ಬೆಂಗಳೂರು,ಮಾ.8-ಪೊಲೀಸ್ ಇಲಾಖೆಯಲ್ಲಿ ಶೇ.25ರಷ್ಟು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳು ಇರಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಸಿಬ್ಬಂದಿಗಳ ನಿಯೋಜನೆಗೆ ವಿಶೇಷ ಬಡ್ತಿ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮೈಸೂರು ರಸ್ತೆಯಲ್ಲಿನ ನಗರ ಸಶಸ್ತ್ರ ಮೀಸಲು ಪಡೆ (ಕೇಂದ್ರಸ್ಥಾನ) ಕವಾಯತು ಮೈದಾನದಲ್ಲಿ ನಡೆದ ಮಾಸಿಕ ವಿಶೇಷ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕವಾಯುತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಇಲಾಖೆಯಲ್ಲಿ ಶೇ.8ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಖ್ಯೆಯನ್ನು ಶೇ.25ಕ್ಕೆ ಹೆಚ್ಚಿಸಲು ಸರ್ಕಾರದ ಉದ್ದೇಶವಾಗಿದೆ. ಗೃಹಸಚಿವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಸಿಬ್ಬಂದಿಗಳ ಹೆಚ್ಚಳಕ್ಕೆ ನೇಮಕಾತಿಗಳನ್ನು ಮಾಡಿಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಹಿಂದೆ ಟೈಪಿಂಗ್, ರಿಸಪ್ಷನ್ ಡೆಸ್ಕ್ ಮತ್ತು ಮಹಿಳಾ ಆರೋಪಿಗಳಿದ್ದಾಗ ಮಾತ್ರ ಮಹಿಳಾ ಸಿಬ್ಬಂದಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಇಲಾಖೆಯ ಎಲ್ಲ ಸ್ತರಗಳಲ್ಲೂ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಪಿಸ್ತೂಲ್ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಸಂಚಾರಿ ವಿಭಾಗದಲ್ಲಿ ಮಹಿಳಾ ಸಿಬ್ಬಂದಿಯ ಪಾತ್ರ ಮಹತ್ವವಾಗಿದೆ. ಅವರಿಗೆ ಉತ್ತೇಜನ, ಪ್ರೋತ್ಸಾಹ, ಸ್ಪೂರ್ತಿ, ಹುರಿದುಂಬಿಸುವ ಕಾರ್ಯಗಳನ್ನು ಮಾಡಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಎಂಬ ಪದ ಬಳಕೆ ಪ್ರಚಲಿತವಾಗುತ್ತಿದೆ.
ಒಬ್ಬ ವ್ಯಕ್ತಿಗೆ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಸರಿದೂಗಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಣಿತರು ವಿಶ್ಲೇಷಿಸಿದ್ದಾರೆ. ಮಹಿಳಾ ಸಿಬ್ಬಂದಿಗಳಿಗೆ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವಷ್ಟೇ ಅಲ್ಲದೆ ವೃತ್ತಿ ಜೀವನ ಮತ್ತು ಕುಟುಂಬ ಜೀವನವೂ ಇರುತ್ತದೆ. ಪ್ರತಿ ಮಹಿಳೆಯು ಕುಟುಂಬದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾರೆ. ಬಹುಮುಖ್ಯವಾಗಿ ತಾಯಿ ಪಾತ್ರ ನಿರ್ವಹಿಸುವುದರಿಂದ ಕುಟುಂಬ ಅವರ ಮೇಲೆ ನಿರ್ಭರಿತವಾಗಿರುತ್ತದೆ. ಅದರಿಂದ ಅವರು ವೃತ್ತಿ ಜೀವನದ ಜೊತೆಗೆ ಕುಟುಂಬ ಜೀವನವನ್ನು ಸಮತೋಲನವಾಗಿ ನಡೆಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಇಲಾಖೆ ಮತ್ತು ಸರ್ಕಾರವು ಸಹಕಾರ ಮತ್ತು ಉತ್ತೇಜನ ನೀಡಬೇಕು ಎಂದರು.
ಪೆರೇಡ್‍ನಲ್ಲಿ ಭಾಗವಹಿಸಿದ್ದ ಒಟ್ಟು 10 ತಂಡಗಳ ಪ್ರತಿ ಸದಸ್ಯನಿಗೆ ಒಂದು ಸಾವಿರ ರೂ.ನಂತೆ ಮೂರು ಲಕ್ಷ ನಗದು ಮತ್ತು ರಾಣಿ ಚೆನ್ನಮ್ಮ ಪಡೆಗೆ ವಿಶೇಷ 30 ಸಾವಿರ ರೂ. ಸೇರಿ ಒಟ್ಟು 3,30,000 ರೂ. ಬಹುಮಾನ ಘೋಷಣೆ ಮಾಡಿ 100ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿದರು.
ಈ ಮೈದಾನವು ಐತಿಹಾಸಿಕ ದಾಖಲೆಯಾಗಿದ್ದು, 1973ರ ನವೆಂಬರ್ 1ರಂದು ಪೊಲೀಸ್ ಧ್ವಜವನ್ನು ಹಸ್ತಾಂತರ ಮಾಡಿದ ಸುವರ್ಣ ಮಹೋತ್ಸವ ಜೊತೆಗೆ ಇಂದು ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಐತಿಹಾಸಿಕವಾಗಲಿದೆ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಲಾಖೆಯ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಶುಭಾಷಯ ಕೋರಿದರು.