Homeರಾಜ್ಯ362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಿಂಧುಗೊಳಿಸುವ ವಿಶೇಷ ಕಾಯ್ದೆಯನ್ನು ರದ್ದುಗೊಳಿಸಿದ ಸುಪ್ರೀಂ

362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಿಂಧುಗೊಳಿಸುವ ವಿಶೇಷ ಕಾಯ್ದೆಯನ್ನು ರದ್ದುಗೊಳಿಸಿದ ಸುಪ್ರೀಂ

ಬೆಂಗಳೂರು,ಅ.29- 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ (ಕೆಎಎಸ್‌‍) ಹುದ್ದೆಗಳ ನೇಮಕಾತಿಯನ್ನು ಸಿಂಧುಗೊಳಿಸಲು ಕರ್ನಾಟಕ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ವಿಶೇಷ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಇದರಿಂದಾಗಿ ಹಲವು ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 362 ಅಧಿಕಾರಿಗಳ ನೇಮಕಾತಿಯ ಭವಿಷ್ಯ ಮತ್ತೆ ಅನಿಶ್ಚಿತತೆಗೆ ಸಿಲುಕಿದೆ. ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಕಾನೂನು ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಇಂದು ಈ ತೀರ್ಪು ಪ್ರಕಟಿಸಿದೆ. ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೂಲ ಅರ್ಜಿದಾರರಾದ ಶ್ರೀನಿವಾಸ ಟಿ. ಮತ್ತು ಇತರರು ಸಲ್ಲಿಸಿದ್ದ ವಿಶೇಷ ಮೇಲನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಪೀಠವು, ಸರ್ಕಾರದ ಕಾಯ್ದೆಯನ್ನು ಅಸಿಂಧುಗೊಳಿಸಿದೆ.

ಏನಿದು 362 ಹುದ್ದೆಗಳ ನೇಮಕಾತಿ ವಿವಾದ? :
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌‍ಸಿ) 2011ರ ನವೆಂಬರ್‌ನಲ್ಲಿ ಗ್ರೂಪ್‌ ಎ ಮತ್ತು ಬಿ ವೃಂದದ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಗಳನ್ನು ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಬಳಿಕ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ವಿಶೇಷವಾಗಿ ಸಂದರ್ಶನದ ಅಂಕಗಳ ಹಂಚಿಕೆ ಮತ್ತು ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು.

ಈ ಸಂಬಂಧ ಅಭ್ಯರ್ಥಿಯೊಬ್ಬರು ಅಂದಿನ ಅಡ್ವೊಕೇಟ್‌ ಜನರಲ್‌ಗೆ ದೂರು ಸಲ್ಲಿಸಿದ್ದರು. ಅವರ ಶಿಫಾರಸ್ಸಿನ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಿಧಾನಸೌಧ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿತ್ತು. 2014ರ ಜೂನ್‌ 27ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿತ್ತು.

ಸಿಐಡಿ ತನಿಖೆಯ ಮಧ್ಯಂತರ ವರದಿಯ ಆಧಾರದಲ್ಲಿ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿದ್ದ ಕೆಎಟಿ, ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಆದರೆ, ಕೆಎಟಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿತ್ತು. ಬಳಿಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಇದರಿಂದ ಆಯ್ಕೆ ಪಟ್ಟಿಯ ಸಿಂಧುತ್ವ ಮತ್ತು ಅಭ್ಯರ್ಥಿಗಳ ನೇಮಕಾತಿ ಹಲವು ವರ್ಷಗಳ ಕಾಲ ಕಾನೂನು ವಿವಾದದಲ್ಲೇ ಉಳಿದಿತ್ತು.

ಆಯ್ಕೆ ಪಟ್ಟಿಯನ್ನು ರಕ್ಷಿಸಲು 2022ರಲ್ಲಿ ವಿಶೇಷ ಕಾಯ್ದೆ ;
ನ್ಯಾಯಾಲಯಗಳ ತೀರ್ಪುಗಳ ಬಳಿಕವೂ 362 ಅಭ್ಯರ್ಥಿಗಳ ನೇಮಕಾತಿ ವಿಚಾರಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ 2022ರಲ್ಲಿ ಕರ್ನಾಟಕ ಸಿವಿಲ್‌ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ ಜಾರಿಗೆ ತಂದಿತ್ತು.

ಈ ಕಾಯ್ದೆಯ ಮೂಲಕ 2011ರ ಆಯ್ಕೆ ಮತ್ತು ನೇಮಕಾತಿಗೆ ಕಾನೂನು ಮಾನ್ಯತೆ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಆದರೆ, ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಶ್ರೀನಿವಾಸ ಟಿ. ಮತ್ತು ಇತರರು ಮತ್ತೆ ನ್ಯಾಯಾಲಯದ ಮೊರೆ ಹೋದರು. ಕಾಯ್ದೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು.

ಇದರಿಂದ ಅಸಮಾಧಾನಗೊಂಡ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲನವಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಇದೀಗ ಕಾಯ್ದೆಯನ್ನೇ ರದ್ದುಗೊಳಿಸುವ ಮೂಲಕ ವಿವಾದಕ್ಕೆ ಹೊಸ ತಿರುವು ನೀಡಿದೆ.

362 ಅಧಿಕಾರಿಗಳ ಮುಂದಿನ ಭವಿಷ್ಯವೇನು? :
ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ 362 ಅಧಿಕಾರಿಗಳ ನೇಮಕಾತಿಯ ಕಾನೂನುಬದ್ಧ ಸ್ಥಿತಿಯ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ. ಪ್ರಸ್ತುತ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಧಿಕಾರಿಗಳ ಸೇವೆಯ ಮೇಲೆ ತೀರ್ಪು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ.

ಆದರೆ, ಕಾಯ್ದೆ ರದ್ದಾದ ತಕ್ಷಣವೇ ಎಲ್ಲ ಅಧಿಕಾರಿಗಳ ಸೇವೆ ಅಂತ್ಯಗೊಂಡಿದೆ ಎಂದು ನಿರ್ಧರಿಸಲಾಗದು. ಅವರ ನೇಮಕಾತಿಗೆ ಸಂಬಂಧಿಸಿದಂತೆ ಮುಂದಿನ ಕ್ರಮವೇನು, ತೀರ್ಪಿನ ಅನುಷ್ಠಾನ ಹೇಗೆ ನಡೆಯಲಿದೆ ಮತ್ತು ಸರ್ಕಾರ ಯಾವುದೇ ಕಾನೂನು ಪರಿಹಾರಕ್ಕೆ ಮುಂದಾಗಲಿದೆಯೇ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.

ಒಟ್ಟಿನಲ್ಲಿ, ಕೆಪಿಎಸ್‌‍ಸಿ ನೇಮಕಾತಿಯಲ್ಲಿನ ಅಕ್ರಮಗಳ ಆರೋಪದಿಂದ ಆರಂಭವಾದ ವಿವಾದವು ತನಿಖೆ, ಕೆಎಟಿ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಹಂತಗಳನ್ನು ದಾಟಿ ಈಗ ಮತ್ತೊಂದು ನಿರ್ಣಾಯಕ ಘಟ್ಟ ತಲುಪಿದೆ. 2022ರ ಕಾಯ್ದೆಯ ಮೂಲಕ ಆಯ್ಕೆ ಪಟ್ಟಿಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ನಡೆಸಿದ್ದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವುದು ಆಡಳಿತಾತಕ ಹಾಗೂ ಕಾನೂನು ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸರ್ಕಾರದ ಮುಂದಿನ ನಿರ್ಧಾರ ಮತ್ತು ತೀರ್ಪಿನ ಅನುಷ್ಠಾನವು 362 ಅಧಿಕಾರಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.

RELATED ARTICLES

Latest News