Homeರಾಜಕೀಯಸರ್ಕಾರಕ್ಕೆ ಕಾಯಕಲ್ಪ ನೀಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸರಣಿ ಸಭೆ

ಸರ್ಕಾರಕ್ಕೆ ಕಾಯಕಲ್ಪ ನೀಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸರಣಿ ಸಭೆ

ಬೆಂಗಳೂರು, ಸೆ.16- ರಾಜ್ಯ ಸರ್ಕಾರ ಮತ್ತು ಪಕ್ಷಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಇಂದು ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಿದ್ದು, ಬೆಳಗ್ಗೆ ಕಾಂಗ್ರೆಸ್‌‍ನ ಜಿಲ್ಲಾಧ್ಯಕ್ಷರುಗಳ ಜೊತೆ ಚರ್ಚೆ ನಡೆಸಿದ್ದಾರೆ. ಮಧ್ಯಾಹ್ನ ಎಸ್‌‍ಐಆರ್‌ ಬಗ್ಗೆ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆದಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿ, ವರಿಷ್ಠ ನಾಯಕರನ್ನು ಭೇಟಿ ಮಾಡಿ ಕೆಲ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕಾಗಮಿಸಿರುವುದು ಗಮನ ಸೆಳೆದಿದೆ.

ಖಾಲಿಯಿರುವ ಎರಡು ಸಚಿವ ಸ್ಥಾನಗಳಿಗೆ ನೇಮಕಾತಿ, ವಿಧಾನ ಪರಿಷತ್‌ನಲ್ಲಿ ತೆರವಾಗಿರುವ 5 ಸದಸ್ಯ ಸ್ಥಾನಗಳು ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಲಾಗಿದೆ. ನಿಗಮ-ಮಂಡಳಿಗಳಲ್ಲಿ ಎರಡೂವರೆ ವರ್ಷ ಪೂರ್ಣಗೊಂಡಿರುವವರು ರಾಜೀನಾಮೆ ನೀಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದರು. ಆದರೂ ಬಹುತೇಕರು ರಾಜೀನಾಮೆ ನೀಡಿಲ್ಲ. ಹೀಗಾಗಿ ಅವರಿಂದ ರಾಜೀನಾಮೆ ಪಡೆದು ಬೇರೆಯವರನ್ನು ನೇಮಿಸಲು ಕಾಂಗ್ರೆಸ್‌‍ ತಯಾರಿ ನಡೆಸಿದೆ. ಇಂದಿನ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆಗಳಾಗಿವೆ.

ನೂತನ ಜಿಲ್ಲಾಧ್ಯಕ್ಷರಿಗೆ ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜುಗೊಳ್ಳುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸೇರಿದಂತೆ ನಗರಸಭೆ, ಪುರಸಭೆ, ಪಾಲಿಕೆಗಳು, ಗ್ರೇಟರ್‌ ಬೆಂಗಳೂರು ಒಳಗೊಂಡಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕಾಂಗ್ರೆಸ್‌‍ಗೆ ಪ್ರತಿಷ್ಠೆಯ ಕಣಗಳಾಗಿವೆ.

ಅದೇ ರೀತಿ ಕಾಂಗ್ರೆಸ್‌‍ ಹಿರಿಯೂರು ವಿಧಾನಸಭೆಗೆ ನಡೆಯುವ ಉಪ ಚುನಾವಣೆ ಕೂಡ ಗೆಲ್ಲುವ ಪಣತೊಟ್ಟಿದೆ. ಈ ಕುರಿತು ಇಂದಿನ ಸಭೆಯಲ್ಲಿ ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ.
ಈಗಾಗಲೇ ಗ್ಯಾರಂಟಿ ಸಮಿತಿಗಳಿಗೂ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗಿದೆ. ಭಾರತ್‌ ಜೋಡೋ ಯುವ ಸಂಘಗಳು ಕಾಂಗ್ರೆಸ್‌‍ನ ಸಂಘಟನಾ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ವೇದಿಕೆಗಳಾಗಿವೆ.

ಅವುಗಳಿಗೆ ಸದಸ್ಯರನ್ನು ನೇಮಿಸುವಾಗ ಎಚ್ಚರಿಕೆ ವಹಿಸುವಂತೆ ಪಕ್ಷದ ಪ್ರಮುಖರು ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.ಚುನಾವಣಾ ಆಯೋಗದಿಂದ ನಡೆದಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.

RELATED ARTICLES
spot_img

Latest News