Friday, November 7, 2025
Home Blog Page 55

“ನನ್ನ ಮಗನಿಗೊಂದು ಹೆಣ್ಣು ಹುಡುಕಿಕೊಡಿ” : ಪೊಲೀಸರ ಬಳಿ ತಾಯಿ ಅಳಲು

ತುಮಕೂರು, ಅ.10- ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಬಂದ ಪೊಲೀಸರಿಗೆ ಸಮಸ್ಯೆ ಏನಿಲ್ಲ ನನ್ನ ಮಗನಿಗೆ ಒಂದು ಹೆಣ್ಣು ಹುಡುಕಿಕೊಡಿ ಎಂದು ಅಮಾಯಕ ತಾಯಿಯೊಬ್ಬರು ಕೇಳಿರುವ ಹಾಸ್ಯ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.ತಾಯಿ ಮಾತಿನಿಂದ ತಬ್ಬಿಬ್ಬಾದ ಪೊಲೀಸರು ಆಯ್ತಮಾ… ನಮ ದೊಡ್ಡ ಸಾಹೇಬರಿಗೆ ಹೇಳಿ ಹೆಣ್ಣು ಹುಡುಕುವ ಪ್ರಯತ್ನ ಮಾಡುವ ಭರವಸೆ ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಮನೆ ಮನೆ ಪೊಲೀಸ್‌‍ ಎಂಬ ವಿನೂತನ ಕಾರ್ಯಕ್ರಮ ಹಮಿಕೊಂಡಿತ್ತು.

ಈ ಅಭಿಯಾನದಡಿ ಆಯಾ ಠಾಣೆ ವ್ಯಾಪ್ತಿಯ ಪೊಲೀಸರು ಊರಿನ ಮನೆ ಮನೆಗೆ ಹೋಗಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಿಕೊಡುವಂತೆ ಸೂಚಿಸಲಾಗಿತ್ತು. ಅದರಂತೆ ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಪೊಲೀಸರು ಮನೆ ಮನೆಗೆ ಹೋಗಿ ಸಮಸ್ಯೆ ಆಲಿಸುತ್ತ ಅದೇ ಗ್ರಾಮದ ಅಜ್ಜಿಯೊಬ್ಬರ ಮನೆಗೆ ಬಂದರು.

ಮನೆಯಲ್ಲಿ ಒಂಟಿಯಾಗಿದ್ದ ಅಜ್ಜಿಯನ್ನು… ಅಮ ಏನಾದರೂ ಸಮಸ್ಯೆ ಇದೆಯಾ.. ಬೀದಿ ದೀಪ ಸರಿಯಾಗಿದೆಯಾ ಎಂದೆಲ್ಲಾ ಪ್ರಶ್ನೆ ಕೇಳಿದರು. ಆಗ ಇಲ್ಲೇನೂ ಸಮಸ್ಯೆ ಇಲ್ಲ. ಆದರೆ, ತುಂಬಾ ದಿನದಿಂದ ನನ್ನ ಮಗನಿಗೆ ಹೆಣ್ಣು ಸಿಗುತ್ತಿಲ್ಲ. ಸಾಧ್ಯವಾದರೆ ಅವನಿಗೊಂದು ಹೆಣ್ಣು ಹುಡುಕಿಕೊಡಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.

ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂದು ತಿಳಿಯದೆ ತಬ್ಬಿಬ್ಬಾದ ಪೊಲೀಸರು ನಮ ದೊಡ್ಡ ಸಾಹೇಬರಿಗೆ ಹೇಳಿ ಒಂದು ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅಜ್ಜಿ ಮತ್ತು ಪೊಲೀಸರು ನಡೆಸುವ ಈ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.ಕೆಲವು ನೆಟ್ಟಿಗರು ಪಾಪ ಯಾರಾದರೂ ಆ ತಾಯಿಯ ಮಗನಿಗೆ ಹೆಣ್ಣು ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಪತ್ರಕರ್ತರ ಸೋಗಿನಲ್ಲಿ ಶ್ರೀಗಂಧ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರ ಬಂಧನ

ಚಿಕ್ಕಮಗಳೂರು,ಅ.10- ಪ್ರೆಸ್‌‍ ನಾಮಫಲಕ ಹೊಂದಿದ್ದ ಬೈಕ್‌ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ನಕಲಿ ಪತ್ರಕರ್ತ ಸೇರಿ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, 15 ಸಾವಿರ ರೂ. ಮೌಲ್ಯದ 1.129 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.ಎಚ್‌.ಆರ್‌.ಮನ್ಸೂರ್‌ (48) ಹಾಗೂ ಹ್ಯಾಂಡ್‌ ಪೋಸ್ಟ್‌ ನಿವಾಸಿ ಎಂ.ಕೆ.ಯೂಸೂಫ್‌ ಎಂಬುವವರನ್ನು ಬಂಧಿತ ಆರೋಪಿಗಳು.

ಹಂಡುಗುಳಿ ಸಮೀಪದ ನವಗ್ರಾಮದ ಬಳಿ ಬೈಕ್‌ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ಬೈಕನ್ನು ತಡೆದು ಪರಿಶೀಲಿಸಿದಾಗ ಶ್ರೀಗಂಧದ 8 ತುಂಡುಗಳು ಪತ್ತೆಯಾಗಿವೆೆ. ಈ ವೇಳೆ ಆರೋಪಿಗಳಿಬ್ಬರು ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ನಕಲಿ ಪತ್ರಕರ್ತ: ಶ್ರೀಗಂಧ ಸಾಗಿಸಿ ಬಂಧನಕೊಳ್ಳಗಾಗಿರುವ ಆರೋಪಿ ಎಚ್‌.ಆರ್‌.ಮನ್ಸೂರ್‌ ಎಂಬಾತ ಹಾಸನದ ಸ್ಥಳಿಯ ಪತ್ರಿಕೆಯೊಂದರ ವರದಿಗಾರನೆಂದು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸುತ್ತಿದ್ದ ಆರೋಪಗಳು ಕೇಳಿ ಬಂದಿದ್ದವು.ಪತ್ರಕರ್ತನಲ್ಲದಿದ್ದರೂ ತಾಲೂಕು ಪತ್ರಕರ್ತರ ಸಂಘದಲ್ಲಿ ಗುರುತಿಸಿಕೊಂಡಿದ್ದ, ಆತನ ದಂಧೆಯ ಬಗ್ಗೆ ತಿಳಿದುಕೊಂಡ ಪತ್ರಕರ್ತರ ಸಂಘದ ಪ್ರತಿನಿಧಿಗಳು ಆತನನ್ನು ಕಳೆದವಾರ ಸಂಘದಿಂದ ಹೊರ ಹಾಕಿದ್ದರು.

ಆತನ ಕಾರು ಮತ್ತು ಬೈಕ್‌ಗೆ ಪ್ರೆಸ್‌‍ ಎಂದು ಬರೆಸಿಕೊಂಡಿದ್ದ ಅದೇ ಬೈಕ್‌ನಲ್ಲಿ ಶ್ರೀಗಂಧವನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಿ.ಮಂಜುನಾಥ್‌, ಡಿಆರ್‌ ಎಫ್‌ಓ ಅಶ್ವಥ್‌, ಸಿಬ್ಬಂದಿ ಜೆ.ಜಿ.ಉಮೇಶ್‌, ಎ.ಎಸ್‌‍.ಸುರೇಶ್‌, ಸುಮಂತ್‌ ನವರಾಜ್‌ ಇದ್ದರು.

ಇಂದಿನಿಂದ ಹಾಸನಾಂಬೆ ದರ್ಶನ ಆರಂಭ, ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮ

ಬೆಂಗಳೂರು, ಅ.10- ನಾಡಿನಾದ್ಯಂತ ಹೆಚ್ಚು ಪ್ರಖ್ಯಾತಿ ಪಡೆದಿರುವ ಹಾಸನಾಂಬೆ ದೇವಸ್ಥಾನದ ಬಾಗಿಲು ಇಂದಿನಿಂದ ತೆರೆದಿದ್ದು, ಅ. 22ರ ಸಂಜೆ 7 ಗಂಟೆವರೆಗೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ನಾನಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹಾಸನದಲ್ಲೇ ಮೊಕ್ಕಂ ಹೂಡಿದ್ದು, ಇಂದು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ಎಲ್ಲಾ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರು. ಸರದಿ ಸಾಲಿನಲ್ಲಿ ನಿಲ್ಲುವವರಿಗಾಗಿ ಕಲ್ಪಿಸಿರುವ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶ್ರಾಂತಿ ಸೇರಿ ಅಗತ್ಯ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಮಾಹಿತಿಗಳನ್ನು ಪಡೆದುಕೊಂಡರು. ಶೌಚಾಲಯ, ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಸ್ತ್ರೀ ಶಕ್ತಿ ಸ್ವಸಹಾಯ, ಸಂಘಗಳ ಮಾರಾಟ ಮಳಿಗೆ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಖುದ್ದು ವೀಕ್ಷಿಸಿದರು.

ಸಂಸದ ಶ್ರೇಯಸ್‌‍ ಪಟೇಲ್‌, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್‌‍ಪಿ ಮೊಹಮದ್‌ ಸುಚೇತ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಜಿಲ್ಲೆಯ ಜನರಿಗಾಗಿ ದೇವಸ್ಥಾನದ ಆವರಣದಲ್ಲಿ ಬೇರೆ ಬೇರೆ ವೇದಿಕೆಗಳನ್ನು ನಿರ್ಮಿಸಿ, ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಹಾಗೂ ಉನ್ನತಾಧಿಕಾರಿಗಳು ಸೇರಿದಂತೆ ಗಣ್ಯರು ನೇರವಾಗಿ ದೇವಸ್ಥಾನಕ್ಕೆ ಬರಬಾರದು, ಪ್ರವಾಸಿ ಮಂದಿರದಿಂದ ದೇವಸ್ಥಾನಕ್ಕೆ ಗಣ್ಯರನ್ನು ಕರೆ ತರಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ದೇವಸ್ಥಾನಕ್ಕೆ ಯಾವತ್ತು ಭೇಟಿ ನೀಡಲು ಬಯಸುತ್ತಾರೆ ಎಂದು ಗಣ್ಯರು ತಿಳಿಸಬೇಕು. ನಿಗದಿತ ಸಮಯಕ್ಕೆ ಒಂದು ಗಂಟೆ ಮೊದಲು ಹಾಸನದ ಪ್ರವಾಸಿ ಮಂದಿರಕ್ಕೆ ಬರಬೇಕು. ಅಲ್ಲಿಂದ ಐಷರಾಮಿ ವಾಹನದಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಗಣ್ಯರನ್ನು ಗೌರವಯುತವಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಹೆಚ್ಚು ಜನ ಸೇರಿದ ಕಡೆ ಹಲವಾರು ದುರ್ಘಟನೆಗಳಾದ ಉದಾಹರಣೆಗಳಿವೆ. ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ಕಡೆಗಳಲ್ಲಿ ಕಾಲ್ತುಳಿತಗಳಾಗಿವೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು. ದೇವಸ್ಥಾನ ಭೇಟಿಗಾಗಿ ಗಣ್ಯರಿಗೆ ರೂಪಿಸಿರುವ ವ್ಯವಸ್ಥೆಗಳನ್ನು ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಒಂದಿಬ್ಬರು ಆಕ್ಷೇಪಿಸಿರಬಹುದು, ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗಣ್ಯರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಿದರೆ, ಜನ ಸಾಮಾನ್ಯರಿಂದ ಆಕ್ಷೇಪಗಳು ವ್ಯಕ್ತವಾಗುತ್ತವೆ. ಈ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಹೊಸ ವ್ಯವಸ್ಥೆಗೆ ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲ ಬೆಂಬಲ ನೀಡಿದ್ದಾರೆ ಎಂದರು. ಇಂದು ಧರ್ಮದೇವಿ ದರ್ಶನಕ್ಕೆ 12 ಸಾವಿರ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬೆಳಗಿನ ಜಾವದ ವೇಳೆಗಾಗಲೇ 10 ಸಾವಿರ ಜನ ದರ್ಶನ ಪಡೆದಿದ್ದರು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನ ದರ್ಶನ ಪಡೆಯುವ ಸಾಧ್ಯತೆಯಿದೆ. ಹಿಂದಿನ ಅನುಭವಗಳನ್ನು ಆಧರಿಸಿ, ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈವರೆಗೂ ಎಲ್ಲವೂ ಸುರಕ್ಷಿತವಾಗಿದೆ.

ಗಣ್ಯರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಪಾಸ್‌‍ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಶೇ. 95ರಷ್ಟು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ನಾಳೆ, ಮತ್ತು ನಾಡಿದ್ದು ಹೆಚ್ಚು ಜನ ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಸವಾಲಿನ ಸನ್ನಿವೇಶಗಳಿವೆ. ದೇವಿ ದರ್ಶನಕ್ಕಾಗಿ ಯಾರೂ ಹೆಚ್ಚು ಹೊತ್ತು ನಿಲ್ಲಬಾರದು, ದೇವರನ್ನು ನೋಡಿ ಮುಂದೆ ಹೋಗುತ್ತಿರಬೇಕು. ನಿಮಿಷಕ್ಕೆ 60ಕ್ಕಿಂತ ಹೆಚ್ಚಿನ ಜನರ ದರ್ಶನವಾಗಬೇಕು. ಒಂದು ಸೆಕೆಂಡ್‌ ನಿಂತರೂ ಸಾಕಷ್ಟು ಮಂದಿಗೆ ತೊಂದರೆಯಾಗಲಿದೆ. ಹೀಗಾಗಿ ಜನರನ್ನು ಬೇಗ ಬೇಗ ಕಳುಹಿಸಲು ಸೂಚಿಸಲಾಗಿದೆ ಎಂದರು.

ದೇವರ ದರ್ಶನಕ್ಕಾಗಿ ಇಂದು ಸಂಜೆ 4 ಗಂಟೆಗೆ ದೇವಸ್ಥಾನ ಪ್ರವೇಶವನ್ನು ಸ್ಥಗಿತಗೊಳಿಸಲಾಗುವುದು. ದೇವಸ್ಥಾನದ ಒಳಗಿರುವವರಿಗೆ ಸಂಜೆ 7 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರತಿದಿನ ಮಧ್ಯಾಹ್ನ 2 ರಿಂದ 3.30ರ ವರೆಗೆ ಹಾಗೂ ರಾತ್ರಿ 2 ರಿಂದ 5 ಗಂಟೆಯವರೆಗೂ ದೇವಿಯ ಅಲಂಕಾರ ಹಾಗೂ ನೈವೇದ್ಯದ ಕಾರಣಕ್ಕೆ ದರ್ಶನದ ಅವಕಾಶವನ್ನು ನಿಲ್ಲಿಸಲಾಗುವುದು. ಉಳಿದಂತೆ ನಿರಂತರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ತನ್ನಿಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ, ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ

ಬೆಂಗಳೂರು,ಅ.10- ಇಬ್ಬರು ಕರುಳ ಕುಡಿಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಗುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಭುವನೇಶ್ವರಿ ನಗರದ 8ನೇ ಮುಖ್ಯ ರಸ್ತೆ, 4ನೇ ಅಡ್ಡ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದ ವಿಜಯಲಕ್ಷ್ಮಿ (27) ಎಂಬುವವರೇ ತನ್ನ ಮಗಳು ಬೃಂದಾ (4) ಹಾಗೂ ಒಂದೂವರೆ ವರ್ಷದ ಮಗ ಭುವನ್‌ ನನ್ನು ಕೊಂದು ಆತಹತ್ಯೆ ಮಾಡಿಕೊಂಡವರು.

ಮೂಲತಃ ರಾಯಚೂರು ಜಿಲ್ಲೆ ಮಸ್ಕಿಯವರಾದ ರಮೇಶ್‌ ಅವರು ಸಂಬಂಧಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದು, ನಗರಕ್ಕೆ ಬಂದು ಭುವನೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದು, ಇವರ ಜೊತೆ ರಮೇಶ್‌ ಅವರ ಚಿಕ್ಕಮ ನೆಲೆಸಿದ್ದು ಅವರೂ ಸಹ ಕೆಲಸಕ್ಕೆ ಹೋಗುತ್ತಿದ್ದರು.

ರಮೇಶ್‌ ಅವರು ಮಾಲ್‌ವೊಂದರಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿದ್ದು, ಕೆಲಸದ ನಿಮಿತ್ತ ಊರಿಗೆ ಹೋಗಿದ್ದರು.ನಿನ್ನೆ ರಮೇಶ್‌ ಅವರ ಚಿಕ್ಕಮ ಎಂದಿನಂತೆ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ವಿಜಯಲಕ್ಷ್ಮಿ ಅವರು ಇಬ್ಬರು ಮಕ್ಕಳಿಗೆ ವೇಲ್‌ನಿಂದ ಕುತ್ತಿಗೆ ಬಿಗಿದು ನೇಣುಹಾಕಿ ಕೊಂದು ನಂತರ ಸೀರೆಯಿಂದ ಆಕೆಯೂ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.

ಸಂಜೆ ಕೆಲಸ ಮುಗಿಸಿಕೊಂಡು ರಮೇಶ್‌ ಚಿಕ್ಕಮ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಇವರ ಮನೆಯಿಂದ ಕೂಗಾಟ-ಕಿರುಚಾಟ ಕೇಳಿ ನೆರೆಹೊರೆಯವರು ಬಂದು ನೋಡಿದಾಗ ಮಕ್ಕಳು ಹಾಗೂ ತಾಯಿ ಮೃತಪಟ್ಟಿರುವುದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೂವರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.ಪತ್ನಿ ಮತ್ತು ಮಕ್ಕಳು ಮೃತಪಟ್ಟಿರುವ ಸುದ್ದಿ ತಿಳಿದು ಇಂದು ಬೆಳಗ್ಗೆ ಮಸ್ಕಿಯಿಂದ ರಮೇಶ್‌ ವಾಪಸ್‌‍ ಆಗಿದ್ದಾನೆ. ಈ ಘಟನೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಜಯಲಕ್ಷ್ಮಿ ಅವರ ಕುಟುಂಬದ ಪ್ರಕಾರ ರಮೇಶ್‌ ಬೇರೆ ಮದುವೆ ಮಾಡಿಕೊಳ್ಳುತ್ತೇನೆಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.

ವಿಜಯಲಕ್ಷ್ಮಿ ಅವರ ಚಿಕ್ಕಪ್ಪ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.ಮನೆಯಲ್ಲಿ ಸದ್ಯಕ್ಕೆ ಯಾವುದೇ ಡೆತ್‌ನೋಟ್‌ ಸಿಕ್ಕಿಲ್ಲ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಪಿಟಿಐ ಕಚೇರಿಗೆ ಬಾಂಬ್‌ ಬೆದರಿಕೆ

ಚೆನ್ನೈ,ಅ.10- ಇಲ್ಲಿನ ಪಿಟಿಐ ಕಚೇರಿಗೆ ಇಂದು ಬೆಳಿಗ್ಗೆ ಬಾಂಬ್‌ ಬೆದರಿಕೆ ಬಂದಿದೆ ಪ್ರಧಾನ ಸುದ್ದಿ ಸಂಸ್ಥೆಯ ಕೋಡಂಬಕ್ಕಂ ಕಚೇರಿ ಯಲ್ಲಿ ತಪಾಸಣೆ ನಡೆಸಿದ ಪೊಲೀಸರು ಇದು ಕುಚೋದ್ಯದ ಕೃತ್ಯ ಎಂದು ತಿಳಿಸಿದ್ದಾರೆ.

ಬೆದರಿಕೆಯ ಮೂಲವನ್ನು ಬಹಿರಂಗಪಡಿಸದೆ, ಪೊಲೀಸ್‌‍ ತಂಡ ಕಚೇರಿಗೆ ಆಗಮಿಸಿ ಅಲ್ಲಿದ್ದ ಸಿಬ್ಬಂದಿಯನ್ನು ಸ್ಥಳಾಂತರಿಸಿತು. ಆವರಣದಲ್ಲಿ ಬಾಂಬ್‌ ಪರಿಶೀಲನೆ ನಡೆಸಿತ್ತು. ಸುದ್ದಿ ಸಂಸ್ಥೆಗೆ ಬಾಂಬ್‌ ಬೆದರಿಕೆಯಿಂದ ಅಕ್ಕ ಪಕ್ಕದ ಸಂಸ್ಥೆ ಸಿಬ್ಬಂಧಿ ಆತಂಕಗೊಂಡರು.

ಆಪ್ತರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ, ಗ್ಯಾರಂಟಿ ಸರ್ಕಾರದಲ್ಲಿ ಗಲಿಬಿಲಿ

ಬೆಂಗಳೂರು, ಅ.10- ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರ ಜೊತೆ ನಿನ್ನೆ ರಾತ್ರಿ ಪ್ರತ್ಯೇಕ ಸಭೆ ನಡೆಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ನವೆಂಬರ್‌ ಕ್ರಾಂತಿಯ ಬಗ್ಗೆ ಅಲ್ಲಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಪ್ರತ್ಯೇಕ ಸಭೆಗಳ ಸಂಖ್ಯೆ ಹೆಚ್ಚಾಗುತ್ತಿದೆ.

ನಿನ್ನೆ ಬೆಳಗ್ಗೆ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ, ಸತೀಶ್‌ಜಾರಕಿಹೊಳಿ ಮತ್ತಿತರರು ಪ್ರತ್ಯೇಕ ಸಭೆ ನಡೆಸಿದ್ದರು.

ರಾತ್ರಿ ಮುಖ್ಯಮಂತ್ರಿಯವರು ಆಪ್ತ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸೋಮವಾರ ಎಲ್ಲಾ ಸಚಿವರನ್ನೂ ಔತಣ ಕೂಟದೊಂದಿಗೆ ಚರ್ಚೆ ನಡೆಸಲು ಆಹ್ವಾನಿಸಿದ್ದಾರೆ.
ನಿನ್ನೆ ಬೆಳಗ್ಗೆ ನಡೆದ ತ್ರಿಮೂರ್ತಿ ಸಚಿವರ ರಹಸ್ಯ ಸಭೆಯಲ್ಲಿ ಹಲವಾರು ವಿಚಾರಗಳು ಗಂಭೀರ ಚರ್ಚೆಗೊಳಗಾಗಿದ್ದವು ಎಂದು ಹೇಳಲಾಗಿದೆ. ತಮ ಖಾತೆಗಳಲ್ಲಿ ಅನ್ಯರ ಹಸ್ತಕ್ಷೇಪ ತೀವ್ರವಾಗುತ್ತಿರುವ ಬಗ್ಗೆ ಸಚಿವರುಗಳಲ್ಲಿ ಅಸಮಾಧಾನ ಮಡುಗಟ್ಟಿದೆ.

ಹಿರಿಯರಾಗಿದ್ದರೂ ಕೂಡ ಕೆಲವು ಪ್ರಭಾವಿ ನಾಯಕರ ಮಾತಿಗೆ ಮಣಿಯಬೇಕಿದೆ. ತಮಗೆ ಮಾಹಿತಿ ಇಲ್ಲದಂತೆ ಕೆಲವು ಕಡತಗಳ ಪರಿಶೀಲನೆಯಾಗುತ್ತಿದೆ ಎಂಬ ಆಕ್ಷೇಪಗಳನ್ನು ಸಚಿವರು ವ್ಯಕ್ತಪಡಿಸಿದ್ದಾರೆ.ಸಭೆಯಲ್ಲಿ ಪ್ರಮುಖವಾಗಿ ಒಳ ಮೀಸಲಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರ್ಪಡೆ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತು ಸಚಿವರು ಚರ್ಚೆ ನಡೆಸಿದ್ದರು ಎನ್ನಲಾಗಿದೆ.

ಅದೇ ರೀತಿ ಒಳ ಮೀಸಲಾತಿಯಲ್ಲಿ ಪ್ರವರ್ಗಗಳಿಂದಾಗಿರುವ ಗೊಂದಲಗಳ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ತಿಳಿದು ಬಂದಿದೆ. ಎಡಗೈ ಸಮುದಾಯವನ್ನು ಪ್ರವರ್ಗ ಒಂದು, ಬಲಗೈ ಸಮುದಾಯವನ್ನು ಪ್ರವರ್ಗ ಎರಡು ಎಂದು ವಿಂಗಡಿಸಿ, ತಲಾ ಶೇ. 6ರಷ್ಟು ಮೀಸಲಾತಿಯನ್ನು ಹಂಚಲಾಗಿದೆ. ಆದರೆ ಎಡಗೈ ಸಮುದಾಯಕ್ಕೆ ಪ್ರವರ್ಗ ಒಂದು ಎಂಬ ಸ್ಥಾನಮಾನ ನೀಡಿರುವುದರಿಂದ ಯಾವುದೇ ನೇಮಕಾತಿ ಅಥವಾ ಅವಕಾಶಗಳಲ್ಲಿ ಮೊದಲ ಆದ್ಯತೆ ದೊರೆಯತ್ತಿದೆ.

ಪ್ರವರ್ಗ ಎರಡು ಮತ್ತು ಅನಂತರ ಉಳಿದ ಪ್ರವರ್ಗಗಳ ಸಮುದಾಯಗಳು ಅವಕಾಶ ವಂಚಿತವಾಗುತ್ತಿವೆ ಎಂಬ ಆಕ್ಷೇಪಗಳ ಬಗ್ಗೆ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಸಚಿವ ಸಂಪುಟಸಭೆಯಲ್ಲಿ ಸಮಾಲೋಚನೆ ಮಾಡಿ, ಲೋಪಗಳನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದರು ಎನ್ನಲಾಗಿದೆ.

ಈ ಮೊದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ, ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಪ್ರವರ್ಗಗಳ ವಿಭಜನೆಯಲ್ಲಿ ಸಮಸ್ಯೆಗಳಾಗಿವೆ ಎಂಬ ಆಕ್ಷೇಪಗಳಿವೆ. ಇದನ್ನು ಸರಿಪಡಿಸಲು ಸಚಿವ ಮುನಿಯಪ್ಪ ಅವರನ್ನು ಹೊರಗಿಟ್ಟು, ಮಹದೇವಪ್ಪ, ಪರಮೇಶ್ವರ್‌ ಅವರು ಚರ್ಚೆ ನಡೆಸಿದ್ದಾರೆ.

ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಈ ಹಿಂದೆ ಬಸವರಾಜ ಬೊಮಾಯಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಕೆಲವು ಸ್ಪಷ್ಟನೆ ನೀಡಲು ಕೇಂದ್ರ ಸರ್ಕಾರ ಪತ್ರ ಬರೆದಿದೆ. ಈ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದ್ದು, ಮಾಜಿ ಸಂಸದ ವಿ.ಎಸ್‌‍. ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುಖದಲ್ಲೇ ವಾಲೀಕಿ ಜಯಂತಿಯಂದು ತಮ ಆಕ್ಷೇಪವನ್ನು ಹೊರ ಹಾಕಿದ್ದರು.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಬಿ. ನಾಗೇಂದ್ರ ಅವರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಲ್ಲೇ ಇದೆ. ಕೇಂದ್ರ ಸರ್ಕಾರ ಕೆಲ ಸ್ಪಷ್ಟನೆಗಳನ್ನು ಕೇಳಿರುವುದರಿಂದ ಹೆಚ್ಚಿನ ವಿವರಗಳ ಜೊತೆ ಅಗತ್ಯ ಶಿಫಾರಸು ಮಾಡಲು ತಯಾರಿಗಳಾಗಿವೆ. ಈ ನಿಟ್ಟಿನಲ್ಲಿ ಸಮುದಾಯದ ಹಿತರಕ್ಷಣೆಗೆ ಸಂಬಂಧಪಟ್ಟಂತೆ ಸತೀಶ್‌ ಜಾರಕಿಹೊಳಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸುವಂತೆ ಹೈಕಮಾಂಡ್‌ ಮೇಲೆ ಮತ್ತೊಂದು ಸುತ್ತಿನ ಒತ್ತಡ ತರಲು ಚರ್ಚಿಸುವುದಾಗಿ ತಿಳಿದು ಬಂದಿದೆ.
ತ್ರಿಮೂರ್ತಿ ಸಚಿವರು ಚರ್ಚಿಸಿದ ವಿಚಾರಗಳನ್ನು ಸಚಿವ ಸಂಪುಟಸಭೆಯಲ್ಲಿ ಪ್ರಸ್ತಾಪಿಸುವ ಪ್ರಯತ್ನ ನಡೆಯುತ್ತಾದರೂ ಮುಖ್ಯಮಂತ್ರಿ ಅವರು ತಡೆದು ಪ್ರತ್ಯೇಕ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಅದರಂತೆ ರಾತ್ರಿ ತಮ ಮನೆಗೆ ಎಚ್‌.ಸಿ.ಮಹದೇವಪ್ಪ, ಜಿ.ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯ ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ.ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕೂಡ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಪರಮೇಶ್ವರ್‌ ಸಮರ್ಥನೆ :
ಸಚಿವ ಸಂಪುಟದಲ್ಲಿ ರುವ ನಾಯಕರು ಪದೇಪದೇ ಸಭೆ ನಡೆಸು ವುದು ಹೊಸದೇನಲ್ಲ. ಕೆಲ ವಿಚಾರಗಳು ಸೂಕ್ಷ್ಮವಾ ಗಿದ್ದವು, ಹಾಗಾಗಿ ಸಂಪುಟಕ್ಕೂ ಮೊದಲೇ ಪ್ರತ್ಯೇಕ ಚರ್ಚೆ ನಡೆಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ಸಭೆ ನಡೆಸಿದ್ದನ್ನು ವಿಶೇಷವಾಗಿ ನೋಡುವ ಅಗತ್ಯ ಇಲ್ಲ. ಸತೀಶ್‌ ಜಾರಕಿಹೊಳಿ, ಮಹದೇವಪ್ಪ ಮತ್ತು ನಾನು ಸೇರಿದಂತೆ ಬೇಕಾದ ಸ್ನೇಹಿತರು ಹಲವು ಬಾರಿ ಸಭೆ ನಡೆಸಿದ್ದೇವೆ, ಅಲ್ಲಿ ರಾಜಕೀಯ ಇರುವುದಿಲ್ಲ ಎಂದರು. ನಿನ್ನೆ ಸಚಿವ ಸಂಪುಟಸಭೆ ಇತ್ತು. ಕೆಲವು ವಿಚಾರಗಳು ಸೂಕ್ಷ್ಮವಾಗಿದ್ದವು. ಹೀಗಾಗಿ ಉಪಾಹಾರದೊಂದಿಗೆ ಚರ್ಚೆ ಮಾಡಿ, ಆನಂತರ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದಾಗಿ ಹೇಳಿದರು. ಇಂತಹ ಸಭೆ ಮೊದಲ ಬಾರಿ ಏನೂ ಅಲ್ಲ. ಸತೀಶ್‌ ಜಾರಕಿಹೊಳಿ, ಮಹದೇವಪ್ಪ ಅವರ ಮನೆಗಳಲ್ಲೂ ಚರ್ಚೆ ಮಾಡಿದ್ದೇವೆ. ದಲಿತ ಸಮುದಾಯದ ಸಚಿವರ ಬೇಡಿಕೆಗಳು ಈಡೇರುತ್ತಿಲ್ಲ ಎಂಬ ಆಕ್ಷೇಪ ಸರಿಯಲ್ಲ ಎಂದರು.

ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಕುರಿತಂತೆ ನಾನು ಯಾರ ಮುಂದೆಯೂ ಬೇಡಿಕೆ ಇಟ್ಟಿರಲಿಲ್ಲ. ಕೊಟ್ಟರೆ, ಬಿಟ್ಟರೆ, ಆದರೆ ಎಂಬ ರೇ ಪ್ರಪಂಚಗಳು ಬೇಡ. ನಿದಿಷ್ಟವಾಗಿ ಇಂತಹವರೇ ಒತ್ತಾಯ ಮಾಡಿದರು ಎಂದರೆ ಅದಕ್ಕೆ ಪ್ರತಿಕ್ರಿಯಿಸಬಹುದು ಎಂದರು.ನವೆಂಬರ್‌ ಕ್ರಾಂತಿಯ ಬಗ್ಗೆಯಾಗಲಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆಯಾಗಲಿ ತಮಗೆ ಯಾವುದೇ ಮಾಹಿತಿ ಇಲ್ಲ. ಇಂತಹ ವಿಚಾರಗಳನ್ನು ಮುಖ್ಯಮಂತ್ರಿ ಅವರೇ ಹೇಳಬೇಕು. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬುದನ್ನು ಮುಖ್ಯಮಂತ್ರಿಯವರೇ ನಿರ್ಧರಿಸುತ್ತಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಔತಣ ಕೂಟದ ಸಭೆಗೆ ಯಾವುದೇ ಅಜೆಂಡಾ ಇಲ್ಲ. ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿ, ಬಹಳ ದಿನ ಆಗಿದೆ. ಹಾಗಾಗಿ ಬನ್ನಿ ಎಂದು ಮುಖ್ಯಮಂತ್ರಿ ಆಹ್ವಾನ ನೀಡಿದ್ದಾರೆ. ಹೋಗುತ್ತೇವೆ ಇದರಲ್ಲಿ ಬೇರೆ ಉದ್ದೇಶ ಏನಿಲ್ಲ. ಈ ಮೊದಲು ಕೂಡ ಹಲವಾರು ಬಾರಿ ಮುಖ್ಯಮಂತ್ರಿ ಅವರು ಔತಣ ಕೂಟ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.

ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಮನೆಗೂ ಒಂದೊಂದು ಉದ್ಯೋಗ ನೀಡುವ ಭರವಸೆಯನ್ನು ಆರ್‌ಜೆಡಿ ಪಕ್ಷ ನೀಡಿದೆ. ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿದೆ. ಹೀಗಾಗಿ ಉದ್ಯೋಗದ ಭರವಸೆಯನ್ನು ಪ್ರಣಾಳಿಕೆಯಲ್ಲಿ ಘೋಷಿಸಿರಬಹುದು ಎಂದರು.

ಎಲ್ಲಾ ಮನೆಗಳಿಗೂ ಒಂದೇ ದಿನದಲ್ಲಿ ಉದ್ಯೋಗ ನೀಡಲಾಗುವುದಿಲ್ಲ. ಹಂತಹಂತವಾಗಿ ಬೇಡಿಕೆ ಈಡೇರಿಸಬಹುದು. ತಮ ರಾಜ್ಯದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ಭರ್ತಿ ಮಾಡುವುದಾಗಿ ಕಾಂಗ್ರೆಸ್‌‍ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಒಳ ಮೀಸಲಾತಿ ಗೊಂದಲದಿಂದಾಗಿ ವಿಳಂಬವಾಗಿದೆ. ಈಗ ಒಂದೊಂದೇ ಇಲಾಖೆಯಲ್ಲಿ ಹಂತಹಂತವಾಗಿ ನೇಮಕಾತಿಯನ್ನು ಆರಂಭಿಸುತ್ತಿದ್ದೇವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಈಡೇರಿಸಿದ್ದರೆ ನಾವು ಅವರನ್ನು ಟೀಕಿಸುವ ಸಂದರ್ಭವೇ ಬರುತ್ತಿರಲಿಲ್ಲ. ಕೊಟ್ಟ ಮಾತನ್ನು ಈಡೇರಿಸದಿದ್ದಾಗ ಟೀಕೆಗಳು ಬರುವುದು ಸಹಜ ಎಂದರು.

ಸಚಿವರ ಮೌಲ್ಯಮಾಪನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಆಡಳಿತಾತಕವಾಗಿ ಹಲವಾರು ಕ್ರಮಗಳಾಗುತ್ತವೆ. ಆದರೆ ಮೌಲ್ಯ ಮಾಪನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.ಬಾಕಿ ಬಿಲ್‌ಗಳ ಬಗ್ಗೆ ಮುಖ್ಯಮಂತ್ರಿ ಅವರ ಔತಣ ಕೂಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇಲ್ಲ ಎಂದರು.ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್‌ ಗೊಂದಲಗಳನ್ನು ಬಗೆಹರಿಸುವ ಬಗ್ಗೆ ಪ್ರಶ್ನೆಗಳು ಎದುರಾದಾಗ ಇಂತಹ ವಿಚಾರಗಳ ಚರ್ಚೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿ ನಿರ್ಗಮಿಸಿದರು.

ಬೆಂಗಳೂರು ವಾರ್ಡ್‌ ವಿಭಜನೆ ಬಗ್ಗೆ ನಾಳೆ ಜೆಡಿಎಸ್‌‍ ಸಭೆ

ಬೆಂಗಳೂರು, ಅ.10- ಗ್ರೇಟರ್‌ ಬೆಂಗಳೂರು ಅಥಾರಿಟಿಯು ಮಾಡಿರುವ ವಾರ್ಡ್‌ಗಳ ವಿಭಜನೆ ಬಗ್ಗೆ ಜೆಡಿಎಸ್‌‍ ಪಕ್ಷದ ಮುಖಂಡರ ಸಭೆ ನಾಳೆ ನಡೆಯಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಲೋಕ ನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ಜನದಿನಾಚರಣೆ ಹಮಿಕೊಂಡಿದ್ದು, ಈ ಕಾರ್ಯಕ್ರಮ ಮುಗಿದ ನಂತರ ಸಭೆ ನಡೆಯಲಿದೆ.

ಗ್ರೇಟರ್‌ ಬೆಂಗಳೂರು ಅಥಾರಿಟಿಯು ಮಾಡಿರುವ ವಾರ್ಡ್‌ಗಳ ವಿಭಜನೆ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅ.15 ಕಡೆಯ ದಿನವಾಗಿದೆ. ಹೀಗಾಗಿ ವಾರ್ಡುಗಳಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ನಿರ್ಧರಿಸಲಾಗಿದೆ.

ಬೆಂಗಳೂರು ನಗರದ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಮೇಲುಸ್ತುವಾರಿಗಳು, ಉಸ್ತುವಾರಿಗಳು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬಿಬಿಎಂಪಿ ಮಾಜಿ ಸದಸ್ಯರು, ನಗರ ಪದಾಧಿಕಾರಿಗಳು, ವಾರ್ಡ್‌ ಅಧ್ಯಕ್ಷರು ಹಾಗೂ ಮುಖಂಡರುಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಜೆಡಿಎಸ್‌‍ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧನ್‌ಧಾನ್ಯ ಕೃಷಿ ಯೋಜನೆಗೆ ಗದಗ, ಹಾವೇರಿ ಜಿಲ್ಲೆಗಳ ಸೇರ್ಪಡೆ : ಬೊಮ್ಮಾಯಿ ಅಭಿನಂದನೆ

ಹಾವೇರಿ,ಅ.10-ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಧನ್‌ಧಾನ್ಯ ಕೃಷಿ ಯೋಜನೆ (ಪಿಎಂಡಿಡಿಕೆವೈ) ರೂಪಿಸಿದ್ದು ರಾಷ್ಟ್ರದ 100 ಜಿಲ್ಲೆಯಲ್ಲಿ ಇದು ಅನುಷ್ಠಾನವಾಗುತ್ತಿದೆ. ಅದರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಗದಗ, ಹಾವೇರಿ ಜಿಲ್ಲೆ ಎರಡನ್ನೂ ಸೇರಿಸಿರುವುದಕ್ಕೆ ಮೋದಿ ಹಾಗೂ ಕೇಂದ್ರ ಕೃಷಿಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಯೋಜನೆಯಡಿ ಕೃಷಿ ಉತ್ಪನ್ನ ಹೆಚ್ಚಿಸುವುದು ವಿವಿಧ ದವಸ ಧಾನ್ಯಗಳನ್ನು ಬೆಳೆಯುವುದು ಮತ್ತು ಸಮಗ್ರ ಕೃಷಿ ಅಭಿವೃದ್ಧಿ, ನೀರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ, ದೀರ್ಘಾವಧಿ ಹಣಕಾಸು ನೆರವು ಮತ್ತು ಸುಗ್ಗಿ ಬಳಿಕ ಪಂಚಾಯತ್‌ ಮತ್ತು ಬ್ಲಾಕ್‌ ಹಂತದಲ್ಲಿ ದವಸಧಾನ್ಯಗಳ ದಾಸ್ತಾನು ನಿರ್ಮಾಣ, ಕೇಂದ್ರ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳನ್ನು ಸಂಯೋಜನೆಗೊಳಿಸಿ ಸಮಗ್ರವಾಗಿ ಕಾರ್ಯಕ್ರಮಗಳ ಅನುಷ್ಠಾನ ಸೇರಿ ಸಮಗ್ರ ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಮೆರಡು ದೊಡ್ಡ ಸಹಾಯ ಜಿಲ್ಲೆಗೆ ಮಾಡುತ್ತದೆ ಎಂದು ಹೇಳಿದ್ದಾರೆ.

ನಾಳೆ ಪ್ರಧಾನಿ ನರೇಂದ್ರಮೋದಿ ಅವರು ಹಾವೇರಿ ಜಿಲ್ಲೆಯ ಹನುಮನಮಟ್ಟಿಯ ಕೃಷಿ ವಿದ್ಯಾಲಯ ಕೇಂದ್ರದಲ್ಲಿ ಈ ಯೋಜನೆಯನ್ನು ವರ್ಚ್ಯುವಲ್‌ ಮೂಲಕ ಉದ್ಘಾಟಿಸಲಿದ್ದಾರೆ.ಎಲ್ಲ ರೈತ ಬಾಂಧವರು ಪಾಲ್ಗೊಳ್ಳಬೇಕೆಂದು ಬೊಮಾಯಿ ವಿನಂತಿಸಿಕೊಂಡಿದ್ದಾರೆ.

ಯಾವುದೇ ಕ್ಷಣದಲ್ಲಾದರೂ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರ ಹೆಸರು ಘೋಷಣೆ ಸಾಧ್ಯತೆ

ಬೆಂಗಳೂರು,ಅ.10- ಹಲವಾರು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮಘಟ್ಟ ತಲುಪಿದ್ದು, ಆಯ್ಕೆ ನಿರೀಕ್ಷೆಯಲ್ಲಿರುವ ಬಿ.ವೈ.ವಿಜಯೇಂದ್ರ ಅವರ ಹೆಸರು ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆಗಳಿವೆ.

ರಾಜ್ಯ ಬಿಜೆಪಿ ಘಟಕಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡುವಂತೆ ಪಕ್ಷನಿಷ್ಠರು ಮನವಿ ಮಾಡಿಕೊಂಡಿದ್ದರು. ಆದರೆ ಪಕ್ಷದೊಳಗಿನ ಭಿನ್ನಮತದಿಂದ ಇಂದು, ನಾಳೆ ಎನ್ನುತ್ತಲೇ ಮುಂದೂಡತ್ತಲೇ ಬಂದಿದ್ದರು. ಅಂತಿಮವಾಗಿ ವರಿಷ್ಠರು ಗಟ್ಟಿ ನಿರ್ಧಾರಕ್ಕೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.

ನೇಮಕ ವಿಳಂಬವಾಗುತ್ತಿರುವುದು ಸ್ಥಳೀಯ ಸಂಸ್ಥೆ ಚುನಾವಣೆಗಳಾದ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ . ಅದಲ್ಲದೇ ನೇಮಕಾತಿ ವಿಳಂಬವೂ ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿಯ ದೆಹಲಿ ನಾಯಕರು ಸದ್ಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರಗಳತ್ತ ಜನವರಿವರೆಗೂ ಹೈಕಮಾಂಡ್‌ ನಾಯಕರು ಗಮನಹರಿಸದಿರುವ ಸೂಚನೆ ರಾಜ್ಯ ನಾಯಕರಿಗೆ ಸಿಕ್ಕಿದ್ದು, ರಾಜ್ಯ ಬಿಜೆಪಿಯ ಉನ್ನತ ಹುದ್ದೆಗಳಿಗೆ ನೇಮಕವಾಗದೇ ಜನರ ಮುಂದೆ ಹೋಗುವುದು ಹೇಗೆ? ಆಡಳಿತ ಪಕ್ಷವನ್ನು ಎದರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಇದರ ನುಡವೆ ಕೆಲ ತಿಂಗಳ ಹಿಂದೆ ವಿಜಯೇಂದ್ರ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರು ಅಖೈರುಗೊಂಡಿದ್ದು, ಪ್ರಧಾನಿ ನರೇಂದ್ರಮೋದಿ ಅವರ ಅನುಮೋದನೆಯಷ್ಟೇ ಬಾಕಿಯಿದೆ ಎಂದು ಹೇಳಲಾಗಿದೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ಮಾಜಿ ಶಾಸಕ ಸಿ.ಟಿ.ರವಿ ಅವರ ಹೆಸರು ಒಕ್ಕಲಿಗ ಸಮುದಾಯದಿಂದ ಕೇಳಿಬರುತ್ತಿದ್ದು, ಒಬಿಸಿಯಿಂದ ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್‌ ಹೆಸರು ಕೇಳಿಬರುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸಲು ಕೈಕಮಾಂಡ್‌ಗೆ ಒಲುವಿದ್ದರೂ ಪಕ್ಷದಲ್ಲಿನ ಅತೃಪ್ತರ ಅಸಮಾಧಾನ ಮತ್ತು ಬಿಜೆಪಿ ತಟಸ್ಥ ಗುಂಪಿನ ವಿರೋಧ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಪೂರ್ಣ ಪ್ರಮಾಣದ ಅವಧಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಮೂರು ಗುಂಪುಗಳಾಗಿವೆ. ವಿಜಯೇಂದ್ರ ನೇಮಕದ ಪರವಾಗಿರುವ ಯಡಿಯೂರಪ್ಪ ಬಣ ಮತ್ತು ಪಕ್ಷವನ್ನು ಬಿಎಸ್‌‍ವೈ ಹಿಡಿತದಿಂದ ಹೊರತರಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ ಅಸಮಾಧಾನಿತರ ಗುಂಪು. ಈ ಗುಂಪಿನಲ್ಲಿ ಪ್ರಮುಖವಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ, ಶಾಸಕ ಬಿ.ಪಿ.ಹರೀಶ್‌, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಇತರ ನಾಯಕರಿದ್ದಾರೆ.

ತಟಸ್ಥ ಗುಂಪಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಸುನೀಲ್‌ಕುಮಾರ್‌, ಸಿ.ಟಿ.ರವಿ ಸೇರಿದಂತೆ ಬಹುತೇಕ ಸಂಸದರಿದ್ದಾರೆ.ರಾಜ್ಯ ಬಿಜೆಪಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವುದಕ್ಕೆ ಅಪಸ್ವರವೆತ್ತಿರುವ ಪಕ್ಷದ ತಟಸ್ಥ ಬಣ ಮತ್ತು ಅಸಮಾಧಾನಿತ ಬಣದವರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಬೇಕೆನ್ನುವ ಧೋರಣೆಯನ್ನ ಪಕ್ಷದ ಹೈಕಮಾಂಡ್‌ ಹೊಂದಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯೇಂದ್ರ ನೇಮಕವನ್ನು ಪ್ರಬಲವಾಗಿ ವಿರೋಧಿಸಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪ್ರತ್ಯೇಕ ಸಭೆಗಳನ್ನು ನಡೆಸಿ ಮುಜುಗರ ಮಾಡುತ್ತಿದ್ದ ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಅತೃಪ್ತ ಬಣದ ಶಾಸಕ ಬಿ.ಪಿ. ಹರೀಶ್‌ ಅವರಿಗೆ ಶಿಸ್ತುಕ್ರಮದ ನೋಟಿಸ್‌‍ ನೀಡಿ ಬಿಜೆಪಿ ಹೈಕಮಾಂಡ್‌ ಬಿಸಿ ಮುಟ್ಟಿಸಿತ್ತು. ಹೈಕಮಾಂಡ್‌ನ ಈ ಹೆಜ್ಜೆಗಳೆಲ್ಲಾ ವಿಜಯೇಂದ್ರ ಆಯ್ಕೆಗೆ ದಾರಿ ಸುಗಮಗೊಳಿಸುವುದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ನೀಡುವುದಾದರೆ ಕೇಂದ್ರ ಸಚಿವ ಸ್ಥಾನ ಬಿಟ್ಟು ಬರಲು ಸಿದ್ಧ ಎಂಬ ಸಂದೇಶವನ್ನೂ ಸಹ ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಪಕ್ಷದ ಹಿರಿಯ ಮುಖಂಡರಾದ ಸಿ.ಟಿ. ರವಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ, ಮಾಜಿ ಸಚಿವ ಸುನೀಲ್‌ ಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಕ್ಷ ಅವಕಾಶ ನೀಡಿದರೆ ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಗೇರಲು ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್‌ ಈ ಎಲ್ಲಾ ಹೆಸರುಗಳನ್ನು ಪರಿಶೀಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮತ್ತು ಯಡಿಯೂರಪ್ಪನವರ ಆಶೀರ್ವಾದ ಇರುವ ವಿಜಯೇಂದ್ರ ಆಯ್ಕೆಯೇ ಸಮಯೋಚಿತ ಎಂಬ ನಿಲುವವನ್ನು ದೆಹಲಿ ವರಿಷ್ಠರು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ವಿರುದ್ಧ ಬಿಜೆಪಿ ಸಂಘಟನೆಯನ್ನು ಪ್ರಬಲವಾಗಿ ಕಟ್ಟಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ವಿಜಯೇಂದ್ರಗೆ ಇಲ್ಲ. ಬಿವೈವಿ ಹೊರತುಪಡಿಸಿ ಬೇರೆ ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಅವಶ್ಯಕತೆ ಇದೆ ಎಂದು ಅತೃಪ್ತ ಬಣ ದೆಹಲಿ ಹೈಕಮಾಂಡ್‌ಗೆ ಸ್ಪಷ್ಟಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 75 ವರ್ಷದ ಅರ್ಚಕ ಅರೆಸ್ಟ್‌

ಚೆನ್ನೈ,ಅ.10- ತಮಿಳುನಾಡಿನ ಕುಂಭಕೋಣಂ ಬಳಿಯ ದೇವಾಲಯವೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ 75 ವರ್ಷದ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ಆರೋಪದ ಮೇಲೆ 75 ವರ್ಷದ ದೇವಾಲಯದ ಅರ್ಚಕರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ತಿರುವಲಂಚುಳಿಯಲ್ಲಿರುವ ದೇವಾಲಯದಲ್ಲಿ ಕಳೆದ ತಿಂಗಳು ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ದೇವಾಲಯದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಆರೋಪಿ ವಿಶ್ವನಾಥ ಅಯ್ಯರ್‌ ಅವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್‌ 8 ರಂದು, 13 ವರ್ಷದ ಬಾಲಕಿ ತನ್ನ ಕುಟುಂಬದೊಂದಿಗೆ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದಳು. ಹುಂಡಿ (ಕಾಣಿಕೆ ಪೆಟ್ಟಿಗೆ) ಪ್ರದೇಶಕ್ಕೆ ಒಬ್ಬಂಟಿಯಾಗಿ ಕಾಣಿಕೆ ನೀಡಲು ಹೋದಾಗ, ವೃದ್ಧ ಅರ್ಚಕ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿವರವಾದ ವಿಚಾರಣೆಯ ನಂತರ, ಆರೋಪಗಳು ನಿಜವೆಂದು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅರ್ಚಕರನ್ನು ಬಂಧಿಸಿದ್ದಾರೆ.

ಘಟನೆಯನ್ನು ದೃಢಪಡಿಸುತ್ತಾ, ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಇದು ಇತ್ತೀಚೆಗೆ ದೇವಸ್ಥಾನದಲ್ಲಿ ಸಂಭವಿಸಿದೆ. ವಿಚಾರಣೆಯ ನಂತರ, ಆರೋಪಗಳು ನಿಜವೆಂದು ನಾವು ಕಂಡುಕೊಂಡಿದ್ದೇವೆ ಮತ್ತು ಅವನನ್ನು ಬಂಧಿಸಿದ್ದೇವೆ ಎಂದು ಹೇಳಿದರು.