ಹಾಸನ, ಮೇ 29- ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಾಗೂ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಮತ್ತೊಮೆ ಹಾಸನ ಹಾಗೂ ಹೊಳೆನರಸೀಪುರಕ್ಕೆ ಭೇಟಿ ನೀಡಿ ಮುಂಜಾನೆಯವರೆಗೂ ಪರಿಶೀಲನೆ ನಡೆಸಿದೆ.ಹಾಸನ ನಗರದ ಸಂಸದರ ನಿವಾಸ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಎಸ್‌ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಹಿಂದೆ ಕೂಡ ಸ್ಥಳ ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು ಎಸಿಪಿ ಸತ್ಯನಾರಾಯಣ ನೇತೃತ್ವದಲ್ಲಿ ಎರಡೂ ನಿವಾಸಗಳಲ್ಲೂ ಮತ್ತೆ ಪರಿಶೀಲನೆ ನಡೆಸಿದ್ದಾರೆ.ಕೆಲದಿನಗಳ ಹಿಂದೆ ಹೊಳೆನರಸೀಪುರದ ರೇವಣ್ಣ ಅವರ ನಿವಾಸ ಮತ್ತು ಹಾಸನದ ಸಂಸದರ ನಿವಾಸದಲ್ಲಿ ರಾತ್ರಿಯೆಲ್ಲಾ ಎಸ್‌ಐಟಿ ತಂಡ ಪರಿಶೀಲನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಹಾಸಿಗೆ, ದಿಂಬು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬರುತ್ತೇನೆಂದು ವಿಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ಮತ್ತೆ ಎಸ್‌ಐಟಿ ತಂಡ ಹಾಸನದಲ್ಲಿ ಸಾಕ್ಷ್ಯ ಸಂಗ್ರಹಗಳನ್ನು ತೀವ್ರಗೊಳಿಸಿದೆ.ನಿನ್ನೆ ಮಧ್ಯಾಹ್ನ ಹಾಸನಕ್ಕೆ ಭೇಟಿ ನೀಡಿದ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿ, ಸಾಕ್ಷಿ ಸಂಗ್ರಹಿಸಿ ಇಂದು ಬೆಳಗಿನ ಜಾವ 4 ಗಂಟೆವರೆಗೆ ತಪಾಸಣೆ ನಡೆಸಿದೆ. ಸತತ 10 ಗಂಟೆಗಳ ತನಕ ತಪಾಸಣೆ ನಡೆಸಿದೆ.