Thursday, November 6, 2025
Home Blog Page 1865

ವಿಶ್ವಕಪ್‍ನ ಮತ್ತೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಹಾರ್ದಿಕ್ ಪಾಂಡ್ಯ

ಬೆಂಗಳೂರು, ಅ. 25- ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿರುವ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಕ್ಟೋಬರ್ 19 ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ತಮ್ಮದೇ ಬೌಲಿಂಗ್‍ನಲ್ಲಿಲಿಟನ್ ದಾಸ್ ಹೊಡೆದ ಚೆಂಡನ್ನು ಕಾಲಿನಲ್ಲಿ ತಡೆಯಲು ಹೋದ ಹಾರ್ದಿಕ್ ಪಾಂಡ್ಯ ಪಾದದ ಗಾಯದ ಸಮಸ್ಯೆ ಒಳಗಾಗಿ ಅಂದಿನ ಪಂದ್ಯದಿಂದ ಹೊರಗುಳಿದಿದ್ದರು.

ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಿಂದಲೂ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಸಂಪೂರ್ಣವಾಗಿ ಚೇತರಿಸಿ ಕೊಂಡಿದ್ದು ಅಕ್ಟೋಬರ್ 29 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ 11ಗೆ ಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು.

ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಆದರೆ ಈಗ ತಾನೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ಪಂದ್ಯವು ಸೇರಿದಂತೆ ನವೆಂಬರ್ 2 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸದ್ಯ ಬೆಂಗಳೂರಿನ ಎನ್‍ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾ ಹಾಗೂ ನೆದರ್‍ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಲಭ್ಯರಾಗಲಿದ್ದಾರೆ.

ನಾನು ಧರಿಸದ್ದ ಹುಲಿ ಉಗುರು ಒರಿಜಿನಲ್ ಅಲ್ಲ ; ನಿಖಿಲ್ ಸ್ಪಷ್ಟನೆ

ಬೆಂಗಳೂರು,ಅ.25- ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಪೆಂಡೆಂಟ್ ಅನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು, ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು ಎಂದು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಅವರು ತಿಳಿಸಿದ್ದಾರೆ.

ಭೂಗತ ಪಾತಕಿ ರವಿಪೂಜಾರಿ ಸಹಚರ ಶಾರ್ಪ್ ಶೂಟರ್ ಮುನ್ನಾ ಅರೆಸ್ಟ್

ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಗಂಭೀರತೆ ಬಗ್ಗೆ ಅರಿವಿದೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಯಾರೂ ಪ್ರಸಾರ ಮಾಡಬಾರದು ಎಂದು ಅವರು ವಿನಂತಿಸಿದ್ದಾರೆ.

7 ಜನ್ಮವೆತ್ತಿದರೂ ರಾಮನಗರ ಛಿದ್ರ ಮಾಡಲು ಸಾಧ್ಯವಿಲ್ಲ ; ಎಚ್‍ಡಿಕೆ ಆಕ್ರೋಶ

ಬೆಂಗಳೂರು,ಅ.25- ಈ ಜನ್ಮವಷ್ಟೇ ಅಲ್ಲ, ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಇದನ್ನು ಅರಿತುಕೊಳ್ಳಬೇಕು. ಜನರ ಅನುಕೂಲ, ಅನನುಕೂಲಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಶೀಲಿಸಿ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ತಿಳಿಸಿದ್ದಾರೆ.

ಈಗ ಜಿಲ್ಲೆ ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಇಡೀ ಜಿಲ್ಲೆಯ ಜನ ತಿರುಗಿಬೀಳುತ್ತಾರೆ. ಒಡೆದು ಚೂರುಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ ಎಂದು ಪ್ರಶ್ನಿಸಿದ್ದಾರೆ.

ಈ ದೇಶಕ್ಕೆ ವಿದ್ಯಾವಂತರು, ಬುದ್ದಿವಂತರು ಅಲ್ಲದಿದ್ದರೂ ಪ್ರಜ್ಞಾವಂತರು ಬೇಕು. ನಾನು ಕುಮಾರಸ್ವಾಮಿ ಅವರನ್ನು ಪ್ರಜ್ಞಾವಂತರು ಅಂದುಕೊಂಡಿದ್ದೆ. ಅವರ ತಂದೆಯವರನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ದರ್ಪದ ಮಾತು ಹೇಳಿದ್ದಾರೆ. ವಿದ್ಯೆ, ಬುದ್ಧಿ ಇಲ್ಲದಿದ್ದರೆ ಪ್ರಜ್ಞಾವಂತರು ಹೇಗಾದಾರು ಎನ್ನುವ ಸಾಮಾನ್ಯ ಜ್ಞಾನ ಅವರಿಗಿಲ್ಲ. ಅವರ ಪ್ರಜ್ಞಾವಂತಿಕೆ ಎಂಥಹುದು ಎಂಬುದು ಜನಜನಿತ ಎಂದು ಟೀಕಿಸಿದ್ದಾರೆ.

ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ದುಷ್ಟಪ್ರಜ್ಞ, ಅತಿ ಬುದ್ಧಿವಂತಿಕೆ, ಅಸಾಮಾನ್ಯ ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ನನ್ನ ತಲೆಯಲ್ಲಿ ಏನೋ ಯೋಚನೆ ಇದೆ ಎನ್ನುತ್ತಾರೆ ಡಿಸಿಎಂ. ಇಷ್ಟಕ್ಕೂ ಅವರ ತಲೆಯಲ್ಲಿ ಏನಿದೆ. ಚಿನ್ನದ ಬೆಲೆಯ ಕನಕಪುರದ ಭೂಮಿಗಳನ್ನು ಕೊಳ್ಳೆ ಹೊಡೆದು ಬಿಲ್ಡರುಗಳಿಗೆ ಒಪ್ಪಿಸುವುದೇ ಅಥವಾ ತಾವು ಈಗಾಗಲೇ ಎಗ್ಗಿಲ್ಲದೆ ಬೇಲಿ ಹಾಕಿಕೊಂಡಿರುವ ಬೇನಾಮಿ ಭೂಮಿಗಳಲ್ಲಿ ಕೋಟೆ ಕಟ್ಟಿಕೊಳ್ಳುವುದೇ, ಬಿಡಿಸಿ ಹೇಳಿದರೆ ನಾವು ಕೃತಾರ್ಥರಾಗುತ್ತೇವೆ. ಇವರು ಹೇಳಲ್ಲ, ಜನರೂ ನಂಬಲ್ಲ. ಎಲ್ಲವೂ ನಿಗೂಢ ಎಂದು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ಕೊಪ್ಪಳ, ಗದಗ ಸೇರಿ ಅನೇಕ ಹೊಸ ಜಿಲ್ಲೆಗಳು ರಚನೆ ಆಗಿವೆ. ಅವೆಲ್ಲವನ್ನೂ ಸುಖಾಸುಮ್ಮನೆ ಮಾಡಲಾಯಿತೆ, ಜನಹಿತ ಪರಿಗಣಿಸಿ ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಅಲ್ಲಿ ಜಿಲ್ಲೆಗಳನ್ನು ರಚನೆ ಮಾಡಿದ ಮುಖ್ಯಮಂತ್ರಿಯ ಸ್ವಹಿತ ಇರಲಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಯಾರ ಹಿತ ಅಡಗಿದೆ, ಕನಕಪುರದ ಪ್ರತಿಯೊಬ್ಬರಿಗೂ ಅಸಲಿ ಸತ್ಯ ಗೊತ್ತಿದೆ. ಇರುವ ಶ್ರೀಮಂತಿಕೆ, ಸಂಪತ್ತು ಸಾಲದೆ, ಇನ್ನೆಷ್ಟನ್ನು ಕೂಡಿ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಕನಕಪುರದ ಅಭಿವೃದ್ಧಿ ಈಗ ನೆನಪಾಗಿದೆಯಾ, 1983ಕ್ಕೆ ಮೊದಲು ಇದೇ ಕನಕಪುರ, ಸಾತನೂರು ಹೇಗಿದ್ದವು, ರಾಮಕೃಷ್ಣ ಹೆಗಡೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ, ಅಲ್ಲಿನ ಸ್ಥಿತಿ ಕಂಡು ಕಣ್ಣೀರು ಬಂತು. ಒಂದು ವಿದ್ಯುತ್ ಸಂಪರ್ಕ ಇರಲಿಲ್ಲ, ರಸ್ತೆ, ಚರಂಡಿ ಇರಲಿಲ್ಲ, ಕುಡಿಯಲು ನೀರು ಇರಲಿಲ್ಲ. ಆ ಪರಿಸ್ಥಿತಿಯನ್ನು ದೇವೇಗೌಡರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅಂದು ಲೋಕೋಪಯೋಗಿ, ಬೃಹತ್ ನೀರಾವರಿ ಮಂತ್ರಿಗಳಾಗಿದ್ದ ಅವರು ಕನಕಪುರ, ರಾಮನಗರಕ್ಕೆ ಕಾಯಕಲ್ಪ ನೀಡಿದ್ದರು. ಆ ದುಸ್ಥಿತಿಯನ್ನು ಬದಲಿಸಿದರು ಎಂದು ಹೇಳಿದ್ದಾರೆ.

ಅವರ ಕೆಲಸವನ್ನೇ ನಾನೂ ಮುಂದುವರಿಸಿದೆ. ನೀವೇನು ಮಾಡಿದ್ದೀರಿ ಡಿ.ಕೆ.ಶಿವಕುಮಾರ್‍ರವರೇ? ಬಡವರ ಜಮೀನಿಗೆ ಬೇಲಿ ಹಾಕಿದ್ದು, ಅಡ್ಡ ಬಂದವರ ಜೀವ ತೆಗೆದದ್ದು, ಕಲ್ಲುಬಂಡೆಗಳನ್ನು ಲೂಟಿ ಮಾಡಿದ್ದು, ಕನಕಪುರದಲ್ಲಿ ದಾದಾಗಿರಿ, ಗೂಂಡಾಗಿರಿ ಮಾಡಿದ್ದು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಇನ್ನೊಂದು ಮಾಫಿಯಾ ಕಟ್ಟುವುದಾ, ಇದಾ ನಿಮ್ಮ ತಲೆಯಲ್ಲಿ ಇರುವ ಆಲೋಚನೆ ಎಂದು ಆರೋಪಗಳ ಸುರಿಮಳೆಗೈಯ್ದಿದ್ದಾರೆ.

ನಾಡಪ್ರಭು ಕೆಂಪೇಗೌಡ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ರಾಮನಗರದವರು ಎಂದು ನಿಮಗೆ ಈಗ ಜ್ಞಾನೋದಯ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ಇಂಥ ಮಹಾಪುರುಷರು ಜನ್ಮತಳೆದ, ಅವರು ನಡೆದಾಡಿದ ನೆಲವನ್ನು ರಿಯಲ್ ಎಸ್ಟೇಟ್ ಪಾಪಕುಂಡವನ್ನಾಗಿ ಮಾಡಿದ್ದು ಯಾರಪ್ಪ, ಈ ಪುಣ್ಯಪರುಷರ ಹೆಸರು ಹೇಳುವ ನೈತಿಕತೆ ನಿಮಗೆ ಇದೆಯಾ, ರಾಮದೇವೇರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮಚಂದ್ರ ಪ್ರಭು ನಿಮ್ಮ ದುಷ್ಟ ಹುನ್ನಾರವನ್ನು ಮೆಚ್ಚಾನೆಯೇ ಎಂದು ಪ್ರಶ್ನಿಸಿದ್ದಾರೆ.

ಕಾಳಿ ನದಿಗೆ ಉರುಳಿದ ಕಾರು, 6 ಮಂದಿ ಸಾವು

ಡೆಹ್ರಾಡೂನ್,ಅ.25- ಆದಿ ಕೈಲಾಸನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಕಾರೊಂದು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಲಖನ್ಪುರ ಕಾಳಿ ನದಿಗೆ ಬಿದ್ದು ಆರು ಮಂದಿ ದುರ್ಮರಣ ಹೊಂದಿದ್ದಾರೆ.

ಯಾತ್ರಿಕರು ಆದಿ ಕೈಲಾಸದಿಂದ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದರು, ಕತ್ತಲೆ ಮತ್ತು ಸವಾಲಿನ ಭೂಪ್ರದೇಶದ ಕಾರಣ, ಶವಗಳ ಹೊರತೆಗೆಯುವಿಕೆ ಇನ್ನೂ ಪ್ರಾರಂಭವಾಗಿಲ್ಲ ಎಂದು
ಪಿಥೋರಗಢ್ನ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ್ ಸಿಂಗ್ ತಿಳಿಸಿದ್ದಾರೆ.

ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಕಾರು ಅಪಘಾತ

ಆದಿ ಕೈಲಾಸನ ದರ್ಶನಕ್ಕೆ ತೆರಳಿದ್ದ 6 ಯಾತ್ರಿಕರ ಪೈಕಿ ಇಬ್ಬರು ಬೆಂಗಳೂರಿನವರು, ಇಬ್ಬರು ತೆಲಂಗಾಣದವರು ಮತ್ತು ಇಬ್ಬರು ಉತ್ತರಾಖಂಡದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸ್ಪಂದಿಸಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಘಟನೆ ಸಂಜೆ ವೇಳೆ ಸಂಭವಿಸಿದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಶೋಧ ಕಾರ್ಯ ಆರಂಭವಾಗಲಿದೆ ಎಂದು ಎಸ್ಪಿ ಹೇಳಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ : ಜಾವೆಲಿನ್‍ನಲ್ಲಿ ಭಾರತಕ್ಕೆ ಚಿನ್ನ

ಹ್ಯಾಂಗ್‍ಝೌ, ಅ.25 -ಇಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸುಮಿತ್ ಆಂಟಿಲ್ ಇಂದು ಜಾವೆಲಿನ್ ಥ್ರೋ ಎಫ್64 ಸ್ಪರ್ಧೆಯಲ್ಲಿ 73.29 ಮೀಟರ್‍ಗಳ ದೂರ ಈಟಿ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು.

25ರ ಹರೆಯದ ಸುಮಿತ್ ಈ ವರ್ಷದ ಆರಂಭದಲ್ಲಿ ಪ್ಯಾರಿಸ್‍ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 70.83 ಮೀಟರ್‍ಗಳ ಜಾವೆಲಿನ್‍ಎಸೆದು ಚಿನ್ನದ ಪದಕ ಗೆದ್ದಿದರು ಅದು ವಿಶ್ವ ದಾಖಲೆಯಾಗಿತು, ಈಗ ಮತ್ತಷ್ಟು ದೂರ ಎಸೆದು ದಾಖಲೆಯನ್ನು ಇನ್ನೂ ಉತ್ತಮಗೊಳಿಸಿದ್ದಾರೆ.

ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ಭಾರತದ ಮತ್ತೊಬ್ಬ ಆಟಗಾರ ಪುಷ್ಪೇಂದ್ರ ಸಿಂಗ್ 62.06 ಮೀಟರ್ ಜಾವೆಲಿನ್‍ಎಸೆದು ಕಂಚಿನ ಪದಕ ಗೆದ್ದರು. ಶ್ರೀಲಂಕಾದ ಸಮಿತಾ ಅರಾಚಿ ಕೊಡಿತುವಕ್ಕು ಅವರು 64.09 ಮೀ. ಎಸೆದು ಬೆಳ್ಳಿ ಪಡೆದರು.

ಹ್ಯಾಂಗ್‍ಝೌ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಪ್ರಸ್ತುತ ಭಾರತ 10 ಚಿನ್ನಪದಕ ಗೆದ್ದಿದೆ ಒಟ್ಟಾರೆ ಪದಕಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಬೆಂಗಳೂರು,ಅ.25- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ನಡುವಿನ ಕ್ಷೇತ್ರಗಳ ಹಂಚಿಕೆ ವಿಳಂಬವಾಗುವ ಸಾಧ್ಯತೆಗಳಿವೆ. ದಸರಾ ಮಹೋತ್ಸವ ಮುಗಿದ ಬಳಿಕ ಜೆಡಿಎಸ್ ನಾಯಕರು ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಹಂಚಿಕೆ ವಿಚಾರವನ್ನು ಅಂತಿಮಗೊಳಿಸುವ ಉದ್ದೇಶವಿತ್ತು.

ಪಂಚರಾಜ್ಯ ಚುನಾವಣೆ ಸಿದ್ಧತೆಯಲ್ಲಿ ಬಿಜೆಪಿ ನಾಯಕರು ನಿರತರಾಗಿರುವುದರಿಂದ ಜೆಡಿಎಸ್ ನಾಯಕರೊಂದಿಗೆ ನಡೆಸಬೇಕಿರುವ ಮಾತುಕತೆ ಮತ್ತಷ್ಟು ವಿಳಂಬವಾಗಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದಸರಾ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಕ್ಷೇತ್ರ ಹಂಚಿಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಿದ್ದರು. ಬಿಜೆಪಿ ನಾಯಕರ ಭೇಟಿಗೆ ಇನ್ನೂ ಸಮಯಾವಕಾಶ ನಿಗದಿಯಾಗದಿರುವ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಡುವಿನ ಕ್ಷೇತ್ರ ಹಂಚಿಕೆ ಮತ್ತಷ್ಟು ವಿಳಂಬವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಪಂಚರಾಜ್ಯ ಚುನಾವಣೆಗಳ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರೊಂದಿಗಿನ ಮಾತುಕತೆಗೆ ಮುಹೂರ್ತ ನಿಗದಿಪಡಿಸಿಲ್ಲ. ಯಾವುದೇ ಸಂದರ್ಭದಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆದು ಸೀಟು ಹಂಚಿಕೆಯಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ಚಿಂಥನ-ಮಂಥನ ಸಭೆ ನಡೆಸಿ ಮೈತ್ರಿ ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು. ಅಲ್ಲದೆ, ತಾವು ಒರ್ಜಿನಲ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದು, ಮೈತ್ರಿ ವಿರೋಧವಿದೆ ಎಂದು ಹೇಳಿದ್ದರು. ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿತು.

ಇಬ್ರಾಹಿಂ ಅವರ ಈ ಹೇಳಿಕೆಯ ಬೆನ್ನಲ್ಲೇ ಜೆಡಿಎಸ್ ರಾಜ್ಯಘಟಕವನ್ನು ದೇವೇಗೌಡರು ವಿಸರ್ಜನೆ ಮಾಡುವ ಮೂಲಕ ಇಬ್ರಾಹಿಂ ಅವರಿಗೆ ಅಕಾರ ಇಲ್ಲದಂತೆ ಮಾಡಿದ್ದಾರೆ. ಜೆಡಿಎಸ್‍ನಲ್ಲಿ ನಡೆದ ಈ ರೀತಿಯ ಘಟನೆ ಲೋಕಸಭಾ ಸೀಟು ಹಂಚಿಕೆಗೆ ಹಿನ್ನಡೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ನಾಲ್ಕು ಕ್ಷೇತ್ರಗಳನ್ನು ಮಾತ್ರ ಸ್ಪರ್ಧೆ ಮಾಡಲು ಇಚ್ಛಿಸಿದೆ. ಹಾಸನ, ತುಮಕೂರು, ಮಂಡ್ಯ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಉಳಿದ 24 ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡುವ ಉದ್ದೇಶ ಹೊಂದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿಯವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಎನ್‍ಡಿಎ ಮೈತ್ರಿಕೂಟ ಸೇರುವುದಾಗಿ ಘೋಷಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಲಿವೆ. ಚುನಾವಣೆ ಪ್ರಚಾರವನ್ನು ಒಟ್ಟಾಗಿಯೇ ಮಾಡುವುದಲ್ಲದೆ, ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸುತ್ತೇವೆ. ಚುನಾವಣಾ ಪೂರ್ವ ಕ್ಷೇತ್ರಗಳನ್ನು ಹೊಂದಾಣಿಕೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದರು.

ಸೆಲೆಬ್ರೆಟಿಗಳಿಗೆ ಸಂಕಷ್ಟ ತಂದಿಟ್ಟ ಹುಲಿ ಉಗುರು

ಬೆಂಗಳೂರು,ಅ.25- ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ತೀವ್ರವಾಗಿದ್ದು, ಹುಲಿ, ಜಿಂಕೆ, ಕರಡಿಗಳಂತಹ ಪ್ರಾಣಿಗಳ ಚರ್ಮ ಹಾಗೂ ಇತರ ಅವಶೇಷಗಳ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ.ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸ್ರ್ಪಧಿಯಾಗಿದ್ದ ವರ್ತೂರು ಸಂತೋಷ್ ವಿರುದ್ಧ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಷ್ಠಾನದ ಕುರಿತು ಚರ್ಚೆಗಳು ವ್ಯಾಪಕಗೊಳ್ಳುತ್ತಿದೆ.

ವಿಧಾನಪರಿಷತ್‍ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪಿ.ಆರ್.ರಮೇಶ್ ಅವರು, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್‍ರವರಿಗೆ ದೂರು ನೀಡಿದ್ದು, ಹುಲಿ ಉಗುರಿನ ಡಾಲರ್ ಹೊಂದಿರುವ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಜಾವೇದ್ ಅಖ್ತರ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ದೂರನ್ನು ರವಾನೆ ಮಾಡಿರುವುದಾಗಿ ರಮೇಶ್ ಅವರಿಗೆ ತಿಳಿಸಿದ್ದಾರೆ. ಇದರ ಜೊತೆಯಲ್ಲಿ ನಟರಾದ ದರ್ಶನ್, ನಿಖಿಲ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಗೌರಿಗದ್ದೆಯ ವಿನಯ್ ಗುರೂಜಿ, ತುಮಕೂರು ಜಿಲ್ಲೆಯ ಬಿದನಗೆರೆ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಧರ್ಮದರ್ಶಿ ಧನಂಜಯ ಗುರೂಜಿ ಸೇರಿದಂತೆ ಹಲವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಡಗಳು ಹೆಚ್ಚಾಗುತ್ತಿವೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿಗಳ ಅಂಗಾಂಗ ಮತ್ತು ಅವಶೇಷಗಳ ಮಾರಾಟ, ಬಳಕೆ ಸಂಪೂರ್ಣ ನಿಷಿದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಹಲವಾರು ಮಂದಿ ಅದೃಷ್ಟ ಹಾಗೂ ಶುಭಸೂಚಕ ಎಂಬ ನಂಬಿಕೆಯ ಮೇಲೆ ಹುಲಿ ಉಗುರಿನ ಪದಕಗಳು, ಆನೆಬಾಲದ ಕೂದಲಿನ ಉಂಗುರ ಧರಿಸುವುದು ಸೇರಿದಂತೆ ಹಲವಾರು ಉಲ್ಲಂಘನೆಗಳನ್ನು ಮಾಡುತ್ತಿದ್ದಾರೆ. ಇದು ನಂಬಿಕೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಈವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ವರ್ತೂರು ಸಂತೋಷ್ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮುನ್ನಲೆಗೆ ಬಂದಿದೆ. ಬಿಗ್‍ಬಾಸ್ ಸ್ರ್ಪಧಿಯ ವಿರುದ್ಧ ಕ್ರಮ ಕೈಗೊಂಡಂತೆ ಪ್ರಭಾವಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.

ವನ್ಯಜೀವಿಗಳ ಅಂಗಾಂಗಳನ್ನು ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಸಾವಿರಾರು ಮಂದಿಯನ್ನು ಜೈಲಿಗೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಈ ಪ್ರಕರಣ ಮೇಲ್ನೋಟಕ್ಕೆ ಸಾಧಾರಣ ಎನಿಸಿದರೂ ಒಮ್ಮೆ ದಾಖಲಾದರೆ ಅದರ ಗಂಭೀರತೆ ಬೇರೆಯದಾಗಿರುತ್ತದೆ. ತಪ್ಪಿತಸ್ಥರ ಬಳಿ ಇರುವ ವಸ್ತುಗಳನ್ನು ಜಪ್ತಿ ಮಾಡಬೇಕು. ಅದನ್ನು ಎಫ್‍ಎಸ್‍ಎಲ್ ಪರೀಕ್ಷೆಗೆ ಒಳಪಡಿಸಬೇಕು. ಅದು ಆರೋಪಿಗಳ ಬಳಿ ಬಂದ ರೀತಿ ಹೇಗೆ ಎಂಬುದನ್ನು ಪತ್ತೆ ಹಚ್ಚಬೇಕು. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸುವ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವುದು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಒಳಗೊಂಡಿದೆ.

ನವಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಇಸ್ರೋ ಅಧ್ಯಕ್ಷ ಸೋಮನಾಥ್ ಆತ್ಮಚರಿತ್ರೆ

1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತಂದಿದ್ದು, 2002 ರ ಬಳಿಕ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರು ಹೊಂದಿರುವ ವನ್ಯಜೀವಿಗಳ ಅವಶೇಷಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಮಂದಿ ಇದನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಆ ಬಳಿಕ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಎಲ್ಲಾ ರಾಜ್ಯಸರ್ಕಾರಗಳು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ.

ಹೀಗಾಗಿ ವನ್ಯಜೀವಿಗಳನ್ನು ಬಳಕೆ ಮಾಡುವ ಎಲ್ಲಾ ಸರ್ಕಸ್‍ಗಳು ಮುಚ್ಚಿಹೋಗಿವೆ. ವನ್ಯಜೀವಿಗಳ ಬೇಟೆ ಕೊಲೆಯಷ್ಟೇ ಗಂಭೀರ ಸ್ವರೂಪದ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಪ್ರಭಾವಿ ರಾಜಕಾರಣಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ತೋಟದ ಮನೆಯಲ್ಲಿ ಕೆಲವು ವನ್ಯಜೀವಿಗಳು ಪತ್ತೆಯಾಗಿದ್ದವು. ಈ ಸಂಬಂಧಪಟ್ಟಂತೆ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅನಂತರ ಕನ್ನಡದ ಪ್ರಖ್ಯಾತ ನಟರೊಬ್ಬರ ಫಾರ್ಮ್‍ಹೌಸ್‍ನಲ್ಲಿದ್ದ ವನ್ಯಜೀವಿಗಳನ್ನೂ ಕೂಡ ಸಂರಕ್ಷಿಸಿ ನಟನಿಗೆ ತಿಳುವಳಿಕೆ ನೀಡಲಾಯಿತು.

ವರ್ತೂರು ಸಂತೋಷ್‍ರ ಹುಲಿ ಉಗುರಿನ ಪ್ರಕರಣ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕುರಿತು ಚರ್ಚೆಗೆ ಹೊಸ ವ್ಯಾಖ್ಯಾನ ನೀಡಿದೆ. ಈ ಹಿಂದಿನಿಂದಲೂ ವಂಶಪಾರಂಪರ್ಯವಾಗಿ ಬಳಕೆಯಲ್ಲಿರುವ ಅವಶೇಷಗಳ ಕುರಿತು ಪ್ರಶ್ನೆಗಳು ಎದ್ದಿವೆ.

ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ಗೂಗಲ್ ಲೈವ್ ಬಂದ್

ಪ್ರಸ್ತುತ ಸನ್ನಿವೇಶದಲ್ಲಿ ವನ್ಯಜೀವಿಗಳ ಅವಶೇಷಗಳನ್ನು ಹೊಂದಿರುವವರಿಗೆ ಆತಂಕ ಶುರುವಾಗಿದ್ದು, ಅರಣ್ಯಾಧಿಕಾರಿಗಳ ಹಿಡಿತದಿಂದ ಪಾರಾಗಲು ವಕೀಲರ ಮೊರೆ ಹೋಗುತ್ತಿರುವುದು ಕಂಡುಬಂದಿದೆ.

ಭೂಗತ ಪಾತಕಿ ರವಿಪೂಜಾರಿ ಸಹಚರ ಶಾರ್ಪ್ ಶೂಟರ್ ಮುನ್ನಾ ಅರೆಸ್ಟ್

ಮಂಗಳೂರು, ಅ.25- ಪೊಲೀಸರಿಗೆ ಬೇಕಾಗಿದ್ದ ಖರತ್ನಾಕ್ ಶಾರ್ಪ್ ಶೂಟರ್ ಮಹಮ್ಮದ್ ಹನೀಫ್ ಅಲಿಯಾಸ್ ಮುನ್ನನನ್ನು ಮಂಗಳೂರಿನ ಕೋಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಂಜೇಶ್ವರ ಪೈವಳಿಕೆ ಗ್ರಾಮದ ಮುನ್ನಾ ಮೇಲೆ ಹಲವಾರು ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಈತ ಭೂಗತ ಪಾತಕಿ ರವಿ ಪೂಜಾರಿಯ ಸಹಚರ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆ, ಬೆದರಿಕೆ, ಶೂಟೌಟ್ ಸೇರಿದಂತೆ ಹಲವಾರು ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಈತ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ.

ನವಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಇಸ್ರೋ ಅಧ್ಯಕ್ಷ ಸೋಮನಾಥ್ ಆತ್ಮಚರಿತ್ರೆ

ಕಳೆದ 2010-13ರ ನಡುವೆ ಕಾಸರಗೋಡಿನ ಬೇವಿಂಜಾದಲ್ಲಿ ಗುತ್ತಿಗೆದಾರನನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಮಂಜೇಶ್ವರದಲ್ಲಿ ಹಲವಾರು ದರೋಡೆ ಹಾಗೂ ಸುಲಿಗೆ ಪ್ರಕರಣ, ಶೂಟೌಟ್‍ಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಕೇರಳದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕೋಣಾಜಿ ಪೊಲೀಸರ ವಿಶೇಷ ತಂಡ ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ಲಖನೌ,ಅ.25- ರಾಜ್ಯ ಸರ್ಕಾರದಿಂದ ಅನುಮತಿ ಇಲ್ಲವೇ, ನೋಂದಣಿ ಮಾಡಿಸಿಕೊಳ್ಳದೆ ಕಾರ್ಯಾಚರಣೆ ಮಾಡುತ್ತಿರುವ ಮದರಸಾಗಳ ವಿರುದ್ಧ ಕಾನೂನು ಸಮರ ಸಾರಿರುವ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದ್ದು, ದಿನಕ್ಕೆ 10,000 ರೂ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿ ಮೂಲ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ 10ಕ್ಕೂ ಹೆಚ್ಚು ಮದರಸಾಗಳಿಗೆ ಮೂಲ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಸುಮಾರು 24,000 ಮದರಸಾಗಳಿವೆ. ಅವುಗಳಲ್ಲಿ 16,000 ಮದರಸಾಗಳು ಮಾನ್ಯತೆ ಪಡೆದಿದ್ದು, 8,000 ಮದರಸಾಗಳು ಮಾನ್ಯತೆ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಮದರಸಾಗಳಿಗೆ ವಿದೇಶಿ ಹಣ ತಲುಪುತ್ತಿರುವ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ ಬೆನ್ನಲ್ಲೇ ಈ ಹೊಸ ಆದೇಶ ಹೊರಬಿದ್ದಿದೆ. ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯಲ್ಲಿರುವ ಮದರಸಾಗಳು ತನಿಖಾ ವ್ಯಾಪ್ತಿಯಲ್ಲಿವೆ. ಈ ಜಿಲ್ಲೆಯಲ್ಲಿ ನೂರಾರು ಮದರಸಾಗಳು ಸರ್ಕಾರದ ಅನುಮತಿಯಿಲ್ಲದೆ ಕಾರ್ಯಾಚರಣೆ ಮಾಡುತ್ತಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮದರಸಾಗಳ ಮ್ಯಾನೇಜರ್ಗಳಿಗೆ ನೋಟಿಸ್ ಹೊರಡಿಸಲಾಗಿದೆ.

ನೋಟಿಸ್ ನೀಡಿರುವ ಮದರಸಾಗಳಿಗೆ ಆದೇಶ ಬಂದ ಮೂರು ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮದರಸಾಗಳು ಮಾನ್ಯತೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ದಿನಕ್ಕೆ 10,000 ರೂ. ದಂಡ ವಿಧಿಸಲಾಗುವುದು ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

ಇಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ಮದರಸಾಗಳು ಜಿಲ್ಲೆಯಲ್ಲಿ ನೋಂದಣಿ ಅಥವಾ ಮಾನ್ಯತೆ ಹೊಂದಿಲ್ಲ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ತಮ್ಮ ಕಚೇರಿಗೆ ಮಾಹಿತಿ ನೀಡಿದೆ ಎಂದು ಮುಜಾಫರ್‍ನಗರ ಮೂಲ ಶಿಕ್ಷಾ ಅಧಿಕಾರಿ ಶುಭಂ ಶುಕ್ಲಾ ಹೇಳಿದರು.

ಮದರಸಾಗಳಿಗೆ ನೀಡಿದ ನೋಟಿಸ್‍ಗೆ ಸಂಬಂಧಿಸಿದಂತೆ ಭಾರತೀಯ ಮುಸ್ಲಿಂ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್, ಶಿಕ್ಷಣ ಇಲಾಖೆಯ ಆದೇಶವನ್ನು ಕಾನೂನುಬಾಹಿರ ಎಂದು ಕರೆದಿದೆ. ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ 10,000 ರೂ. ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ.

ಬಿಜೆಪಿ ಯೋಜನೆಗಳು ರಾಮ ರಾಜ್ಯದ ಅಡಿಪಾಯದ ಮೇಲೆ ರೂಪುಗೊಂಡಿವೆ ; ಯೋಗಿ

ಲಕ್ನೋದ ಹಿರಿಯ ಅಧಿಕಾರಿಯ ಪ್ರಕಾರ, ರಾಜ್ಯದ ಸುಮಾರು 4,000 ಮದರಸಾಗಳು ವಿದೇಶಿ ಹಣವನ್ನು ಸ್ವೀಕರಿಸುವ ಸ್ಕ್ಯಾಧಿನರ್‍ಅಡಿಯಲ್ಲಿವೆ. ಈ 4,000 ಮದರಸಾಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಅವುಗಳಲ್ಲಿ ಹೆಚ್ಚಿನವು ಇಂಡೋ-ನೇಪಾಳ ಗಡಿಯಲ್ಲಿ ನಡೆಯುತ್ತಿವೆ. ಅವುಗಳು ವಿದೇಶದಿಂದ ಹಣವನ್ನು ಪಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮದರಸಾಗಳು ಪಡೆದ ಹಣವನ್ನು ಭಯೋತ್ಪಾದನೆ ಅಥವಾ ಬಲವಂತದ ಧಾರ್ಮಿಕ ಮತಾಂತರದಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ಎಸ್ ಐಟಿ ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮದರಸಾ ಸಂಬಂಧಿತ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಶಿಕ್ಷಣ ಇಲಾಖೆಗೆ ಯಾವುದೇ ಹಕ್ಕಿಲ್ಲ ಎಂದು ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಇಫ್ತಿಕರ್ ಅಹ್ಮದ್ ಜಾವೇದ್ ಹೇಳಿದ್ದಾರೆ.

ಅಲ್ಪಸಂಖ್ಯಾತ ಇಲಾಖೆಗೆ ಮಾತ್ರ ಇದರ ಅಧಿಕಾರವಿದೆ ಎಂದಿರುವ ಜಾವೇದ್, ಮದರಸಾಗಳು ಸಾಮಾನ್ಯ ಶಾಲೆಗಳಂತಲ್ಲ. ಆದ್ದರಿಂದ, ಶಾಲೆಗಳ ನಿಯಮಗಳು, ದಂಡ ಇತ್ಯಾದಿಗಳು ಮದರಸಾಗಳಿಗೆ ಅನ್ವಯಿಸುವುದಿಲ್ಲ. 1995ರಲ್ಲಿ ಶಾಲೆಗಳ ನಿಯಮಗಳು ಮತ್ತು ನಿಬಂಧನೆಗಳಿಂದ ಮದರಸಾಗಳನ್ನು ಪ್ರತ್ಯೇಕಿಸಲಾಯಿತು ಎಂದು ಇಫ್ತಿಕಾರ್ ಅಹ್ಮದ್ ಜಾವೇದ್ ಸ್ಪಷ್ಟಪಡಿಸಿದ್ದಾರೆ.

ಕೆಲವು ವಿಭಾಗಗಳನ್ನು ಗುರಿಯಾಗಿಸಿಕೊಂಡು ಮುಜಾಫರ್‍ನಗರದ ಮದರಸಾಗಳಿಗೆ ನೋಟಿಸ್‍ಗಳನ್ನು ನೀಡಲಾಗಿದೆ ಎಂದು ಜಮಿಯತ್ ಉಲೇಮಾ-ಇ-ಹಿಂದ್ ಉತ್ತರ ಪ್ರದೇಶದ ಕಾರ್ಯದರ್ಶಿ ಖಾರಿ ಜಾರ್ಕಿ ಹುಸೇನ್ ಆರೋಪಿಸಿದ್ದಾರೆ. ಮೂರರಿಂದ ಐದು ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ತಪ್ಪಿದಲ್ಲಿ ದಿನಕ್ಕೆ 10,000 ರೂಪಾಯಿ ದಂಡ ತೆರಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಲು ಹೇಗೆ ಸಾಧ್ಯ ಎಂದು ಖಾರಿ ಜಾರ್ಕಿ ಪ್ರಶ್ನಿಸಿದ್ದಾರೆ.

ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಕಾರು ಅಪಘಾತ

ಡೆಹ್ರಾಡೂನ್,ಅ.25 -ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಕಾರು ಮಂಗಳವಾರ ತಡರಾತ್ರಿ ಅಪಘಾತಕ್ಕೀಡಾಗಿದೆ. ರಾವತ್ ಅವರು ಹಲ್ದ್ವಾನಿಯಿಂದ ಉಧಮ್ ಸಿಂಗ್ ನಗರದ ಕಾಶಿಪುರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ಪ್ರಾಥಮಿಕ ತಪಾಸಣೆ ಮತ್ತು ಚಿಕಿತ್ಸೆಯ ನಂತರ ರಾವತ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಲ್ದ್ವಾನಿಯಿಂದ ಕಾಶಿಪುರ್‍ಗೆ ಪ್ರಯಾಣಿಸುವಾಗ, ನನ್ನ ಕಾರು ಬಾಜ್ಪುರದಲ್ಲಿ ಡಿವೈಡರ್‍ಗೆ ಡಿಕ್ಕಿ ಹೊಡೆಯಿತು. ಇದರಿಂದ ನನಗೆ ಸಣ್ಣ ಪ್ರಮಾಣದ ಗಾಯಾಗಳಾಗಿದ್ದು, ನಾನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡ ಬಳಿಕ ವೈದ್ಯರು ಎಲ್ಲವನ್ನೂ ಖಚಿತಪಡಿಸಿ ನನ್ನನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರೀಶ್ ರಾವತ್ ಬರೆದಿದ್ದಾರೆ.

ಬಿಜೆಪಿ ಯೋಜನೆಗಳು ರಾಮ ರಾಜ್ಯದ ಅಡಿಪಾಯದ ಮೇಲೆ ರೂಪುಗೊಂಡಿವೆ ; ಯೋಗಿ

ನನ್ನ ಅಪಘಾತದ ಬಗ್ಗೆ ಸಾಮಾಜಿಕ ಮಾಧ್ಯಮದ ಪೋಸ್ಟ್ಗ್‍ಳನ್ನು ನೋಡಿದ ನಂತರ ಕೆಲವರು ಕಳವಳ ವ್ಯಕ್ತಪಡಿಸಬಹುದು. ಚಿಂತಿಸಬೇಕಾಗಿಲ್ಲ, ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಮತ್ತು ನನ್ನ ಸಹವರ್ತಿಗಳು ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಕ್ಸ್‍ನಲ್ಲಿ ಬರೆದಿದ್ದಾರೆ.