ಬೆಂಗಳೂರು,ಅ.29- ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಳಿಕ ಸುಮಾರು 99 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲಾಗಿದ್ದು, ಪರಿಷ್ಕೃತ ಪಟ್ಟಿಯು ರಾಜ್ಯದ ಚುನಾವಣಾ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿದೆ.
ಆದರೆ, ಈ ಬದಲಾವಣೆಯಿಂದ ಯಾವ ರಾಜಕೀಯ ಪಕ್ಷಕ್ಕೆ ಲಾಭವಾಗಲಿದೆ, ಯಾರಿಗೆ ನಷ್ಟವಾಗಲಿದೆ ಎಂಬುದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ.ಎಸ್ಐಆರ್ ಪ್ರಕ್ರಿಯೆಗೂ ಮೊದಲು ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದರು. ಪರಿಷ್ಕರಣೆಯ ಬಳಿಕ ಈ ಸಂಖ್ಯೆ 4.55 ಕೋಟಿಗೆ ಇಳಿದಿದೆ. ಮತದಾರರ ಪಟ್ಟಿಯಲ್ಲಿನ ಈ ಬೃಹತ್ ಬದಲಾವಣೆಯು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, 2028ರ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆದಿದೆ.
ಕಡಿಮೆ ಮತಗಳ ಅಂತರದ ಗೆಲುವುಗಳಿಗೆ ಆತಂಕ :
ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಗೆ 2023ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮತ್ತಷ್ಟು ಮಹತ್ವ ನೀಡಿವೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸೌ (ಎಡಿಆರ್) ಮತ್ತು ಕರ್ನಾಟಕ ಎಲೆಕ್ಷನ್ ವಾಚ್ ದತ್ತಾಂಶದ ಪ್ರಕಾರ, ರಾಜ್ಯದ 224 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 2,000 ಮತಗಳಿಗಿಂತ ಕಡಿಮೆಯಿತ್ತು. ಈ ಪೈಕಿ ಎಂಟು ಕ್ಷೇತ್ರಗಳಲ್ಲಿ ಅಂತರ 1,000 ಮತಗಳಿಗಿಂತಲೂ ಕಡಿಮೆಯಾಗಿತ್ತು.
ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಕೇವಲ 16 ಮತಗಳ ಅಂತರದಿಂದ ಗೆದ್ದಿದ್ದರೆ, ಗಾಂಧಿನಗರದಲ್ಲಿ ಕಾಂಗ್ರೆಸ್ನ ದಿನೇಶ್ ಗುಂಡೂರಾವ್ 105 ಮತಗಳ ಅಂತರದಿಂದ ಮತ್ತು ಶೃಂಗೇರಿಯಲ್ಲಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಇಂತಹ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ರಾಜಕೀಯ ಪಕ್ಷಗಳ ಚುನಾವಣಾ ಲೆಕ್ಕಾಚಾರಕ್ಕೆ ಮಹತ್ವದ ವಿಷಯವಾಗಿವೆ.
ಬೆಂಗಳೂರಿನಲ್ಲಿ ಹೆಚ್ಚು ಹೆಸರುಗಳ ಕಡಿತ :
ರಾಜ್ಯದ ಒಟ್ಟು ಮತದಾರರಲ್ಲಿ ಎಸ್ಐಆರ್ಗೂ ಮೊದಲು ಬೆಂಗಳೂರಿನ ನಾಲ್ಕು ನಗರ ಜಿಲ್ಲೆಗಳ ಪಾಲು ಸುಮಾರು ಶೇ.19ರಷ್ಟಿತ್ತು. ಆದರೆ, ಪಟ್ಟಿಯಿಂದ ಕೈಬಿಡಲಾದ ಮತದಾರರಲ್ಲಿ ಸುಮಾರು ಶೇ.45ರಷ್ಟು ಮಂದಿ ಇದೇ ಜಿಲ್ಲೆಗಳಿಗೆ ಸೇರಿದವರು ಎಂದು ವರದಿ ತಿಳಿಸಿದೆ. ಇದರಿಂದಾಗಿ ಬೆಂಗಳೂರಿನ ನಗರ ರಾಜಕೀಯದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವಿಶೇಷ ಗಮನ ಸೆಳೆದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ ಬೂತ್ಮಟ್ಟದ ಸಂಘಟನೆ, ಮತದಾರರ ಸಂಪರ್ಕ ಹಾಗೂ ಪ್ರಚಾರ ತಂತ್ರಗಳನ್ನು ಮರುಪರಿಶೀಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ, ಪರಿಷ್ಕೃತ ಪಟ್ಟಿಯಲ್ಲಿ 18 ಮತ್ತು 19 ವರ್ಷದ 6.83 ಲಕ್ಷಕ್ಕೂ ಹೆಚ್ಚು ಮತದಾರರಿರುವುದರಿಂದ ಯುವ ಮತದಾರರನ್ನು ತಲುಪುವುದು ಕೂಡ ಪಕ್ಷಗಳಿಗೆ ಪ್ರಮುಖ ಕಾರ್ಯತಂತ್ರದ ಭಾಗವಾಗಲಿದೆ.
ಯಾರಿಗೆ ಲಾಭ, ಯಾರಿಗೆ ನಷ್ಟ? :
ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಅವರ ಅಭಿಪ್ರಾಯದಂತೆ, ಎಸ್ಐಆರ್ ಪ್ರಕ್ರಿಯೆಯು ನಿರ್ದಿಷ್ಟ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂಬ ಟೀಕೆಗಳಿದ್ದರೂ, ಅಂತಿಮವಾಗಿ ಯಾರಿಗೆ ಲಾಭವಾಗಲಿದೆ ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ಮತದಾರರು ತಪ್ಪಾಗಿ ಪಟ್ಟಿಯಿಂದ ಹೊರಗುಳಿದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಪರಿಣಾಮ ಉಂಟಾಗಬಹುದು ಎಂಬ ಸಾಧ್ಯತೆಯನ್ನು ಅವರು ಉಲ್ಲೇಖಿಸಿದ್ದಾರೆ. ಇತರ ಸಾಮಾಜಿಕ ವರ್ಗಗಳ ಮತದಾರರ ಸೇರ್ಪಡೆ ಮತ್ತು ಕೈಬಿಡುವಿಕೆಯ ಸ್ವರೂಪವೂ ಪಕ್ಷಗಳ ಮೇಲಿನ ಪರಿಣಾಮವನ್ನು ನಿರ್ಧರಿಸಬಹುದು.
ಪರಿಷ್ಕೃತ ಮತದಾರರ ಪಟ್ಟಿಯು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ನಗರ ಪ್ರದೇಶಗಳಲ್ಲಿ ಮತದಾರರ ವಿಶ್ವಾಸ ಗಳಿಸುವುದು ಕಾಂಗ್ರೆಸ್ಗೆ ಪ್ರಮುಖ ಸವಾಲಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದೇ ವೇಳೆ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳನ್ನು ಬಿಜೆಪಿ ಸಮರ್ಥಿಸಿಕೊಂಡಿರುವ ಹಿನ್ನೆಲೆಯಲ್ಲಿ, ಅರ್ಹ ಮತದಾರರು ತಪ್ಪಾಗಿ ಹೊರಗುಳಿದಿದ್ದರೆ ಅಂತಹ ಪ್ರಕರಣಗಳಿಗೆ ಉತ್ತರಿಸುವ ಹೊಣೆಗಾರಿಕೆಯೂ ಪಕ್ಷದ ಮುಂದಿದೆ.
ಮರುನೋಂದಣಿಯೇ ಮುಂದಿನ ಪ್ರಮುಖ ಹಂತ :
ಚುನಾವಣಾ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅವರ ಅಭಿಪ್ರಾಯದಂತೆ, ಪಟ್ಟಿಯಿಂದ ನಿಜವಾಗಿಯೂ ಎಷ್ಟು ಅನರ್ಹ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ತಪ್ಪಾಗಿ ಹೊರಗುಳಿದ ಅರ್ಹ ಮತದಾರರನ್ನು ಎಷ್ಟು ಬೇಗ ಮರುಸೇರ್ಪಡೆ ಮಾಡಲಾಗುತ್ತದೆ ಎಂಬುದರ ಮೇಲೆ ಎಸ್ಐಆರ್ನ ಪರಿಣಾಮ ಅವಲಂಬಿತವಾಗಿರುತ್ತದೆ. ಹಳೆಯ ಪಟ್ಟಿಯಲ್ಲಿದ್ದ ದೋಷಗಳನ್ನು ಸರಿಪಡಿಸುವುದರ ಜೊತೆಗೆ, ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ನಾಗರಿಕರು ಅಂತಿಮ ಪಟ್ಟಿಯ ಪ್ರಕಟಣೆಯ ನಂತರವೂ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಬೂತ್ಮಟ್ಟದ ಅಧಿಕಾರಿಗಳು ಹಳೆಯ ಮತ್ತು ಪರಿಷ್ಕೃತ ಪಟ್ಟಿಗಳನ್ನು ಹೋಲಿಸಿ, ಹೊರಗುಳಿದ ಮತದಾರರನ್ನು ಸಂಪರ್ಕಿಸುವ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ, ಸುಮಾರು ಒಂದು ಕೋಟಿ ಹೆಸರುಗಳು ಕಡಿತಗೊಂಡಿವೆ ಎಂಬ ಅಂಕಿ ಅಂಶವನ್ನೇ ಒಂದು ಕೋಟಿ ಮತಗಳ ನಷ್ಟ ಅಥವಾ ಲಾಭವೆಂದು ಪರಿಗಣಿಸಲು ಸಾಧ್ಯವಿಲ್ಲ. ಕ್ಷೇತ್ರವಾರು ಹೆಸರುಗಳ ಕಡಿತ, ಹೊಸ ಮತದಾರರ ಸೇರ್ಪಡೆ, ಮತದಾನದ ಪ್ರಮಾಣ ಮತ್ತು ಮತದಾರರ ಆಯ್ಕೆಗಳು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ. ಆದ್ದರಿಂದ, ಪರಿಷ್ಕೃತ ಪಟ್ಟಿಯ ನೈಜ ಪರಿಣಾಮವು ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಸ್ಪಷ್ಟವಾಗಲಿದೆ.
