Tuesday, December 5, 2023
Homeರಾಜಕೀಯಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಬೆಂಗಳೂರು,ಸೆ.28- ಜೆಡಿಎಸ್, ಬಿಜೆಪಿಯ ಮೈತ್ರಿಯಿಂದ ಅಸಮಾಧಾನಗೊಂಡಿರುವ ಜೆಡಿಎಸ್‍ನ ಹಲವು ನಾಯಕರು ಕಾಂಗ್ರೆಸ್ ಸಂಪರ್ಕಕ್ಕೆ ಬಂದಿದ್ದು, ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಅದೇ ವೇಳೆ ಪಕ್ಷನಿಷ್ಠರು ಮುಂದಿನ ಭವಿಷ್ಯದ ವಿಷಯದಲ್ಲಿ ಗೊಂದಲಕ್ಕೊಳಗಾಗಿ ವರಿಷ್ಠರ ನಿರ್ಧಾರಗಳ ವಿರುದ್ಧ ಸಿಡಿಮಿಡಿಗೊಳ್ಳುತ್ತಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಗೊಳಿಸಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ನಾಯಕರುಗಳಿಗಿಂತಲೂ ಕೆಳಹಂತದ ಕಾರ್ಯಕರ್ತರಿಗೆ ಮಣೆ ಹಾಕಬೇಕು. ಬ್ಲಾಕ್ ಮತ್ತು ಜಿಲ್ಲಾಮಟ್ಟದಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಫರ್ಮಾನು ಹೊರಡಿಸಿದ್ದಾರೆ.

ಆದರೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ದಶಕಗಳಿಂದಲೂ ವೈರುಧ್ಯ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆಯಲ್ಲೂ ಮೇಲ್ಮಟ್ಟದಲ್ಲಿ ಹೊಂದಾಣಿಕೆಯಾಗಿತ್ತೇ ಹೊರತು ಕೆಳಹಂತದಲ್ಲಿ ಕಾರ್ಯಕರ್ತರು ಜಿದ್ದಾಜಿದ್ದಿಗೆ ಬಿದ್ದಿದ್ದರು. ಅದರ ಪರಿಣಾಮವೇ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳೂ ಹೀನಾಯವಾಗಿ ನೆಲಕಚ್ಚಿದ್ದವು.
ಈಗ ಜೆಡಿಎಸ್ ಮತ್ತು ಬಿಜೆಪಿ ಪುನರ್ ಮಿಲನವಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ರಾಜ್ಯದಲ್ಲಿ ಕೋಮುಸೂಕ್ಷ್ಮ ವಾತಾವರಣ ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣಗೊಂಡಿವೆ. ಈ ಸಂದರ್ಭದಲ್ಲಿ ಜೆಡಿಎಸ್‍ನಲ್ಲಿರುವ ಅಲ್ಪಸಂಖ್ಯಾತ, ಜಾತ್ಯತೀತ ಮತ್ತು ಪ್ರಗತಿಪರ ನಾಯಕರು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ನೆಪ ಹೇಳಿ ಕಾಂಗ್ರೆಸ್‍ನತ್ತ ಮುಖ ಮಾಡುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಮುಂದಿನ 5 ವರ್ಷ ಆಡಳಿತ ನಡೆಸುವ ನಿರೀಕ್ಷೆಗಳನ್ನು ಹುಟ್ಟಿಸಿದೆ. ಹೀಗಾಗಿ ಅಧಿಕಾರ ಹಾಗೂ ಅವಕಾಶಗಳಿಗಾಗಿ ಹಾತೊರೆಯುತ್ತಿದ್ದವರು ಆಡಳಿತಾರೂಢ ಪಕ್ಷದತ್ತ ವಲಸೆ ಆರಂಭಿಸಿದ್ದಾರೆ. ಇದಕ್ಕೆ ಸೈದ್ಧಾಂತಿಕ ಸನ್ನಿವೇಶವೂ ಕೂಡ ಪೂರಕವಾಗಿರುವುದು ಪಕ್ಷಾಂತರ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಬಿಜೆಪಿ ಮತ್ತು ಜೆಡಿಎಸ್‍ನಲ್ಲಿರುವ ಕೆಲವು ಶಾಸಕರುಗಳು ಕಾಂಗ್ರೆಸ್ ಸೇರುವ ವದಂತಿಗಳು ಹರಡಿದ್ದವು. ಆದರೆ ಆಪರೇಷನ್ ಹಸ್ತ ಎಂಬ ಅಪಕೀರ್ತಿಗೆ ಹೆದರಿದ ಕಾಂಗ್ರೆಸಿಗರು ಶಾಸಕರನ್ನು ಸೆಳೆಯಲು ಹಿಂದೇಟು ಹಾಕಿದರು. ಅದೇ ವೇಳೆ ಆಯಾ ಪಕ್ಷಗಳ ವರಿಷ್ಠರು ಅತೃಪ್ತರನ್ನು ಸಮಾಧಾನಪಡಿಸಿ ವಾತಾವರಣವನ್ನು ತಹಬದಿಗೆ ತಂದಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮಗೆ ಶಾಸಕರ ಅಗತ್ಯವಿಲ್ಲ. ಆದರೆ ಪಕ್ಷದ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕೆಳಹಂತದಲ್ಲಿ ವರ್ಚಸ್ವಿ ನಾಯಕರು ಸೇರ್ಪಡೆಯಾಗುವುದಾದರೆ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಕೆಲವು ಮಾಜಿ ಶಾಸಕರು, ಮಾಜಿ ಸಚಿವರು ಕಾಂಗ್ರೆಸ್‍ನ ಪ್ರಮುಖ ನಾಯಕರನ್ನು ಸಂಪರ್ಕಿಸಿದ್ದು, ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿರುವುದು ತಿಳಿದುಬಂದಿದೆ. ಇನ್ನೂ ಕೆಲವು ಪ್ರಭಾವಿಗಳಿಗೆ ಕಾಂಗ್ರೆಸ್ ಪಕ್ಷವೇ ಗಾಳ ಹಾಕಿದೆ.

ಸದ್ಯದ ಸನ್ನಿವೇಶದಲ್ಲಿ ಬರುವವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡರೆ ಮುಂದಿನ ದಿನಗಳಲ್ಲಿ ಗೊಂದಲಗಳಾಗುವ ಆತಂಕ ಕೇಳಿಬರುತ್ತಿದೆ. ಈಗಿರುವ ಪಕ್ಷದಲ್ಲೇ ಅಕಾರ ಇಲ್ಲ ಎಂಬ ಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಿರುವವರು ನಾಳೆ ಇಲ್ಲಿಯೂ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಚುನಾವಣೆಯಂತಹ ಬಿಗುವಿನ ಸಮಯದಲ್ಲಿ ಗೊಂದಲ ಮೂಡಿಸಿ ಬೇರೆ ಪಕ್ಷದತ್ತ ಹೆಜ್ಜೆ ಹಾಕಿದರೆ ಕಾಂಗ್ರೆಸ್‍ಗೆ ನಷ್ಟವಾಗಲಿದೆ. ಹೀಗಾಗಿ ವಲಸಿಗ ನಾಯಕರನ್ನು ಅಳೆದು ತೂಗಿ ಸೇರ್ಪಡೆ ಮಾಡಿಕೊಳ್ಳಬೇಕು.

ವಿಧಾನಸಭೆ ಚುನಾವಣೆಗೂ ಮೊದಲೇ ಇದ್ದಂತಹ ವ್ಯವಸ್ಥೆಯನ್ನು ಚಾಚೂತಪ್ಪದೇ ಪಾಲಿಸಬೇಕು. ಕಾಂಗ್ರೆಸ್ ಸೇರ್ಪಡೆಯಾಗಲು ಇಚ್ಛೆ ವ್ಯಕ್ತಪಡಿಸುವ ನಾಯಕರ ಮಾಹಿತಿಗಳನ್ನು ಕ್ಷೇತ್ರ ಹಾಗೂ ಜಿಲ್ಲಾ ಸಮಿತಿಗಳೊಂದಿಗೆ ಹಂಚಿಕೊಳ್ಳಬೇಕು. ಅಲ್ಲಿಂದ ಅಭಿಪ್ರಾಯ ಪಡೆದ ಬಳಿಕ ಕೆಪಿಸಿಸಿಯ ಅಲ್ಲಮ ವೀರಭದ್ರಪ್ಪ ಸಮಿತಿ ಹಸಿರು ನಿಶಾನೆ ನೀಡಿದ ಬಳಿಕವೇ ವಲಸಿಗರಿಗೆ ಸದಸ್ಯತ್ವ ನೀಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ, ವಿವಿಧ ಪಾಲಿಕೆಗಳು ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿವೆ. ಅಲ್ಲಿ ಕಾಂಗ್ರೆಸಿಗರು ಆಕಾಂಕ್ಷಿಗಳಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ವಲಸಿಗ ನಾಯಕರು ಅದರಲ್ಲೂ ಮಾಜಿಗಳು ಪಕ್ಷಕ್ಕೆ ಬಂದಾಗ ಸಹಜವಾಗಿ ಅವರೂ ಟಿಕೆಟ್ ಆಕಾಂಕ್ಷಿಗಳಾಗಿರುತ್ತಾರೆ. ಈ ಹಂತದಲ್ಲಿ ಗೊಂದಲಗಳಾಗುತ್ತವೆ. ಅವಕಾಶ ದೊರೆಯದೇ ಇದ್ದರೆ ವಲಸಿಗರು ಕಾಂಗ್ರೆಸ್ ನಾಯಕರ ವಿರುದ್ಧವೇ ಮುಗಿಬೀಳುತ್ತಾರೆ. ಇದು ಭಿನ್ನಮತಕ್ಕೂ ದಾರಿಯಾಗಬಹುದು ಎಂಬ ಎಚ್ಚರಿಕೆಯ ಮಾತುಗಳನ್ನು ನಾಯಕರು ಹೇಳುತ್ತಿದ್ದಾರೆ ಎನ್ನಲಾಗಿದೆ.

ವಿಶ್ವದ ಕಿರಿಯ ಸಂಗೀತ ನಿರ್ದೇಶಕರಾಗಿ ವೆಂಕಟೇಶ್ ಇತಿಹಾಸ

ಸರ್ಕಾರದ ಮಟ್ಟದಲ್ಲಿ ವಿವಿಧ ನಿಗಮ-ಮಂಡಳಿಗಳು, ಪ್ರಾಕಾರ, ಆಯೋಗ ಹಾಗೂ ಇತರ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರುಗಳ ನೇಮಕಾತಿ ನಡೆಯಬೇಕಿದೆ. ಬಹುತೇಕ ವಲಸಿಗರು ಇಂತಹ ಸ್ಥಾನಗಳ ಮೇಲೆ ಕಣ್ಣಿಟ್ಟುಕೊಂಡೇ ಬರುತ್ತಿದ್ದಾರೆ. ಅದರಲ್ಲೂ ಕೆಲವು ಬಲಾಢ್ಯರು ತಮ್ಮ ಹಣ ಹಾಗೂ ಪ್ರಭಾವ ಬಳಸಿ ಅವಕಾಶ ಗಿಟ್ಟಿಸುವ ದೂರಾಲೋಚನೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ.

ಪಕ್ಷ ಒಂದು ವೇಳೆ ಇಂತವರಿಗೆ ಮಣೆ ಹಾಕಿದರೆ ಸಂಕಷ್ಟ ಕಾಲದಲ್ಲೂ ಪಕ್ಷದ ಬೆನ್ನಿಗೆ ನಿಂತು ಸಂಘಟನೆ ಮಾಡಿ ಅಕಾರಕ್ಕೆ ತಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಸಹಜವಾಗಿ ಈ ಬೆಳವಣಿಗೆ ಪಕ್ಷನಿಷ್ಠರ ಉತ್ಸಾಹವನ್ನು ಕುಗ್ಗಿಸಲಿದೆ. ಮುಂದಿನ ದಿನಗಳಲ್ಲಿ ಅದು ಪಕ್ಷದ ಅವನತಿಗೂ ಅವಕಾಶ ಮಾಡಿಕೊಡಬಹುದು ಎಂಬ ವಿಶ್ಲೇಷಣೆಯನ್ನು ಕಾಂಗ್ರೆಸ್‍ನ ಚಿಂತಕರ ಛಾವಡಿ ನಡೆಸಿದೆ.

ಆದರೆ ಪಕ್ಷ ಸಂಘಟನೆ ಎಂಬ ಉಮೇದಿಗೆ ಬಿದ್ದ ವರಿಷ್ಠ ನಾಯಕರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಹಿತಾಸಕ್ತಿಗಳನ್ನು ಪಕ್ಕಕ್ಕಿರಿಸಿ ಪಕ್ಷ ಸಂಘಟನೆ ಮಾಡಿ, ವಲಸಿಗರನ್ನು ಸೇರಿಸಿಕೊಳ್ಳಿ ಎಂದು ಕಟ್ಟಪ್ಪಣೆ ಮಾಡುತ್ತಿದ್ದಾರೆ. ಇದು ಮೂಲ ಕಾಂಗ್ರೆಸಿಗರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

RELATED ARTICLES

Latest News