Thursday, November 6, 2025
Home Blog Page 10

ರಾಜ್ಯದಲ್ಲಿ ನವೆಂಬರ್‌ ರಾಜಕೀಯ ಕ್ರಾಂತಿ, ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ದೌಡು

ಬೆಂಗಳೂರು, ನ.2- ರಾಜಕೀಯವಾಗಿ ನವೆಂಬರ್‌ ಕ್ರಾಂತಿಯ ಚರ್ಚೆಗಳ ನಡುವೆ ಸಚಿವಸಂಪುಟದ ಪ್ರಭಾವಿ ಸಚಿವರ ದೆಹಲಿ ಯಾತ್ರೆಗಳು ಮತ್ತಷ್ಟು ಹೆಚ್ಚಾಗಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿ ವರಿಷ್ಠರ ಆಪ್ತರನ್ನು ಭೇಟಿ ಮಾಡಿ ವಾಪಸ್ಸಾದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಕೂಡ ದೆಹಲಿಯತ್ತ ಮುಖ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ಸೋನಿಯಾ ಗಾಂಧಿಯವರ ಆಪ್ತರಾದ ಅಂಬಿಕಾ ಸೋನಿ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಕೆಲವು ಹಿರಿಯ ನಾಯಕರ ಜೊತೆಯೂ ಮಾತುಕತೆ ನಡೆಸಿದ್ದರು.ನವೆಂಬರ್‌ ಕ್ರಾಂತಿಯ ವಿಚಾರವಾಗಿ ನಾನಾ ರೀತಿಯ ವದಂತಿಗಳು ಹಬ್ಬುತ್ತಿವೆ. ಡಿ.ಕೆ.ಶಿವಕುಮಾರ್‌ ಅವರ ಮೌನ ತಂತ್ರಗಾರಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಕಳವಳ ಸೃಷ್ಟಿಸಿದೆ. ಹೀಗಾಗಿ ಸಿದ್ದರಾಮಯ್ಯನವರ ಆಪ್ತರಾಗಿರುವ ಸಚಿವ ಸತೀಶ್‌ ಜಾರಕಿಹೊಳಿ ಮೂರು ದಿನ

ದೆಹಲಿಯಲ್ಲಿ ಬೀಡುಬಿಟ್ಟು ತಮದೇ ಕಾರ್ಯತಂತ್ರ ಬಳಸಲಿದ್ದಾರೆ ಎಂಬ ಚರ್ಚೆ ನಡೆದಿವೆ.
ಅಧಿಕಾರ ಹಂಚಿಕೆ ಸೇರಿದಂತೆ ಯಾವುದೇ ರಾಜಕೀಯ ವಿಚಾರಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಅಖಾಡ ಪ್ರವೇಶ ಮಾಡುವುದಿಲ್ಲ. ಬದಲಾಗಿ ತಮ ಆಪ್ತರನ್ನು ಮೊದಲು ಬಿಟ್ಟು ಪೂರಕ ವೇದಿಕೆ ಸೃಷ್ಟಿಸಿಕೊಳ್ಳುವ ತಾಂತ್ರಿಕತೆಯನ್ನು ಮೊದಲಿನಿಂದಲೂ ಅನುಸರಿಸುತ್ತಿದ್ದಾರೆ. ಈಗಲೂ ಸಿದ್ದರಾಮಯ್ಯ ಅದೇ ಮಾದರಿಯ ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ಡಿ.ಕೆ.ಶಿವಕುಮಾರ್‌ ರಾಜ್ಯದ ಯಾವ ನಾಯಕರನ್ನು ನಂಬಿಕೊಳ್ಳದೆ ನೇರವಾಗಿ ದೆಹಲಿಯ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ನೂರು ಕಾಂಗ್ರೆಸ್‌‍ ಕಚೇರಿಗಳ ನಿರ್ಮಾಣ ಯೋಜನೆಯ ಉದ್ಘಾಟನೆಗೆ ಡಿ.ಕೆ.ಶಿವಕುಮಾರ್‌ ವರಿಷ್ಠರ ಪೈಕಿ ರಾಹುಲ್‌ ಗಾಂಧಿ ಜೊತೆಗೆ, ಸೋನಿಯಾ ಗಾಂಧಿಯವರನ್ನು ಆಹ್ವಾನಿಸಲು ಪ್ರಯತ್ನಿಸುತ್ತಿದ್ದಾರೆ. ಆ ಕಾರಣಕ್ಕೆ ಸೋನಿಯಾ ಗಾಂಧಿಯವರ ಜೊತೆ ಚರ್ಚೆ ಮಾಡಿದ್ದರು ಎಂಬ ಸ್ಪಷ್ಟನೆಗಳು ಕೇಳಿಬರುತ್ತಿವೆ. ಆದರೆ ಇದನ್ನು ಸಿದ್ದರಾಮಯ್ಯ ಅವರ ಬಣ ನಂಬುತ್ತಿಲ್ಲ.

ಸತೀಶ್‌ ಜಾರಕಿಹೊಳಿ ಅವರು ತಮ ಇಲಾಖೆಯ ಕಾರ್ಯ ಯೋಜನೆಗಳ ಸಂಬಂಧಪಟ್ಟಂತೆ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳುತ್ತಲೇ ತೆರೆಮರೆಯಲ್ಲಿ ಮತ್ತೊಂದು ತಂತ್ರಗಾರಿಕೆ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡುವ ಮೂಲಕ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಸತೀಶ್‌ ಜಾರಕಿಹೊಳಿ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿಕಾರ ಹಂಚಿಕೆಗೆ ದೆಹಲಿಯಲ್ಲಿ ಒಪ್ಪಂದವಾಗಿದೆ. ನವೆಂಬರ್‌ 20ಕ್ಕೆ ಕಾಂಗ್ರೆಸ್‌‍ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗುತ್ತವೆ. ಸಿದ್ದರಾಮಯ್ಯ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಳಿದ ಅವಧಿಗೆ ಡಿ.ಕೆ.ಶಿವಕುಮಾರ್‌ ಅವರಿಗೆ ಅವಕಾಶ ಕೊಡಲಿದ್ದಾರೆ. ಈ ರೀತಿಯೇ ನಡೆಯಬೇಕು ಎಂಬ ಒತ್ತಾಯಗಳು ಕೂಡ ಇದೆ. ಈ ವಿಷಯವಾಗೇ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಬಾರದು, ಅವರ ಪರವಾಗಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ದೊಡ್ಡ ಮತ ಬ್ಯಾಂಕ್‌ ಇದೆ. ಹೀಗಾಗಿ ಪ್ರಸ್ತುತ ಇರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಸತೀಶ್‌ ಜಾರಕಿಹೊಳಿ ದೆಹಲಿಯ ವರಿಷ್ಠರ ಮುಂದೆ ಪ್ರತಿಪಾದಿಸುವ ಸಾಧ್ಯತೆ ಇದೆ.

ಸತೀಶ್‌ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಸಮಯ ಕೇಳಿದ್ದು, ಅದಕ್ಕೆ ಎಐಸಿಸಿ ಅಧ್ಯಕ್ಷರ ಕಚೇರಿಯಿಂದಲೂ ಸಕಾರಾತಕ ಸ್ಪಂದನೆ ಸಿಕ್ಕಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಸತೀಶ್‌ ಜಾರಕಿಹೊಳಿ ಬಳಿಕ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಸೇರಿದಂತೆ ಸಿದ್ದರಾಮಯ್ಯ ಬಣದ ಹಲವು ನಾಯಕರು ದೆಹಲಿಗೆ ತೆರಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನವಂಬರ್‌ ತಿಂಗಳ ಕ್ರಾಂತಿಗೆ ಇನ್ನೂ 20 ದಿನಗಳಿವೆ. ಅದಕ್ಕೂ ಮುನ್ನವೇ ಕಾಂಗ್ರೆಸ್‌‍ನಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿವೆ.

ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ವಾದ-ಪ್ರತಿವಾದ ಹೆಚ್ಚಾಗಿವೆ. ಪರಸ್ಪರ ಸಮರ್ಥನೆಗಳು ಕಂಡುಬರುತ್ತಿವೆ. ಈ ಎಲ್ಲ ಗೊಂದಲಗಳಿಗೆ ಬ್ರೇಕ್‌ ಹಾಕಬೇಕಾದರೆ ಹೈಕಮಾಂಡ್‌ ಸ್ಪಷ್ಟ ಸಂದೇಶ ರವಾನಿಸಬೇಕು ಎಂಬ ಒತ್ತಡಗಳಿವೆ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಮುಂದಾಗಿರುವುದರ ಹಿಂದೆ ಬಿಹಾರದ ಚುನಾವಣೆ ಕಾರಣವಿದೆ ಎಂಬ ಮಾತುಗಳಿವೆ. ವಿರೋಧ ಪಕ್ಷಗಳು ಇದನ್ನೇ ಮುಂದೆ ನೆಪ ಮಾಡಿಕೊಂಡು ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಹಣಕಾಸಿನ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿವೆ.

ಸತೀಶ್‌ ದೆಹಲಿ ಭೇಟಿ ತಪ್ಪಾಗಿ ಅರ್ಥೈಸುವುದು ಬೇಡ:ಡಿ.ಕೆ.ಶಿವಕುಮಾರ್‌
ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ಭೇಟಿ ನೀಡುತ್ತಿರುವುದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ಎಲ್ಲಾ ಪ್ರವಾಸಗಳು ರಾಜಕೀಯ ಕಾರಣಕ್ಕಾಗಿಯೇ ನಡೆಯುವುದಿಲ್ಲ. ತಾವು ಕೂಡ ದೆಹಲಿಗೆ ಭೇಟಿ ನೀಡುತ್ತಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿ ಇಲಾಖೆಯ ಕಾರಣಗಳಿಗಾಗಿಯೂ ದೆಹಲಿಗೆ ಭೇಟಿ ನೀಡಬಹುದು. ಅಲ್ಲಿರುವ ಕಾಂಗ್ರೆಸ್‌‍ ಕಚೇರಿ ನಮಗೆ ದೇವಸ್ಥಾನವಿದ್ದಂತೆ. ದೆಹಲಿಗೆ ಹೋದ ಮೇಲೆ ಪಕ್ಷದ ಕಚೇರಿಗೆ ಹೋಗುವುದು ವರಿಷ್ಠರನ್ನು ಭೇಟಿ ಮಾಡುವುದು ಸಾಮಾನ್ಯ. ಇದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯ ಇಲ್ಲ ಎಂದರು.

ಸಚಿವರು, ಶಾಸಕರು ಸೇರಿದಂತೆ ಯಾರು ಬೇಕಾದರೂ ದೆಹಲಿಗೆ ಹೋಗಲಿ. ನನಗೂ ನವೆಂಬರ್‌ 5 ಅಥವಾ 7ರಂದು ಬಿಹಾರದ ವಿಧಾನಸಭಾ ಚುನಾವಣೆಗೆ ಹೋಗಬೇಕಿದೆ. ಈ ಮಧ್ಯೆ ದೆಹಲಿಯಲ್ಲಿ ಕೇಂದ್ರ ಸಚಿವರು ಸಭೆ ಕರೆದಿದ್ದಾರೆ. ಜೊತೆಗೆ ಕಾವೇರಿ ವಿವಾದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ತಾವು ಪಡೆದುಕೊಂಡಿದ್ದು, ದೆಹಲಿಯಲ್ಲಿ ವಕೀಲರ ಜೊತೆ ಚರ್ಚಿಸಬೇಕಿದೆ.

ತಮಿಳುನಾಡಿನ ತಕರಾರು ಮತ್ತು ನಮ ಮನವಿಗಳ ವಿವರ ನೀಡಬೇಕಿದೆ ಎಂದರು.
ಕೆಲವು ಸಂದರ್ಭಗಳಲ್ಲಿ ಬೇರೆ ಬೇರೆ ರಾಜ್ಯಗಳ ಪಕ್ಷ ಸಂಘಟನೆ ಹಾಗೂ ಚುನಾವಣಾ ಉಸ್ತುವಾರಿಗೆ ರಾಜ್ಯದ ಶಾಸಕರನ್ನು ನಿಯೋಜಿಸಲಾಗಿರುತ್ತದೆ. ನಮ ರಾಜ್ಯದ ಶಾಸಕರಾದ ರಿಜ್ವಾನ್‌ ಅರ್ಷದ್‌, ಶ್ರೀನಿವಾಸ್‌‍ ಮಾನೆ, ಸಂಸದರಾದ ಶ್ರೇಯಸ್‌‍ ಪಟೇಲ್‌‍, ಇ. ತುಕಾರಾಂ ಸೇರಿದಂತೆ ಅನೇಕರಿಗೆ ಒರಿಸ್ಸಾದ ಉಸ್ತುವಾರಿ ಹಾಕಲಾಗಿತ್ತು. ನಮ ರಾಜ್ಯಕ್ಕೂ ಇದೇ ರೀತಿ ಅನೇಕ ನಾಯಕರು ಆಗಮಿಸುತ್ತಿರುತ್ತಾರೆ ಎಂದು ಅವರು ಹೇಳಿದರು.
ಮಹಿಳಾ ಕ್ರಿಕೆಟ್‌ನಲ್ಲಿ ಇಂದು ಸೌತ್‌ ಆಫ್ರಿಕಾ ತಂಡವನ್ನು ಎದುರಿಸುತ್ತಿರುವ ಭಾರತದ
ತಂಡಕ್ಕೆ ಜಯ ಸಿಗಲಿ ಎಂದು ಅವರು ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.

11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಸಸೂತ್ರವಾಗಿ ನಡೆದ ಕೆ-ಸೆಟ್‌ ಪರೀಕ್ಷೆ

ಬೆಂಗಳೂರು, ನ.2- ಪದವಿ ಕಾಲೇಜುಗಳ ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್‌ ಪರೀಕ್ಷೆಯು ಕ್ಯಾಮೆರಾ ಕಣ್ಗಾವಲಿನಲ್ಲಿ ಇಂದು ನಡೆಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡು, ಈ ಬಾರಿಯೂ ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿತ್ತು.

ಒಟ್ಟು 33 ವಿಷಯಗಳಿಗೆ ನಡೆದ ಕೆ-ಸೆಟ್‌ ಪರೀಕ್ಷೆಯನ್ನು 1.36 ಲಕ್ಷ ಮಂದಿ ತೆಗೆದುಕೊಂಡಿದ್ದರು. ಬೆಂಗಳೂರು ಸೇರಿದಂತೆ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಪ್ರಾಧಿಕಾರ ನಡೆಸಿದೆ.
ಬೆಂಗಳೂರಿನಲ್ಲಿ ಎಲ್ಲ 33 ವಿಷಯಗಳ ಪರೀಕ್ಷೆ ನಡೆಯಿತು,ಉಳಿದ ಜಿಲ್ಲೆಗಳಲ್ಲಿ 11 ವಿಷಯಗಳ ಪರೀಕ್ಷೆ ಗಳು ಮಾತ್ರ ನಡೆದಿವೆ.

ಈ ಪರೀಕ್ಷೆಗಳಿಗೆ ನೆಗೆಟಿವ್‌ ಮೌಲ್ಯಮಾಪನ ಇರುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ. ಈ ಹಿಂದಿನ ಎಲ್ಲ ಪರೀಕ್ಷೆಗಳ ಹಾಗೆಯೇ ಈ ಪರೀಕ್ಷೆಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗಿತ್ತು.

ಬೆಳಗಾವಿಯಲ್ಲಿ ರಾಜ್ಯೋತ್ಸವ ಸಂಭ್ರಮದಲ್ಲಿ ಚಾಕು ಇರಿತ : ಕನ್ನಡಿಗರ ಆಕ್ರೋಶ

ಬೆಂಗಳೂರು,ನ.2- ಬೆಳಗಾವಿಯಲ್ಲಿ ಅದ್ಧೂರಿ ಯಾಗಿ ನಡೆದ ರಾಜ್ಯೋತ್ಸವದ ಸಂದರ್ಭದಲ್ಲಿ ದುಷ್ಕರ್ಮಿಗಳು ಐದಾರು ಮಂದಿಗೆ ಚಾಕು ಇರಿದು ಅಟ್ಟಹಾಸ ಮೆರೆದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ನಾಡಿನ ಕನ್ನಡಪರ ಸಂಘಟನೆಗಳು, ನಾಡವಿರೋಧಿ ಧೋರಣೆಯ ಎಂಇಎಸ್‌‍ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿವೆ.

ಎಂಇಎಸ್‌‍ ಪುಂಡಾಟಕ್ಕೆ ತಿಲಾಂಜಲಿ ಹಾಡಲು ರಾಜ್ಯಸರ್ಕಾರ ಕೂಡಲೇ ಮುಂದಾಗಬೇಕು. ಇಲ್ಲ ದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹಾಗೂ ಸಾ.ರಾ.ಗೋವಿಂದು, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್‌ಕುಮಾರ್‌ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರಾಜ್ಯ ದ್ರೋಹಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಎಂಇಎಸ್‌‍ ಪುಂಡರನ್ನು ಸುಮನೆ ಬಿಡಬಾರದು. ಕಠಿಣ ಕ್ರಮ ಕೈಗೊಂಡು ಎಂಇಎಸ್‌‍ಅನ್ನೇ ರಾಜ್ಯದಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವ ಹುನ್ನಾರ ನಡೆಸಿ ಪೊಲೀಸರ ಅನುಮತಿ ಪಡೆಯದೆ ಕರಾಳ ದಿನ ಆಚರಿಸಿದ್ದಾರೆ. ಇವರಿಗೆ ಕಾನೂನಿನ ಭಯವಿಲ್ಲ. ಕನ್ನಡಿಗರನ್ನು ಕೆರಳಿಸುವ ಕೃತ್ಯ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಿಗರ ಅದ್ಧೂರಿ ರಾಜ್ಯೋತ್ಸವವನ್ನು ಸಹಿಸದೆ ಎಂಇಎಸ್‌‍ ದುಷ್ಕರ್ಮಿಗಳು ಪೂರ್ವ ನಿಯೋಜನೆಯಂತೆ ಈ ಕೃತ್ಯ ನಡೆಸಿದ್ದಾರೆ. ಇದನ್ನು ಪೊಲೀಸರು ಲಘುವಾಗಿ ಪರಿಗಣಿಸಬಾರದು. ಬೆಳಗಾವಿ ಕನ್ನಡಿಗರ ಪರ ನಾವಿದ್ದೇವೆ. ಯಾವುದೇ ಮುಲಾಜಿಲ್ಲದೆ ಎಂಇಎಸ್‌‍ ಪುಂಡರನ್ನು ಸದೆಬಡಿಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಮ ತಾಳೆಗೂ ಒಂದು ಮಿತಿ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು ಎಂಇಎಸ್‌‍ ಬಾಲ ಬಿಚ್ಚಿದೆ. ಇದರ ವಿರುದ್ಧ ಕನ್ನಡಿಗರು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಂಇಎಸ್‌‍ನವರು ಕನ್ನಡಿಗರೇ ಅವರನ್ನು ತಿದ್ದುವ ಕೆಲಸ ಮಾಡಬೇಕೆಂದು ಹೇಳುತ್ತಾರೆ. ಆದರೆ ರಾಜ್ಯೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ಕರಾಳ ದಿನಾಚರಣೆ ಮಾಡುವುದಲ್ಲದೆ ದುಷ್ಕರ್ಮಿಗಳು ಚಾಕು ಇರಿಯುವುದರ ಮೂಲಕ ಆತಂಕದ ವಾತಾವರಣ ಸೃಷ್ಟಿಸುತ್ತಾರೆ. ಇಂತಹ ಘಟನೆಗಳಿಗೆ ಇತಿಶ್ರೀ ಹಾಡದಿದ್ದರೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಚಾಕು ಇರಿತದಿಂದ ಗಾಯಗೊಂಡು ಬೀಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಲ್ಲರೂ ಬಿಡುಗಡೆಯಾಗಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಈ ಕೃತ್ಯ ನಡೆದಿರುವುದರಿಂದ ದುಷ್ಕಮಿಗಳ ಪತ್ತೆ ಸವಾಲಾಗಿದೆ. ಅವರನ್ನು ಗುರುತು ಹಿಡಿಯಲು ಈಗ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ನಗರ ಪೊಲೀಸ್‌‍ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟಾರೆ ರಾಜ್ಯೋತ್ಸವದಂದು ನಡೆದಿರುವ ಈ ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಕಿಡಿಗೇಡಿಗಳ ಕೃತ್ಯವನ್ನು ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಖಂಡಿಸಿವೆ.

2.5 ಲಕ್ಷ ಮೆಟ್ರಿಕ್‌ ಟನ್‌ ಮಾವಿನ ಹಣ್ಣು ವಿಮಾ ವ್ಯಾಪ್ತಿಗೆ

ಬೆಂಗಳೂರು, ನ.2- ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರವು ಮಾವು ಬೆಳೆಗಾರರಿಗೆ ಒಳ್ಳೆಯ ಸುದ್ದಿ ನೀಡಿದೆ. ಭಾರತ ಸರ್ಕಾರವು ಕರ್ನಾಟಕದಲ್ಲಿ 2025-26ನೇ ಋತುವಿನಲ್ಲಿ ಬೆಲೆ ಕೊರತೆ ಪಾವತಿ ಯೋಜನೆಯಡಿಯಲ್ಲಿ ಕ್ವಿಂಟಲ್‌ಗೆ 1,616 ರೂ. ಮಾರುಕಟ್ಟೆ ಮಧ್ಯಪ್ರವೇಶದ ಬೆಲೆಯಲ್ಲಿ 2.5 ಲಕ್ಷ ಮೆಟ್ರಿಕ್‌ ಟನ್‌ ಮಾವಿನಹಣ್ಣಿನ ಖರೀದಿಗೆ ಅನುಮೋದಿಸಿದೆ.

ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ದೇವೇಗೌಡರಿಗೆ ಪತ್ರ ಬರೆದು ಈ ವಿಷಯ ತಿಳಿಸಿದ್ದಾರೆ. ಇದರಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ಅನುಕೂಲ ಆಗಲಿದೆ.

ಈ ಬಗ್ಗೆ ದೇವೇಗೌಡರು ಜೂನ್‌ 22 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮಾಜಿ ಪ್ರಧಾನಿಗಳ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಮಾವು ಬೆಳೆಗಾರರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಕರ್ನಾಟಕದ ಮಾವು ಬೆಳೆಗಾರರನ್ನು ಬೆಂಬಲಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಕಡಿಮೆ ಇಳುವರಿ, ಹವಾಮಾನ ವೈಪ ರೀತ್ಯ ಮತ್ತು ಮಾವಿನಹಣ್ಣಿನ ಅಂತರಾಜ್ಯ ಸಾಗಣೆಯ ಮೇಲಿನ ನಿರ್ಬಂಧಗಳಿಂದ ಉಂಟಾದ ತೀವ್ರ ಬೆಲೆ ಕುಸಿತದ ಬಗ್ಗೆ ಮಾಜಿ ಪ್ರಧಾನಿಗಳು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಸಮಸ್ಯೆಗಳಿಂದ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮಾವು ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಮುಂದಿನ ದಿನಗಳಲ್ಲಿಯೂ ಇಂತಹುದೇ ಸಮಸ್ಯೆ ಬರುವ ಸಾಧ್ಯತೆ ಇರುವುದರಿಂದ ತಾವು ಬೆಳೆಗಾರರ ನೆರವಿಗೆ ಬರಬೇಕು ಎಂದು ಮಾಜಿ ಪ್ರಧಾನಿಗಳು ಸಚಿವರನ್ನು ಕೋರಿದ್ದರು.

ನಫೆಡ್‌ ಮತ್ತು ಎನ್‌ಸಿಸಿಎಫ್‌ ಮಾವಿನ ಹಣ್ಣು ಖರೀದಿಗಾಗಿ ಬೆಲೆ ಕೊರತೆ ಪಾವತಿ ಮತ್ತು ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯನ್ನು ಪ್ರಾರಂಭಿಸುವಂತೆಯೂ ದೇವೇಗೌಡರು ಕೇಂದ್ರವನ್ನು ವಿನಂತಿಸಿದ್ದರು. ಈ ಉಪಕ್ರಮ ಕೈಗೊಳ್ಳುವ ಮೂಲಕ ಬೆಳೆಗಾರರಿಗೆ ಲಾಭದಾಯಕ ಬೆಲೆಗಳು ಮತ್ತು ಆರ್ಥಿಕ ಸಂಕಷ್ಟದಿಂದ ಪರಿಹಾರವನ್ನು ನೀಡುತ್ತದೆ ಎಂದು ಮನವರಿಕೆ ಮಾಡಿದ್ದರು.

ಸಕಾಲಿಕ ಮಾರುಕಟ್ಟೆ ಮಧ್ಯಸ್ಥಿಕೆ ಮೂಲಕ ರೈತರನ್ನು ಬೆಂಬಲಿಸುವ ಕೇಂದ್ರದ ಬದ್ಧತೆಯನ್ನು ಕೇಂಧ್ರ ಸಚಿವರು ಪುನರುಚ್ಚರಿಸಿದ್ದು, ಬೆಳೆಗಾರರ ಉತ್ಪನ್ನಗಳಿಗೆ ನ್ಯಾಯಯುತ ಆದಾಯವನ್ನು ಖಚಿತಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ದೇವೇಗೌಡರು ಸಂತಸ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಆರ್‌ಎಸ್‌‍ಎಸ್‌‍ ನಿಷೇಧ ಸಾಧ್ಯವಿಲ್ಲ : ದತ್ತಾತ್ರೇಯ ಹೊಸಬಾಳೆ

ಜಬಲ್ಪುರ (ಮಧ್ಯಪ್ರದೇಶ), ನ.2- ಯಾರೋ ಬಯಸುತ್ತಾರೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಲು ಸಾಧ್ಯವಿಲ್ಲ. ಅಂತಹ ಬೇಡಿಕೆ ಇಡುವವರು ಹಿಂದಿನ ಅನುಭವಗಳಿಂದ ಕಲಿಯಬೇಕು ಎಂದು ಆರ್‌ಎಸ್‌‍ಎಸ್‌‍ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಆರ್‌ಎಸ್‌‍ಎಸ್‌‍ ನಿಷೇಧದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್‌‍ಎಸ್‌‍) ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು.

ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದ ಖರ್ಗೆ, ದೇಶದಲ್ಲಿ ಹೆಚ್ಚಿನ ಸಮಸ್ಯೆಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸುತ್ತಿರುವುದು ಬಿಜೆಪಿ ಹಾಗೂ ಆರ್‌ಎಸ್‌‍ಎಸ್‌‍ನಿಂದ. ಹೀಗಾಗಿ ಈ ಸಂಘಟನೆಯನ್ನು ನಿಷೇಧಿಸಬೇಕು. ಪ್ರಧಾನಿ ನರೇಂದ್ರಮೋದಿಯವರು ವಲ್ಲಭಭಾಯಿ ಪಟೇಲ್‌ ಮಂಡಿಸಿದ ಅಭಿಪ್ರಾಯಗಳನ್ನು ಗೌರವಿಸುವುದು ನಿಜವಾದರೆ, ಆರ್‌ಎಸ್‌‍ಎಸ್‌‍ ಅನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದರು.

ಜಬಲ್ಪುರದಲ್ಲಿ ನಡೆದ ಮೂರು ದಿನಗಳ ಆರ್‌ಎಎಸ್‌‍ನ ಅಖಿಲ ಭಾರತ ಕಾರ್ಯಕಾರಿಣಿ ಸಭೆಯ ಮುಕ್ತಾಯದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಮೂರು ಬಾರಿ ಇಂತಹ ಪ್ರಯತ್ನಗಳು ನಡೆದಿವೆ. ಆಗ ಸಮಾಜ ಏನು ಹೇಳಿತು? ನ್ಯಾಯಾಲಯ ಏನು ಹೇಳಿತು? ಇಷ್ಟೆಲ್ಲಾ ಇದ್ದರೂ, ಸಂಘದ ಕೆಲಸ ಬೆಳೆಯುತ್ತಲೇ ಇದೆ. ನಿಷೇಧ ಹೇರಲು ಸರಿಯಾದ ಕಾರಣಗಳಿರಬೇಕು ಎಂದಿದ್ದಾರೆ.

ಆರ್‌ಎಸ್‌‍ಎಸ್‌‍ ನಿಷೇಧಿಸುವ ಹೇಳಿಕೆ ಈಗಿನದ್ದಲ್ಲ, ಹಳೆಯದು. ಈ ಹಿಂದೆಯೂ ಸಂಘವನ್ನು ನಿಷೇಧಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಪ್ರತಿ ಬಾರಿಯೂ ಅದು ಬಲವಾಗಿ ನಿಂತಿದೆ. ಸಂಘವು ರಾಜಕೀಯಕ್ಕಾಗಿ ಅಲ್ಲ, ಸಮಾಜಕ್ಕಾಗಿ ಕೆಲಸ ಮಾಡುತ್ತದೆ. ಸಂಘವು ತನ್ನ ಆದರ್ಶಗಳ ಮೂಲಕ ದೃಢವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಖರ್ಗೆಯವರು ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕು. ಸಮಾಜವು ಸಂಘವನ್ನು ಒಪ್ಪಿಕೊಂಡಿದೆ ಮತ್ತು ನ್ಯಾಯಾಂಗವು ಸಹ ಈ ವಿಷಯದ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಿದೆ. ಯಾವುದೇ ಮಹತ್ತರ ಕಾರಣವಿಲ್ಲದೆ ಆರ್‌ಎಸ್‌‍ಎಸ್‌‍ ನಿಷೇಧದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಂಘವು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾಗಿದೆ. ಯಾವುದೇ ನಿಷೇಧದ ಹಿಂದೆ ಒಂದು ಕಾರಣವಿರಬೇಕು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಆರ್‌ಎಸ್‌‍ಎಸ್‌‍ ಅನ್ನು ಗುರಿಯಾಗಿಸಿಕೊಂಡು ಸಾಧಿಸುವುದೇನಿದೆ? ಸಾರ್ವಜನಿಕರು ಈಗಾಗಲೇ ನಮನ್ನು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ವಿಶೇಷವಾಗಿ ಪಂಜಾಬ್‌ ಮತ್ತು ಸಿಖ್‌ ಸಮುದಾಯದಲ್ಲಿ ಧಾರ್ಮಿಕ ಮತಾಂತರದ ಘಟನೆಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಸಂಘವು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ನಮ ಗುರಿ ಯಾರ ವಿರುದ್ಧವೂ ಅಲ್ಲ, ಆದರೆ ವಂಚನೆ ಅಥವಾ ದುರಾಸೆಯಿಂದ ಮತಾಂತರಗೊಂಡವರನ್ನು ಅವರ ಮೂಲ ಧರ್ಮಕ್ಕೆ ಮರಳಿ ತರುವುದು ನಮ ಉದ್ದೇಶ ಎಂದು ಹೇಳಿದ್ದಾರೆ.

ಆರ್‌ಎಸ್‌‍ಎಸ್‌‍ ಸಭೆಯಲ್ಲಿ ಬಿಹಾರ ಅಥವಾ ಪಶ್ಚಿಮಬಂಗಾಳ ಚುನಾವಣೆಗಳ ಬಗ್ಗೆ ಚರ್ಚಿಸಲಾಗಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ಬಿಹಾರ ಚುನಾವಣೆಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಆದರೆ ಜನರು ಜಾತಿ ಅಥವಾ ಹಣದ ಆಧಾರದ ಮೇಲೆ ಮತಚಲಾಯಿಸದೆ, ರಾಷ್ಟ್ರ ಮತ್ತು ಸಮಾಜಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂಬುದು ಸಂಘದ ನಿಲುವು. ಈ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಪಶ್ಚಿಮಬಂಗಾಳದ ಬಗ್ಗೆ ಹೇಳುವುದಾದರೆ ಈ ಸಭೆಯಲ್ಲಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿಲ್ಲ, ಆದರೆ ಅದರ ಬಗ್ಗೆ ಮೊದಲೇ ಚರ್ಚೆ ನಡೆದಿತ್ತು. ಅಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹಿಂದಿನ ಸಭೆಯಲ್ಲಿ ಸಂಘದ ನಿರ್ಣಯ ಅಂಗೀಕರಿಸಲಾಗಿತ್ತು. ಸಂಘದ ಕೆಲಸವನ್ನು ರಾಜ್ಯದಲ್ಲಿ ವ್ಯಾಪಕವಾಗಿ ವಿಸ್ತರಿಸಲಾಗುತ್ತಿದೆ. ಆದರೆ, ಕಳೆದ ಚುನಾವಣೆಗಳ ನಂತರ ರಾಜಕೀಯ ನಾಯಕತ್ವಕ್ಕಾಗಿ ಅಲ್ಲಿನ ಮುಖ್ಯಮಂತ್ರಿ ದ್ವೇಷ ಹರಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೊಸಬಾಳೆ ಆರೋಪಿಸಿದ್ದಾರೆ.

ಸುರಂಗ ರಸ್ತೆ ಯೋಜನೆ ವಿರುದ್ಧ ಲಾಲ್‌ಬಾಗ್‌ನಲ್ಲಿ ಬಿಜೆಪಿ ಸಹಿ ಅಭಿಯಾನ

ಬೆಂಗಳೂರು,ನ.2- ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಿ ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸಲು ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆ ವಿರುದ್ಧ ಪ್ರತಿಪಕ್ಷ ಬಿಜೆಪಿ ಮುಖಂಡರು ಇಲ್ಲಿನ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಸಹಿ ಅಭಿಯಾನ ಮತ್ತು ಮೌನ ಪ್ರತಿಭಟನೆ ನಡೆಸಿದರು.

ಬೆಂಗಳೂರು ರಕ್ಷಿಸಿ- ಸುರಂಗ ರಸ್ತೆ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ ರಾಮಮೂರ್ತಿ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮುಖಂಡರು ಭಾಗವಹಿಸಿದ್ದರು.

ಲಾಲ್‌ಬಾಗ್‌ನಲ್ಲಿ ಟನಲ್‌ ಯೋಜನೆ ಅನುಷ್ಠಾನ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಆಗಲಿದೆ, ಬೆಂಗಳೂರು ಇಷ್ಟು ಸುರಕ್ಷಿತವಾಗಿರಲು ಲಾಲ್‌ಬಾಗ್‌ ಬಂಡೆ ಎಷ್ಟು ಪ್ರಾಮುಖ್ಯತೆ ವಹಿಸಿದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ, ಲಾಲ್‌ಬಾಗ್‌ನಲ್ಲಿ ಬೆಳಗ್ಗೆ ವಾಯುವಿಹಾರ ನಡೆಸುತ್ತಿದ್ದ ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿದರು. ಈ ಯೋಜನೆಯಿಂದ ಸಂಭವನೀಯ ಪರಿಸರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಯೋಜನೆ ನಗರಕ್ಕೆ ದುರಂತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ 6 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು.

ಟನಲ್‌ ರೋಡ್‌ ಮಾರ್ಗದ ಕುರಿತು ಲಾಲ್‌ಬಾಗ್‌ ಜಂಟಿ ನಿರ್ದೇಶಕ ಜಗದೀಶ್‌ ಅವರು ವಿವರಿಸಿದಾಗ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌, ಯಾವುದೇ ಯೋಜನೆ ಮಾಡಿದರೂ ಅನುಮತಿ ಪಡೆದುಕೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು.
ಈ ಯೋಜನೆಗೆ ನಾವು ಇನ್ನು ಅನುಮತಿಯನ್ನೇ ಕೊಟ್ಟಿಲ್ಲ ಎಂದು ಜಗದೀಶ್‌ ಹೇಳಿದಾಗ, ಆರು ಎಕರೆ ಬಳಸಿಕೊಂಡರೆ, ಇದು ಮಾರ್ಕೆಟ್‌ ಆಗುವುದಿಲ್ಲವೇ ಎಂದು ಅಶೋಕ್‌ ಮರುಪ್ರಶ್ನೆ ಮಾಡಿದರು.

ಮುಂದೆ ನಾವು ಇರುವುದಿಲ್ಲ ನೀವೂ ಇರುವುದಿಲ್ಲ. ಆದರೆ ನಾವು ಮಾಡುವ ಕೆಲಸ ಉಳಿಯಬೇಕು. ಯಾರೇ ಬಂದರೂ ಮೊದಲು ಭೇಟಿ ನೀಡುವುದೇ ಲಾಲ್‌ಬಾಗ್‌ ಮತ್ತು ವಿಧಾನಸೌಧಕ್ಕೆ. ನಾವು ಇಲ್ಲಿ ಪ್ರತಿಭಟನೆ ಮಾಡಲು ಬಂದಿಲ್ಲ. ನಿಮಗೆ ಏನೇ ಮಾಹಿತಿ ಬಂದರೂ ಅದನ್ನು ಸರ್ಕಾರಕ್ಕೆ ನೀಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡು ಭಾಗಿಯಾಗುತ್ತದೆ. ಈಗಾಗಲೇ ಟೆಂಡರ್‌ ಕೂಡ ಕರೆದಿದ್ದಾರೆ. ಇನ್ನೂ ಅನುಮತಿಯೇ ಸಿಕ್ಕಿಲ್ಲ ಎಂದು ಅಶೋಕ್‌ ಹೇಳಿದರು.

ಸಂಚಾರ ದಟ್ಟಣೆಯನ್ನು ಪರಿಹರಿಸಲು ಉದ್ದೇಶಿಸಿರುವ ಸುರಂಗ ರಸ್ತೆಯು ಯೋಜನೆಯ ಡಿಪಿಆರ್‌ ಪ್ರಕಾರ 22 ಹೆಚ್ಚುವರಿ ಚೆಕ್‌ಪಾಯಿಂಟ್‌ಗಳನ್ನು ಸೃಷ್ಟಿಸುತ್ತದೆ ಎಂದು ತೇಜಸ್ವಿ ಸೂರ್ಯ ಇತ್ತೀಚೆಗೆ ಹೇಳಿದ್ದರು.ಸುರಂಗಗಳು ಸಮಯವನ್ನು ಉಳಿಸಲು ಮತ್ತು ಪ್ರಯಾಣದ ದೂರವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಆದರೆ ಈ ಬೆಂಗಳೂರು ಸುರಂಗವು ವಾಸ್ತವವಾಗಿ ಪ್ರತಿ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್‌ 1 ಕಿ.ಮೀಗಿಂತ ಹೆಚ್ಚು ಉದ್ದವಿರುವುದರಿಂದ ಪ್ರಯಾಣದ ದೂರವನ್ನು 2 ಕಿ.ಮೀ ಹೆಚ್ಚಿಸುತ್ತದೆ ಎಂದು ಅವರು ದೂರಿದರು.

ಸಿಗ್ನಲ್‌ನಲ್ಲಿ ನಿಂತಿದ್ದ ಸ್ಕೂಟರ್‌ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದು ದಂಪತಿ ಸಾವು

ಬೆಂಗಳೂರು,ನ.2- ಆ್ಯಂಬುಲೆನ್ಸ್ ವೊಂದು ವೇಗವಾಗಿ ಬಂದು ಸಿಗ್ನಲ್‌ನಲ್ಲಿ ನಿಂತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ವಿಲ್ಸನ್‌ಗಾರ್ಡನ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೋಮೇಶ್ವರನಗರ ನಿವಾಸಿಗಳಾದ ಇಸಾಯಿಲ್‌(40), ಸಮೀನಾ ಬಾನು(35) ಮೃತಪಟ್ಟ ದಂಪತಿ. ಘಟನೆಯಲ್ಲಿ ಇಬ್ಬರು ಬೈಕ್‌ ಸವಾರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ರಾತ್ರಿ 11.15ರ ಸಂದರ್ಭದಲ್ಲಿ ಶಾಂತಿನಗರ ಬಸ್‌‍ ನಿಲ್ದಾಣ ಬಳಿ(ಡಬಲ್‌ ರೋಡ್‌) ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕೆಂಪು ದ್ವೀಪ(ರೆಡ್‌ ಸಿಗ್ನಲ್‌) ಇದಿದ್ದರಿಂದ ವಾಹನಗಳು ನಿಂತಿದ್ದವು. ಈ ವೇಳೆ ವೇಗವಾಗಿ ಬಂದ ಆ್ಯಂಬುಲೆನ್‌್ಸ ನಿಂತಿದ್ದ ವಾಹನಗಳು ಹಾಗೂ ಪೊಲೀಸ್‌‍ ಚೌಕಿಗೆ ಡಿಕ್ಕಿ ಹೊಡೆದಿದೆ.

ಇದರಲ್ಲಿ ಮೂರು-ನಾಲ್ಕು ಬೈಕ್‌ಗಳಿಗೆ ಹಾನಿಯಾಗಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿ ಇಸಾಯಿಲ್‌, ಸಮೀನಾ ಬಾನು ಅವರು ಸಾವನ್ನಪ್ಪಿದ್ದಾರೆ. ಆ್ಯಂಬುಲೆನ್‌್ಸ ಇವರ ದ್ವಿಚಕ್ರ ವಾಹನವನ್ನು 50 ಅಡಿ ಉದ್ದಕ್ಕೆ ಉಜ್ಜಿಕೊಂಡು ಮುಂದೆ ಸಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಲ್ಸನ್‌ಗಾರ್ಡನ್‌ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆ್ಯಂಬುಲೆನ್‌್ಸನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಚಾಲಕನ ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಚ್ಛೇದಿತ ಮಹಿಳೆಯನ್ನು ನಡು ರಸ್ತೆಯಲ್ಲೇ ಇರಿದು ಕೊಂದ ದುಷ್ಕರ್ಮಿ

ಬೆಂಗಳೂರು, ನ.2- ವಿಚ್ಛೇದಿತ ಮಹಿಳೆಯನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಕೆಜಿ ಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ರೇಣುಕಾ (30) ಎಂದು ಗುರುತಿಸಲಾಗಿದ್ದು, ಈಕೆಯ ಪ್ರಿಯಕರ ಅಂಬೇಡ್ಕರ್‌ ಅಲಿಯಾಸ್‌‍ ಕುಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.ರೇಣುಕಾಗೆ ಒಬ್ಬ ಮಗನಿದ್ದು, ಕಳೆದ ಒಂದು ವರ್ಷದ ಹಿಂದೆ ಗಂಡನನ್ನು ಬಿಟ್ಟು ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನಲ್ಲಿ ಪ್ರತ್ಯೇಕವಾಗಿ ಮನೆ ಮಾಡಿ ವಾಸವಾಗಿದ್ದರು.

ಈ ವೇಳೆ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕುಟ್ಟಿಯ ಪರಿಚಯವಾಗಿದ್ದು, ಅದು ಪ್ರೇಮಕ್ಕೆ ತಿರುಗಿದೆ. ಕಾಲಕ್ರಮೇಣ ರೇಣುಕಾ ಟೈಮ್‌ಪಾಸ್‌‍ಗಾಗಿ ನನ್ನನ್ನು ಪ್ರೀತಿಸಬೇಡ. ಮದುವೆಯಾಗು ಎಂದು ಹೇಳಿದ್ದಾಳೆ.

ಇದಕ್ಕೆ ಕುಟ್ಟಿ ನಯವಾಗಿಯೇ ತಳ್ಳಿಹಾಕುತ್ತಿದ್ದ. ಇತ್ತೀಚೆಗೆ ಹೆಚ್ಚಿದ ಒತ್ತಡದಿಂದ ರೇಣುಕಾಳನ್ನು ಕೊಲೆ ಮಾಡಲು ಆತ ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ರೇಣುಕಾಳನ್ನು ಕರೆಸಿಕೊಂಡ ಕುಟ್ಟಿ ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆ ಬಳಿ ಕರೆದುಕೊಂಡು ಹೋಗಿ ಜಗಳ ಮಾಡಿದ್ದಾನೆ.

ಈ ವೇಳೆ ಪೂರ್ವ ಸಂಚಿನಂತೆ ತಂದಿದ್ದ ಚಾಕುವಿನಿಂದ ರೇಣುಕಾಳ ದೇಹಕ್ಕೆ ಆರುಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಆತಂಕಗೊಂಡು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಆತ ಅಲ್ಲಿಂದ ಪರಾರಿಯಾಗಿದ್ದ.

ಸುದ್ದಿ ತಿಳಿದ ಕೆಜಿ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ರೇಣುಕಾಳನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ಮೃತಳ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಕುರಿತಂತೆ ಪೊಲೀಸರು ಕುಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸಾರ್ವಜನಿಕರ ಮುಂದೆಯೇ ಕೊಲೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೆಜಿ ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚೇನಂಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ರೂ. ಅನುದಾನ ಘೋಷಿಸಿದ ಸಿಎಂ

ಬೆಂಗಳೂರು, ನ.2– ಕೊಡವರು ಅಂದ್ರೆ ಹಾಕಿ. ಹಾಕಿ ಅಂದ್ರೆ ಕೊಡವರು. ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಗೃಹ ಕಚೇರಿ ಕೃಷ್ಣದಲ್ಲಿ ಚೇನಂಡ ಹಾಕಿ ಪಂದ್ಯಾವಳಿಯ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಹಾಕಿ ಪಟುಗಳು ಮಿಂಚಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ. ಏಷ್ಯಾ ಗೇಮ್ಸೌಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮೆ ಮತ್ತು ಘನತೆ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಕೊಡವ ಸಂಸ್ಕೃತಿ ತನ್ನದೇ ಆದ ಭಿನ್ನತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಇದು ನಮ ಸಂಸ್ಕೃತಿಯ ಹೆಮೆ. 2026ರ ಮೇ ತಿಂಗಳಲ್ಲಿ ನಡೆಯುವ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ. ಪಂದ್ಯಾವಳಿ ನೋಡಲು ನಾನೂ ಬರುತ್ತೇನೆ ಎಂದು ಅವರು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಮತ್ತು ಸಚಿವರಾದ ಬೋಸರಾಜು, ಬೈರತಿ ಸುರೇಶ್‌ ಮತ್ತು ಶಿವರಾಜ್‌ ತಂಗಡಗಿ ಸೇರಿ ಕೊಡವ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಹಿಂಗಾರು ದುರ್ಬಲ : ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಮಳೆಯ ಕೊರತೆ

ಬೆಂಗಳೂರು, ನ.2- ರಾಜ್ಯದಲ್ಲಿ ಹಿಂಗಾರು ಮಳೆ ಆರಂಭದಲ್ಲೇ ದುರ್ಬಲಗೊಂಡ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಮಳೆಯ ಕೊರತೆಯಾಗಿದೆ.ಅಕ್ಟೋಬರ್‌ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ ವಾಡಿಕೆ ಪ್ರಮಾಣದ ಮಳೆಯಾಗಿದ್ದರೂ ಹಿಂಗಾರು ಹಂಗಾಮಿನ ಬೆಳೆಯನ್ನು ಪ್ರಮುಖವಾಗಿ ಬೆಳೆ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಅಕ್ಟೋಬರ್‌ನಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.18ರಷ್ಟು, ಮಲೆನಾಡು ಭಾಗದಲ್ಲಿ ಶೇ.42ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.33ರಷ್ಟು ಅಧಿಕ ಮಳೆಯಾಗಿದೆ. ಆದರೆ, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.33 ರಷ್ಟು ಮಳೆ ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 107 ಮಿ.ಮೀ. ವಾಡಿಕೆ ಮಳೆ ಈ ಭಾಗದಲ್ಲಿದ್ದು, ಕೇವಲ 71 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ.ರಾಜ್ಯದಲ್ಲಿ ಅಕ್ಟೋಬರ್‌ ತಿಂಗಳ ವಾಡಿಕೆ ಮಳೆ 131 ಮಿ.ಮೀ. ಇದ್ದು, 137 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ.5ರಷ್ಟು ಹೆಚ್ಚು ಮಳೆಯಾಗಿದೆ.

ಆದರೆ, ಜೂನ್‌ ಒಂದರಿಂದ ಅಕ್ಟೋಬರ್‌ ಅಂತ್ಯದವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.4ಷ್ಟು ಅಧಿಕ ಮಳೆಯಾಗಿದೆ. ಕರಾವಳಿಯಲ್ಲಿ ಶೇ.3ರಷ್ಟು, ಉತ್ತರ ಒಳನಾಡಿನಲ್ಲಿ ಶೇ.21ರಷ್ಟು ಅಧಿಕ ಮಳೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ಶೇ.7ರಷ್ಟು ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.9ರಷ್ಟು ಮಳೆ ಕೊರತೆಯಾಗಿರುವುದು ಕಂಡುಬಂದಿದೆ.

ಜನವರಿ ಒಂದರಿಂದ ಅಕ್ಟೋಬರ್‌ ಅಂತದ್ಯವರೆಗೆ ರಾಜ್ಯದಲ್ಲಿ ಶೇ.19ರಷ್ಟು ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 1102 ಮಿ.ಮೀ. ಆಗಿದ್ದು, 1306 ಮಿ.ಮೀ.ನಷ್ಟು ಮಳೆ ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.12ರಷ್ಟು, ಉತ್ತರ ಒಳನಾಡಿನಲ್ಲಿ ಶೇ.26ರಷ್ಟು, ಮಲೆನಾಡು ಭಾಗದಲ್ಲಿ ಶೇ.12ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.21ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಮುಂಗಾರು ಹಂಗಾಮಿನ ರಾಗಿ, ತೊಗರಿ, ಅವರೆ, ಹಲಸಂದೆ ಸೇರಿದಂತೆ ವಿವಿಧ ಬೆಳೆಗಳಿಗೆ ಮಳೆಯ ಅಗತ್ಯವಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಣಹವೆ ಇದ್ದು, ಚಳಿ ಆರಂಭವಾಗಿದೆ. ಇಂದು ಬೆಂಗಳೂರು ಸೇರಿದಂತೆ ಹಲವೆಡೆ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.

ನಾಳೆಯಿಂದ ರಾಜ್ಯದಲ್ಲಿ ಮೂರು-ನಾಲ್ಕು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ನಿರೀಕ್ಷೆಯಂತೆ ಮಳೆ ಬಂದರೆ ರೈತರಿಗೆ ಅನುಕೂಲ ಆಗಲಿದೆ. ಇಲ್ಲದಿದ್ದರೆ ಕೈಗೆ ಬಂದ ತುತ್ತು, ಬಾಯಿಗೆ ಬಾರದಂತಹ ಪರಿಸ್ಥಿತಿ ರೈತರಿಗೆ ಆಗಲಿದೆ.