Homeರಾಜಕೀಯದೋಸ್ತಿಗಳಲ್ಲಿ ಹೊಸ ಉತ್ಸಾಹದ ಸಂಚಲನ ಮೂಡಿಸಿದ ಪರಿಷತ್‌ ಚುನಾವಣಾ ಫಲಿತಾಂಶ

ದೋಸ್ತಿಗಳಲ್ಲಿ ಹೊಸ ಉತ್ಸಾಹದ ಸಂಚಲನ ಮೂಡಿಸಿದ ಪರಿಷತ್‌ ಚುನಾವಣಾ ಫಲಿತಾಂಶ

ಬೆಂಗಳೂರು,ಅ.29- ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟದ ಎನ್‌ಡಿಎ ಅಭ್ಯರ್ಥಿ ಎ.ಪಿ.ರಂಗನಾಥ ಅವರು ಪ್ರಬಲ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟ ಪುಟ್ಟಣ್ಣ ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿರುವುದು ಜೆಡಿಎಸ್‌‍ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದೆ. ವಿಧಾನಪರಿಷತ್‌ನ ನಾಲ್ಕೂ ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಗೆದ್ದುಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ವತಿಯಿಂದ ಇಂದು ವಿಧಾನಸೌಧದಲ್ಲಿ ಅಭಿನಂದನಾ ಸಭೆ ಆಯೋಜಿಸಲಾಗಿತ್ತು. ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಹಾಗೂ ಶಾಸಕ ಸುರೇಶ್‌ ಬಾಬು ಮತ್ತು ವಿಧಾನಪರಿಷತ್‌ನ ಜೆಡಿಎಸ್‌‍ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಅವರು, ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಎ.ಪಿ.ರಂಗನಾಥ ಅವರನ್ನು ಹೃತ್ಪೂರ್ವಕವಾಗಿ ಸನಾನಿಸಿ ಅಭಿನಂದಿಸಿದರು. ಈ ಕಾರ್ಯಕ್ರಮವು ವಿಜಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಪಕ್ಷದ ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಹಾಗೂ ಜೆಡಿಎಸ್‌‍ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ. ಶರವಣ ಅವರು, ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರದ ಪತನದ ಆರಂಭವಾಗಿದೆ. ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟವು ಎನ್‌ಡಿಎ ಹೆಸರಿನಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮಿದೆ ಎಂದು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಹೀನಾಯ ಸೋಲು ಅನುಭವಿಸಲಿದೆ ಎಂಬುದಕ್ಕೆ ವಿಧಾನಪರಿಷತ್‌ ಚುನಾವಣೆಯಲ್ಲಿ ಮೈತ್ರಿಕೂಟ ಸಾಧಿಸಿರುವ ಪ್ರಚಂಡ ಗೆಲುವೇ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನಪರಿಷತ್‌ ಚುನಾವಣೆಯ ಫಲಿತಾಂಶ ಕೇವಲ ಗೆಲುವುಸೋಲಿನ ಲೆಕ್ಕಾಚಾರವಲ್ಲ; ಅದು ರಾಜ್ಯದ ಜನರ ಜನಾದೇಶವಾಗಿದೆ. ಕಾಂಗ್ರೆಸ್‌‍ ಪಕ್ಷ ಮತ್ತು ಅದರ ಸರ್ಕಾರದ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ವಿರುದ್ಧ ಜನರ ಅಸಮಾಧಾನ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಜನರು ತಿರಸ್ಕರಿಸಲಿರುವುದು ನಿಶ್ಚಿತ ಎಂದು ಶರವಣ ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟದ ಒಗ್ಗಟ್ಟು, ಕಾರ್ಯಕರ್ತರ ಪರಿಶ್ರಮ ಮತ್ತು ಜನರ ಬೆಂಬಲದಿಂದ ಈ ಐತಿಹಾಸಿಕ ಗೆಲುವು ಸಾಧ್ಯವಾಗಿದೆ. ವಿಧಾನಪರಿಷತ್‌ನ ನಾಲ್ಕೂ ಸ್ಥಾನಗಳಲ್ಲಿ ಮೈತ್ರಿಕೂಟ ಜಯಗಳಿಸಿರುವುದು ರಾಜ್ಯದ ರಾಜಕೀಯ ಭವಿಷ್ಯದ ದಿಕ್ಕನ್ನು ಸೂಚಿಸುವ ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು.

ಈ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಟ್ರೆಂಡ್‌ಸೆಟ್ಟರ್‌ ಆಗಲಿದೆ. ಮುಂಬರುವ ದಿನಗಳಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತಷ್ಟು ಬಲಿಷ್ಠವಾಗಿ ಬೆಳೆದು, ರಾಜ್ಯದಲ್ಲಿ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಲಿದೆ ಎಂದು ಟಿ.ಎ.ಶರವಣ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Latest News