Homeರಾಜ್ಯಮತ್ತೆ ಹಾಲು, ಬಸ್‌‍ ಪ್ರಯಾಣ ದರ ಏರಿಕೆ 'ಗ್ಯಾರಂಟಿ'

ಮತ್ತೆ ಹಾಲು, ಬಸ್‌‍ ಪ್ರಯಾಣ ದರ ಏರಿಕೆ ‘ಗ್ಯಾರಂಟಿ’

ಬೆಂಗಳೂರು, ಅ.29- ವಿಧಾನ ಪರಿಷತ್‌ ಚುನಾವಣೆ ಮುಗಿದ ಬೆನ್ನಲ್ಲೆ ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ಹಾಲು ಮತ್ತು ಬಸ್‌‍ ಪ್ರಯಾಣ ದರ ಏರಿಕೆಯ ಗದಾಪ್ರಹಾರ ನಡೆಸಲು ಮುಂದಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಹಲವಾರು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.

ಅದರಲ್ಲಿ ಮುಖ್ಯವಾಗಿ ಜನಸಾಮಾನ್ಯರು ಹಾಗೂ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಹಾಲಿನ ದರ ಏರಿಕೆಗೆ ಗಂಭೀರ ಚರ್ಚೆಗಳಾಗಿವೆ. ಈ ಮೊದಲು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಆದರೆ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಕಾರಣಕ್ಕೆ ಎರಡು ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು.

ಚುನಾವಣೆ ಮುಗಿದ ಬೆನ್ನಲ್ಲೆ ಏಕಕಾಲಕ್ಕೆ ಹಾಲು ಮತ್ತು ಬಸ್‌‍ ಪ್ರಯಾಣ ದರಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಕ್ಕಿ, ಹಾಲು ಬೇಳೆ, ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಸೇರಿದಂತೆ ನಾನಾ ರೀತಿಯ ದಿನಸಿ ಬೆಲೆ ಹೆಚ್ಚಳದಿಂದ ಈಗಾಗಲೇ ಪರದಾಡುತ್ತಿರುವ ಮಧ್ಯಮ ವರ್ಗಕ್ಕೆ ಹಾಲು ಮತ್ತು ಬಸ್‌‍ ಪ್ರಯಾಣ ದರ ಗಾಯದ ಮೇಲೆ ಬರೆ ಎಳೆದಂತಾಗಿದೆ.

2026ರ ಅಕ್ಟೋಬರ್‌ 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ಲೀಟರ್‌ಗೆ ಶೇ.8ರಷ್ಟು ದರ ಹೆಚ್ಚಿಸುವ ಪ್ರಸ್ತಾವನೆ ಚರ್ಚೆಯಾಗಿತ್ತು. ಪ್ರಸ್ತಾವಿತ ಹೆಚ್ಚಳದಲ್ಲಿ ಪ್ರತಿ ಲೀಟರ್‌ಗೆ 6 ರೂಪಾಯಿ ಮೊತ್ತವನ್ನು ಹಾಲು ಉತ್ಪಾದಕರಿಗೆ ಹಾಗೂ 2ರೂಪಾಯಿಗಳನ್ನು ಹಾಲು ಒಕ್ಕೂಟಗಳಿಗೆ ಹಂಚಿಕೆ ಮಾಡುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿದ್ದವು.

ಜಾನುವಾರುಗಳ ಮೇವು, ಪಶು ಆಹಾರ, ಔಷಧೋಪಚಾರ, ಸಾಗಣೆ ಮತ್ತು ಹಾಲಿನ ಪ್ಯಾಕೆಟ್‌ಗಳ ತಯಾರಿಕಾ ವೆಚ್ಚ ಹೆಚ್ಚಾಗಿದೆ. ಬರ ಪರಿಸ್ಥಿತಿಯಿಂದ ಮೇವಿನ ಲಭ್ಯತೆ ಕಡಿಮೆಯಾಗಿದ್ದು, ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದು ಒಕ್ಕೂಟಗಳ ವಾದವಾಗಿದೆ.

ಹಾಲು ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಒಕ್ಕೂಟಗಳ ನಿರ್ವಹಣಾ ವೆಚ್ಚ ಸರಿ ದೂಗಿಸಲು ದರ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಹಾಲು ಉತ್ಪಾದಕರಿಗೆ ಹಿಂದಿನ ಸರ್ಕಾರಗಳಂತೆ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಬೇಕು ಮತ್ತು ಒಕ್ಕೂಟಗಳಿಗೆ ಸಹಾಯ ಧನ ನೀಡಿ ನಷ್ಟವನ್ನು ಸರಿದೂಗಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ಕಾರಣಕ್ಕೆ ತಳ್ಳಿ ಹಾಕಿದೆ.

ಉತ್ಪಾದಕರಿಂದ ಪ್ರತಿಲೀಟರ್‌ ಹಾಲನ್ನು 35ರೂಪಾಯಿಗೆ ಖರೀದಿಸಲಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ 41.50, ಕೇರಳದಲ್ಲಿ 41.80 ಹಾಗೂ ತಮಿಳುನಾಡಿನಲ್ಲಿ 42.24ರಷ್ಟು ಖರೀದಿ ದರವಿದೆ ಎಂದು ಹಾಲು ಒಕ್ಕೂಟಗಳು ಲೆಕ್ಕಾಚಾರ ಹೇಳುತ್ತಿವೆ. ಈ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಹೈನುಗಾರರಿಗೆ ಸೂಕ್ತ ದರ ನೀಡಬೇಕು ಎಂಬುದು ಒಕ್ಕೂಟಗಳ ಬೇಡಿಕೆಯಾಗಿದೆ.

ದರ ಏರಿಕೆ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಪ್ರಸ್ತುತ ಪ್ರತಿ ಲೀಟರ್‌ಗೆ 46 ಇರುವ ನಂದಿನಿ ನೀಲಿ ಪ್ಯಾಕೆಟ್‌ನ ಸಾಮಾನ್ಯ ಹಾಲಿನ ದರ 54ರೂ.ಗೆ ಏರಿಕೆಯಾಗಬಹುದು. ಇದರಿಂದ ಪ್ರತಿದಿನ ಹಾಲು ಖರೀದಿಸುವ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಹಾಲಿನ ದರದ ಜೊತೆಗೆ ಮೊಸರು ಮತ್ತು ಇತರ ಹಾಲಿನ ಉತ್ಪನ್ನಗಳ ಮೇಲೂ ಪರಿಣಾಮವಾಗಲಿದೆ.

ಕಳೆದ ಕೆಲವು ವರ್ಷಗಳಲ್ಲಿ ನಂದಿನಿ ಹಾಲಿನ ದರವನ್ನು ಹಲವು ಬಾರಿ ಪರಿಷ್ಕರಿಸಲಾಗಿದೆ. 2022ರ ನವೆಂಬರ್‌ನಲ್ಲಿ ಲೀಟರ್‌ಗೆ 3, 2023ರ ಜುಲೈನಲ್ಲಿ 3, 2024ರ ಜೂನ್‌ನಲ್ಲಿ 2 ಹಾಗೂ 2025ರ ಮಾರ್ಚ್‌ನಲ್ಲಿ 4 ರೂ.ನಷ್ಟು ದರ ಹೆಚ್ಚಿಸಲಾಗಿತ್ತು. ಈಗ ಪ್ರಸ್ತಾವಿತ ಹೆಚ್ಚಳ ಜಾರಿಯಾದರೆ 2022ರ ನವೆಂಬರ್‌ನಿಂದ ಐದನೇ ಬಾರಿ ದರ ಪರಿಷ್ಕರಣೆ ಮಾಡಿದಂತಾಗುತ್ತದೆ. ನವೆಂಬರ್‌ 1ರಿಂದ ಹೊಸ ದರ ಜಾರಿಯಾಗುವ ಸಾಧ್ಯತೆ ಇದೆ.

ಹಾಲಿನ ದರದ ಜೊತೆಯಲ್ಲೇ ಸಾರಿಗೆ ಸಂಸ್ಥೆಗಳ ಬಸ್‌‍ ಪ್ರಯಾಣ ದರ ಹೆಚ್ಚಳದ ಪ್ರಸ್ತಾವಯೂ ಚರ್ಚೆಯಾಗಿದೆ. ನಿವೃತ್ತ ಐಎಎಸ್‌‍ ಅಧಿಕಾರಿ ಅತುಲ್‌ ತಿವಾರಿ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ನಿಗಮಗಳ ಪ್ರಯಾಣ ದರ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿದೆ.
ಸಮಿತಿಯ ಶಿಫಾರಸ್ಸಿನ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗಗಳ ಪ್ರಯಾಣ ದರವನ್ನು ಶೇಕಡಾ 25ರಿಂದ 26ರಷ್ಟು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದರವನ್ನು ಶೇಕಡಾ 42ರಷ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಪ್ರಯಾಣಿಕರ ಮೇಲಿನ ಹೊರೆ ಪರಿಗಣಿಸಿ ಇತರ ಮೂರು ನಿಗಮಗಳಲ್ಲಿ ಶೇಕಡಾ 13ರಿಂದ 15ರಷ್ಟು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಶೇಕಡಾ 15ರಿಂದ 17ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ.
ಡೀಸೆಲ್‌ ಬೆಲೆ ಏರಿಕೆ,ಸಾರಿಗೆ ನೌಕರರ ವೇತನ, ನಿವೃತ್ತಿ ಸೌಲಭ್ಯಗಳು, ಬಸ್‌‍ಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚ ಹೆಚ್ಚಳದಿಂದ ನಿಗಮಗಳು ನಷ್ಟ ಅನುಭವಿಸುತ್ತಿದ್ದು, 2025-26ನೇ ಹಣಕಾಸು ವರ್ಷದಲ್ಲಿ ನಾಲ್ಕು ನಿಗಮಗಳ ಒಟ್ಟು ಆದಾಯ 14,991 ಕೋಟಿ ಇದ್ದರೆ, ವೆಚ್ಚ 16,519 ಕೋಟಿಗೆ ತಲುಪಿದ್ದು, 1,527 ಕೋಟಿ ರೂ.ನಷ್ಟ ದಾಖಲಾಗಿದೆ.

ಮಹಿಳೆಯರಿಗೆ ಉಚಿತ ಬಸ್‌‍ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯಡಿ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಬರಬೇಕಾದ ಹಣವೂ ಬಾಕಿ ಉಳಿದಿದೆ. 2026ರ ಅಕ್ಟೋಬರ್‌ ಆರಂಭದ ವರದಿಯ ಪ್ರಕಾರ, ನಾಲ್ಕು ನಿಗಮಗಳ ಒಟ್ಟು ಹೊಣೆಗಾರಿಕೆ 8,095 ಕೋಟಿಯಷ್ಟಿದ್ದು, ಶಕ್ತಿ ಯೋಜನೆಯಡಿ ಸರ್ಕಾರದಿಂದ ಬರಬೇಕಾದ ಬಾಕಿ ಮೊತ್ತ 5,648 ಕೋಟಿಯಷ್ಟಿದೆ. ಇದರಿಂದ ನಿಗಮಗಳ ದೈನಂದಿನ ಕಾರ್ಯಾಚರಣೆಯ ಮೇಲೂ ಒತ್ತಡ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಹೆಚ್ಚುತ್ತಿರುವ ಆರ್ಥಿಕ ಹೊರೆ ನಿಭಾಯಿಸಲು ದರ ಏರಿಕೆ ಅನಿವಾರ್ಯ ಎಂದು ಪ್ರತಿಪಾದಿಸಲಾಗುತ್ತಿದೆ.
2025ರ ಜನವರಿಯಲ್ಲಿ ನಾಲ್ಕು ಸಾರಿಗೆ ನಿಗಮಗಳ ಬಸ್‌‍ ಪ್ರಯಾಣ ದರವನ್ನು ಶೇಕಡಾ 15ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮೆ ದರ ಏರಿಕೆಯಾದರೆ ಪ್ರತಿದಿನ ಬಸ್‌‍ಗಳನ್ನು ಅವಲಂಬಿಸುವ ಮಧ್ಯಮ ವರ್ಗಕ್ಕೆ ಭಾರೀ ಹೊರೆ ಬೀಳಲಿದೆ.

RELATED ARTICLES

Latest News