ಮುಂಬೈ,ಸೆ.6- ಮಹಾರಾಷ್ಟ್ರದಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಉದ್ದೇಶಿತ ಪುಣೆ ಭೇಟಿ ರದ್ದುಗೊಂಡಿದೆ. ಪುಣೆಯಲ್ಲಿ ನಿರ್ಮಾಣವಾಗಿರುವ ಮೆಟ್ರೋ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಬರಬೇಕಿತ್ತು. ಭಾರಿ ಮಳೆ ಹಿನ್ನೆಯಲ್ಲಿ ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಇಂದು ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವು ರಸ್ತೆಗಳು ಮುಳುಗಿವೆ. ಇಷ್ಟೇ ಅಲ್ಲ, ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಹಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳು ನಿಧಾನವಾಗಿ ಸಂಚರಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ವಾಯು ಸೇವೆ ಒದಗಿಸುವ ಕಂಪನಿಗಳು ಹವಾಮಾನದ ಬದಲಾವಣೆಯಿಂದ ಪರಿಣಾಮ ಬೀರುವ ವಿಮಾನಗಳ ಹೊಸ ಸ್ಥಿತಿಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿವೆ.
ಮುಂಬೈ ಮತ್ತು ನೆರೆಯ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂಬೈ, ಥಾಣೆ, ರಾಯಗಢ ಮತ್ತು ರತ್ನಗಿರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಮುಂಬೈನಲ್ಲಿ ಭಾರೀ ಮಳೆ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.ನಿನ್ನ ಸಂಜೆ ಶುರುವಾದ ಮಳೆ 5 ಗಂಟೆಗಳ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಸುರಿದಿದೆ.