ಅರಸೀಕೆರೆ, ಸೆ.16- ಸ್ಥಳೀಯರಾಗಿರುವ ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಅವರು ನಗರದ ಪ್ರಸಿದ್ಧ ಪ್ರಸನ್ನ ಗಣಪತಿ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಂದೆ ಅಡವಿಸ್ವಾಮಿ, ಪತ್ನಿ ಧನ್ಯತಾ ಹಾಗೂ ಪುತ್ರ ಎರೆಯ ಅವರೊಂದಿಗೆ ಆಗಮಿಸಿದ ಅವರು, ವಿಶೇಷ ಪೂಜೆ ಸಲ್ಲಿಸಿ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.ಬಳಿಕ ಮಾತನಾಡಿದ ಧನಂಜಯ್, ಅರಸೀಕೆರೆಯ ಪ್ರಸನ್ನ ಗಣಪತಿ ಬಾಲ್ಯದಿಂದಲೂ ದೊಡ್ಡ ಗಣಪತಿ ಎಂದೇ ಪ್ರಸಿದ್ಧಿ ಪಡೆದಿದ್ದು, ಚಿಕ್ಕಂದಿನಿಂದಲೂ ಇಲ್ಲಿ ಗಣಪತಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಬೆಳೆದಿರುವುದರಿಂದ ದೇವಸ್ಥಾನದೊಂದಿಗೆ ಭಾವನಾತಕ ಸಂಬಂಧವಿದೆ ಎಂದು ನೆನಪಿಸಿಕೊಂಡರು.
ಈ ಬಾರಿ ಅದ್ಧೂರಿಯಾಗಿ ಗಣಪತಿ ಉತ್ಸವ ನಡೆಯುತ್ತಿದ್ದು, ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಬೇಕು ಎಂಬ ಆಸೆ ಇತ್ತು. ಇಲ್ಲಿಗೆ ಬಂದಾಗಲೆಲ್ಲಾ ಸಂತೋಷವಾಗುತ್ತದೆ ಎಂದರು.
ದೇವಸ್ಥಾನದ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋರಂಜನಾತ್ಮಕವಾಗಿದ್ದು, ವಿವಿಧೆಡೆಯಿಂದ ಆಗಮಿಸುವ ಕಲಾವಿದರು ತಮ ಪ್ರತಿಭೆ ಪ್ರದರ್ಶಿಸುವ ಮೂಲಕ ಉತ್ಸವಕ್ಕೆ ಮೆರುಗು ನೀಡುತ್ತಿದ್ದಾರೆ ಎಂದು ಹೇಳಿದರು.ತಮ ನಟನೆಯ ಅಣ್ಣಾ ಫ್ರಮ್ ಮೆಕ್ಸಿಕೋ ಚಿತ್ರ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದ್ದು, ಹೆಗ್ಗಣ ಮುದ್ದು ಸೇರಿದಂತೆ ಮತ್ತೊಂದು ಚಿತ್ರವೂ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ಚಿತ್ರಗಳನ್ನು ವೀಕ್ಷಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು. ಬಳಿಕ ಧನಂಜಯ್ ಅವರು ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂತಸ ಹಂಚಿಕೊಂಡರು.
