ರಿಯಾದ್, ಸೆ.16- ಪವಿತ್ರ ಸ್ಥಳ ಮೆಕ್ಕಾ ಮೇಲೆ ಹೌತಿ ಬಂಡುಕೋರರು ನಡೆಸಲು ಉದ್ದೇಶಿಸಿದ್ದ ಡ್ರೋನ್ ದಾಳಿಯನ್ನು ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ.ಮೆಕ್ಕಾದ ದಕ್ಷಿಣ ಭಾಗದಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ಹಾರಿಸಿದ್ದ ಸ್ಫೋಟಕ ಡ್ರೋನ್ ಅನ್ನು ರಾಯಲ್ ಸೌದಿ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಡ್ರೋನ್ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮುನ್ನವೇ ಅದನ್ನು ಹೊಡೆದು ನಾಶಪಡಿಸಲಾಗಿದೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ.
ಈ ಕೃತ್ಯವನ್ನು ಕಟುವಾಗಿ ಖಂಡಿಸಿರುವ ಸೌದಿ ಸೇನೆ, ಮೆಕ್ಕಾ ಮತ್ತು ಮದೀನಾದ ಪವಿತ್ರ ಕ್ಷೇತ್ರಗಳು ಹಾಗೂ ಯಾತ್ರಿಕರ ಭದ್ರತೆ ತಮಗೆ ಮೊದಲ ಆದ್ಯತೆ ಎಂದು ಹೇಳಿದೆ.ಸೌದಿ ಒಕ್ಕೂಟದ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಲ್ಕಿ ನೀಡಿರುವ ಮಾಹಿತಿಯಂತೆ, ನಿನ್ನೆ ಸಂಜೆ ಮೆಕ್ಕಾದ ದಕ್ಷಿಣ ದಿಕ್ಕಿನಲ್ಲಿ ಈ ಡ್ರೋನ್ ಪತ್ತೆಯಾಗಿದ್ದು, ಕೂಡಲೇ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಲಾಗಿದೆ.
ಈ ದಾಳಿಯನ್ನು ಭಯೋತ್ಪಾದಕ ಹಾಗೂ ಪ್ರತಿಕೂಲ ಕೃತ್ಯ ಎಂದು ಕರೆದಿರುವ ಸೌದಿ ಒಕ್ಕೂಟ, ಪವಿತ್ರ ಸ್ಥಳಗಳ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಹೌತಿಗಳ ವಿರುದ್ಧ ಅಗತ್ಯ ಬಿದ್ದರೆ ಕಠಿಣ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದೆ.
ಜುಲೈ 2017ರಲ್ಲಿ ಹೌತಿಗಳು ಮೆಕ್ಕಾದ ದಿಕ್ಕಿಗೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ್ದರು. ಆ ಘಟನೆಯ ಬಳಿಕ ಪವಿತ್ರ ನಗರವನ್ನು ಗುರಿಯಾಗಿಸಿಕೊಂಡು ನಡೆದ ಎರಡನೇ ಪ್ರಮುಖ ಯತ್ನ ಇದಾಗಿದೆ ಎಂದು ಸೌದಿ ಪಡೆಗಳು ತಿಳಿಸಿವೆ.
ಇತ್ತ, ಮೆಕ್ಕಾವನ್ನು ಗುರಿಯಾಗಿಸಿಕೊಂಡಿದ್ದ ಆರೋಪವನ್ನು ಹೌತಿ ಬಂಡುಕೋರರು ನಿರಾಕರಿಸಿದ್ದಾರೆ. ಬದಲಾಗಿ, ಸೌದಿ ಅರೇಬಿಯಾದ ಎಫ್-15 ಮತ್ತು ಟೈಫೂನ್ ಯುದ್ಧವಿಮಾನಗಳು ಯೆಮೆನ್‌ನ ಶಾಲೆಗಳು, ಸೇತುವೆಗಳು ಮತ್ತು ರಸ್ತೆಗಳು ಸೇರಿದಂತೆ ನಾಗರಿಕ ಪ್ರದೇಶಗಳ ಮೇಲೆ 24 ಗಂಟೆಗಳಲ್ಲಿ 52 ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ ಆರೋಪಿಸಿದ್ದಾರೆ.
