Saturday, April 27, 2024
Homeರಾಷ್ಟ್ರೀಯಮೋದಿ ದಕ್ಷಿಣ ಭಾರತ ಪ್ರವಾಸ ವೇಳಾಪಟ್ಟಿ ಪ್ರಕಟ

ಮೋದಿ ದಕ್ಷಿಣ ಭಾರತ ಪ್ರವಾಸ ವೇಳಾಪಟ್ಟಿ ಪ್ರಕಟ

ಬೆಂಗಳೂರು,ಮಾ.11- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಲೆಕ್ಕಚಾರದಲ್ಲಿರುವ ಬಿಜೆಪಿ, ಮಾರ್ಚ್ 15ರಿಂದ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಚುನಾವಣಾ ಪ್ರಚಾರಕ್ಕೆ ರಣ ಕಹಳೆ ಮೊಳಗಿಸಲಿದೆ. ವಿಧಾನಸಭಾ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಮೋದಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ. ಈಗಾಗಲೇ ಚುನಾವಣೆ ಪ್ರಚಾರಕ್ಕಾಗಿ ಅವರ ಪ್ರಚಾರ ಪ್ರವಾಸದ ತಾತ್ಕಾಲಿಕ ಪಟ್ಟಿಯೊಂದು ಸಿದ್ಧಗೊಂಡಿದ್ದು, ಅದರ ಪ್ರಕಾರ ಮಾರ್ಚ್ 15ರಿಂದ ಮಾ.19ರವರೆಗೆ ಪ್ರಧಾನಿ ನರೇಂದ್ರಮೋದಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಸಂಚರಿಸಿ ಪ್ರಚಾರ ಮಾಡಲಿದ್ದಾರೆ.

ತಾತ್ಕಾಲಿಕ ಪಟ್ಟಿ ಪ್ರಕಾರ ಮಾರ್ಚ್ 15ಕ್ಕೆ ಕೋಲಾರ, ಮಾರ್ಚ್ 17ಕ್ಕೆ ಶಿವಮೊಗ್ಗ, ಮಾರ್ಚ್18ಕ್ಕೆ ಬೀದರ್, ಮಾರ್ಚ್ 19ಕ್ಕೆ ಧಾರವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಪೈಕಿ ರಾಜ್ಯದ 4 ಜಿಲ್ಲೆಗಳಲ್ಲಿ ಅದರ ಸುತ್ತಮುತ್ತಲಿನ ಕ್ಷೇತ್ರದವರೂ ಭಾಗಿಯಾಗಲಿದ್ದಾರೆ. ಆದರೆ ಚುನಾವಣೆ ದಿನಾಂಕ ನಿಗದಿ ಆಧಾರದ ಮೇಲೆ ಪಟ್ಟಿಯಲ್ಲಿ ಬದಲಾವಣೆಯಾಗುವುದು ಎನ್ನಲಾಗಿದೆ.

ಶಿವಮೊಗ್ಗದಲ್ಲಿ 4 ಕ್ಷೇತ್ರಗಳನ್ನೊಳಗೊಂಡ ಸಮಾವೇಶ ಆಯೋಜಿಸಲಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ 4 ಸಾರ್ವಜನಿಕ ರ್ಯಾಲಿ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಆಡಳಿತ ವಿರೋಧಿ ಅಂಶಗಳನ್ನು ಎದುರಿಸುತ್ತಿರುವ ರಾಜ್ಯದ ಆಡಳಿತಾರೂಢ ಬಿಜೆಪಿಯು ದೇಶದ ದಕ್ಷಿಣ ಭಾಗದಲ್ಲಿ ತನ್ನ ಕೋಟೆ ಕಟ್ಟಲು ನಿರ್ಧರಿಸಿದೆ. ಇದಕ್ಕಾಗಿ ಮೋದಿ ಪ್ರಚಾರದ ಹವಾ ಸೃಷ್ಟಿಸಲು ಪಕ್ಷ ತೀರ್ಮಾನಿಸಿದೆ.

ಪ್ರಧಾನಿ ಮೋದಿ ವಾರಾಣಸಿ ಬಳಿಕ ಇದೀಗ ಗುಜರಾತ್‍ನತ್ತ ಮುಖಮಾಡಿದ್ದಾರೆ. ಮಾರ್ಚ್ 12ರಂದು ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಮೋದಿ ಚುನಾವಣಾ ಪ್ರಚಾರ ಅಭಿಯಾನ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಬಹುತೇಕ ಈ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರ ಭಾರತದಾದ್ಯಂತ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಹಲವಾರು ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ ಚುನಾವಣಾ ಪ್ರಚಾರ ಅಭಿಯಾನಗಳನ್ನೂ ನಡೆಸುತ್ತಿದ್ದಾರೆ.

ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವುದರೊಂದಿಗೆ ಪ್ರಚಾರ ಅಭಿಯಾನ ಇನ್ನಷ್ಟು ಬಿರುಸುಕೊಳ್ಳಲಿದೆ. ಆ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಸಕಲಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ದೆಹಲಿಯಲ್ಲಿ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಕೂಡ ಇರಬಹುದು ಎಂದು ಭಾವಿಸಲಾಗಿದೆ.

ಇನ್ನು 2024ರ ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿ ರಿಲೀಸ್ ಮಾಡಿದ್ದ ಬಿಜೆಪಿ ನಾಯಕರು ಎರಡನೇ ಪಟ್ಟಿ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಭಾನುವಾರ ನಡೆಯಬೇಕಿದ್ದ ಬಿಜೆಪಿ ಸಿಇಸಿ ಸಭೆಯನ್ನು ಇಂದಿಗೆ ಮುಂದೂಡಿಕೆ ಮಾಡಲಾಗಿದೆ. ಇಂದು ಸಂಜೆ 6 ಗಂಟೆಗೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಿಇಸಿ ಸಭೆ ನಡೆಯುವ ಸಾಧ್ಯತೆ ಇದೆ.

ಸಿಇಸಿಯಲ್ಲಿರುವ ಕೆಲವು ಸದಸ್ಯರ ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎನ್ನಲಾಗಿದೆ. ಇನ್ನು ಇಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಬಿಎಸ್ವೈ ಸೇರಿ ಹಲವು ನಾಯಕರು ಭಾಗಿಯಾಗೋ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಯಲ್ಲೇ ಬಿಡುಬಿಟ್ಟಿದ್ದಾರೆ.

ಮಾರ್ಚ್ 15- ಕೋಲಾರ, ಸೇಲಂ, ಪಾಲಕ್ಕಾಡ್
ಮಾರ್ಚ್16 – ಕನ್ಯಾಕುಮಾರಿ, ವಿಶಾಖಪಟ್ಟಣಂ, ಜಹೀರಾಬಾದ್
ಮಾರ್ಚ್ 17 – ಪತ್ತನಂತ್ತಿಟ್ಟ, ಶಿವಮೊಗ್ಗ, ಅಮರಾವತಿ
ಮಾರ್ಚ್ 18 – ಮಲ್ಕಾಜ್‍ಗಿರಿ, ಬೀದರ್, ಕೊಯಮತ್ತೂರು
ಮಾರ್ಚ್ 19- ನಾಗರ್ ಕರ್ನೂಲ್, ಧಾರವಾಡ, ಏಲೂರು

RELATED ARTICLES

Latest News