ಬೆಂಗಳೂರು,ಅ.29- ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಅಧಿಕಾರಿಗಳು ಪಡಿತರ ಕಳ್ಳ ಸಾಗಾಣಿಕೆದಾರರ ಮೇಲಿನ ದಾಳಿ ಮುಂದುವರೆಸಿದ್ದು, ಕಳೆದ ಮೂರು ತಿಂಗಳಿನಲ್ಲಿ ಸುಮಾರು 17.78 ಲಕ್ಷ ಕೆಜಿ ಪಡಿತರ ಅಕ್ಕಿ ಮತ್ತಿತರ ಕಾಳು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರ ನಿರ್ದೇಶನದ ಮೇರೆಗೆ ಕಳೆದ ಅಗಸ್ಟ್ 1 ರಿಂದ ಇಲಾಖೆ ಅಧಿಕಾರಿಗಳು ಪಡಿತರ ಸಾಗಣೆ ವಾಹನಗಳ ನಿರಂತರ ತಪಾಸಣೆ ಹಾಗೂ ಖಾಸಗಿ ಗೋಡೌನ್ ಗಳ ಮೇಲೆ ದಾಳಿ ನಡೆಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಕಿ, ಗೋಧಿ, ರಾಗಿ, ಹಾಗೂ ಇತರೆ ಬೇಳೆಕಾಳು ಸೇರಿದಂತೆ 17.78 ಲಕ್ಷ ಕೆಜಿ ಪಡಿತರ ಧಾನ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 5ಲಕ್ಷ ಕೆಜಿಗೂ ಹೆಚ್ಚು ಪಡಿತರ ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋಲಾರ ಜಿಲ್ಲೆಯಲ್ಲಿ 3.5 ಲಕ್ಷ ಕೆಜಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು ಲಕ್ಷಕ್ಕೂ ಹೆಚ್ಚು ಕೆಜಿ ಅಕ್ಕಿ ಮತ್ತು ಇತರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ದಾಳಿ ಹಾಗೂ ತಪಾಸಣೆಗೆ ಸಂಬಂಧಿಸಿದಂತೆ ಒಟ್ಟು 238 ಎಫ್ಐಆರ್ಗಳನ್ನು ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ದಾಖಲಿಸಿ, 215 ಜನರನ್ನು ಬಂಧಿಸಲಾಗಿದೆ. ಪಡಿತರ ಕಳ್ಳ ಸಾಗಣೆಗೆ ಬಳಸಲಾಗುತ್ತಿದ್ದ 156 ವಾಹನಗಳನ್ನೂ ಜಪ್ತಿ ಮಾಡಲಾಗಿದೆ.
ಜೊತೆಗೆ ಅಡುಗೆ ಅನಿಲ (ಸಿಲಿಂಡರ್) ಹಾಗೂ ಪೆಟ್ರೋಲ್/ಡೀಸೆಲ್ ಅಕ್ರಮ ದಾಸ್ತಾನುದಾರರ ಮೇಲೂ ದಾಳಿ ಮುಂದುವರೆದಿದ್ದು, ಕಳೆದ ಮೂರು ತಿಂಗಳಿನಲ್ಲಿ 14,250 ಲೀಟರ್ ಪೆಟ್ರೋಲ್ ಹಾಗೂ 1,492 ಗ್ಯಾಸ್ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಪಡಿತರ ದಾನ್ಯ ಹಾಗೂ ಸಿಲಿಂಡರ್ ಹಾಗೂ ಪೆಟ್ರೋಲ್ಗಳ ಒಟ್ಟು ಬೆಲೆ ಸುಮಾರು 10 ಕೋಟಿ ರೂಪಾಯಿಗಳು.ಸಚಿವ ರಿಜ್ವಾನ್ ಅರ್ಷದ್ ಅವರು ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ ಜಾಲದ ಮೇಲಿನ ದಾಳಿಗಳನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಬಡವರಿಗಾಗಿ ಮೀಸಲಿರುವ ಅಕ್ಕಿ ಮತ್ತಿತರ ಪಡಿತರ ದಾನ್ಯಗಳ ಕಳ್ಳತನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದಿದ್ದಾರೆ.
ರಾಜ್ಯಾದ್ಯಂತ ಬರಗಾಲವಿದ್ದು ಬಡವರು ತೊಂದರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗಾಗಿ ಮೀಸಲಿರುವ ಅಕ್ಕಿಯನ್ನು ಬೇರೆಯವರು ವ್ಯಾಪಾರಕ್ಕಾಗಿ, ಲಾಭಕ್ಕಾಗಿ ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ. ನಮ ಸರಕಾರ ಇದಕ್ಕೆ ಅವಕಾಶ ಕೊಡುವುದಿಲ್ಲ, ಎಂದು ಸಚಿವರು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಕ್ಕಿಯ ಬೆಲೆ ಏರಿಕೆಯಾಗುತ್ತಿದ್ದು, ಕೆಲವು ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ಅಕ್ಕಿಯ ಅಕ್ರಮ ದಾಸ್ತಾನು ಹಾಗೂ ಕಳ್ಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡಲು ಯತ್ನಿಸಿದರೆ ಅಂಥವರ ಮೇಲೂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
