ನವದೆಹಲಿ,ಜೂ.5- ಕೇಂದ್ರ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಎಂದೇ ಗುರುತಿಸಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಇಂಡಿ ಒಕ್ಕೂಟದ ಪಾಲುದಾರ ಪಕ್ಷದ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರೊಂದಿಗೆ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿ ಅಚ್ಚರಿ ಮೂಡಿಸಿದ್ದಾರೆ.
ಎನ್‌ಡಿಎ ಮತ್ತು ಇಂಡಿ ಒಕ್ಕೂಟಗಳು ಕೇಂದ್ರದಲ್ಲಿ ಸರ್ಕಾರ ರಚನೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ಉಭಯ ಗುಂಪಿನ ನಾಯಕರು ಒಂದೇ ವಿಮಾನದಲ್ಲಿ ಪ್ರಯಾಣಿಸಿರುವುದು ಕೂತುಹಲ ಕೆರಳಿಸಿದೆ.
ಬಿಹಾರದಲ್ಲಿ ಎನ್‌ಡಿಎ ಪ್ರಬಲವಾಗಿದ್ದು, ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಕೇವಲ ನಾಲ್ಕು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ಮುಖಭಂಗಕ್ಕೆ ಒಳಗಾಗಿದೆ. ಇಂತಹ ಸನ್ನಿವೇಶದಲ್ಲೇ ಯಾದವ್ ಅವರು ನವದೆಹಲಿಗೆ ತೆರಳುತ್ತಿದ್ದು, ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಿತೀಶ್‌ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ನಿತೀಶ್ ಕುಮಾರ್ ಅವರ ಆಪ್ತ ಸಹಾಯಕ ಮತ್ತು ಜೆಡಿಯು ನಾಯಕ ಕೆಸಿ ತ್ಯಾಗಿ ನಿನ್ನೆ ಸುದ್ದಿ ಸಂಸ್ಥೆ ಎಎನ್‌ಐಗೆ ಪಕ್ಷವು ಎನ್‌ಡಿಎಯಲ್ಲಿ ಉಳಿಯುತ್ತದೆ ಮತ್ತು ಇಂಡಿ ಒಕ್ಕೂಟಕ್ಕೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆಂಧ್ರಪ್ರದೇಶದಲ್ಲಿ ಎನ್‌ಡಿಎಯ ಅದ್ಭುತ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ ಮತ್ತೊಬ್ಬ ಕಿಂಗ್‌ಮೇಕರ್ ನಾಯ್ಡು ಮತ್ತು ಟಿಡಿಪಿ ಮತ್ತು ಬಿಜೆಪಿ ಒಟ್ಟಾಗಿ ರಾಜ್ಯವನ್ನು ಮರುನಿರ್ಮಾಣ ಮಾಡುತ್ತವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಈ ಇಬ್ಬರೂ ನಾಯಕರು ಈ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬಲವಾಗಿ ಟೀಕಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು. ವಾಸ್ತವವಾಗಿ, ನಿತೀಶ್ ಕುಮಾರ್ ಅವರು ತಮ ಕೊನೆಯ ಕ್ಷಣದಲ್ಲಿ ತಮ ನಿರ್ಧಾರ ಬದಲಾಯಿಸುವ ಮೊದಲು ಬಿಜೆಪಿ ವಿರುದ್ಧ ಇಂಡಿ ಒಕ್ಕೂಟದ ರೂಪುರೇಷೆ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.