Homeಮನರಂಜನೆನಟ ಧನ್ವೀರ್‌ ವಿರುದ್ಧ 3 ಎಫ್‌ಐಆರ್‌ ದಾಖಲು

ನಟ ಧನ್ವೀರ್‌ ವಿರುದ್ಧ 3 ಎಫ್‌ಐಆರ್‌ ದಾಖಲು

ಬೆಂಗಳೂರು,ಅ.29- ನಟ ಧನ್ವೀರ್‌ ಮತ್ತು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಗರದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ಧನ್ವೀರ್‌ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಆರ್‌ಆರ್‌ ನಗರ : ವಿಜಯಲಕ್ಷ್ಮಿ ಅವರು ಮ್ಯಾನೇಜರ್‌ ನಾಗರಾಜ್‌ ಅವರನ್ನು ಧನ್ವೀರ್‌ ದೂರವಾಣಿ ಮುಖಾಂತರ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿತ್ತು. ಇದೀಗ ಎಫ್‌ಐಆರ್‌ ದಾಖಲಿಸಿಕೊಂಡಿರುವ ಆರ್‌ಆರ್‌ ನಗರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಸವೇಶ್ವರನಗರ : ನಿರ್ಮಾಪಕ ಬೋಜರಾಜ ರೈ ಎಂಬುವರು ನಟ ಧನ್ವೀರ್‌ ವಿರುದ್ಧ ದೂರು ನೀಡಿದ್ದು, ಬಸವೇಶ್ವರನಗರ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮತ್ತೊಂದು ಎಫ್‌ಐಆರ್‌ ದಾಖಲು : ನಟ ಧನ್ವೀರ್‌ ವಿರುದ್ಧ ಕಾನೂನು ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಚಾಮರಾಜಪೇಟೆ ಪೊಲೀಸ್‌‍ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

ಸ್ಟೈಲಿಶ್‌ ಸ್ಟಾರ್‌ ಝೈದ್‌ ಖಾನ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ವಿನಾಯಕ ಎಂಬುವರು ಚಾಮರಾಜಪೇಟೆ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು, ನಟ ಝೈದ್‌ ಖಾನ್‌, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿ ಧನ್ವೀರ್‌ ವಿರುದ್ಧ ದೂರು ನೀಡಿದ್ದಾರೆ.

ಈ ಮೊದಲು ಎನ್‌ಸಿಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ನ್ಯಾಯಾಲಯದ ಆದೇಶದಂತೆ ಮೂರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏನಿದು ವಾಕ್ಸಮರ : ನಟ ದರ್ಶನ್‌ ಜೈಲಿನಲ್ಲಿರುವಾಗ ಹಣಕಾಸು ವಿಚಾರವಾಗಿ ಕಾನೂನು ವೆಚ್ಚ ಹಾಗೂ ಇತರ ಅಗತ್ಯತೆಗಳಿಗಾಗಿ ಧನ್ವೀರ್‌ ಕೋಟ್ಯಂತರ ರೂ. ಹಣದ ವಹಿವಾಟು ನಡೆಸಿದ್ದಾರೆ. ವಿಜಯಲಕ್ಷ್ಮಿ ಅವರಿಂದ ಪಡೆದಿದ್ದ ಹಣವನ್ನು ಧನ್ವೀರ್‌ ಸರಿಯಾಗಿ ಹಿಂದಿರುಗಿಸದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಇವರಿಬ್ಬರ ನಡುವಿನ ಫೋನ್‌ ಸಂಭಾಷಣೆಯ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪರಸ್ಪರ ಕಾನೂನು ಸಮರಕ್ಕೆ ಕಾರಣವಾಗಿದೆ. ಸದ್ಯ ಆಯಾಯ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು, ಸಿಸಿ ಟಿವಿ ದೃಶ್ಯಾವಳಿ ಹಾಗೂ ಮೊಬೈಲ್‌ ಸಂಭಾಷಣೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಟ ಧನ್ವೀರ್‌ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್‌‍ ನೀಡುವ ಸಾಧ್ಯತೆಯಿದೆ. ಬ್ಯಾಟರಾಯನಪುರ : ಹಣಕಾಸಿನ ವಿಚಾರ ಮತ್ತು ಕಾರನ್ನು ವಾಪಸ್‌‍ ನೀಡದ ಹಾಗೂ ವಿಮಾನ ಟಿಕೆಟ್‌ ಹಣ ಪಾವತಿಸದ ಕಾರಣಕ್ಕೆ ಗೌರವ್‌ ಎಂಬುವರು ಧನ್ವೀರ್‌ ವಿರುದ್ಧ ಬ್ಯಾಟರಾಯನಪುರ ಪೊಲೀಸ್‌‍ ಠಾಣೆಯಲ್ಲಿ ಎನ್‌ಸಿಆರ್‌ ದಾಖಲಾಗಿದೆ.

RELATED ARTICLES

Latest News