Home Blog Page 1797

ನನ್ನ ಕಲಾಸೇವೆ ಅತ್ಯಂತ ಕಿರಿದು, ಕರುನಾಡ ಪ್ರೀತಿ ಅತ್ಯಂತ ಹಿರಿದು : ಯಶ್

ಕೆಂಗೇರಿ, ನ.23- ನನ್ನ ಕಲಾ ಸೇವೆ ಅತ್ಯಂತ ಕಿರಿದು. ನನಗೆ ದೊರೆತಿರುವ ಕರುನಾಡ ಪ್ರೀತಿ ಅತ್ಯಂತ ಹಿರಿದು ಎಂದು ರಾಕಿಂಗ್ ಸ್ಟಾರ್ ಯಶ್ ಇಂದಿಲ್ಲಿ ಹೇಳಿದರು. ಕೆಂಗೇರಿ ಬಳಿಯ ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿ ಕ್ಯಾಂಪಸ್‍ನಲ್ಲಿಂದು ನಡೆದ 15ನೆ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಮಾತ್ರ ಗಮನ ಹರಿಸಿ. ಅಕ್ಕ ಪಕ್ಕದವರ ತೆಗಳಿಕೆಗೆ ಬೆಲೆ ನೀಡಬೇಡಿ ಎಂದು ಸಲಹೆ ನೀಡಿದರು.

ನಿಮ್ಮ ಪ್ರಾಮಾಣಿಕ ಗುರಿಗೆ ಸಹಕಾರ ನೀಡುವವರ ಸಂಪರ್ಕದಲ್ಲಿರಿ. ನಾನು ಕೂಡ ನನ್ನ ಮನದ ಮಾತಿಗೆ ಮಾತ್ರ ಬೆಲೆ ನೀಡಿದ್ದೆ ಎಂದು ಹೇಳಿದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಮೊದಲು ಭೇಟಿ ಮಾಡಿದ ಸಂದರ್ಭ ಇನ್ನೂ ನನ್ನ ಮನದಲ್ಲಿ ಅಚ್ಚ ಹಸಿರಾಗಿದೆ. ಅವರ ದೂರದೃಷ್ಟಿ, ಶೈಕ್ಷಣಿಕ ದೃಷ್ಟಿಕೋನಗಳು, ಸಾಂಸ್ಕøತಿಕ ನಿಲುವುಗಳು ಅಂದೇ ನನ್ನ ಮನಸ್ಸು ಗೆದ್ದಿದ್ದವು ಎಂದು ಹೇಳಿದರು.

ಯಾರೋ ಒಬ್ಬರ ಶ್ರಮ, ಬದ್ಧತೆಯಿಂದ ಒಂದು ಉತ್ತಮ ಸಂಸ್ಥೆ ರೂಪುಗೊಳ್ಳಲು ಸಾಧ್ಯ. ಅದೇ ರೀತಿ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಅವಿರತ ಪ್ರಯತ್ನದಿಂದ ದೇಶದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಬಿಜಿಎಸ್ ರೂಪುಗೊಂಡಿದೆ ಎಂದು ಶ್ಲಾಘಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಇಲ್ಲಿ ನಮ್ಮ ಮಧ್ಯೆ ಇರುವ ನಟ ಯಶ್ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಹೆಸರಿನಲ್ಲೇ ಯಶಸ್ಸು ಇದೆ ಎಂದರು.

ಯಾವ ವ್ಯಕ್ತಿ ಗುರು- ಹಿರಿಯರನ್ನು ಗೌರವಿಸುತ್ತಾರೋ, ಅಬಲರಿಗೆ ಬೆಂಬಲ ನೀಡುತ್ತಾರೋ ಹಾಗೂ ಯಶಸ್ಸು ಬಂದಾಗ ಅಹಂಕಾರ ತೋರದೆ ತನ್ನ ಸುತ್ತಮುತ್ತಲಿನ ಜನರೊಂದಿಗೆ ಅದೇ ಸಾಮಾನ್ಯ ಬದುಕು ಸಾಗಿಸುವ ಮನಃಸ್ಥಿತಿ ಹೊಂದಿ ರುವರೋ ಅವರು ಯಶಸ್ಸು ಗಳಿಸಲು ಸಾಧ್ಯ ಎಂದರು.

ಯಾವುದೇ ಕ್ಷೇತ್ರದಲ್ಲಾದರೂ ಅವಿರತ ಪ್ರಯತ್ನ ಮಾಡಬೇಕು. ವಿಶೇಷ ಆವಿಷ್ಕಾರದಲ್ಲಿ ಚಿತ್ತ ಹರಿಸಬೇಕು. ಈ ನಿಟ್ಟಿನಲ್ಲಿ ಕಲೆ ಮತ್ತು ಸಂಸ್ಕøತಿಗೆ ಬೆಲೆ ನೀಡಬೇಕು. ಈ ನಿಟ್ಟಿನಲ್ಲಿ ಸಾಗುತ್ತಿರುವ ಯಶ್ ಅವರು ವರನಟ ರಾಜ್‍ಕುಮಾರ್ ಅವರಂತೆ ಸಾಧನೆಯ ಹಾದಿಯಲ್ಲಿದ್ದಾರೆ ಎಂದು ಅವರು ಶ್ಲಾಘಿಸಿದರು.

ಶಿಕ್ಷಣಕ್ಕೆ ದೊರಕುವಂತಹ ಮಹತ್ವ ಕ್ರೀಡೆಗೂ ದೊರಕಬೇಕು. ಕ್ರೀಡೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುವುದರೊಂದಿಗೆ ದೇಶದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ಗೋವಿಂದರಾಜು ಹೇಳಿದರು. ಬಿಜಿಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಇಬ್ಬರು ಪ್ರಾಧ್ಯಾಪಕರಾದ ಸವಿತಾ ಸುವರ್ಣ ಹಾಗೂ ಡಾ.ಶಾಂತಕುಮಾರ್ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಬಿಜಿಎಸ್ ದಂತ ವೈದ್ಯಕೀಯ ಕಾಲೇಜಿನ ಹೊಸ ಕಟ್ಟಡವನ್ನು ಕೂಡ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀ ಪ್ರಕಾಶನಾಥ ಸ್ವಾಮೀಜಿ, ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮ ಕೂಡ ಗಮನ ಸೆಳೆಯಿತು.

ಕುತೂಹಲ ಮೂಡಿಸಿದೆ ರಾಜಣ್ಣ-ಪರಂ ಉಪಹಾರ ಕೂಟ

ತುಮಕೂರು,ನ.23- ರಾಜ್ಯ ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಇಬ್ಬರು ಸಚಿವರು ಇಂದು ಪರಸ್ಪರ ಭೇಟಿಯಾಗಿ ಉಪಹಾರ ಕೂಟ ನಡೆಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂದು ಬೆಳಗ್ಗೆ ಭೇಟಿಯಾಗಿ ಚರ್ಚೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಮೊದಲು ಪರಮೇಶ್ವರ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರ ಜೊತೆ ಭೋಜನಕೂಟ ನಡೆಸಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ರಾಜಕಾರಣದಲ್ಲಿ ಇದ್ದಕ್ಕಿದ್ದ ಹಾಗೆ ಸಿದ್ದರಾಮಯ್ಯನವರ ಗುಂಪಿಗೆ ಸ್ಥಳಾಂತರಗೊಂಡಿರುವ ಪರಮೇಶ್ವರ್ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ರಾಜಣ್ಣ ಜಾತಿ ಆಧಾರಿತವಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಹೊರತುಪಡಿಸಿ ಬೇರೆಯವರನ್ನು ಉಪಮುಖ್ಯಮಂತ್ರಿ ಮಾಡಬಾರದೆಂದು ಹೈಕಮಾಂಡ್ ಮಟ್ಟದಲ್ಲಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಡಿ.ಕೆ.ಶಿವಕುಮಾರ್‍ರವರ ಪ್ರಭಾವ ತಗ್ಗಿಸಲು ಸಿದ್ದರಾಮಯ್ಯನವರ ಬಣ ನಾನಾ ರೀತಿಯ ರಣತಂತ್ರಗಳನ್ನು ರೂಪಿಸುತ್ತಿದೆ.

ಪರಮೇಶ್ವರ್ ಮತ್ತು ರಾಜಣ್ಣ ಈ ಮೊದಲು ವಿಧಾನಪರಿಷತ್ ಸದಸ್ಯರ ನೇಮಕಾತಿ ವೇಳೆ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಅದೆಲ್ಲವನ್ನು ದಾಟಿ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರನ್ನು ಪರಿಶಿಷ್ಟ ಜಾತಿ ಕೋಟಾದಡಿ ವಿಧಾನಪರಿಷತ್‍ಗೆ ಆಯ್ಕೆ ಮಾಡಿದ್ದರು. ಅದರ ನಂತರ ಪರಮೇಶ್ವರ್ ಮತ್ತು ತಂಡ ಡಿ.ಕೆ.ಶಿವಕುಮಾರ್ ವಿರುದ್ಧ ಒಳಗೊಳಗೆ ಶೀತಲ ಸಮರ ನಡೆಸುತ್ತಿದೆ. ಇದಕ್ಕೆ ಅನುಗುಣವಾಗಿ ಇತ್ತೀಚೆಗೆ ಶುರುವಾಗಿರುವ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕೆಲವರ ಪಾರುಪತ್ಯ ನಡೆಯುತ್ತಿದೆ ಎಂಬ ಆರೋಪಗಳಿವೆ.

ಜಾತಿಗಣತಿ ಸಮೀಕ್ಷೆಯನ್ನು ಮನೆಯಲ್ಲಿ ಕುಳಿತು ತಯಾರಿಸಿದ್ದಾರೆ : ಆರ್.ಅಶೋಕ್

ಅನ್ಯ ಪಕ್ಷಗಳಿಂದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಕರೆತರಲು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಆಕ್ಷೇಪಗಳಿವೆ. ತುಮಕೂರು ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಗೌರಿಶಂಕರ್ ಅವರನ್ನು ಕಾಂಗ್ರೆಸ್‍ಗೆ ಕರೆತರಲಾಗಿತ್ತು. ಪರಮೇಶ್ವರ್ ಮತ್ತು ಕೆ.ಎನ್.ರಾಜಣ್ಣ ಅವರಿಲ್ಲದೆ ಕೆಪಿಸಿಸಿ ಕಚೇರಿಯಲ್ಲಿ ಗೌರಿಶಂಕರ್ ಕಾಂಗ್ರೆಸ್ ಸೇರಿದರು. ಕೆ.ಎನ್.ರಾಜಣ್ಣ ಈ ಕುರಿತಂತೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಮೂಲಗಳ ಪ್ರಕಾರ ಗೌರಿಶಂಕರ್ ಸೇರ್ಪಡೆಗೆ ಪರಮೇಶ್ವರ್ ಬೆಂಬಲವಿದೆ ಎನ್ನಲಾಗುತ್ತಿದೆ. ಸಮಾಧಾನಗೊಂಡಿರುವ ರಾಜಣ್ಣ ಅವರನ್ನು ಸಮಾಧಾನಪಡಿಸಲು ಪರಮೇಶ್ವರ್ ಉಪಹಾರಕೂಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೂ ತೆರೆಮರೆಯ ವದಂತಿಗಳ ಪ್ರಕಾರ ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡಿದಂತೆ ತುಮಕೂರು ಜಿಲ್ಲಾ ರಾಜಾಕರಣದಲ್ಲೂ ಹಸ್ತಕ್ಷೇಪಗಳಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಪರಮೇಶ್ವರ್ ಮತ್ತು ರಾಜಣ್ಣ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಕಂದಾಯ ಅಧಿಕಾರಿಗಳ ಗೋಳು ಕೇಳೋರ್ಯಾರು..?

ಬೆಂಗಳೂರು,ನ.23- ಸಾರ್ ಮೇಲಾಧಿಕಾರಿಗಳ ಕಿರುಕುಳದಿಂದ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ನಾವು ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದರೆ ಖಿನ್ನತೆಗೆ ಒಳಗಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅನಾಹುತ ನಡೆಯುವ ಮೊದಲು ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ' ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧ ಪಟ್ಟವರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಣ್ಣ ನಮಸ್ತೆ ಇಲ್ಲಿ ಎಲ್ಲ ನೌಕರರಿಗೂ ತೊಂದರೆ ಆಗುತ್ತಿದೆ ಬಟ್ ಮೇಲಿನ ಅಧಿಕಾರಗಳ ಹಿಂಸೆಯಿಂದ ತುಂಬಾ ಕಿರುಕುಳವಾಗುತ್ತಿದೆ. ಸರಿಯಾದ ಸಮಯಕ್ಕೆ ಮನೆಗೆ ಹೋಗದೆ ಹಲವಾರು ಮಂದಿ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಡಿ’ ಎಂದು ಕಂದಾಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಅಲವತ್ತುಕೊಂಡಿದ್ದಾರೆ.

ಬಿಬಿಎಂಪಿ ಕಂದಾಯ ವಿಭಾಗದಲ್ಲಿ ಕಂದಾಯಧಿಕಾರಿ, ಸಹಾಯಕ ಕಂದಾಯಾಧಿಕಾರಿ ಮತ್ತು ಕಂದಾಯ ನಿರೀಕ್ಷಕ ಮತ್ತು ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲ ಕೆಲಸ ಮಾಡುವಂತಾಗಿದೆ. ಇದರಿಂದ ನಮ್ಮ ಗೋಳು ಕೇಳುವವರು ಯಾರು ಎಂದು ಅವರುಗಳು ಪ್ರಶ್ನಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ 1.30 ಕೋಟಿ ಜನರು ವಾಸವಿದ್ದಾರೆ. ಅಂದಾಜು 28ಲಕ್ಷಕ್ಕೂ ಹೆಚ್ಚು ಆಸ್ತಿಗಳು ನಗರ ಪ್ರದೇಶದಲ್ಲಿ ಇದೆ . ಈ ಪ್ರಮಾಣದ ಜನಸಂಖ್ಯೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ.

ಇತ್ತೀಚೆಗಿನ ದಿನಗಳಲ್ಲಿ ಕಂದಾಯ ಇಲಾಖೆಯ ಕಂದಾಧಿಯಾಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ನಾವೆಲ್ಲಾ ಮಾನಸಿಕವಾಗಿ ಜರ್ಜರಿತರಾಗಿದ್ದೇವೆ ಎಂದು ಅವರುಗಳು ಹೇಳಿಕೊಂಡಿದ್ದಾರೆ. ಕಂದಾಯ ವಸೂಲಾತಿ, ಚುನಾವಣೆ ತಯಾರಿ, ಬೆಸ್ಕಾಂ ತೆರಿಗೆ ಮತ್ತು ಮನೆಗಳ ಸರ್ವೆ, ಈ ಆಸ್ತಿ ಮತ್ತು ಸಕಾಲ, ಪೊಲೀಸ್ ಸೆನ್ಸಸ್, ಶಿಕ್ಷಕರ ಚುನಾವಣೆ ಹಾಗೂ ಮಾಹಿತಿ ಹಕ್ಕು ಈ ಎಲ್ಲ ಕೆಲಸಗಳನ್ನು ಕರ್ತವ್ಯ ನಿರ್ವಹಿಸುವ ಎಂಟು ಗಂಟೆಗಳ ನಿರ್ವಹಣೆ ಮಾಡಬೇಕು.

ಪ್ರತಿ ದಿನ 25ಮನೆಗಳಿಗೆ ಭೇಟಿ ಮತ್ತು 25ಮನೆಗಳಿಗೆ ಸರ್ವೆ ಮಾಡಬೇಕು, ಚುನಾವಣೆ ಸಂಬಂಧಿಸಿದ ವಿಷಯದಲ್ಲಿ ಗಮನಹರಿಸಬೇಕು ಕಂದಾಯ ವಸೂಲಾತಿ ಯಾಗಬೇಕು ಇಷ್ಟೆಲ್ಲ ಕಾರ್ಯ ಮಾಡಲು ಸಮಯ ಮತ್ತು ಸಿಬ್ಬಂದಿಗಳ ಕೊರತೆ ಇದೆ.

ಬಿಬಿಎಂಪಿ ಮೇಲಾಧಿಕಾರಿಗಳಿಗೆ ಇವೆಲ್ಲ ಸಮಸ್ಯೆಗಳ ಮಾಹಿತಿ ಇದ್ದರೂ ವಿನಾಕಾರಣ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮನುಷ್ಯ ಪ್ರತಿನಿತ್ಯ ಎಷ್ಟು ಗಂಟೆ ಕೆಲಸ ಮಾಡಬಹುದು, ಅತಿಯಾದ ಕೆಲಸ ಮಾನಸಿಕ ಒತ್ತಡದಿಂದ ಕಂದಾಯ ಇಲಾಖೆ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಮಾನಸಿಕವಾಗಿ ನೊಂದು ಹೋಗಿದ್ದಾರೆ ' ಎಂದು ಹೆಸರು ಹೇಳಿಲಿಚ್ಚಿಸದ ಕಂದಾಯಾಕಾರಿಗಳುಈ ಸಂಜೆ’ ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಮಯದ ಕಡೆ ಗಮನಹರಿಸದೇ ಕೆಲಸ ಮಾಡುತ್ತಿರುವುದರಿಂದ ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ. 90 ನೌಕರರಿಗೆ ಸಕ್ಕರೆ ಖಾಯಿಲೆ, ಬಿ.ಪಿಯಂತಹ ಗಂಭೀರ ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಆದರೂ ಕೆಲಸದ ಹೊರೆ ತಪ್ಪಿಲ್ಲ. ನಮ್ಮ ಕಷ್ಟ ಹೇಳಿಕೊಂಡರೂ ಮೇಲಾಧಿಕಾರಿಗಳು ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಇದೇ ಧೋರಣೆ ಮುಂದುವರೆದರೆ ನಾವು ಕೆಲಸ ಮಾಡುವುದನ್ನು ಬಿಟ್ಟು ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಕೆಲವರು ಎಚ್ಚರಿಸಿದ್ದಾರೆ.

ಸಿದ್ದು ಸರ್ಕಾರದ 6 ತಿಂಗಳ ವೈಫಲ್ಯಗಳನ್ನು ಪಟ್ಟಿ ಮಾಡಿದ ಬಿಜೆಪಿ

ಬೆಂಗಳೂರು,ನ.23- ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಆರು ತಿಂಗಳು ಪೂರೈಸಿದ್ದು, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಸಾಧನೆಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.

ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ!
ಬರಗಾಲ ನಿರ್ವಹಣೆ ವೈಫಲ್ಯ ಕಲುಷಿತ ನೀರಿನಿಂದ ಅಪಾರ ಸಾವು-ನೋವು ರೈತರ ಸರಣಿ ಆತ್ಮಹತ್ಯೆ, ಶ್ಯಾಡೋ ಸಿಎಂ ಪ್ರಭಾವ, ವರ್ಗಾವಣೆ ದಂಧೆ, ಗುತ್ತಿಗೆದಾರರಿಂದ ಕಲೆಕ್ಷನ್100 ಕೋಟಿ ಅಕ್ರಮ ಹಣ ಮಂಚದಡಿ ಪತ್ತೆ , ಹಿಂದೂಗಳ ಮೇಲೆ ಹಲ್ಲೆ -ಹತ್ಯೆ, ಪಂಚ ರಾಜ್ಯ ಚುನಾವಣೆಗೆ ಹಣ ಸಾಗಾಟ ಕಾಸಿಗಾಗಿ ಪೋಸ್ಟಿಂಗ್, ಅಕ್ರಮ ನೇಮಕಾತಿ ಪರೀಕ್ಷೆ , ಶಾಸಕರಿಗಿಲ್ಲ ಅನುದಾನ, ಕುರ್ಚಿಗಾಗಿ ಕಾದಾಟ ಸಿಎಂ ಡಿನ್ನರ್, ಬ್ರೇಕ್‍ಫಾಸ್ಟ್ ಪಾರ್ಟಿ, ಕಳ್ಳತನದಿಂದ ಕಾವೇರಿ ಪೂರೈಕೆ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅಧಿಕಾರ ಎಂದು ಟೀಕಿಸಿದೆ.

ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶ

ಆರು ತಿಂಗಳಿಗೆ ಇಷ್ಟೆಲ್ಲಾ ಹಳವಂಡಗಳಾದರೆ, ಒಂದು ವರ್ಷಕ್ಕೆ ಕರ್ನಾಟಕದ ಪರಿಸ್ಥಿತಿ ಹೇಗಿರಬೇಡ ಯೋಚಿಸಿ..! ನಾನೇ ಮುಂದಿನ ಸಿಎಂ, ನಮ್ಮವರೇ ಮುಂದಿನ ಸಿಎಂ ಎಂದು ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬರು ಹೇಳಿಕೆ ಕೊಡುತ್ತಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿ ಕೂತ ಮಹನೀಯರು ಆ ಸ್ಥಾನದ ಘನತೆಯನ್ನು ಮರೆತು ಕಲೆಕ್ಷನ್ ಮಾಸ್ಟರ್ ಆಗಿರುವ ಕಾರಣ ಚೀಫ್ ಮಿನಿಸ್ಟರ್ ಎಂಬ ಸಿಎಂ ಕುರ್ಚಿ ಖಾಲಿ ಇದೆ ಎಂದು ಲೇವಡಿ ಮಾಡಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿಯ ದಂಗಲ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ಸಿಎಂ ಕುರ್ಚಿಯ ಸಲುವಾಗಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಫೈಟ್ ಜೋರಾಗಿದ್ದು, ಸಚಿವರು ಹಾದಿಬೀದಿಯಲ್ಲಿ ಕಿತ್ತಾಡುತ್ತಿದ್ದು, ರಾಜ್ಯದ ಆಡಳಿತ ಮಾತ್ರ ಮೂರಾಬಟ್ಟೆಯಾಗಿದೆ ಎಂದು ವ್ಯಂಗ್ಯವಾಡಿದೆ.

ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದಲ್ಲಿ ದಿನಕ್ಕೊಬ್ಬ ಸಿಎಂ ಕ್ಯಾಂಡಿಡೇಟ್ ಹುಟ್ಟಿಕೊಳ್ಳುತ್ತಿರುವುದನ್ನು ನೋಡಿದರೆ, ನಿಮ್ಮ ಆಡಳಿತ ಅದ್ಯಾವ ಪರಿ ಹದಗೆಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿ ಕುಟುಕಿದೆ.

ಕೆರಳಿದ ಒಕ್ಕಲಿಗರು, ಲಿಂಗಾಯಿತರು: ಕಾವೇರಿದ ಜಾತಿ ಜನಗಣತಿ ಜ್ವಾಲೆ

ಬೆಂಗಳೂರು,ನ.23- ಜಾತಿ ಜನಗಣತಿ ಎಂದು ಪರಿಗಣಿಸಲಾಗುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಗಳ ಬಗ್ಗೆ ದಿನಕ್ಕೊಂದು ಗೊಂದಲ ಸೃಷ್ಟಿಯಾಗುತ್ತಿದ್ದು, ಪರ-ವಿರೋಧ ಚರ್ಚೆಗಳು ಕಾವೇರುತ್ತಿವೆ. ವರದಿಯನ್ನು ಅಂಗೀಕರಿಸಿಯೇ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವರದಿಯನ್ನು ತಿರಸ್ಕಾರ ಮಾಡಬೇಕೆಂದು ಒಕ್ಕಲಿಗರ ಸಂಘ ನೀಡಿದ್ದ ಮನವಿಗೆ ಸರ್ಕಾರದ ಪಾಲುದಾರರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಶಾಸಕರು ಸಹಿ ಹಾಕಿದ್ದಾರೆ.

ಲಿಂಗಾಯಿತ ವೀರಶೈವ ಮಹಾಸಭಾದ ಮಹಾ ಅಧಿವೇಶನದ ಬಳಿಕ ಮಾತನಾಡಿದ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ವರದಿಯನ್ನು ಸಚಿವರ ಮನೆಯಲ್ಲಿ ಕುಳಿತು ತಯಾರಿಸಲಾಗಿದ್ದು, ಅದು ಸಂಪೂರ್ಣ ಅವೈಜ್ಞಾನಿಕ, ತಿರಸ್ಕಾರರ್ಹ ಎಂದು ಹೇಳಿದ್ದರು.

ರಾಜ್ಯದ ಎರಡು ಪ್ರಮುಖ ಸಮುದಾಯಗಳನ್ನು ಪ್ರತಿಬಿಂಬಿಸುವ ಸಂಘ-ಸಂಸ್ಥೆಗಳು ಮತ್ತು ಅದರ ಪ್ರತಿನಿಧಿಗಳು ವರದಿಯನ್ನು ವಿರೋಧಿಸಿವೆ. ಇನ್ನು ಹಲವು ಸಮುದಾಯಗಳಲ್ಲೂ ಈ ರೀತಿಯ ಮಿಶ್ರ ಪ್ರತಿಕ್ರಿಯೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಪ್ರಕಾರ ವರದಿ ಮೊದಲು ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅದು ಚರ್ಚೆಯಾಗಬೇಕು. ಅನಂತರ ಸ್ವೀಕಾರವೋ, ಇಲ್ಲವೋ ಎಂಬುದರ ಬಗ್ಗೆ ನಿರ್ಣಯ ಸೂಕ್ತ ಎಂಬ ವಾದಗಳಿವೆ.

162 ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಲಾದ ವರದಿಯನ್ನು ಸ್ವೀಕರಿಸುವುದು ಬೇಡವೇ ಎಂದು ಸಿದ್ದರಾಮಯ್ಯ ನೇರವಾಗಿ ಕೇಳಿದ್ದಾರೆ. ಅದೇ ವೇಳೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೈಜ್ಞಾನಿಕವಾಗಿ ಸಮೀಕ್ಷೆಯಾಗಬೇಕು ಎಂಬ ಅಭಿಪ್ರಾಯಗಳಿವೆ. ಸರ್ಕಾರ ಯಾವುದೇ ಇದ್ದರೂ, ಅಧಿಕಾರ ಏನೇ ಇದ್ದರೂ ಸಮುದಾಯದ ಗೌರವ ಮತ್ತು ಸ್ವಾಭಿಮಾನದ ಜತೆ ತಾವು ನಿಲ್ಲವುದಾಗಿ ಹೇಳಿದ್ದಾರೆ.

ಹೇಳಿಕೆ-ಪ್ರತಿ ಹೇಳಿಕೆ ಹೊರತಾಗಿ ಹೊರ ಬಂದಿರುವ ಹೊಸ ವಿಷಯ ಎಂದರೆ ಸಮೀಕ್ಷಾ ವರದಿಯ ಹಸ್ತ ಪ್ರತಿಗಳು ನಾಪತ್ತೆಯಾಗಿವೆ ಎಂಬುದು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರೇ ಇದನ್ನು ಖಚಿತ ಪಡಿಸಿದ್ದಾರೆ. 2021ರ ಅಕ್ಟೋಬರ್ 5ರಂದು ಸರ್ಕಾರಕ್ಕೆ ಪತ್ರ ಬರೆದು ಈ ವಿಷಯವನ್ನು ತಿಳಿಸಿದ್ದರು. ಆದರೆ, ಈವರೆಗೂ ಹಸ್ತ ಪ್ರತಿಗಳನ್ನು ಹುಡುಕುವ ನಿಟ್ಟಿನಲ್ಲಿ ಯಾವುದೇ ಕ್ರಮಗಳಾಗಿಲ್ಲ. ಕನಿಷ್ಠ ತನಿಖೆಯೂ ನಡೆದಿಲ್ಲ ಎಂಬುದು ಆಘಾತಕಾರಿ ವಿಚಾರ.

ಕಾಂತರಾಜು ಅವರು ಅಧ್ಯಕ್ಷರಾಗಿದ್ದಾಗ ಸಿದ್ಧಪಡಿಸಲಾಗಿದ್ದ ಮೂಲ ವರದಿ ಕೂಡ ನಾಪತ್ತೆಯಾಗಿದೆ. ಆ ವರದಿಯ ಸದಸ್ಯ ಕಾರ್ಯದರ್ಶಿ ಹೊರತುಪಡಿಸಿ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಪೈಕಿ ಬಹುತೇಕರು ಸಹಿ ಹಾಕಿದ್ದರು. ಅದು ನಾಪತ್ತೆಯಾಗಿರುವುದರಿಂದ ಹೊಸದಾಗಿಯೇ ವರದಿ ಸಿದ್ಧಪಡಿಸಬೇಕಾಗಿದೆ.

ಸಮೀಕ್ಷೆ ನಡೆದ ಬಳಿಕ ಅದರ ದತ್ತಾಂಶಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿತ್ತು. ಆದರೆ, ಅದನ್ನು ಸಾರ್ವಜನಿಕವಾಗಿ ಮುಕ್ತಗೊಳಿಸಿರಲಿಲ್ಲ. ಜತೆಗೆ ಪ್ರತಿಯೊಂದು ಜಿಲ್ಲಾಕಾರಿಗಳ ಕಚೇರಿಯಲ್ಲೂ ದತ್ತಾಂಶಗಳು ಸಂರಕ್ಷಿಸಲ್ಪಟ್ಟಿದ್ದವೂ ಎಂದು ಹೇಳಲಾಗಿದೆ.ಈ ದತ್ತಾಂಶಗಳನ್ನು ಇಟ್ಟುಕೊಂಡು ಹೊಸದಾಗಿ ಬರೆಯಲು ಸಾಧ್ಯವಾಗಿದೆ. ಆ ಕೆಲಸವನ್ನು ಆಯೋಗ ಪ್ರಸ್ತುತ ಮಾಡುತ್ತಿದೆ.

ಆದರೆ, ಮೂಲ ಪ್ರಶ್ನೆ ಇರುವುದು ಸಮೀಕ್ಷೆ ನಡೆದಿರುವ ಮಾದರಿಯ ಬಗ್ಗೆ. ಸಮೀಕ್ಷಾಕಾರರು ಮನೆ ಮನೆಗೆ ಹೋಗಿ ಮನೆ ಮನೆಗೆ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ವಾದಿಸಲಾಗುತ್ತಿದೆ. ಆದರೆ, ಬಹಳಷ್ಟು ಮಂದಿ ತಮ್ಮ ಮನೆಗೆ ಯಾರೂ ಬಂದಿಲ್ಲ , ಮಾಹಿತಿ ಪಡೆದುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ.

ಅದರಲ್ಲೂ ಬೆಂಗಳೂರಿನಂತಹ ಮಹಾನಗರಿಯಲ್ಲಿ ಶೇ.73ರಷ್ಟು ಮಾತ್ರ ಸಮೀಕ್ಷೆ ನಡೆದಿದೆ ಎಂದು ತಿಳಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಮನೆಗಳಿಗೆ ಭೇಟಿ ನೀಡಲಾಗಿದೆ ಎಂದು ಸಚಿವರು ಮತ್ತು ಆಯೋಗದ ಮುಖ್ಯಸ್ಥರು ಪದೇ ಪದೇ ಹೇಳುತ್ತಿದ್ದರು.

ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವರದಿ ಅತ್ಯಂತ ನಿಖರ ಮತ್ತು ಸ್ಪಷ್ಟತೆ ಹೊಂದಿರುತ್ತದೆ ಎಂಬ ವಿಶ್ವಾಸವಿದೆ. ಅದಕ್ಕೆ ಪರ್ಯಾಯವಾಗಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಗ್ಗೆ ಆಗಿನ ಸರ್ಕಾರವೇ ಒಂದಿಷ್ಟು ಗೊಂದಲಗಳನ್ನು ಹುಟ್ಟಿಹಾಕಿತ್ತು.

ವರದಿಯನ್ನು ಯಾರು ನೋಡಿಲ್ಲ ಎಂದು ಬಲವಾದ ಪ್ರತಿಪಾದನೆಯ ನಡುವೆಯೇ 2017ರ ಕೊನೆಯಲ್ಲಿ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು. ಅದರ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನಗಳನ್ನು ಮುಸ್ಲಿಂ ಸಮುದಾಯ ಹೊಂದಿದೆ ಎಂಬ ವಿವರಗಳಿದ್ದವು. ಇದು ಆತಂಕಕ್ಕೆ ಕಾರಣವಾಗಿದೆ.

ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶ

ಈವರೆಗೂ ಯಾರೂ ಕೂಡ ಈ ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ. ವರದಿಯನ್ನು ಯಾರು ನೋಡದೇ ಇರುವುದರಿಂದ ಸ್ಪಷ್ಟನೆ ನೀಡಲು ಅವಕಾಶ ಇಲ್ಲ ಎಂಬ ಸ್ಪಷ್ಟನೆ ಇದೆ. ಆದರೆ, ಕಾಲ ಕಾಲಕ್ಕೆ ಕೇಳಿ ಬಂದಿರುವ ಕಾನೂನಾತ್ಮಕವಾಗಿ ಹೊರಗುಳಿದ ಗೊಂದಲಗಳಿಗೆ ಸಮಜಾಯಿಸಿ ನೀಡುವ ಪ್ರಯತ್ನಗಳನ್ನು ಯಾವ ಸರ್ಕಾರಗಳೂ ಮಾಡಿಲ್ಲ.

ಸಮೀಕ್ಷೆಯ ಹಸ್ತ ಪ್ರತಿಗಳು ಮತ್ತು ಮೂಲ ವರದಿ ನಾಪತ್ತೆಯಾಗಿದೆ ಎಂಬುದು ಸತ್ಯವಾಗಿದ್ದರೆ ಅದನ್ನು ಹುಡುಕಲು ಏಕೆ ಗಂಭೀರ ಪ್ರಯತ್ನಗಳು ನಡೆದಿಲ್ಲ ? 162 ಕೋಟಿ ರೂ.ಗಳ ವೆಚ್ಚದಲ್ಲಿ ಸರ್ಕಾರ ತಯಾರಿಸಿದ ವರದಿಯ ಬಗ್ಗೆ ಈ ಮಟ್ಟದ ನಿರ್ಲಕ್ಷ್ಯ ಸಮರ್ಥನೀಯವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಕನಿಷ್ಠ ಈವರೆಗೂ ಮೂಲ ಪ್ರತಿ ನಾಪತ್ತೆಯಾಗಿರುವ ಬಗ್ಗೆ ಒಂದು ದೂರನ್ನೂ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಆಂದಮೇಲೆ ಮೂಲ ಪ್ರತಿಗಳು ಯಾವುದೋ ಅಜ್ಞಾತ ಸ್ಥಳದಲ್ಲಿದೆ. ಅದು ಎಲ್ಲರಿಗೂ ಗೊತ್ತು. ಆದರೂ ಯಾರೂ ಬಹಿರಂಗವಾಗಿ ಮಾತನಾಡದೆ ಜಾಣಮೌನ ಅನುಸರಿಸುತ್ತಿದ್ದಾರೆ ಎಂಬ ಭಾವನೆಗಳು ಗಟ್ಟಿಗೊಳ್ಳುತ್ತಿವೆ. ಆಗಿದ್ದ ಮೇಲೆ ಯಾರ ಮನೆಯಲ್ಲಿ ಹಸ್ತ ಪ್ರತಿಗಳು ಅಡಗಿ ಕುಳಿತಿವೆ ಎಂಬ ಸತ್ಯವನ್ನು ಈಗಲಾದರೂ ಬಹಿರಂಗಪಡಿಸುವ ಅಗತ್ಯವಿದೆ.

ಆಯೋಗದಲ್ಲೇ ಇದೆ ಎಂದಾದರೆ ಅದನ್ನಾದರೂ ಸಾರ್ವಜನಿಕವಾಗಿ ತಿಳಿಸಬೇಕಿದೆ. ವರದಿಯ ಬಗ್ಗೆ ನಿಷ್ಪಕ್ಷವಾಗಿ ನಿರ್ಣಯ ಕೈಗೊಳ್ಳಬೇಕು ಎಂಬ ಕಾಳಜಿ ಸರ್ಕಾರಕ್ಕೆ ಇದ್ದಿದೇ ಆದರೆ, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬಹುದಿತ್ತು. ವಿರೋಧ ಅಥವಾ ಅನುಮಾನ ವ್ಯಕ್ತಪಡಿಸುವ ಸಂಘ-ಸಂಸ್ಥೆಗಳು, ಸರ್ವಪಕ್ಷಗಳ ಜತೆ ಸಮಾಲೋಚನೆ ನಡೆಸುವ ಅವಕಾಶವಿತ್ತು.

ಮತ್ತೊಂದೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ. ಪ್ರಸ್ತುತ ದಿನಮಾನಗಳ ತಂತ್ರಜ್ಞಾನ ಅತ್ಯಾಧುನಿಕವಾಗಿದೆ. ಆಧಾರ್ ಬಯೋಮೆಟ್ರಿಕ್ ಆಧಾರಿತ ಸಮೀಕ್ಷೆಗೆ ಅವಕಾಶಗಳಿವೆ. ಸಾರ್ವಜನಿಕರಿಗೆ ಸ್ವಯಂ ಸಮೀಕ್ಷೆಯಲ್ಲಿ ಭಾಗವಹಿಸಲು ಮನವಿ ಮಾಡಬಹುದು. ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ನಕಲು ಅಥವಾ ಅಪ್ರಸ್ತುತ ಮಾಹಿತಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಗಳು ಕಡಿಮೆ.

ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಹಕಾರ ನೀಡುತ್ತೇವೆ : ರಮೇಶ್ ಜಾರಕಿಹೊಳಿ

ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಬೇಕು ಎಂಬ ಸಾಂಪ್ರದಾಯಿಕ ಪದ್ಧತಿಯನ್ನು ಬದಿಗಿಟ್ಟು ಹೊಸ ವಿಧಾನಗಳನ್ನು ಅನುಸರಿಸುವ ಅವಕಾಶಗಳಿವೆ. ಆದರೆ, ಎಲ್ಲವನ್ನೂ ನಿರ್ಲಕ್ಷಿಸಿ 8 ವರ್ಷಗಳ ಹಿಂದಿನ ವರದಿಯನ್ನೇ ಸಾರ್ವಜನಿಕವಾಗಿ ಪ್ರಕಟಿಸುವ ಇರಾಧೆಯನ್ನು ಸರ್ಕಾರ ಹೊಂದಿದೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳೇ ಪ್ರಮುಖವಾಗಿ ಕಾಣಿಸುತ್ತಿರುವುದು ಸತ್ಯ.

ನಾಳೆಯಿಂದ 3 ದಿನ ಆನ್‍ಲೈನ್ ವಿದ್ಯುತ್ ಸೌಲಭ್ಯ ಬಂದ್

ಬೆಂಗಳೂರು,ನ.23- ರಾಜ್ಯಾದ್ಯಂತ ಎಲ್ಲಾ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಬರುವ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ಸಂಬಂಧಿಸಿದ ತಂತ್ರಾಂಶಗಳು ಹಾಗೂ ಹಾರ್ಡ್ ವೇರ್ ಗಳನ್ನು ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ನ. 26ರವರೆಗೆ (ಮೂರು ದಿನಗಳ ಕಾಲ) ಮಾಹಿತಿ ತಂತ್ರಜ್ಞಾನ ಆಧರಿತ ವಿದ್ಯುತ್ ಸೇವೆಗಳನ್ನು ಸ್ಥಗಿತಗೊಳಿಲಾಗುತ್ತಿದೆ.

ಸದರಿ ತಂತ್ರಾಂಶಗಳು ಹಾಗೂ ಹಾರ್ಡ್ ವೇರ್ ಗಳನ್ನು ಉನ್ನತೀಕರಿಸುವ ಪ್ರಕ್ರೀಯೆ ಚಾಲನೆಯಲ್ಲಿದ್ದು, ಹಾಲಿ ಇರುವ ತಂತ್ರಾಂಶಗಳನ್ನು ಹೊಸ ಹಾರ್ಡ್ ವೇರ್ ಗಳ ಮೇಲೆ ಅಳವಡಿಸುವ ಹಾಗೂ ಸ್ಥಳಾಂತರಿಸುವ ಕೆಲಸವನ್ನು ಪ್ರಥಮ ಹಂತವಾಗಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಹಬ್ಬಳ್ಳಿ ಧಾರವಾಡ , ಬೆಳಗಾವಿ, ಮಂಗಳೂರು ಹಾಗು ಕಲಬರುಗಿ ನಗರ ಸೇರಿದಂತೆ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಮೂರು ದಿನಗಳ ಕಾಲ ಎಲ್ಲಾ ಮಾಹಿತಿ ತಂತ್ರಜ್ಞಾನ ಆಧರಿತ ಹಾಗೂ ವಿದ್ಯುತ್ ಕಛೇರಿಗಳ ನಗದು ಪಾವತಿ ಕೌಂಟರ್ ಗಳಲ್ಲಿ ನಗದು ಪಾವತಿ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ ಆನ್ ಲೈನ್ ಸೇವೆಗಳಾದ ಹೊಸ ವಿದ್ಯುತ್ ಸಂಪರ್ಕ, ಹೆಸರು ಬದಲಾವಣೆ, ನಗದು ಪಾವತಿ, ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಗಳು ಹಾಗೂ ಇತರ ಸೇವೆಗಳು ಲಭ್ಯವಿರುವುದಿಲ್ಲ. ಆನ್ ಲೈನ್ ಸೇವೆಗಳ ಅಲಭ್ಯತೆಯನ್ನು ಗಮನಿಸಿ ಗ್ರಾಹಕರು ಹಾಗೂ ಗುತ್ತಿಗೆದಾರರು ತಮ್ಮ ಅವಶ್ಯಕತೆಗಳನ್ನು ಮುಂಚಿತವಾಗಿ ರೂಪಿಸಿಕೊಳ್ಳಲು ಬೆಸ್ಕಾಂ ವಿನಂತಿಸಿದೆ. ಈ ಅವದಿಯಲ್ಲಿ ವಿದ್ಯುತ್ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ವಿರುವುದಿಲ್ಲ. ಗ್ರಾಹಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನ್ ಲೈನ್ ಸೇವೆ ಲಭ್ಯ ಇಲ್ಲದ ಪಟ್ಟಣಗಳ ವಿವರ:

ಬೆಸ್ಕಾಂ: ಬೆಂಗಳೂರು ನಗರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿ ಬಿದನೂರು.

ಸೆಸ್ಕ್: ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ರ್ಆ.ï ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ ಹಾಗೂ ಚೆನ್ನರಾಯಪಟ್ಟಣ.

ಮೆಸ್ಕಾಂ: ಬಂಟ್ವಾಳ, ಕಡೂರು, ತರಿಕೇರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು.

ಜೆಸ್ಕಾಂ: ಮಾನವಿ, ಸಿಂಧನೂರು, ಬೀದರ್, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್, ಭಾಲ್ಕಿ, ಶಹಬಾದ್, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್ ಹಾಗೂ ಹೊಸಪೇಟೆ.

ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸೇವನೂರು, ಸಿರಸಿ, ಕುಮಟಾ, ಬಾಗಲಕೋಟೆ, ರಮಬಕವಿ-ಬನಹಟ್ಟಿ, ಗದಗ, ಗೋಕಾಕ್, ಹಾವೇರಿ, ಇಳಕಲ್, ಮುಧೋಳ, ರಾಣೆಬೆನ್ನೂರು ಹಾಗೂ ವಿಜಾಪುರ ನಗರದಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಂಶ ಸೇವೆಗಳು ಲಭ್ಯವಿರುವುದಿಲ್ಲ.

ಬಿಜೆಪಿಯಲ್ಲಿ ನಿಲ್ಲದ ಹಿರಿಯರ ಆಕ್ರೋಶ

ಬೆಂಗಳೂರು,ನ.23- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾದ ಮೇಲೆ ಅಸಮಾಧಾನ ಶಮನಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು ಇನ್ನಷ್ಟು ಅತೃಪ್ತಿ ಸೋಟಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಮಾಜಿ ಸಚಿವರಾದ ವಿ.ಸೋಮಣ್ಣ, ಅರವಿಂದ ಲಿಂಬಾವಳಿ ಅವರುಗಳು ಬಹಿರಂಗವಾಗಿಯೇ ವರಿಷ್ಠರ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರವಾಗಿದೆ. ಅದರಲ್ಲೂ ವೀರಶೈವ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕನೆಂದೇ ಗುರುತಿಸಿಕೊಂಡಿರುವ ವಿ.ಸೋಮಣ್ಣ ಗುರುವಾರ ಮೈಸೂರಿನಲ್ಲಿ ಹೇಳಿರುವ ಮಾತುಗಳು ಬಿಜೆಪಿಯಲ್ಲಿ ಇನ್ನಷ್ಟು ಅಸಮಾಧಾನ ಸೋಟಗೊಳ್ಳುವುದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಬಿಜೆಪಿ ಯಾವುದೋ ಒಂದು ಕುಟುಂಬಕ್ಕೆ ಸೀಮಿತವಾಗಬಾರದು. ಡಿ.6ರ ನಂತರ ನಾನು ಅನೇಕ ಮಾಹಿತಿಗಳನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಹೇಳಿರುವುದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದವರ ವಿರುದ್ಧ ಸಿಡಿದೇಳುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.

ಡಿಸೆಂಬರ್ 6ರವರೆಗೆ ಯಾವುದೇ ಹೇಳಿಕೆ ನೀಡದಂತೆ ತಿಳಿಸಿರುವುದರಿಂದ ಅಲ್ಲಿಯವರೆಗೂ ಏನೂ ಮಾತಾಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದ ಸಂಘಪರಿವಾರದ ನಿಷ್ಠೆಯ ಅರವಿಂದ ಲಿಂಬಾವಳಿ ಕೂಡ ವರಿಷ್ಠರ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಹಕಾರ ನೀಡುತ್ತೇವೆ : ರಮೇಶ್ ಜಾರಕಿಹೊಳಿ

ವಿಜಯೇಂದ್ರ ಅವರ ಪಕ್ಷದ ವರಿಷ್ಠರು ಸಾಮಥ್ರ್ಯದ ಮೇಲೆ ಆಯ್ಕೆ ಮಾಡಿಲ್ಲ. ಇಲ್ಲಿ ವಿರೋಧ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ಅವರ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ವಿಜಯೇಂದ್ರ ಆಯ್ಕೆಗೆ ತಮ್ಮ ಸಹಮತ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಅರವಿಂದ ಲಿಂಬಾವಳಿ, ಸೋಮಣ್ಣ ಮಾತ್ರವಲ್ಲದೆ, ಪಕ್ಷದೊಳಗೆ ಇನ್ನೊಂದು ಬಣ ಕೂಡ ಮುನಿಸಿಕೊಂಡಿದೆ.

ಶಾಸಕಾಂಗ ಸಭೆಯನ್ನೇ ಬಹಿಷ್ಕಾರ ಮಾಡಿ ಹೊರನಡೆದಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಹೀಗೆ ಪಕ್ಷದೊಳಗಿರುವ ವಿರೋ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆರ್.ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಮೇಲೆ ಈ ಇಬ್ಬರ ಆಯ್ಕೆ ಕುರಿತು ಅನೇಕರು ಒಳಗೊಳಗೆ ಕುದಿಯುತ್ತಿದ್ದಾರೆ. ಏಕೆಂದರೆ ಇಬ್ಬರು ಕೂಡ ಯಡಿಯೂರಪ್ಪನವರ ಬಣಕ್ಕೆ ಸೇರಿದ್ದು ಸಂಘಪರಿವಾರದ ನಿಷ್ಠರಿಗೆ ಪ್ರಮುಖ ಸ್ಥಾನ ನೀಡಲು ವರಿಷ್ಠರು ನಿರ್ಲಕ್ಷ್ಯ ಮಾಡಿದ್ದಾರೆಂಬ ಅಸಮಾಧಾನ ಮಡುಗಟ್ಟಿದೆ.

ವರದಿ ಜಾರಿಗೂ ಮುನ್ನವೇ ಅವೈಜ್ಞಾನಿಕ ಎಂಬುದು ಸರಿಯಲ್ಲ : ಕಾಂತರಾಜು

ಸದ್ಯಕ್ಕೆ ಒಂದಿಬ್ಬರು ಮಾತ್ರ ವರಿಷ್ಠರ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿದ್ದರಾದರೂ ಅನೇಕರು ಬಹಿರಂಗವಾಗಿ ಏನೂ ಹೇಳಲೂ ಆಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ಗೆ ಗಾಳ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದರೂ ಸ್ಥಳೀಯ ನಾಯಕರ ಸಹಕಾರ ಸಿಗದಿರುವುದು ವಿಜಯೇಂದ್ರಗೆ ಹಿನ್ನಡೆ ಎಂದು ಹೇಳಲಾಗುತ್ತಿದೆ.

ನ.25 ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ

ಬೆಂಗಳೂರು,ನ.23- ಎಚ್‍ಎಎಲ್ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರಮೋದಿ ಅವರು ನವೆಂಬರ್​ 25 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ನವದೆಹಲಿಯಿದ ವಿಶೇಷ ವಿಮಾನದಲ್ಲಿ ಹೊರಡಲಿರುವ ಮೋದಿ ಅವರು ಬೆಳಗ್ಗೆ 9.15ಕ್ಕೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 12.15ರವರೆಗೆ ಬೆಂಗಳೂರಿನಲ್ಲೇ ಇರುವ ಮೋದಿಯವರು ನಂತರ ಇಲ್ಲಿಂದ ಹೈದರಾಬಾದ್‍ಗೆ ತೆರಳಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದ ಆರು ತಿಂಗಳ ನಂತರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಬಿಜೆಪಿಯ ಯಾವುದೇ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಗಳಿಲ್ಲ.

ಪ್ರಧಾನಿಯವರನ್ನು ಸ್ವಾಗತಿಸಲು ಶಿಷ್ಟಾಚಾರದಂತೆ ರಾಜ್ಯಪಾಲರು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಇಲ್ಲವೇ ಸಚಿವರು, ಮುಖ್ಯ ಕಾರ್ಯದರ್ಶಿ ಹಾಗೂ ನಗರ ಪೊಲೀಸ್ ಆಯುಕ್ತ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಭಾಗಿಯಾಗಲಿದ್ದಾರೆ.

ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಇದು ಸಂಪೂರ್ಣವಾಗಿ ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಮೋದಿಯವರನ್ನು ಯಾವುದೇ ಕಾರಣಕ್ಕೂ ಭೇಟಿ ಮಾಡುವ ಅಗತ್ಯವಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ. ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಈ ಹಿಂದೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದರು.

ಈ ವೇಳೆ ಚಂದ್ರಯಾನ-3 ಯೋಜನೆ, ಪ್ರಜ್ಞಾನ್ ರೋವರ್ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಇಸ್ರೋ ವಿಜ್ಞಾನಿಗಳು ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದರು. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅನ್ವೇಷಣೆ ಬಗ್ಗೆ ವಿವರಿಸಿದ್ದರು.

ಇಸ್ರೋ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿಗಳ ಜೊತೆ 45 ನಿಮಿಷಗಳ ಕಾಲ ಸಂವಾದ ನಡೆಸಿದ್ದರು. ಈ ವೇಳೆ ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ನಾಮಕರಣ ಮಾಡಿದ್ದರು.

ಎಮ್ಮೆಯನ್ನು ನೀರಿನಲ್ಲಿ ನಿಲ್ಲಿಸಿ ಹಾಲು ಕರೆದಂತಾಗಿದೆ : ಸಚಿವ ರಾಜಣ್ಣ

ತುಮಕೂರು,ನ.23- ಬಿಹಾರದಲ್ಲಿ ಜಾತಿಗಣತಿ ವರದಿ ಅಂಗೀಕಾರಗೊಂಡಿರುವುದರಿಂದ ಆಕಾಶವೇನೂ ಬಿದ್ದುಹೋಗಿಲ್ಲ ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಮ್ಮ ಮನೆಯಲ್ಲಿಂದು ಗೃಹಸಚಿವ ಪರಮೇಶ್ವರ್ ಅವರೊಂದಿಗೆ ಉಪಹಾರಕೂಟ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಏನಿದೆ ಎಂದು ಈವರೆಗೂ ಯಾರಿಗೂ ಗೊತ್ತಿಲ್ಲ. ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅದರಲ್ಲಿ ಏನಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಬಳಿಕ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೂ ಆಗದೆ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದರು.

ಎಮ್ಮೆಯನ್ನು ನೀರಿನಲ್ಲಿ ನಿಲ್ಲಿಸಿ ಹಾಲು ಕರೆದಂತಾಗಿದೆ ಈಗಿನ ಪರಿಸ್ಥಿತಿ. ನೀರಿನಲ್ಲಿ ನಿಂತಿರುವುದು ಎಮ್ಮೆಯೋ? ಕೋಣವೋ ಎಂಬುದೇ ಗೊತ್ತಿಲ್ಲ ಎಂದು ಮುಗುಮ್ಮಾಗಿ ಹೇಳಿದರು. ಬಿಹಾರದಲ್ಲಿ ಜಾತಿಗಣತಿ ನಡೆದಿದೆ. ವರದಿ ಸಲ್ಲಿಕೆಯಾಗಿ ಅಂಗೀಕಾರಗೊಂಡಿದೆ. ಬಳಿಕ ಆಕಾಶವೇನು ಬಿದ್ದು ಹೋಗಿಲ್ಲ ಎಂದು ಪುನರುಚ್ಚರಿಸಿದರು.

ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಪರಮೇಶ್ವರ್ ಅವರೊಂದಿಗೆ ಭೇಟಿ ಸೌಹಾರ್ದಯುತವಾಗಿದೆ. ಉಪಹಾರಕೂಟದ ವೇಳೆ ನಡೆದ ಚರ್ಚೆಯ ಬಗ್ಗೆ ಮುಂದಿನ ದಿನಗಳಲ್ಲಿ ವಿವರಣೆ ನೀಡುತ್ತೇವೆ. ಹಿರಿಯೂರಿನ ಕಾರ್ಯಕ್ರಮವೊಂದಕ್ಕೆ ನಾವಿಬ್ಬರು ಭೇಟಿ ನೀಡಬೇಕಾಗಿತ್ತು. ಹೀಗಾಗಿ ಜೊತೆಯಲ್ಲಿ ಉಪಹಾರ ಸೇವಿಸಿದ್ದೇವೆ ಎಂದರು.

ಬಿಜೆಪಿಯ ನಾಯಕ ಮಾಜಿ ಸಚಿವ ವಿ.ಸೋಮಣ್ಣ ನಮ್ಮ ಸ್ನೇಹಿತ. ಅವರೊಂದಿಗೆ ಮಾತನಾಡುವುದರಲ್ಲಿ ವಿಶೇಷತೆ ಏನಿಲ್ಲ. ನಾನಾಗಿಯೇ ಅವರಿಗೆ ಕರೆ ಮಾಡುತ್ತೇನೆ. ನನ್ನನ್ನು ಅವರು ಬಿಜೆಪಿಗೆ ಆಹ್ವಾನಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಪರಮೇಶ್ವರ್ ಅವರು ಸೋಮಣ್ಣ ಸೇರಿದಂತೆ ಯಾರೇ ಕಾಂಗ್ರೆಸ್‍ಗೆ ಬರುವಂತಿದ್ದರೆ ಅದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಮಟ್ಟದಲ್ಲಿ ಚರ್ಚೆಯಾಗುತ್ತದೆ. ತಮಗೆ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದರು.

ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶ

ಬೆಂಗಳೂರು,ನ.23-ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ಸ್‍ನಂತೆ ಒಂದು ತಿಂಗಳು ಕಾವೇರಿ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ನ.23ರಿಂದ ಡಿ.23ರವರೆಗೂ ಒಂದು ತಿಂಗಳ ಕಾಲ ನೀರು ಹರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಮಳೆ ಕೊರತೆ ಇದೆ. ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಹಲವು ಬಾರಿ ಮನವಿ ಮಾಡಿದರೂ ಅದನ್ನು ಪರಿಗಣಿಸಿಲ್ಲ. ಸುಪ್ರೀಂಕೋರ್ಟ್‍ನ ಆದೇಶದ ಪ್ರಕಾರ ನೀರು ಹರಿಸುವಂತೆ ತಾಕೀತು ಮಾಡಲಾಗಿದೆ. ಕಾವೇರಿ ನದಿಕೊಳ್ಳದಲ್ಲಿ ಮಳೆಯಾಗುತ್ತಿದೆ. ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೀರು ಹರಿಸಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ.

ಕಾವೇರಿ ನದಿಪಾತ್ರದಿಂದ ಯಾಂತ್ರಿತವಾಗಿ ಮೂರು ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ವಾದವನ್ನು ಪರಿಗಣಿಸಿ ನೀರಿನ ಹರಿವಿನ ಪ್ರಮಾಣವನ್ನು 2700 ಕ್ಯೂಸೆಕ್ಸ್‍ಗೆ ಮಿತಿಗೊಳಿಸಲಾಗಿದೆ ಎಂಬ ಅಭಿಪ್ರಾಯಗಳಿವೆ.

ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಇದೆ ಎಂಬ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಬೆಂಗಳೂರಿನ ಕುಡಿಯುವ ನೀರಿಗೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿದ ಪ್ರಕಾರ ನೀರಿನ ಪ್ರಮಾಣವನ್ನು 18 ಟಿಎಂಸಿಯಿಂದ 24 ಟಿಎಂಸಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಅಸೂಚನೆ ಹೊರಡಿಸಿದೆ.

ಒಂದಷ್ಟು ದಿನ ಮಳೆಯಾದ ಕಾರಣಕ್ಕೆ ನೀರಿನ ಒಳಹರಿವು ಸುಧಾರಿಸತ್ತಾದರೂ ಮತ್ತೆ ತಗ್ಗಿದೆ. ಇದರ ನಡುವೆ ಪದೇ ಪದೇ ನೀರು ಬಿಡುವಂತೆ ನಿಯಂತ್ರಣ ಸಮಿತಿ ಆದೇಶಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಿಯಂತ್ರಣ ಸಮಿತಿಯ ತೀರ್ಪನ್ನು ನೀರು ನಿರ್ವಹಣಾ ಪ್ರಾಕಾರದ ಮುಂದೆ ಪ್ರಶ್ನಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.