ಬೆಂಗಳೂರು,ಅ.29- ಸ್ನೇಹಿತನ ಗರ್ಲ್ಫ್ರೆಂಡ್ ಮೇಲೆಯೇ ಅತ್ಯಾಚಾರ ವೆಸಗಿದ ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಆತನಿಗೆ ಸಹಾಯ ಮಾಡಿದ ಸ್ನೇಹಿತನಿಗೆ ಬುದ್ದಿ ಕಲಿಸಲು ಅವರಿಬ್ಬರನ್ನು ಅಪಹರಿಸಿದ್ದ ಯುವತಿ ಸೇರಿದಂತೆ 11 ಮಂದಿ ಅಪಹರಣಕಾರರನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಾಲೇಟಿ ರಾಜ ಕುಮಾರ್ (24), 21 ವರ್ಷದ ಯುವತಿ, ಮರ್ರಿಪಾಟಿ ಮಂಜುನಾಥ(23), ಚಿನಿಗೆಪಲ್ಲಿ ಲೋಕನಾಥ್ (22), ಬಂಡ್ಲಪಲ್ಲಿ ಸುಹೇಲ್ (22), ಗಂಗಾರೆಡ್ಡಿಗಾರಿ ನರೇಂದ್ರ ರೆಡ್ಡಿ (22), ಶಿವಸುಬ್ರಮಣ್ಯಂ (24), ಸಲೀಂ ಪಾಷಾ (30), ನಯೀಂ ಪಾಷಾ (31), ಶಬಾಜ್ (26), ಗಾಲಿ ರಾಜೇಶ್ (20) ಬಂಧಿತರು.
ಮಾರತ್ತಹಳ್ಳಿಯಲ್ಲಿ ಟು ಬಿ ಹೆಚ್ಕೆ ಮನೆ ಮಾಡಿಕೊಂಡು ನೆಲೆಸಿರುವ ಆಂಧ್ರಪ್ರದೇಶ ರಾಜ್ಯದ ಮದನಪಲ್ಲಿಯ ನಿವಾಸಿ ಮಹೇಂದ್ರ (23) ಸಾಫ್್ಟವೇರ್ ಎಂಜಿನಿಯರ್. ಈತನ ಜೊತೆ ಸ್ನೇಹಿತ ಕಡಪ ಮೂಲದವರಾದ ತರುಣ್ (23), ಹಾಗೂ ಮಂಜು ನೆಲೆಸಿದ್ದಾರೆ.
ಕಳೆದ ಶನಿವಾರ ಮಂಜು ತನ್ನ ಊರಾದ ಆಂಧ್ರಪ್ರದೇಶದ ಮದನಪಲ್ಲಿಗೆ ತೆರಳಿದ್ದನು. ಆ ಸಂದರ್ಭದಲ್ಲಿ ಮಂಜು ಸ್ನೇಹಿತ ರಾಜ್ಕುಮಾರ್ ಕರೆ ಮಾಡಿ ತನ್ನ ಪ್ರೇಯಸಿಯೊಂದಿಗೆ ಒಂದು ದಿನ ಉಳಿದುಕೊಳ್ಳಲು ರೂಮ್ ಬೇಕೆಂದು ಕೇಳಿದ್ದಾನೆ.
ಮಂಜು ತಾನು ಊರಿಗೆ ಬಂದಿರುವುದಾಗಿ ತಿಳಿಸಿ ತನ್ನ ಸ್ನೇಹಿತರನ್ನು ಸಂಪರ್ಕಿಸಿ ರೂಮ್ನ ಕೀ ಪಡೆದುಕೊಳ್ಳುವಂತೆ ಹೇಳಿದ್ದಾನೆ.ಅದರಂತೆ ರಾಜ್ಕುಮಾರ್ ತನ್ನ ಪ್ರೇಯಸಿಯೊಂದಿಗೆ ಬಂದು ಒಂದು ರೂಮ್ನಲ್ಲಿ ಉಳಿದುಕೊಂಡಿದ್ದರು. ಮತ್ತೊಂದು ರೂಮ್ನಲ್ಲಿ ಮಹೇಂದ್ರ ಮತ್ತು ತರುಣ್ ಇದ್ದರು.
ಆ ಸಂದರ್ಭದಲ್ಲಿ ಬಂದಿದ್ದ ಯುವತಿ ಕಾಲ್ಗರ್ಲ್ ಎಂದು ಇವರಿಬ್ಬರು ತಪ್ಪಾಗಿ ಭಾವಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಇವರಿಬ್ಬರೂ ತಡರಾತ್ರಿ ರಾಜ್ಕುಮಾರ್ನನ್ನು ಬಲವಂತವಾಗಿ ಮತ್ತೊಂದು ರೂಮ್ಗೆ ಎಳೆದುಕೊಂಡು ಹೋಗಿ ಕೂಡಿಹಾಕಿದ್ದಾರೆ. ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ಯುವತಿ ಮೇಲೆ ಮಹೇಂದ್ರ ಅತ್ಯಾಚಾರ ವೆಸಗಿದ್ದಾನೆ. ಬೆಳಗಾಗುತ್ತಿದ್ದಂತೆ ಯುವತಿಗೆ ಬೆದರಿಸಿ ಮನೆಯಿಂದ ಕಳುಹಿಸಿದ್ದಾನೆ.
ಇದರಿಂದ ಅಘಾತಕ್ಕೊಳಗಾದ ಯುವತಿ ಆರಂಭದಲ್ಲಿ ಯಾರಿಗೂ ವಿಷಯ ತಿಳಿಸಿರಲಿಲ್ಲ. ತದ ನಂತರದಲ್ಲಿ ತನಗಾದ ಅನ್ಯಾಯವನ್ನು ರಾಜ್ಕುಮಾರ್ ಜೊತೆ ಹೇಳಿಕೊಂಡಿದ್ದಾರೆ. ಆಗ ಎಲ್ಲಾ ಸ್ನೇಹಿತರು ಸೇರಿಕೊಂಡು ಆರೋಪಿಗಳಿಗೆ ತಕ್ಕಪಾಠ ಕಲಿಸಬೇಕೆಂದು ಸಂಚು ರೂಪಿಸಿದ್ದಾರೆ.
ಅದರಂತೆ ಅ.28 ರಂದು ಬೆಳಗಿನ ಜಾವ 2.50 ರಿಂದ 6 ಗಂಟೆ ಮಧ್ಯೆ ಐದು ಬೈಕ್ಗಳಲ್ಲಿ ಬಂದಿದ್ದ ಆರೋಪಿಗಳು ಮನೆಯಲ್ಲಿದ್ದ ತರುಣ್ ಹಾಗೂ ಮಹೇಂದ್ರನನ್ನು ಅಪಹರಿಸಿದ್ದಾರೆ.
ಈ ನಡುವೆ ಮಗ ನಾಪತ್ತೆಯಾಗಿದ್ದಾರೆಂದು ಮಹೇಂದ್ರನ ತಂದೆ ರಮಣ ಎಂಬುವವರು ಮಾರತ್ತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಪಹರಣ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ನಂತರ ವಿವಿಧ ಆಯಾಮಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆ ಮುಂದುವರೆಸಿದ್ದರು. ಅಪಹರಣಕಾರರು ಇರುವ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು ದೂರು ದಾಖಲಾದ 6 ಗಂಟೆಯೊಳಗೆ 11 ಮಂದಿ ಆರೋಪಿಗಳನ್ನು ಬಂಧಿಸಿ ಅಪಹರಣಗೊಂಡಿದ್ದ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಹಲ್ಲೆ:ನಿರ್ಜನ ಪ್ರದೇಶಕ್ಕೆ ಅವರಿಬ್ಬರನ್ನು ಕರೆದೊಯ್ದ ಅಪಹರಣಕಾರರು ಹಲ್ಲೆ ನಡೆಸಿ ನಂತರ ನಾಗರಭಾವಿಯ ಮನೆಯೊಂದರಲ್ಲಿ ಇಟ್ಟಿದ್ದರು. ತರುಣ್ ಮೊಬೈಲ್ನಿಂದ ಮಹೇಂದ್ರನ ತಂದೆಗೆ ಕರೆ ಮಾಡಿದ ಆರೋಪಿಗಳು ನಿಮ ಮಗನನ್ನು ಅಪಹರಿಸಿದ್ದೇವೆ, 10 ಲಕ್ಷ ರೂ. ಹಣವನ್ನು ಹೊಸಕೋಟೆ ಟೋಲ್ ಬಳಿ ತಂದು ಕೊಡುವಂತೆ ಬೇಡಿಕೆ ಇಟ್ಟು ಒಂದು ವೇಳೆ ಹಣ ಕೊಡದಿದ್ದರೆ ನಿಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಕೊಲೆಗೆ ಸಂಚು:ಮಹೇಂದ್ರನನ್ನು ಕೊಂದು ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲು ಈತನ ಜೊತೆಯಲಿದ್ದ ತರುಣ್ನಿಂದ ಡೆತ್ನೋಟ್ ಬರೆಸಿ ನೇಣುಬಿಗಿದ ಸ್ಥಿತಿಯಲ್ಲಿ ಇರಿಸುವ ಮೂಲಕ ಆತಹತ್ಯೆಯಂತೆ ಬಿಂಬಿಸಲು ಆರೋಪಿಗಳು ಸಂಚು ರೂಪಿಸಿದ್ದರು.
ಅಷ್ಟರೊಳಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಗರಭಾವಿಯ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಆರೋಪಿಗಳಿಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಸಂತ್ರಸ್ತ ಯುವತಿ ಸೇರಿದಂತೆ 11 ಮಂದಿಯನ್ನು ಬಂಧಿಸಿರುವ ಮಾರತ್ತಹಳ್ಳಿ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಮುಂದುವರೆದಿದೆ.
