ರೋಮ್,ಮೇ 13- 24 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನೊವಾಕ್ ಜೋಕೋವಿಕ್ ಅವರು ಇಟಾಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಮೂರನೇ ಸುತ್ತಿನ ಪಂದ್ಯದಲ್ಲಿ 29ನೇ ಶ್ರೇಯಾಂಕದ ಅಲೆಜಾಂಡ್ರೋ ಟ್ಯಾಬಿಲೋ ಅವರ ಎದುರು ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ತಮ್ಮ ನೆಚ್ಚಿನ ಪಂದ್ಯಾವಳಿಗಳಲ್ಲಿ ಒಂದಾದ ಈ ಟೂರ್ನಿಯಲ್ಲಿ ಇದು ತಮ್ಮ ಅತ್ಯಂತ ಕಳಪೆ ಪ್ರದರ್ಶನಗಳಲ್ಲಿ ಒಂದೆಂದು ನೊವಾಕ್ ಒಪ್ಪಿಕೊಂಡಿದ್ದಾರೆ. ಶುಕ್ರವಾರ ಮೊದಲ ಪಂದ್ಯವನ್ನು ಗೆದ್ದ ಬಳಿಕ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಬಾಟಲ್ ತಲೆಯ ಮೇಲೆ ಬಿದ್ದು ನೋವಿನಿಂದ ನರಳಿದ್ದಾರೆ. ನಂತರದ ಪಂದ್ಯವನ್ನು ಡಬಲ್ ಫಾಲ್ಟ್ ನೊಂದಿಗೆ ಆರಂಭಿಸಿದ ಆರು ಬಾರಿಯ ರೋಮ್ ಚಾಂಪಿಯನ್ ಜೋಕೋವಿಕ್ ಅನಂತರ ಉತ್ತಮವಾಗಿ ಆಡಲಿಲ್ಲ.
ಮೊದಲ ಎರಡು ಸರ್ವಿಸ್ ಗೇಮ್‌ಗಳನ್ನು ಕಳೆದುಕೊಂಡ ಜೋಕೋವಿಕ್ ಕೇವಲ 68 ನಿಮಿಷಗಳಲ್ಲಿ 2-6, 3-6 ರ ನೇರ ಸೆಟ್‌ಗಳಿಂದ ಟ್ಯಾಬಿಲೋಗೆ ಮಣಿದರು. ಇದು ವಿಚಿತ್ರ. ಆದರೂ ಸತ್ಯ. ಇದನ್ನು ನಂಬಲಾಗುತ್ತಿಲ್ಲ.
ಬೇರೆ ಯಾರೂ ಇದನ್ನು ನಂಬುತ್ತಾರೆಂದು ನನಗನ್ನಿಸಿಲ್ಲ ಎಂದು ಪರಾಜಯದ ಬಳಿಕ ಜೋಕೋವಿಕ್ ಉದ್ಗರಿಸಿದರು. ಶುಕ್ರವಾರ ನೀರಿನ ಶೀಷೆ ಬಡಿತದಿಂದ ಗಾಯಗೊಂಡಿದ್ದೇ ಜೋಕೋವಿಕ್ ಅವರ ಸೋಲಿಗೆ ಕಾರಣವೇ ಎಂದು ವಿಶ್ಲೇಷಿಸಲಾಗುತ್ತಿದೆ.