ವ್ಯಕ್ತಿತ್ವ ಸ್ವಾರ್ಥಕರ್ಮಕ್ಕೆ ಸೀಮಿತವಾಗದೆ, ಸಮಾಜದ ಅಭ್ಯುದಯಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.

ಕೆಂಪೇಗೌಡರು ಸಮಾಜದಲ್ಲಿ ಜಾತ್ಯಾತೀತ ವಾಗಿ ಎಲ್ಲ ವರ್ಗದ ಜನರಿಗೆ ಕರ್ಮದ ಮಾರ್ಗವನ್ನು ತೋರಿಸಿದ್ದರು ಎಂಬುದಕ್ಕೆ ಬೆಂಗಳೂರಿ ನಲ್ಲಿ ಕುರುಬರಪೇಟೆ, ತಿಗಳರಪೇಟೆ, ಚಿಕ್ಕಪೇಟೆ, ಬಳೆಪೇಟೆ ಹೀಗೆ ಹತ್ತು ಹಲವಾರು ಕೌಶಲ್ಯಾಧಾರಿತ ವಿದ್ಯೆಯ ಅಭಿವೃದ್ಧಿಗೆ ಕೆಂಪೇಗೌಡರು ಅಂದೇ ನಾಂದಿ ಹಾಡಿದ್ದರು ಎಂದು ಹೇಳಿದರು.

ಕೆಂಪೇಗೌಡರು ತಮ ಆಳ್ವಿಕೆಯಲ್ಲಿ ಜ್ಞಾನದ ದಾಸೋಹಕ್ಕೆ ಆದ್ಯತೆ ನೀಡಿದ್ದರು. ಪೋಷಕರು ಮಕ್ಕಳಿಗೆ ದೂರದೃಷ್ಟಿಯ ಜ್ಞಾನಕ್ಕೆ ಒತ್ತು ನೀಡಬೇಕು. ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಶಿರಾ ತಾಲೂಕಿನ ಶ್ರೀ ಕ್ಷೇತ್ರ ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಅವರು ಮಾತನಾಡಿ, ಸಮಾಜದಲ್ಲಿ ಆದರ್ಶ ಪ್ರಾಯರ ಜಯಂತಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎಂಬ ನಿಟ್ಟಿನಲ್ಲಿ ಆದರ್ಶ ವ್ಯಕ್ತಿಗಳ ಜಯಂತಿ ಆಚರಣೆ ಮಾಡಲಾಗುತ್ತದೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಾಡನ್ನು ಕಟ್ಟಿ ಇಂದಿಗೆ 500 ವರ್ಷಗಳು ಕಳೆದಿವೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರು ತನ್ನದೇ ಆದ ಪ್ರಸಿದ್ಧಿ ಪಡೆದುಕೊಂಡಿದೆ. ಕೆಂಪೇಗೌಡರ ನಾಡ ಚಿಂತನೆ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.

ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಕೆಂಪೇಗೌಡರು ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಸಮಾಜದ ಎಲ್ಲಾ ವರ್ಗಗಳಿಗೂ ಸೀಮಿತವಾದ ಆದರ್ಶ ವ್ಯಕ್ತಿಯಾಗಿ ದ್ದಾರೆ. ಈ ನಿಟ್ಟಿನಲ್ಲಿ ಇಂದು ನಗರದ ಬೈಪಾಸ್ ರಸ್ತೆಯ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ವೃತ್ತವನ್ನು ಅನಾವರಣಗೊಳಿಸಲಾಗಿದೆ. ಕೆಂಪೇಗೌಡರು ಮುಂದಾಲೋಚನೆ ಯಿಂದ ಕಟ್ಟಿದ ಬೆಂಗಳೂರು ಇಂದು ಇಡೀ ರಾಜ್ಯದಲ್ಲೇ ಶೇ.60ರಷ್ಟು ತೆರಿಗೆ ಆದಾಯ ಹರಿದು ಬರುತ್ತಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಮನಗಂಡು, ಜಾತ್ಯಾತೀತವಾಗಿ ಎಲ್ಲಾ ವರ್ಗದ ಜನರಿಗೂ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಇಂದು ಕೆಂಪೇಗೌಡ ವೃತ್ತವನ್ನು ಶ್ರೀಗಳಿಂದ ಲೋಕಾರ್ಪಣೆ ಗೊಳಿಸಲಾಗಿದೆ ಎಂದರು.

ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ:
ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಪಕ್ಷಾತೀತವಾಗಿ ಗುರುತಿಸಿ ಕೆಂಪೇಗೌಡ ಸಾಂಸ್ಕೃತಿಕ ವೇದಿಕೆಯಿಂದ ಕೆಂಪೇಗೌಡ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಬೆಂಗಳೂರು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ, ತಹಸೀಲ್ದಾರ್ ಮಹೇಶ್ ಎಸ್.ಪತ್ರಿ, ವೃತ್ತನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಪೌರಾಯುಕ್ತರಾದ ಡಿ.ಎಂ.ಗೀತಾ, ಇಒ ಹೊನ್ನಯ್ಯ ಜಿ.ಕೆ., ಬಿಇಒ ಶ್ರೀನಿವಾಸಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಮೋಹನ್, ಕೆಂಪೇಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಆರ್.ಜಿ.ಜನಾರ್ಧನ್ ಮೂರ್ತಿ, ಉಪಾಧ್ಯಕ್ಷ ಅಶ್ವತ್ಥರೆಡ್ಡಿ, ಕಾರ್ಯದರ್ಶಿ ಪ್ರಭಾಕರರೆಡ್ಡಿ, ಖಜಾಂಚಿ ಲಕ್ಷ್ಮಿನರಸಮ, ಸಹ ಕಾರ್ಯದರ್ಶಿ ಬಿ.ಎಸ್.ಪರಮೇಶ್ವರರೆಡ್ಡಿ, ರಾಮಚಂದ್ರರೆಡ್ಡಿ, ಕಾನೂನು ಸಲಹೆಗಾರ ಮಲ್ಲಿಕಾರ್ಜುನ್, ಎಸ್.ಆರ್.ಮನೋಹರ್, ಮುಖಂಡರಾದ ಶ್ರೀನಿವಾಸಗೌಡ, ಎಂ.ನರಸಿಂಹಮೂರ್ತಿ, ಅಬ್ದುಲ್ಲಾ, ವಿವಿಧ ಇಲಾಖೆ ಅಧಿಕಾರಿಗಳು, ಕೆಎಚ್ಪಿ ಬಣದ ನಗರಸಭಾ ಸದಸ್ಯರು ಭಾಗವಹಿಸಿದ್ದರು.

RELATED ARTICLES

Latest News