ಬೆಂಗಳೂರು,ಅ.29- ಎಸ್ಐಆರ್ ನಂತರ ಜಿಬಿಎ ವ್ಯಾಪ್ತಿಯಲ್ಲಿ ಕೇವಲ 59,08, 151 ಮತದಾರರು ಮಾತ್ರ ಉಳಿದಿದ್ದಾರೆ. ಈ ಮತದಾರರ ಆಧಾರದ ಮೇಲೆ ಹೇಗೆ
ಐದು ಪಾಲಿಕೆಗಳಿಗೆ ಚುನಾವಣೆ ನಡೆಸುವುದು ಎನ್ನುವ ತಲೆನೋವು ಶುರುವಾಗಿದೆ.
ಲೆಕ್ಕಾಚಾರದ ಪ್ರಕಾರ ನಗರದಲ್ಲಿದ್ದ 48,00,565 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ವಾರ್ಡ್ವಾರು ಮತದಾರರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಸಾಧ್ಯತೆಯಿದ್ದು, ಮುಂಬರುವ ಜಿಬಿಎ ಚುನಾವಣೆಯ ಸಿದ್ಧತೆಗೂ ಸವಾಲು ಎದುರಾಗಲಿದೆ.
369 ವಾರ್ಡ್ಗಳ ಮತದಾರರ ಲೆಕ್ಕಾಚಾರ ಬುಡಮೇಲು!:ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 369 ವಾರ್ಡ್ಗಳಲ್ಲಿ ಗೂ ಮೊದಲು ಸರಾಸರಿ 24,100 ಮತದಾರರಿದ್ದರು ಎಂದು ಅಂದಾಜಿಸಲಾಗಿತ್ತು. ಆದರೆ ಪರಿಷ್ಕರಣೆಯ ಬಳಿಕ ವಾರ್ಡ್ವೊಂದರ ಸರಾಸರಿ ಮತದಾರರ ಸಂಖ್ಯೆ ಸುಮಾರು 16 ಸಾವಿರಕ್ಕೆ ಇಳಿದಿದೆ. ಮತದಾರರ ಸಂಖ್ಯೆಯಲ್ಲಿನ ಈ ಭಾರೀ ವ್ಯತ್ಯಾಸವು ವಾರ್ಡ್ವಾರು ಚುನಾವಣಾ ಲೆಕ್ಕಾಚಾರವನ್ನೇ ಬದಲಿಸುವ ಸಾಧ್ಯತೆಯಿದೆ.
ವಿಶೇಷವಾಗಿ, ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿಯೂ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಲ್ಲಿ ಕಡಿಮೆಯಾಗಿಯೂ ಇರಬಹುದೆಂಬ ನಿರೀಕ್ಷೆಯಿದೆ. ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದು ವಾರ್ಡ್ಗಳ ನಡುವಿನ ಮತದಾರರ ಸಂಖ್ಯೆಯ ಅಸಮತೋಲನಕ್ಕೆ ಕಾರಣವಾಗಬಹುದು.
ಇದರ ನಡುವೆ, ವಾರ್ಡ್ವಾರು ಮತದಾರರ ವಿಂಗಡಣೆ ಮಾಡುವಾಗ 2011ರ ಜನಗಣತಿಯ ಮಾನದಂಡಗಳನ್ನು ಪಾಲಿಸಬೇಕಾದ ಅಗತ್ಯವೂ ಇದೆ. ಮತದಾರರ ಪರಿಷ್ಕೃತ ಸಂಖ್ಯೆ, ಜನಸಂಖ್ಯೆಯ ಹಂಚಿಕೆ ಹಾಗೂ ವಾರ್ಡ್ಗಳ ವ್ಯಾಪ್ತಿಯನ್ನು ಸಮನ್ವಯಗೊಳಿಸುವುದು ಜಿಬಿಎಗೆ ಪ್ರಮುಖ ಸವಾಲಾಗಲಿದೆ.
ಯಾವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಮತದಾರರು?:
ಲಭ್ಯವಾಗಿರುವ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಗಳಲ್ಲಿನ ಮತದಾರರ ವಿವರ ಹೀಗಿದೆ:ಬೆಂಗಳೂರು ನಗರ: 24,01,939, ಬೆಂಗಳೂರು ಉತ್ತರ: 13,25,284, ಬೆಂಗಳೂರು ಕೇಂದ್ರ: 10,67,374 ಹಾಗೂ ಬೆಂಗಳೂರು ದಕ್ಷಿಣದಲ್ಲಿ 11,13,554 ಮತದಾರರಿದ್ದು, ಒಟ್ಟು: 59,08,151 ಮತದಾರರಿದ್ದಾರೆ.
ಡಿಸೆಂಬರ್ ಒಳಗೆ ಚುನಾವಣೆ ನಡೆಸುವ ಸವಾಲು:
ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಬಿಎ ಚುನಾವಣೆ ನಡೆಸುವ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಐದು ನಗರ ಪಾಲಿಕೆಗಳ ಚುನಾವಣೆಗಳನ್ನು ಡಿಸೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗದ ಮುಂದಿರುವ ಸಮಯಾವಕಾಶ ಸೀಮಿತವಾಗಿದೆ.
ಡಿಸೆಂಬರ್ ಅಂತ್ಯದ ಗಡುವಿಗೆ ಇಂದಿನಿಂದ ಸುಮಾರು 65 ದಿನಗಳು ಮಾತ್ರ ಬಾಕಿಯಿದ್ದು, ಚುನಾವಣೆಯ ಎಲ್ಲ ಪೂರ್ವಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ರಾಜ್ಯ ಚುನಾವಣಾ ಆಯೋಗದ ನಿಯಮಾನುಸಾರ ಚುನಾವಣಾ ಪ್ರಕ್ರಿಯೆಗೆ ಗರಿಷ್ಠ 30 ದಿನಗಳು ಬೇಕಾಗಬಹುದು ಎಂಬ ಲೆಕ್ಕಾಚಾರವೂ ಇದೆ.
ಚುನಾವಣೆಗೆ ಮುಂದಿನ ಪ್ರಕ್ರಿಯೆಗಳೇನು?ಮೊದಲಿಗೆ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ವಾರ್ಡ್ವಾರು ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಬೇಕಿದೆ. ನಂತರ ಪ್ರಕಟಿಸಿರುವ ಮೀಸಲಾತಿಯನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಬಹುದು. ಮೀಸಲಾತಿ ಅಥವಾ ವಾರ್ಡ್ವಾರು ಪಟ್ಟಿಗಳಲ್ಲಿ ಬದಲಾವಣೆಗಳಿದ್ದರೆ, ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಬೇಕಾಗುತ್ತದೆ.
ಚುನಾವಣೆಯ ವೇಳಾಪಟ್ಟಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಾದರೆ, ನವೆಂಬರ್ ಮೂರನೇ ವಾರದೋಳಗೆ ಚುನಾವಣೆ ಘೋಷಣೆಯಾಗಬೇಕು ಎಂಬ ಲೆಕ್ಕಾಚಾರವಿದೆ. ನವೆಂಬರ್ 25 ರೊಳಗೆ ನೀತಿ ಸಂಹಿತೆ ಜಾರಿಗೊಳಿಸಿ ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಯೋಜನೆ ರೂಪಿಸಬೇಕಾಗುತ್ತದೆ.
ಡಿಸೆಂಬರ್ 31ರೊಳಗೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸುವುದು ಮುಂದಿರುವ ಗುರಿಯಾಗಬಹುದು.ಆದರೆ, ಮತದಾರರ ಪಟ್ಟಿಯ ಸಿದ್ಧತೆ, ಮೀಸಲಾತಿ ಮರುಪರಿಶೀಲನೆ, ಆಕ್ಷೇಪಣೆಗಳ ವಿಲೇವಾರಿ ಹಾಗೂ ಚುನಾವಣಾ ವೇಳಾಪಟ್ಟಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಸುಲಭದ ಕೆಲಸವಲ್ಲ. ಹೀಗಾಗಿ, ಎಸ್ಐಆರ್ ಬಳಿಕದ ಮತದಾರರ ಸಂಖ್ಯೆಯಲ್ಲಿನ ಭಾರೀ ಇಳಿಕೆ ಮತ್ತು ವಾರ್ಡ್ವಾರು ಅಸಮತೋಲನದ ನಡುವೆಯೇ ಜಿಬಿಎ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ, ಮತದಾರರ ಪಟ್ಟಿಯ ಪರಿಷ್ಕರಣೆ ಬೆಂಗಳೂರಿನ ಚುನಾವಣಾ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದ್ದು, ಡಿಸೆಂಬರ್ ಗಡುವಿನೊಳಗೆ ಚುನಾವಣೆ ನಡೆಸಲು ಆಯೋಗ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.
