Thursday, November 6, 2025
Home Blog Page 1820

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-11-2023)

ನಿತ್ಯ ನೀತಿ : ನಾವು ಏನು ಹೇಳುತ್ತೇವೊ ಅದಕ್ಕೆ ಮಾತ್ರ ನಾವು ಜವಾಬ್ದಾರರು. ಬೇರೆಯವರು ಏನೋ ಅರ್ಥ ಮಾಡಿಕೊಳ್ಳುವುದಕ್ಕೆ ನಾವು ಹೊಣೆಯಲ್ಲ. ಬೇರೆಯವರು ಏನು ಅಂದುಕೊಳ್ಳುತ್ತಾರೆ ಎಂಬುದಕ್ಕೆ ಹೆಚ್ಚಿನ ಮಹತ್ವ ಕೊಡಬಾರದು.

ಪಂಚಾಂಗ ಸೋಮವಾರ 13-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ವಿಶಾಖಾ / ಯೋಗ: ಸೌಭಾಗ್ಯ / ಕರಣ: ಕಿಂಸ್ತುಘ್ನ

ಸೂರ್ಯೋದಯ : ಬೆ.06.17
ಸೂರ್ಯಾಸ್ತ : 05.50
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ವೃಷಭ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಮಿಥುನ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಒಳಿತು.

ಕಟಕ: ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ಸಿಂಹ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.
ಕನ್ಯಾ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.

ತುಲಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ.
ವೃಶ್ಚಿಕ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಧನುಸ್ಸು: ಹಿರಿಯರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗದಲ್ಲಿ ಲಾಭ ಸಿಗಲಿದೆ.

ಮಕರ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಕುಂಭ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.

ವಿಜಯೇಂದ್ರಗೆ ಪಟ್ಟ : ಸೈಲೆಂಟ್ ಅದ ಸಿ.ಟಿ.ರವಿ, ಯತ್ನಾಳ್

ಬೆಂಗಳೂರು,ನ.12- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾಗಿರುವುದು ಪಕ್ಷದೊಳಗಿನ ಹಿರಿಯರಿಗೆ ಮುನಿಸು ತಂದಿದ್ದು ಇದು ಕಮಲದಲ್ಲಿ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ. ನೇಮಕಾತಿ ಆದೇಶ ಹೊರಬಿದ್ದು, ಎರಡು ದಿನಗಳು ಕಳೆದರೂ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಅನೇಕರು ಒಂದೇ ಒಂದು ಶುಭಾಷಯವನ್ನೂ ಕೋರದೆ ಒಳಗೊಳಗೆ ಕುದಿಯುತ್ತಿದ್ದಾರೆ.

ವರಿಷ್ಠರ ಆದೇಶವನ್ನು ಪ್ರಶ್ನಿಸಲು ಆಗದೆ, ಒಪ್ಪಿಕೊಳ್ಳಲು ಆಗದೆ ಅನೇಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದು, ಮುಂದಿನ ನಮ್ಮ ರಾಜಕೀಯ ಭವಿಷ್ಯವೇನು ಎನ್ನುತ್ತಿದ್ದಾರೆ. ಮಾಜಿ ಸಚಿವರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಶಾಸಕರಾದ ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕರು ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಈ ಕ್ಷಣದವರೆಗೂ ಶುಭಾಷಯ ಕೋರಿಲ್ಲ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಾದರೂ ವಿಜಯೇಂದ್ರಗೆ ಶುಭಾಷಯ ಹೇಳದೆ ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷವನ್ನು ಎಕ್ಸ್‍ನಲ್ಲಿ ಟೀಕಾ ಪ್ರಹಾರ ನಡೆಸಿದ ಈ ನಾಯಕರು ಯಡಿಯೂರಪ್ಪ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಮುನಿಸಿಕೊಂಡಿದ್ದಾರೆ. ಭಾನುವಾರವೂ ಕೂಡ ಇದೇ ನಾಯಕರು ಬಿವೈವಿಗೆ ಶುಭಾಷಯ ಹೇಳದೆ ಮುಗ್ಗಾಮ್ಮಾಗಿ ಉಳಿದಿದ್ದಾರೆ.

ಅಮಾಸ್ ಮೇಲಿನ ದಾಳಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ; ನೆತನ್ಯಾಹು

ಮಾಜಿಕ ಜಾಲತಾಣದಲ್ಲಿ ಯಾವಾಗಲು ಸಕ್ರಿಯರಾಗಿರುತ್ತಿದ್ದ ಯತ್ನಾಳ್, ಸಿ.ಟಿ.ರವಿ ಶುಭ ಕೋರದೆ ಅಂತರ ಕಾಪಾಡಿಕೊಂಡಿರುವುದು ಬಿಜೆಪಿಯೊಳಗೆ ಮನೆಯೊಂದು ಮೂರು ಬಾಗಿಲು ಎಂಬುದನ್ನು ಸಾಬೀತುಪಡಿಸಿದೆ. ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ ಭಾರತೀಯ ಜನತಾ ಪಾರ್ಟಿ ಯಾರ ಮೇಲೂ ನಿಂತಿಲ್ಲ. ನರೇಂದ್ರ ಮೋದಿ ಕೂಡಾ ಓರ್ವ ಬಿಜೆಪಿಯಲ್ಲಿ ಕಾರ್ಯಕರ್ತರು. ನಾನು ಕೂಡ ಕಾರ್ಯಕರ್ತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರುವುದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳಿದೆ.

ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗಲ್ಲ. ಅವರು ಒಬ್ಬ ನಾಯಕ ಮಾತ್ರ, ಎಲ್ಲರೂ ಒಟ್ಟಾಗಿ 28 ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಇದಕ್ಕೆ ದನಿಗೂಡಿಸಿರುವ ಮಾಜಿ ಸಚಿವ ಸಿ.ಟಿ.ರವಿ, 35 ವರ್ಷಗಳ ರಾಜಕೀಯದಲ್ಲಿ ಈಗಾಗಲೇ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದರೂ ಮಾತನಾಡಿದರೆ ನಮ್ಮ ಮಾತೇ ನಮಗೆ ತಿರುಗು ಬಾಣವಾಗುತ್ತದೆ. ಪಕ್ಷ ನೇಮಕ ಮಾಡಿದೆ. ವೈಚಾರಿಕ ಸ್ಪಷ್ಟತೆಯ ಜೊತೆಗೆ ವಿಜಯೇಂದ್ರ ಪಕ್ಷ ಕಟ್ಟುವ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆಯಿದೆ. ಯಶಸ್ವಿಯಾಗಲಿ ಎಂದು ವ್ಯಂಗ್ಯಭರಿತವಾಗಿ ಹೇಳಿದ್ದಾರೆ.

ಒಟ್ಟಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿರುವುದು ಬಿ.ಎಸ್. ಯಡಿಯೂರಪ್ಪ ಪಾಳಯದಲ್ಲಿ ಹರ್ಷ ಮೂಡಿಸಿದ್ದರೆ, ಅವರ ವಿರೋಗಳು ಮತ್ತು ಪ್ರಬಲ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದವರು ಮೆದುಧ್ವನಿಯಲ್ಲಿ ಅಸಮಾಧಾನ ಹೊರ ಹಾಕಲಾರಂಭಿಸಿದ್ದಾರೆ.

ನ.15ಕ್ಕೆ ವಿಜಯೇಂದ್ರ ಪದಗ್ರಹಣ, 16ಕ್ಕೆ ಕಾರ್ಯಕರ್ತರ ಬೃಹತ್ ಸಮಾವೇಶ

ಬೆಂಗಳೂರು,ನ.12- ಇದೇ ತಿಂಗಳ 15ರಂದು ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವುದಾಗಿ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 15ರಂದು ಜಗನ್ನಾಥ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಹಿರಿಯರ ಮಾರ್ಗದರ್ಶನದಂತೆ ಅಧಿಕಾರವನ್ನು ಸ್ವೀಕರಿಸಲಿದ್ದೇನೆ ಎಂದು ತಿಳಿಸಿದರು.

ನಿರ್ಗಮಿತ ಅಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್ ಅವರು ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಸಂಘಟನೆ ಮಾಡಿ ನಮಗೆ ದೊಡ್ಡ ಗೆಲುವು ತಂದುಕೊಟ್ಟಿದ್ದರು.
ಅವರ ನೇತೃತ್ವದಲ್ಲಿ ಬಿಜೆಪಿ ಸಾಧನೆ ಮಾಡಿದೆ ಎಂದು ಬಣ್ಣಿಸಿದರು.

ನ.16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ. ಪಕ್ಷಕ್ಕೆ ನವಚೈತನ್ಯ ನೀಡುವ ಉದ್ದೇಶದಿಂದ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇರುವುದರಿಂದ ಇದರ ಬಗ್ಗೆ ನಮ್ಮ ಪಕ್ಷ ಮೊದಲ ಆದ್ಯತೆ ನೀಡಲಿದೆ. ಇದೇ 16ರಂದು ಶಾಸಕಾಂಗ ಸಭೆ ನಡೆಸಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಪಕ್ಷದ ವರಿಷ್ಠರು ವೀಕ್ಷಕರನ್ನು ಕಳುಹಿಸಿಕೊಡಲಿದ್ದಾರೆ. ಎಲ್ಲರ ಜೊತೆ ಚರ್ಚಿಸಿ ಸರ್ವಸಮ್ಮತವಾಗಿರುವ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವುದಾಗಿ ಹೇಳಿದರು.

ಒಂದು ರಾಷ್ಟ್ರೀಯ ಪಕ್ಷ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಬಂದೇ ಬರುತ್ತವೆ. ಎಲ್ಲವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲಾಗುವುದು. ಯಾರನ್ನೂ ಕೂಡ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷ ಬಲವರ್ಧನೆ ಮಾಡಲಾಗುವುದು ಎಂದರು.

ಯಾರನ್ನು ಕೂಡ ಕಡೆಗಣಿಸುವ ಮಾತೇ ಇಲ್ಲ. ಕಾಂಗ್ರೆಸ್‍ನವರು ಏನೇ ಸಲಹೆ ಕೊಟ್ಟರೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ನಮಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು. ಆದರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠದಿಂದ ಪಕ್ಷದ ಕಚೇರಿಗೆ ಭೇಟಿಕೊಟ್ಟ ಅವರು ಪದಾಕಾರಿಗಳನ್ನು ಭೇಟಿಯಾದರು. ಮೊದಲ ಬಾರಿಗೆ ಪಕ್ಷದ ಜವಬ್ದಾರಿಯಂತೆ ಶಾಸಕನಾಗಿದ್ದು, ಈಗ ಅಧ್ಯಕ್ಷನಾಗುತ್ತಿದ್ದೇನೆ. ಅದಕ್ಕಿಂತ ಮಿಗಿಲಾಗಿ ನಾನೊಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದರು.

ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ದುಷ್ಟ ಮತ್ತು ಭ್ರಷ ಹಾಗೂ ಬಡವರ, ರೈತ ವಿರೋ ಸರಕಾರದ ವಿರುದ್ಧ ಹೋರಾಟಕ್ಕಿಳಿಯಬೇಕಿದೆ. ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಕರೆ ನೀಡಿದರು.

ಅಮಾಸ್ ಮೇಲಿನ ದಾಳಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ; ನೆತನ್ಯಾಹು

ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸಿದ್ದಗಂಗಾಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯುತ್ತಿದ್ದರು. ಅದೇ ರೀತಿ ನಾನು ಕೂಡ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಬಿ.ಕೆ.ಮಂಜುನಾಥ್ , ಉಪಾಧ್ಯಕ್ಷ ಎಂ.ಬಿ.ನಂದೀಶ್, ಜಿ.ಬಿ. ಜ್ಯೋತಿ ಗಣೇಶ್, ಬಿ.ಸುರೇಶ್ ಗೌಡ , ಹುಲಿನಾಯ್ಕರ್ ಇದ್ದರು.

ಬೆಚ್ಚಿಬಿದ್ದ ಉಡುಪಿ : ಹಾಡಹಗಲೇ ಚಾಕುವಿನಿಂದ ಇರಿದು ತಾಯಿ-ಮಕ್ಕಳ ಕೊಲೆ

ಬೆಂಗಳೂರು, ನ.12- ಇಡೀ ರಾಜ್ಯ ದೀಪಾವಳಿ ಹಬ್ಬದ ಸಡಗರದಲ್ಲಿರುವ ಸಂದರ್ಭ ದಲ್ಲೇ ದೂರದ ಉಡುಪಿಯಲ್ಲೊಂದು ಅಮಾನವೀಯ ಕೃತ್ಯವೊಂದು ನಡೆದು ಹೋಗಿದೆ. ಏಕಾಏಕಿ ಮನೆಗೆ ನುಗ್ಗಿದ ಮಾಸ್ಕ್ ಧರಿಸಿದ್ದ ಹಂತಕನೊಬ್ಬ ಮನೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ವೃದ್ಧೆಯೊಬ್ಬರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿನಗರದಲ್ಲಿ ನಡೆದಿದೆ.

ಈ ಘೋರ ಕೃತ್ಯದಲ್ಲಿ ಸಾವನ್ನಪ್ಪಿದ ದುರ್ದೈವಿ ಗಳನ್ನು ಹಸೀನಾ (46), ಮಕ್ಕಳಾದ ಅಪ್ನಾನ್(23), ಅಜ್ಞಾಝ್(21) ಹಾಗೂ 12 ವರ್ಷದ ಆಸೀಂ ಎಂದು ಗುರುತಿಸಲಾಗಿದೆ. ಹಂತಕನಿಂದ ಗಾಯಗೊಂಡ ಹಸೀನಾ ಅವರ ಅತ್ತೆ ಅಜೀರಾ ತಕ್ಷಣ ಸ್ನಾನದ ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸೀನಾ ಅವರ ಪತಿ ದೂರದ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆಗೊಮ್ಮೆ ಈಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಉಳಿದಂತೆ ತಾಯಿ-ಮೂರು ಮಕ್ಕಳು ಹಾಗೂ ಆತ್ತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ 8.30ರ ಸಮಯದಲ್ಲಿ ಮಾಸ್ಕ್ ಧರಿಸಿಕೊಂಡು ಏಕಾಏಕಿ ಮನೆಗೆ ನುಗ್ಗಿದ ಹಂತಕ ಮೊದಲು ಹಸೀನಾ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಇಬ್ಬರು ಹೆಣ್ಣು ಮಕ್ಕಳಿಗೂ ಇರಿದಿದ್ದಾನೆ ಇದನ್ನು ಕಂಡು ಅತ್ತೆ ಗಾಬರಿಯಿಂದ ಸ್ನಾನದ ಮನೆಗೆ ಹೋಗಿ ತಪ್ಪಿಸಿಕೊಳ್ಳಲು ಹೋದ ಅತ್ತೆ ಮೇಲೂ ಹಂತಕ ಚಾಕು ಬೀಸಿದ್ದಾನೆ ಆದರೆ, ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿ ಸ್ನಾನದ ಮನೆ ಬಾಗಿಲು ಹಾಕಿಕೊಳ್ಳುವಲ್ಲಿ ಯಶಸ್ವಿಯಾದ್ದರಿಂದ ಅವರು ಬಚಾವಾಗಿದ್ದಾರೆ.

ದೀಪಾವಳಿ ವೇಳೆ ಲಕ್ಷ್ಮೀಪೂಜೆ ಏಕೆ ಮಾಡಬೇಕು..? ಹೇಗೆ ಮಾಡಬೇಕು..?

ಈ ಸಂದರ್ಭದಲ್ಲಿ ಮನೆ ಹೊರಗೆ ಆಟವಾಡುತ್ತಿದ್ದ 12 ವರ್ಷದ ಆಸೀಂ ಒಳ ಬಂದಾಗ ಆ ಮಗುವನ್ನು ಹಂತಕ ನಿರ್ದಯವಾಗಿ ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಮನೆಯವರ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಪಕ್ಕದ ಮನೆಯ ಮಹಿಳೆ ಮನೆಗೆ ಬಂದಾಗ ಆಕೆಗೆ ಎದುರಾದ ಹಂತಕ ಕೂಗಾಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಾಸ್ಕ್ ಹಾಕಿಕೊಂಡು ಬಂದಿದ್ದ ಹಂತಕ ಮನೆಯಿಂದ ಹೊರಗೆ ತೆರಳಿ ಹೆಲ್ಮೆಟ್ ಹಾಕಿಕೊಂಡು ತಾನು ಬಂದಿದ್ದ ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಗಾಬರಿಯಿಂದ ಚೇತರಿಸಿಕೊಂಡ ಮಹಿಳೆ ವಿಷಯವನ್ನು ಅಕ್ಕಪಕ್ಕದವರಿಗೆ ತಿಳಿಸಿ ನಂತರ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಂತಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಕ್ಕಪಕ್ಕದ ಮನೆಯವರ ಸಿಸಿ ಕ್ಯಾಮರಾಗಳ ವಿಡಿಯೋ ತುಣುಕುಗಳನ್ನು ಪರಿಶೀಲಿಸುತ್ತಿದ್ದು, ಕೊಲೆಗಾರನ ಬಂಧನಕ್ಕೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.

ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ ಮತ್ತೊಬ್ಬರನ್ನು ತೀವ್ರವಾಗಿ ಗಾಯಗೊಳಿಸಿ ಪರಾರಿಯಾಗಲು ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‍ಪಿ ಡಾ.ಕೆ.ಅರುಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಭ್ಯ ಕುಟುಂಬ: ಹಸೀನಾ ಅವರ ಕುಟುಂಬ ಕಳೆದ ಐವತ್ತು ವರ್ಷಗಳಿಂದ ತೃಪ್ತಿನಗರದಲ್ಲೇ ವಾಸಿಸುತ್ತಿದೆ. ಅವರದು ಸಭ್ಯ ಕುಟುಂಬ ಯಾವುದೆ ತಂಟೆ ತಕರಾರಿಗೂ ಹೋಗುತ್ತಿರಲಿಲ್ಲ. ಅವರ ಕುಟುಂಬ ವರ್ಗದವರು ಅನ್ಯೋನ್ಯವಾಗಿದ್ದರೂ. ದುಬೈನಲ್ಲಿರುವ ಪತಿ ಆಗೊಮ್ಮ ಈಗೊಮ್ಮೆ ಬಂದು ಹೋಗುತ್ತಿದ್ದರು. ಅವರು ಯಾರೊಂದಿಗೂ ಹಗೆ ಬೆಳೆಸಿಕೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಜಿ ಶಾಸಕರ ಜೇಬಿನಿಂದ ಹಣ ಕದಿಯಲು ಹೋಗಿ ಸಿಕ್ಕಿಬಿದ್ದ ಕಳ್ಳ

ಬೆಂಗಳೂರು,ನ.12- ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಜಿ ಶಾಸಕರೊಬ್ಬರ ಜೇಬಿಗೆ ಚಾಲಾಕಿಯೊಬ್ಬ ಹಣ ಎಗರಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದರು.

ದೀಪಾವಳಿ ವೇಳೆ ಲಕ್ಷ್ಮೀಪೂಜೆ ಏಕೆ ಮಾಡಬೇಕು..? ಹೇಗೆ ಮಾಡಬೇಕು..?

ಇದೇ ಸಂದರ್ಭದಲ್ಲಿ ಬಿ.ವೈ.ವಿ ಅವರನ್ನು ಅಭಿನಂದಿಸಲು ತುರುವೇಕೆರೆಯ ಮಾಜಿ ಶಾಸಕ ಮಸಾಲ ಜಯರಾಮ್ ಕೂಡ ಆಗಮಿಸಿದ್ದರು. ಚಾಲಾಕಿ ಕಳ್ಳ ಅದ್ಹೇಗೊ ಮಠದೊಳಗೆ ಬಂದು ಜಯರಾಮ್ ಅವರ ಜೇಬಿಗೆ ಕೈ ಹಾಕಿ ಹಣ ಎಗರಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ. ಕೂಡಲೇ ಇದನ್ನು ಗಮನಿಸಿದ ಹಿಂಬಾಲಕರು ಆತನನ್ನು ಹಿಡಿದು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ.

ಮುಂಗಾರಿನಲ್ಲಿ ಕೊರತೆ; ಹಿಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ಬೆಂಗಳೂರು, ನ.12-ಆಗಸ್ಟ್‍ನಿಂದ ನಿರಂತರ ತೀವ್ರ ಮಳೆ ಕೊರತೆ ಉಂಟಾಗಿದ್ದ ರಾಜ್ಯದಲ್ಲಿ ಈಗ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ಉತ್ತಮ ಮಳೆಯಾಗಿದೆ. ಇದರಿಂದ ಹಿಂಗಾರು ಬೆಳೆಗೆ ಅನುಕೂಲವಾಗಿದ್ದರೆ, ಮುಂಗಾಗರು ಹಂಗಾಮಿನ ಬೆಳೆಗಳಿಗೆ ಹಾನಿಯುಂಟಾಗಿದೆ.

ಮುಂಗಾರಿನಲ್ಲಿ ಉಂಟಾಗಿದ್ದ ಮಳೆ ಕೊರತೆಯೂ ಹಿಂಗಾರಿನಲ್ಲಿ ಚೇತರಿಸಿಕೊಂಡಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ. ಆದರೂ ಕೊಯ್ಲಿಗೆ ಬಂದಿದ್ದ ಬತ್ತ, ರಾಗಿ ಮೊದಲಾದ ಬೆಳೆಗಳಿಗೆ ತೊಂದರೆಯಾಗಿದೆ. ಆದರೆ, ರಾಜ್ಯಾದ್ಯಂತ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಹಿಂಗಾರು ಆರಂಭವೂ ವಿಳಂಬವಾದ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆಯೂ ವಾಡಿಕೆ ಪ್ರಮಾಣದಲ್ಲಿ ಆಗಿಲ್ಲ.

ಇತ್ತೀಚೆಗೆ ಒಂದು ವಾರ ಕಾಲ ಬಿದ್ದ ಮಳೆಯಿಂದ ಬಿತ್ತನೆ ಮಾಡಿರುವ ಬೆಳೆಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಯಲ್ಲಿ ಜಲಾಶಯಗಳ ಒಳಹರಿವು ಸಹ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮಳೆ ಕೊರತೆಯಿಂದಾಗಿ ಬಹುತೇಕ ಜಲಾಶಯಗಳ ಒಳಹರಿವು ನಿಂತಿತ್ತು. ಹಿಂಗಾರು ಚೇತರಿಸಿಕೊಂಡು ಬಹಳಷ್ಟು ಕಡೆಗಳಲ್ಲಿ ಉತ್ತಮ ಮಳೆಯಾದ್ದರಿಂದ ಪ್ರಮುಖ ಜಲಾಶಗಳಿಗೆ ಒಳಹರಿವಿನ ಪ್ರಮಾಣ ಸ್ವಲ್ಪ ಹೆಚ್ಚಿದೆ. ಈಗಾಗಲೇ ಚಳಿಗಾಲ ಆರಂಭವಾಗಿರುವುದರಿಂದ ಮುಂದೆ ಉತ್ತಮ ಮಳೆಯಾಗುವ ಸಾಧ್ಯತೆ ವಿರಳ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನವೆಂಬರ್ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ.

ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 53 ಮಿ.ಮೀ. ಇದ್ದು, 156 ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದ ವಾಡಿಕೆಗಿಂತ ಶೇ. 156ರಷ್ಟು ಮಳೆಯಾದಂತಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ. 171, ಉತ್ತರ ಒಳನಾಡಿನಲ್ಲಿ ಶೇ.93, ಮಲೆನಾಡಿನಲ್ಲಿ ಶೇ.186 ಹಾಗೂ ಕರಾವಳಿಯಲ್ಲಿ ಶೇ.226ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ನವೆಂಬರ್ ತಿಂಗಳು ಚಳಿಗಾಲವಾಗಿರುವುದರಿಂದ ವಾಡಿಕೆ ಮಳೆಯ ಪ್ರಮಾಣ ಕಡಿಮೆಯೇ ಇದೆ. ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ ಒಂದು ವಾರದಲ್ಲೂ ವಾಡಿಕೆಗಿಂತ ಶೇ.277ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯ ವಾಡಿಕೆ ಪ್ರಮಾಣ 13 ಮಿ.ಮೀ. ಆಗಿದ್ದು, 48 ಮಿ.ಮೀ.ನಷ್ಟು ಮಳೆಯಾಗಿದೆ.

ಮುಂಗಾರು ಆರಂಭವಾಗುವ ಜೂನ್‍ನಿಂದ ನಿನ್ನೆಯವರೆಗೆ ಶೇ.26ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಕ್ಟೋಬರ್ ಒಂದರಿಂದ ನಿನ್ನೆಯವರೆಗಿನ ಮಾಹಿತಿ ಅವಲೋಕಿಸಿದರೆ, ವಾಡಿಕೆ ಮಳೆ ಪ್ರಮಾಣ 152 ಮಿ.ಮೀ. ಇದ್ದು, ಕೇವಲ 99 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ರಾಜ್ಯದಲ್ಲಿ ಶೇ.35ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ ಶೆ.14ರಷ್ಟು ಹೆಚ್ಚು ಮಳೆಯಾಗಿದ್ದರೆ ಮಲೆನಾಡಿನಲ್ಲಿ ಶೇ. 10, ಉತ್ತರ ಒಳನಾಡಿನಲ್ಲಿ ಶೇ.72, ದಕ್ಷಿಣ ಒಳನಾಡಿನಲ್ಲಿ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಜಲಾಶಯಗಳ ಮಾಹಿತಿ: ರಾಜ್ಯದ 14 ಪ್ರಮುಖ ಜಲಾಶಗಳ ಗರಿಷ್ಠ ನೀರು ಸಂಗ್ರಹ ಸಾಮಥ್ರ್ಯ 895.62 ಟಿಎಂಸಿ ಅಡಿ ಇದೆ. ಪ್ರಸ್ತುತ 480.34 ಟಿಎಂಸಿಯಷ್ಟು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಯಲ್ಲಿ 794.46 ಟಿಎಂಸಿಯಷ್ಟು ನೀರು ಸಂಗ್ರವಾಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 314 ಟಿಎಂಸಿಯಷ್ಟು ಕಡಿಮೆ ನೀರಿದೆ. ಒಟ್ಟಾರೆ ಎಲ್ಲಾ ಜಲಾಶಯಗಳಲ್ಲಿ ಸರಾಸರಿ ಶೇ.54ರಷ್ಟು ಮಾತ್ರ ನೀರಿದೆ. ಒಳಹರಿವಿನ ಪ್ರಮಾಣ 17787 ಕ್ಯುಸೆಕ್‍ನಷ್ಟಿದ್ದರೆ, ಹೊರ ಹರಿವು 24349 ಕ್ಯುಸೆಕ್‍ನಷ್ಟಿದೆ.

ಶಿಶುವಿಹಾರಗಳಲ್ಲಿ ಮದ್ದುಗುಂಡು ಮುಚ್ಚಿಟ್ಟಿರುವ ಹಮಾಸ್ ಉಗ್ರರು

ಜಲ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳಿಗೆ 843 ಕ್ಯುಸೆಕ್ ಒಳಹರಿವಿದ್ದರೆ, 2581 ಕ್ಯುಸೆಕ್ ಹೊರ ಹರಿವಿದೆ. ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ, ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವು 10 ಸಾವಿರ ಕ್ಯುಸೆಕ್‍ನಷ್ಟಿದ್ದು, ಹೊರ ಹರಿವು 1200 ಕ್ಯುಸೆಕ್‍ಗೂ ಹೆಚ್ಚಿದೆ.

ಕೃಷ್ಣಾ ಕೊಳದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಗೆ 6659 ಕ್ಯುಸೆಕ್‍ನಷ್ಟು ಒಳ ಹರಿವಿದ್ದರೆ, 19881ರಷ್ಟು ಹೊರ ಹರಿವಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ 17787 ಕ್ಯುಸೆಕ್‍ನಷ್ಟು ಒಳಹರಿವು ಇದ್ದರೆ, 24349ರಷ್ಟು ಹೊರ ಹರಿವಿದೆ.

ಮುಂಗಾರು ಮಳೆಯ ವೈಫಲ್ಯದಿಂದಾಗಿ ಈಗಾಗಲೇ ಕುಡಿಯುವ ನೀರು, ವಿದ್ಯುತ್ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಕಂಡುಬರುತ್ತಿದೆ. ಹಿಂಗಾರು ಕೂಡ ಕೈ ಕೊಟ್ಟರೆ, ಬೇಸಿಗೆಯಲ್ಲಿ ರಾಜ್ಯ ತೀವ್ರ ಸ್ವರೂಪದ ಸಮಸ್ಯೆ ಎದುರಿಸಬೇಕಾಗಬಹುದು.

ಬಿಜೆಪಿ ಜೊತೆ ಜೆಡಿಎಸ್ ವಿಲೀನವಿಲ್ಲ : ಹೆಚ್‌ಡಿಕೆ

ಬೆಂಗಳೂರು, ನ.12- ಬಿಜೆಪಿ ಜತೆ ಜೆಡಿಎಸ್ ವಿಲೀನವಿಲ್ಲ. ಎನ್‍ಡಿಎ ಮೈತ್ರಿಕೂಟದಲ್ಲಿ ಇದ್ದೇವೆ ಅಷ್ಟೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ. ನಮ್ಮ ಹೋರಾಟ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯುವುದು. ಅದಕ್ಕಾಗಿ ಒಬ್ಬ ಯುವ ನಾಯಕನ ಅಗತ್ಯವಿತ್ತು. ಆ ಜವಾಬ್ದಾರಿಯನ್ನು ವಿಜಯೇಂದ್ರ ಅವರು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮಾಸ್ ಮೇಲಿನ ದಾಳಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ; ನೆತನ್ಯಾಹು

ಶೀಘ್ರದಲ್ಲೇ ವಿಪಕ್ಷ ನಾಯಕನ ಆಯ್ಕೆಯೂ ಆಗಬಹುದು. ಒಕ್ಕಲಿಗ ಲಿಂಗಾಯಿತ ಸಮೀಕರಣ ಎನ್ನುವುದಕ್ಕಿಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುವುದೇ ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್ ನಡೆ “ಒನ್ ಸ್ಟೇಟ್-ಮೆನಿ ಎಲೆಕ್ಷನ್” ಕಡೆ : ಕುಮಾರಸ್ವಾಮಿ

ಬೆಂಗಳೂರು,ನ.12- ದೇಶದಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಒನ್ ಸ್ಟೇಟ್-ಮೆನಿ ಎಲೆಕ್ಷನ್ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಅನಾನುಕೂಲಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದ ಅವರು, ಪಂಚ ರಾಜ್ಯದ ಚುನಾವಣೆಯಲ್ಲೂ ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಭರವಸೆಯನ್ನು ಕಾಂಗ್ರೆಸ್ ನೀಡುತ್ತಿದೆ. ಅಲ್ಲಿನ ಮತದಾರರು ಮರುಳಾಗಬಾರದು. ಗ್ಯಾರಂಟಿ ಯೋಜನೆಗಳು ಆಶಾದಾಯಕವಾಗಿಲ್ಲ ಎಂದರು.

ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆಬಂದಿದ್ದು, ಜನರ ಬದುಕಿನ ಭಾಗ್ಯದ ಬಾಗಿಲು ತೆಗೆದಿದ್ದೇವೆ ಎಂದು ಹೇಳುತ್ತಿದ್ದೆ. ಪ್ರತಿ ದಿನ ಕಾಂಗ್ರೆಸ್ ನಾಯಕರಿಂದ ಐದು ಗ್ಯಾರಂಟಿಗಳ ಭಜನೆಗಳನ್ನು ನಿತ್ಯ ಕೇಳುತ್ತಿದ್ದೇವೆ ಎಂದು ಟೀಕಿಸಿದರು.

ಗ್ಯಾರಂಟಿಗಳನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಹೊರಟಿದೆ. ತೆಲಂಗಾಣ ಚುನಾವಣೆಗೆ ಟಿಸಿಎಂ, ಡಿಸಿಎಂ(ಟೆಂಪ್ರವರಿ ಚೀಫ್ ಮಿನಿಸ್ಟರ್, ಡ್ಯುಪ್ಲಿಕೇಟ್ ಚೀಫ್ ಮಿನಿಸ್ಟರ್) ಉಸ್ತುವಾರಿ ಇದ್ದಾರೆ. ಐದು ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳೋಕೆ ಹೋಗಿ ಬೇರೆ ರಾಜ್ಯದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿಗಳು ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ 6 ಗ್ಯಾರಂಟಿ ಜಾರಿ ಮಾಡೋದಾಗಿ ಹೇಳಿದೆ. ಉಚಿತ ಗ್ಯಾರಂಟಿಗಳ ಕುರಿತಂತೆ ಮೋಸ ಹೋಗದೆ ಎಚ್ಚರಿಕೆಯಿಂದ ಇರಿ ಎಂದ ಅವರು ಪಂಚ ರಾಜ್ಯದ ಮತದಾರರಿಗೆ ಗ್ಯಾರಂಟಿ ಯೋಜನೆಗೆ ಮಾರುಹೋಗಬೇಡಿ ಎಂದು ಮನವಿ ಮಾಡಿದರು.

ಎರಡೂವರೆ ಸಾವಿರ ಲಕ್ಷ ಹುದ್ದೆ ಖಾಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಆಡಳಿತಾವಯಲ್ಲಿ ಎರಡು ಮುಕ್ಕಾಲು ಲಕ್ಷ ಸರ್ಕಾರಿ ನೌಕರರ ನೇಮಕಾತಿ ಏಕೆ ಆಗಿಲ್ಲ. ಸದ್ಯ ರಾಜ್ಯದಲ್ಲಿ ಎರಡೂವರೆ ಸಾವಿರ ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಏಕೆ ನೇಮಕಾತಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಬೇರೆ ರಾಜ್ಯದ ಪ್ರನಾಳಿಕೆಯಲ್ಲಿ ಘೋಷಿಸುವ ಬದಲು ಮೊದಲು ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರರ ನೇಮಕ ಮಾಡಿಲಿ. ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ನೌಕರರ ಕೊರತೆ ಇದೆ ಎಂದರು.

ಬಿಜೆಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ಕೊಡ್ತಿತ್ತು. ತೆಲಂಗಾಣದಲ್ಲಿ ರೈತರಿಗೆ 15 ಸಾವಿರ ಕೊಡುವುದಾಗಿ ಡ್ಯುಪ್ಲಿಕೇಟ್ ಸಿಎಂ ಹೇಳಿದ್ದಾರೆ. ಆದರೆ ರಾಜ್ಯದ ರೈತರ ಹಿತ ಕಾಪಾಡುವ ಕೆಲಸ ಮರೆತು ಹೋಯಿತೆ ಎಂದು ಟೀಕಿಸಿದರು. ರೈತರಿಗೆ ಈ ಹಿಂದೆ ನೀಡುತ್ತಿದ್ದ 4 ಸಾವಿರ ಯಾಕೆ ಕಡಿತ ಮಾಡಿದಿರಿ? ಟಾರ್ಚ್ ಬೆಳಕಲ್ಲಿ ಅಕಾರಿ ಕೆಲಸ ಮಾಡಿದ್ದನ್ನ ಪ್ರಸ್ತಾಪಿಸಿದ ಹೆಚ್ ಡಿಕೆ, ಗೃಹ ಜ್ಯೋತಿ ಹೆಸರಲ್ಲಿ ಕತ್ತಲ ಭಾಗ್ಯ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.

ರೈತರಿಗೆ 24 ಗಂಟೆ ವಿದ್ಯುತ್ ನೀಡದ ಸರ್ಕಾರ ಬೇರೆ ರಾಜ್ಯದಲ್ಲಿ 24 ಗಂಟೆ ವಿದ್ಯುತ್ ನೀಡುವ ಕುರಿತು ಮಾತನಾಡುತ್ತಾರೆ. ಉಚಿತ ವಿದ್ಯುತ್ ಹೆಸರಲ್ಲಿ ಆಗಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಚುನಾವಣೆಗೂ ಮೊದಲು ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್ ನಿಂಗೂ ಫ್ರೀ ಅಂತ ಘೋಷಿಸಿದ್ದರು. ಈಗ ಮಹದೇವಪ್ಪ ನಿಂಗೂ ಕತ್ತಲು ಕಾಕಾ ಪಾಟೀಲ್ ನಿಂಗೂ ಕತ್ತಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಇಲಾಖೆ ಅಧೋಗತಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು.

ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ಕೇವಲ ನಾಮಾಕಾವಸ್ತೆ ಎನ್ನುವಂತೆ ಯೋಜನೆ ಜಾರಿ ಮಾಡಲಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ 1.40 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ತಲುಪಿಲ್ಲಎಂದು ಅವರು ಆರೋಪಿಸಿದರು.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಕಲ್ಪಿಸಿದ್ದಾರೆ. ಆದರೆ, ವಿದ್ಯಾರ್ಥಿಗಳು ಜೆಸಿಬಿಯಲ್ಲಿ ಪ್ರಯಾಣಿಸುವಂತಾಗಿದೆ. ಆಟೋ ಚಾಲಕರ ಜೀವನ ದುಸ್ತರವಾಗಿದೆ. ಇಂದಿರಾ ಕ್ಯಾಂಟೀನ್, ಗುತ್ತಿಗೆದಾರರಿಂದ ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡುವುದು ಸರಿನಾ ಎಂದ ಅವರು, ಗ್ಯಾರಂಟಿ ಜಾರಿಗಾಗಿ ಸಾಲ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ, ಧರಂಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವಧಿಯ 12 ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೊದಲ ಐದು ವರ್ಷದಲ್ಲು 2.42 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದ ಅವರು, ಪ್ರಧಾನಿ ಅವರು ಮಾಡಿರುವ ಸಾಲದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಈಗ 5 ಲಕ್ಷದ 71 ಸಾವಿರ 655. ಕೋಟಿ ರಾಜ್ಯದ ಸಾಲ ಇದೆ. ಈ ವರ್ಷ 85,815 ಕೋಟಿ ಸಾಲದ ಗುರಿ ಇಟ್ಟುಕೊಂಡಿದ್ದೀರಿ. ಗ್ಯಾರಂಟಿಗಳ ಜಾರಿಗೆ 56 ಸಾವಿರ ಕೋಟಿ ಸಾಲ ಕಟ್ಟಬೇಕು. ಐದು ತಿಂಗಳಲ್ಲಿ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ದುಡ್ಡಿಗೆ ಕೊರತೆ ಇಲ್ಲ ಎನ್ನುವುದು ಐಟಿ ದಾಳಿಯಲ್ಲಿ ಬಟಾಬಯಲಾಗಿದೆ ಎಂದು ಆರೋಪಿಸಿದರು. ಯುವನಿ ಹೆಸರಲ್ಲಿ ಯುವಕರಿಗೆ ಉಂಡೆನಾಮ ಹಾಕುವ ಕೆಲಸವಾಗುತ್ತಿದೆ. ಚುನಾವಣೆಗಾಗಿ ರಾಜ್ಯದ ಜನತೆಯ ದಾರಿ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಆರೋಪ ಮಾಡಿದರು.ಯರಗೋಳ ಅಭಿವೃದ್ಧಿಗೆ ಮೊದಲು ಹಣ ಕೊಟ್ಟಿದ್ದು ಕುಮಾರಸ್ವಾಮಿ ಅಂತಾ ಗೊತ್ತಿರಲಿ ಎಂದು ಸಿಎಂಗೆ ತಿರುಗೇಟು ನೀಡಿದರು.

ಅಭಿವೃದ್ಧಿ ಕಾರ್ಯಕ್ರಮ ಗಳಿಗೆ ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಇದೆ. ಆದರೆ, ಬ್ಲಾಕ್ ಮನಿಗೇನೂ ಕೊರತೆ ಇಲ್ಲ. ಯಾವ ಯಾವ ಅಧಿಕಾರಿಗಳ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಗ್ಯಾರಂಟಿಗಳ ಮೂಲಕ ವೈಎಸ್ಟಿ,ಎಸ್ ಎಸ್ಟಿ ಟ್ಯಾಕ್ಸ್ ಬೇರೆ ರಾಜ್ಯದಲ್ಲಿ ಜಾರಿಗೆ ಹೊರಟ್ಟೀದಿರಿ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಸರ್ಕಾರ ನೊಟೀಸ್‍ನ ಮೇಲೆ ನಡೀತಿದೆ. ಸಿಎಂಗೆ ಹೈ ಕಮಾಂಡ್ ನೊಟೀಸ್ ಕೊಟ್ಟಿದೆ.

ಯಾರು ಹೆಚ್ಚು ಹಣ ಕೊಡ್ತಾರೋ ಅವರಿಗೆ ಅಧಿಕಾರ. ಇಂಥ ಟಾಸ್ಕ್ ನೀಡಿದೆ ಎಂಬ ಆರೋಪ ಮಾಡಿದರು. ಒಕ್ಕಲಿಗೆ ಲಿಂಗಾಯಿತ ಎಂಬುದಕ್ಕಿತ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವವರು ಬೇಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಉಪಸ್ಥಿತರಿದ್ದರು.

ನರಕ ಚತುರ್ದಶಿ ಹಿಂದಿದೆ ಒಂದು ಕಥೆ

ಶ್ರೀಮದ್ಭಾಗವತ ಪುರಾಣದಲ್ಲಿ ಹೀಗೊಂದು ಕಥೆಯಿದೆ – ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ಬಹಳ ತೊಂದರೆ ಗಳನ್ನು ಕೊಡತೊಡಗಿದನು. ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು. ಅವನು ತಾನು ಜಯಿಸಿ ತಂದಿದ್ದ 16000 ವಿವಾಹಯೋಗ್ಯ ರಾಜಕನ್ಯೆಯರನ್ನು ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರವನ್ನು ಮಾಡಿದ್ದನು.

ಇದರಿಂದ ಎಲ್ಲ ಕಡೆಗಳಲ್ಲಿಯೂ ಹಾಹಾಕಾರವೆದ್ದಿತು. ಶ್ರೀಕೃಷ್ಣನಿಗೆ ಈ ವೃತ್ತಾಂತವು ತಿಳಿದ ಕೂಡಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನೊಂದಿಗೆ ಯುದ್ಧವನ್ನು ಮಾಡಿ ನರಕಾಸುರನನ್ನು ವಧಿಸಿದನು ಮತ್ತು ಆ ರಾಜಕನ್ಯೆಯರನ್ನು ಮುಕ್ತಗೊಳಿಸಿದನು. ಸಾಯುವಾಗ ನರಕಾಸುರನು ಕೃಷ್ಣನಲ್ಲಿ ‘ಇಂದಿನ ತಿಥಿಗೆ ಯಾರು ಮಂಗಲಸ್ನಾನವನ್ನು ಮಾಡುತ್ತಾರೆಯೋ, ಅವರಿಗೆ ನರಕದ ತೊಂದರೆಯಾಗದಿರಲಿ’ ಎಂಬ ವರವನ್ನು ಬೇಡಿದನು ಮತ್ತು ಕೃಷ್ಣನು ಆ ವರವನ್ನು ಕೊಟ್ಟನು.

ಅಂದಿನಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿಯೆಂದು ಪರಿಗಣಿಸಲ್ಪಟ್ಟಿತು ಮತ್ತು ಜನರು ಆ ದಿನ ಸೂರ್ಯೋದಯಕ್ಕೆ ಮೊದಲು ಎದ್ದು ಅಭ್ಯಂಗಸ್ನಾನವನ್ನು ಮಾಡತೊಡಗಿದರು. ಚತುರ್ದಶಿಯಂದು ಬೆಳಗಿನ ಜಾವದಲ್ಲಿ ನರಕಾಸುರನನ್ನು ವಧಿಸಿ ಅವನ ರಕ್ತದ ತಿಲಕವನ್ನು ಹಣೆಯ ಮೇಲೆ ಇಟ್ಟುಕೊಂಡು ಶ್ರೀಕೃಷ್ಣನು ಮನೆಗೆ ಬಂದ ಕೂಡಲೇ ತಾಯಂದಿರು ಅವನನ್ನು ಆಲಿಂಗಿಸಿಕೊಂಡರು. ಸ್ತ್ರೀಯರು ಆರತಿ ಎತ್ತಿ ತಮ್ಮ ಆನಂದವನ್ನು ವ್ಯಕ್ತಪಡಿಸಿದರು.’

ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ. ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ಯಮತರ್ಪಣದ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು.

ಅನಂತರ ತಾಯಿಯು ಮಕ್ಕಳಿಗೆ ಆರತಿಯನ್ನು ಎತ್ತುತ್ತಾಳೆ. ನರಕಾಸುರನ ವಧೆಯ ಪ್ರತೀಕವೆಂದು ಕೆಲವರು ಮಹಾಲಿಂಗನ ಬಳ್ಳಿಯ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದಲೇ ಬಿಸಾಡುತ್ತಾರೆ. ಇನ್ನೂ ಕೆಲವರು ಅದರ ರಸವನ್ನು ನಾಲಗೆಗೆ ಹಚ್ಚಿಕೊಳ್ಳುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡಿ ವಸ್ತ್ರದಾನ ಮಾಡುತ್ತಾರೆ. ಪ್ರದೋಷಕಾಲದಲ್ಲಿ ದೀಪದಾನ ಮಾಡುತ್ತಾರೆ. ಪ್ರದೋಷವ್ರತವನ್ನು ತೆಗೆದುಕೊಂಡವರು ಪ್ರದೋಷಪೂಜೆ ಮತ್ತು ಶಿವಪೂಜೆಯನ್ನು ಮಾಡುತ್ತಾರೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

ಸಂಗ್ರಹ
ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)

‘ಮುಂದಿನ ಸಿಎಂ ವಿಜಯೇಂದ್ರ’ ಎಂದು ಘೋಷಣೆ ಕೂಗಿದ ಕಾರ್ಯಕರ್ತರು

ಬೆಂಗಳೂರು,ನ.12- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ, ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಎಂದು ಜೈಕಾರದ ಘೋಷಣೆಗಳನ್ನು ಕೂಗಿದ್ದಾರೆ.ಬೆಂಗಳೂರಿನಿಂದ ತುಮಕೂರಿಗೆ ಹೊರಟ ವೇಳೆ ಮಾರ್ಗಮಧ್ಯೆ ದಾಬಸ್ ಪೇಟೆ ಬಳಿ ಬಿಜೆಪಿಯ ನೂರಾರು ಕಾರ್ಯಕರ್ತರು ಕಾರು ತಡೆದು ಹೂವಿನಹಾರ ಹಾಕಿ ಪಟಾಕಿ ಸಿಡಿಸಿ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆಗಳನ್ನು ಕೂಗಿದರು.

ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ರಾಜಹುಲಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರಗೆ ಜಯವಾಗಲಿ ಎಂದು ಜೈಕಾರ ಕೂಗಿ ಶುಭ ಹಾರೈಸಿದರು. ಅಲ್ಲಿಂದ ತುಮಕೂರಿಗೆ ಆಗಮಿಸುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿಯ ಕಾರ್ಯಕರ್ತರು ಮತ್ತೆ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದೇ ಘೋಷಣೆ ಕೂಗಿದರು.

ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ದೊಡ್ಡ ಮಟ್ಟದಲ್ಲಿ ಸೇರಿದ್ದ ಕಾರ್ಯಕರ್ತರು ವಿಜಯೇಂದ್ರ ಆಗಮಿಸುತ್ತಿದ್ದಂತೆ ಪಟಾಕಿ ಹಚ್ಚಿ ಸಂಭ್ರಮಿಸಿದರು. ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಸಿದ್ದಲಿಂಗ ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡರು. ಇದಕ್ಕೂ ಮೊದಲು ಮಠಕ್ಕೆ ಆಗಮಿಸಿದ ವಿಜಯೇಂದ್ರ ಅವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಸಂಸದರಾದ ಜಿ.ಎಸ್.ಬಸವರಾಜು, ಶಾಸಕರಾದ ಸುರೇಶ್ ಗೌಡ, ಎಸ್.ಆರ್.ವಿಶ್ವನಾಥ್, ರಾಮಮೂರ್ತಿ, ಮಾಜಿ ಶಾಸಕ ಪ್ರೀತಂಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ರುದ್ರೇಶ್ ಸೇರಿದಂತೆ ಉಪಸ್ಥಿತರಿದ್ದರು.