Homeಜಿಲ್ಲಾ ಸುದ್ದಿಗಳುತುಮಕೂರು ದಸರಾ-2026ರ ಲಾಂಛನ ಬಿಡುಗಡೆ

ತುಮಕೂರು ದಸರಾ-2026ರ ಲಾಂಛನ ಬಿಡುಗಡೆ

ತುಮಕೂರು, ಸೆ.16- ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಅವರು ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯಸಭಾಂಗಣದಲ್ಲಿ ತುಮಕೂರು ದಸರಾ-2026ರ ಲಾಂಛನ ಬಿಡುಗಡೆ ಮಾಡಿದರು.

ಈ ಬಾರಿ ತುಮಕೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಕ್ಟೋಬರ್‌ 11ರಿಂದ 21ರವರೆಗೆ ನಡೆಯಲಿರುವ ಉತ್ಸವದ ವಸ್ತುಪ್ರದರ್ಶನದಲ್ಲಿ ಎಐ ಹಾಗೂ ಆಧುನಿಕ ತಂತ್ರಜ್ಞಾನಗಳ ಕುರಿತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ದಸರಾ ಉತ್ಸವವು ಜಿಲ್ಲೆಯ ಸಂಸ್ಕೃತಿ, ಪರಂಪರೆ, ಇತಿಹಾಸ ಹಾಗೂ ಕಲೆಯನ್ನು ಪರಿಚಯಿಸುವ ಊರ ಹಬ್ಬವಾಗಬೇಕು. ಮಕ್ಕಳು, ಯುವಕರು ಹಾಗೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದರೊಂದಿಗೆ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಉತ್ಸವ ಆಚರಿಸಬೇಕು ಎಂದು ಕರೆ ನೀಡಿದರು.

ಅಮಾನಿಕೆರೆಯನ್ನು ಅಭಿವೃದ್ಧಿಪಡಿಸಿ ಪ್ರಮುಖ ಆಕರ್ಷಣೆಯನ್ನಾಗಿ ರೂಪಿಸಲಾಗುತ್ತಿದ್ದು, ಸುಮಾರು 100 ಅಡಿ ಎತ್ತರಕ್ಕೆ ಚಿಮುವ ಕಾರಂಜಿ ನಿರ್ಮಿಸಲಾಗುತ್ತಿದೆ. ನಗರದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ವೃತ್ತವನ್ನು ಸಹ ಆಕರ್ಷಣೆಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮಕ್ಕಳನ್ನು ಹಾಗೂ ವಾಹನ ಪ್ರಿಯರನ್ನು ಆಕರ್ಷಿಸಲು ಆಧುನಿಕ ಕಾರುಗಳ ಪ್ರದರ್ಶನವನ್ನೂ ಆಯೋಜಿಸಲಾಗುವುದು ಎಂದರು.

ಕಳೆದ ಎರಡು ವರ್ಷಗಳಲ್ಲಿ ತುಮಕೂರು ದಸರಾ ಯಶಸ್ವಿಯಾಗಿದ್ದು, ವೈಜ್ಞಾನಿಕ ವಸ್ತುಪ್ರದರ್ಶನ, ಯುವ ದಸರಾ, ಮಹಿಳಾ ದಸರಾ, ಕವಿಗೋಷ್ಠಿ, ನವದುರ್ಗೆಯರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹೆಲಿಕಾಪ್ಟರ್‌ ಪ್ರದರ್ಶನ ಜನರ ಗಮನ ಸೆಳೆದಿದ್ದವು ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್‌, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ್‌ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ ರಾಜ್‌ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್‌‍, ಜಿಪಂ ಸಿಇಒ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕೆ.ವಿ. ಅಶೋಕ್‌‍, ಪಾಲಿಕೆ ಆಯುಕ್ತೆ ಶುಭಾ, ಅಪರ ಜಿಲ್ಲಾಧಿಕಾರಿ ಡಾ. ಎನ್‌. ತಿಪ್ಪೇಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
spot_img

Latest News