ಮುಂಬೈ,ನ.28- ಆಹಾರ ಪದ್ಧತಿಯನ್ನು ಬದಲಾಯಿಸುವಂತೆ ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸುವಂತೆ ಪ್ರಿಯಕರ ಒತ್ತಡ ಹೇರಿದ ಪರಿಣಾಮ ಏರ್ ಇಂಡಿಯಾ ಪೈಲಟ್ ನೇಣಿಗೆ ಶರಣಾದ ಘಟನೆ ಮುಂಬೈನ ಅಂಧೇರಿಯ ಮರೋಲ್ ಪ್ರದೇಶದಲ್ಲಿ ನಡೆದಿದೆ.
ಸೃಷ್ಟಿ ತುಲಿ (25) ಆತಹತ್ಯೆಗೆ ಶರಣದ ಪೈಲಟ್. ಈಕೆ ಫ್ಲ್ಯಾಟ್ ಒಂದರಲ್ಲಿ ಡೇಟಾ ಕೇಬಲ್‌ನಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪ್ರಿಯಕರ ಆದಿತ್ಯ ಪಂಡಿತ್‌ನನ್ನು (27) ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದಿತ್ಯ ಪದೇಪದೇ ಸೃಷ್ಟಿಯನ್ನು ಸಾರ್ವಜನಿಕವಾಗಿ ಅವಮಾನಿಸುವುದಲ್ಲದೇ ಆಕೆಯ ಆಹಾರ ಪದ್ಧತಿ ಬದಲಾಯಿಸುವಂತೆ ಹೇಳುತ್ತಿದ್ದ. ಅಲ್ಲದೇ ಮಾಂಸಾಹಾರ ಸೇವನೆ ಬಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದ ಎಂದು ಸೃಷ್ಟಿ ಚಿಕ್ಕಪ್ಪ ಆರೋಪಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿತ್ತು.
ಸೋಮವಾರ ಮುಂಜಾನೆ ದೆಹಲಿಗೆ ತೆರಳುತ್ತಿದ್ದ ಪ್ರಿಯಕರ ಆದಿತ್ಯನಿಗೆ ಸೃಷ್ಟಿ ಕರೆ ಮಾಡಿ ತಾನು ಆತಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಳು. ಇದನ್ನು ತಿಳಿದ ಆದಿತ್ಯ ತಕ್ಷಣವೇ ಆಕೆ ಇದ್ದ ಫ್ಲ್ಯಾಟ್‌ಗೆ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು.
ಈ ವೇಳೆ ನಕಲಿ ಕೀ ತಯಾರಕರನ್ನು ಕರೆಸಿ ಬಾಗಿಲು ತೆರೆದು ನೋಡಿದಾಗ ಸೃಷ್ಟಿ ಡೇಟಾ ಕೇಬಲ್ ಸಹಾಯದಿಂದ ಆತಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಸೃಷ್ಟಿ ಉತ್ತರಪ್ರದೇಶ ಮೂಲದವಳಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿರುವಾಗ ಆದಿತ್ಯನನ್ನು ಭೇಟಿಯಾಗಿದ್ದಳು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ಬದಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದಿತ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ.29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.