Sunday, May 5, 2024
Homeಬೆಂಗಳೂರುಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ನಿಷೇಧ

ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ನಿಷೇಧ

ಬೆಂಗಳೂರು,ಮಾ.8- ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿಷೇಧಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿ ನೀರು ಬೇರೆ ಉದ್ದೇಶಕ್ಕೆ ಬಳಕೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲ್‍ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಬಳಸುವುದನ್ನು ನೀಷೇಧಿಸಲಾಗಿದೆ ಎಂದು ಬಿಡಬ್ಲ್ಯೂಎಸ್‍ಎಸ್‍ಬಿ ಅಧ್ಯಕ್ಷರಾದ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡುವವರ ವಿರುದ್ಧ ಜಲಮಂಡಳಿಯ ಕಾಯ್ದೆ 1964ರ ಕಲಂ 109 ರಂತೆ 5000 ರೂ. ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5000 ರೂ. ಜೊತೆಗೆ ಹೆಚ್ಚುವರಿಯಾಗಿ 500 ರೂ.ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರೂ ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ತಿಳಿಸಬಹುದಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ. ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟುವುದು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

RELATED ARTICLES

Latest News