ಮುಂಬೈ, ಸೆ.16- ಪ್ರಧಾನಿ ನರೇಂದ್ರ ಮೋದಿ ಅವರ ಬಾಲ್ಯದ ಗೆಳೆಯ 81 ವರ್ಷದ ಅಸ್ಗರ್ ಅಲಿ ವೋರಾ ಅವರ ದಶಕಗಳಿಂದ ಬಾಕಿ ಇದ್ದ ಜಮೀನು ವಿವಾದ ಇತ್ಯರ್ಥಗೊಂಡಿದೆ.ಮಹಾರಾಷ್ಟ್ರದ ಮೀರಾ-ಭಯಂದರ್‌ನಲ್ಲಿರುವ ತಮ್ಮ ಜಮೀನನ್ನು ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರ ಹಿಂಬಾಲಕರು ಕಬಳಿಸಿದ್ದಾರೆ ಎಂದು ಆರೋಪಿಸಿದ್ದ ವೋರಾ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿಕೊಂಡಿದ್ದರು.
ಈ ಭೇಟಿಯ ಕೆಲವೇ ದಿನಗಳಲ್ಲಿ ಶಾಸಕ ನರೇಂದ್ರ ಮೆಹ್ತಾ ಜಮೀನಿನ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟಿದ್ದು, ವೋರಾ ವಿರುದ್ಧ ದಾಖಲಿಸಿದ್ದ ಪೊಲೀಸ್ ದೂರನ್ನೂ ಹಿಂಪಡೆದಿದ್ದಾರೆ.ಗುಜರಾತ್‌ನ ವಡ್‌ನಗರದ ಬಿಎನ್ ಶಾಲೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಓದಿದ್ದ ಅಸ್ಗರ್ ಅಲಿ ವೋರಾ, ಸೆ.8ರಂದು ಪ್ರಧಾನಿಯನ್ನು ಭೇಟಿಯಾಗಿ ತಮ್ಮ ಜಮೀನನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದರು.
ಏನಿದು ಭೂ ವಿವಾದ?
1989ರಲ್ಲಿ ಭಯಂದರ್ ಪೂರ್ವದ ನವಘರ್‌ನಲ್ಲಿ 2,810 ಚದರ ಮೀಟರ್ ಜಮೀನನ್ನು ನೋಂದಾಯಿತ ಒಪ್ಪಂದದ ಮೂಲಕ ಖರೀದಿಸಿದ್ದೆ. ಬಳಿಕ ಈ ಜಾಗವನ್ನು ಯಾರಿಗೂ ಮಾರಾಟ ಮಾಡಿಲ್ಲ ಎಂದು ವೋರಾ ತಿಳಿಸಿದ್ದಾರೆ.
ಆದರೆ 2011ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಅರಿವಿಗೆ ಬಾರದಂತೆ ಜಮೀನನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಇದರಲ್ಲಿ ಒಂದು ಭಾಗ ಸ್ವಯಂ ಬಿಲ್ಡರ್ಸ್ ವಶದಲ್ಲಿದ್ದರೆ, ಮತ್ತೊಂದು ಭಾಗ ಶಾಸಕ ನರೇಂದ್ರ ಮೆಹ್ತಾ ಅವರೊಂದಿಗೆ ಗುರುತಿಸಿಕೊಂಡಿರುವ ಸೆವೆನ್ ಇಲೆವೆನ್ ಕನ್‌ಸ್ಟ್ರಕ್ಷನ್ಸ್‌ಗೆ ಸೇರಿದೆ ಎಂದು ತೋರಿಸಲಾಗಿತ್ತು. ತಮ್ಮ ಮಾಲೀಕತ್ವದ ಹಕ್ಕು ಇದ್ದರೂ, ಮೀರಾ-ಭಯಂದರ್ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗವು ವಿವಾದಿತ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತ್ತು ಎಂದು ವೋರಾ ಆರೋಪಿಸಿದ್ದಾರೆ.
ಪ್ರಧಾನಿ ಭೇಟಿಯ ಬಳಿಕ ಮಹಾರಾಷ್ಟ್ರ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಪರದೇಶಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ವೋರಾ, ಶಾಸಕ ಮೆಹ್ತಾ, ಮಹಾನಗರ ಪಾಲಿಕೆ ಆಯುಕ್ತೆ ರಾಧಾ ವಿನೋದ್ ಶರ್ಮಾ ಹಾಗೂ ನಗರ ಯೋಜಕ ಪುರುಷೋತ್ತಮ್ ಶಿಂಧೆ ಭಾಗವಹಿಸಿದ್ದರು.
ಸಭೆಯಲ್ಲಿ ಶಾಸಕ ನರೇಂದ್ರ ಮೆಹ್ತಾ, ತಾವು ವಿವಾದಿತ ಜಮೀನಿನ ಮೇಲಿನ ಸ್ವಾಧೀನವನ್ನು ಬಿಟ್ಟುಕೊಡುತ್ತಿರುವುದಾಗಿ ಹಾಗೂ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯುತ್ತಿರುವುದಾಗಿ ನಗರ ಯೋಜನಾ ಇಲಾಖೆಗೆ ಪತ್ರ ಸಲ್ಲಿಸಿದರು.
ಅಲ್ಲದೆ, ಪೊಲೀಸ್ ಆಯುಕ್ತರಿಗೆ ಪ್ರತ್ಯೇಕ ಪತ್ರ ಬರೆದು ಇಬ್ಬರ ನಡುವೆ ಒಪ್ಪಂದ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ವೋರಾ ವಿರುದ್ಧದ ದೂರನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. 2019ರಲ್ಲಿ ಮೆರ್ವಿನ್ ಫರ್ನಾಂಡಿಸ್ ಅವರಿಂದ ಈ ಭೂಮಿಯನ್ನು ಖರೀದಿಸಲಾಗಿತ್ತು ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ 2015ರಲ್ಲೇ ಎಫ್‌ಐಆರ್ ದಾಖಲಾಗಿದ್ದರೂ ಸಿಐಡಿ ವರದಿ ವಿಳಂಬವಾಗಿರುವುದನ್ನು ಪ್ರಶ್ನಿಸಿರುವ ವೋರಾ, ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಭಾಗಿಯಾಗಿರುವ ಬಿಲ್ಡರ್‌ಗಳು ಹಾಗೂ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
