ಬೆಂಗಳೂರು,ನ.27- ಕ್ರಿಕೆಟ್ ಲೋಕದ ದಿಗ್ಗಜ ವಿರಾಟ್ ಕೊಹ್ಲಿ ಅವರೊಂದಿಗೆ ಆರ್ ಸಿಬಿ ತಂಡದ ಪರ ಇನಿಂಗ್ಸ್ ಆರಂಭಿಸಲು ಸಾಕಷ್ಟು ಕಾತರಿಸುತ್ತಿದ್ದೇನೆ ಎಂದು ಇಂಗ್ಲೆಂಡ್ ನ ಸ್ಟಾರ್ ವಿಕೆಟ್ ಕೀಪರ್, ಬ್ಯಾಟರ್ ಫಿಲ್ ಸಾಲ್ಟ್ ಹೇಳಿದ್ದಾರೆ.
ಇತ್ತೀಚಿಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಫಿಲ್ ಸಾಲ್ಟ್ ಅವರಿಗೆ 11.50 ಕೋಟಿ ನೀಡಿ ತಂಡಕ್ಕೆ ಬಿಕರಿ ಮಾಡಿಕೊಂಡಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸಾಲ್‌್ಟ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವೂ ಆಡಿದ ಅನುಭವ ಹೊಂದಿದ್ದಾರೆ.
`ಆರ್ ಸಿಬಿ ತಂಡದ ಮಾಲೀಕರು ನನಗೆ ಗೌರವಾನ್ವಿತ ಮೊತ್ತವನ್ನು ನೀಡಿಯೇ ಖರೀದಿಸಿದೆ. ನಾನು ವಿರಾಟ್ ಕೊಹ್ಲಿ ಅವರನ್ನು ತುಂಬಾ ಗೌರವಿಸು ತ್ತೇನೆ. ನಾನು ಸದಾ ಅವರ ಸಂಪರ್ಕದಲ್ಲೇ ಇರಲು ಬಯಸುತ್ತೇನೆ. ಆದರೆ ವಿಚಿತ್ರ ಸಂಗತಿ ಎಂದರೆ ಈ ಹಿಂದೆ ನಾನು ಅವರ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಆದರೆ ಈಗ ಕೊಹ್ಲಿಯೊಂದಿಗೆ ಆಡಲು ಕಾತರಿಸುತ್ತಿದ್ದೇನೆ’ ಎಂದು ಸಾಲ್ಟ್ ಹೇಳಿದ್ದಾರೆ.
`ಆರ್ ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ಮೊದಲಿನಿಂದಲೂ ಸಾಕಷ್ಟು ಬಲಿಷ್ಠವಾಗಿದೆ. ಈ ತಂಡದಲ್ಲಿ ಸಾಕಷ್ಟು ಸರ್ವಶ್ರೇಷ್ಠ ಆಟಗಾರರು ಸ್ಥಾನ ಪಡೆದಿದ್ದರಿಂದ ಯಾವಾಗಲೂ ಆಕ್ರಮಣಕಾರಿ ಆಟ ಆಡಲು ಮುಂದಾಗುತ್ತಾರೆ’ ಎಂದು ಇಂಗ್ಲೆಂಡ್ ಆಟಗಾರ ಹೇಳಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉತ್ತಮ ಪ್ರದರ್ಶನ ತೋರಿರುವ ಫಿಲ್ ಸಾಲ್ಟ್ , 21 ಪಂದ್ಯಗಳಿಂದ 173.53 ಸ್ಟ್ರೈಕ್ ರೇಟ್ ನಲ್ಲಿ 653 ರನ್ ಗಳಿಸಿದ್ದಾರೆ.