ಬೆಂಗಳೂರು, ಮಾ.28- ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ವೈಟ್ಫೀಲ್ಡ್ ವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ಬೆಳ್ಳಂಬೆಳಗ್ಗೆ ಸುಮಾರು 200 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ವೈಟ್ಫೀಲ್ಡ್ ವಿಭಾಗದ ಪೊಲೀಸರು ಠಾಣಾ ವ್ಯಾಪ್ತಿಗಳಲ್ಲಿ ಇಂದು ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಏಕಕಾಲಕ್ಕೆ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಎಲ್ಲಾ ರೌಡಿಗಳನ್ನು ಮನೆಯಿಂದ ವೈಟ್ಫೀಲ್ಡ್ ಗ್ರೌಂಡ್ಗೆ ಕರೆದೊಯ್ಯಲಾಯಿತು.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡಬಾರದು. ರೌಡಿ ಚಟುವಟಿಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿದರೆ ಗಡಿಪಾರು ಮಾಡುವುದಾಗಿ ಡಿಸಿಪಿ ಶಿವಕುಮಾರ್ ಅವರು ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ರೌಡಿಗಳ ಮೊಬೈಲ್ ನಂಬರ್, ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಡಿಸಿಪಿ ಅವರು ತಾಕೀತು ಮಾಡಿದ್ದಾರೆ.
ಈಗಾಗಲೇ ಪೂರ್ವ, ಉತ್ತರ, ದಕ್ಷಿಣ ಹಾಗೂ ಕೇಂದ್ರ ವಿಭಾಗದ ಪೊಲೀಸರು ಆಯಾ ವ್ಯಾಪ್ತಿಗಳಲ್ಲಿನ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿ ಬಾಲಬಿಚ್ಚದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.