ಬೆಂಗಳೂರು,ಅ.29- ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಮಲದಲ್ಲಿ ತೀವ್ರ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ತಿರುಮಲದ ಕರ್ನಾಟಕ ಭವನದಲ್ಲಿ ಕೊಠಡಿ ಹಾಗೂ ಡಾರ್ಮಿಟರಿ ಕಾಯ್ದಿರಿಸಲು ಭಕ್ತರಿಗೆ ನೀಡಲಾಗುತ್ತಿದ್ದ ಶಿಫಾರಸು ಪತ್ರಗಳ ವಿತರಣೆಯನ್ನು ಸ್ಥಗಿತಗೊಳಿಸಿದೆ.
ನೀರಿನ ಅಭಾವದ ಪರಿಣಾಮ ಯಾತ್ರಿಕರ ವಸತಿ ಮತ್ತು ಮೂಲಸೌಕರ್ಯಗಳ ಮೇಲೂ ಪರಿಣಾಮ ಬೀರಿರುವುದರಿಂದ, ನೀರಿನ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.ತಿರುಮಲದಲ್ಲಿರುವ ಕರ್ನಾಟಕ ಭವನವು ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದು, ಐದು ಬ್ಲಾಕ್ಗಳನ್ನು ಹೊಂದಿದೆ. ಇಲ್ಲಿ 350 ಕೊಠಡಿಗಳು, 12 ಡಾರ್ಮಿಟರಿಗಳು ಹಾಗೂ ಕಲ್ಯಾಣ ಮಂಟಪವಿದೆ. ತಿರುಮಲಕ್ಕೆ ಆಗಮಿಸುವ ಕರ್ನಾಟಕದ ಭಕ್ತರಿಗೆ ಪ್ರಮುಖ ವಸತಿ ಸೌಲಭ್ಯವಾಗಿರುವ ಈ ಸಂಕೀರ್ಣದಲ್ಲಿಯೂ ನೀರಿನ ಪೂರೈಕೆ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
ತಿರುಮಲದಲ್ಲಿ ಕಳೆದ ಕೆಲವು ವಾರಗಳಿಂದ ನೀರಿನ ಅಭಾವ ತೀವ್ರಗೊಂಡಿದ್ದು, ಕಳೆದ ಆರು ತಿಂಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ಕಲ್ಯಾಣಿ, ಪಾಪವಿನಾಶನಂ, ಗೋಗರ್ಭಂ, ಕುಮಾರಧಾರ, ಪಸುಪುಧಾರ ಮತ್ತು ಆಕಾಶಗಂಗೆಯಂತಹ ಪ್ರಮುಖ ಜಲಮೂಲಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.
ಮುಜರಾಯಿ ಇಲಾಖೆಯ ಮೂಲಗಳ ಪ್ರಕಾರ, ತಿರುಮಲಕ್ಕೆ ಪ್ರತಿದಿನ ಸುಮಾರು 20ರಿಂದ 25 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಈ ನೀರನ್ನು ಮುಖ್ಯವಾಗಿ ಸುತ್ತಮುತ್ತಲಿನ ಜಲಾಶಯಗಳಿಂದ ಪೂರೈಸಲಾಗುತ್ತಿದ್ದು, ಪ್ರಸ್ತುತ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ವೇಗವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಯಾತ್ರಿಕರಿಗೆ ಕುಡಿಯುವ ನೀರು ಮತ್ತು ಇತರ ಅಗತ್ಯತೆಗಳಿಗೆ ನೀರು ಒದಗಿಸುವುದು ಸವಾಲಾಗಿದೆ.
ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ :
ನೀರಿನ ಕೊರತೆಯ ಹಿನ್ನೆಲೆಯಲ್ಲಿ ಕರ್ನಾಟಕ ಭವನಕ್ಕೆ ಸದ್ಯ ನೀರಿನ ಟ್ಯಾಂಕರ್ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ ಎಂದು ಮುಜರಾತಯಿ ಇಲಾಖೆಯ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಮಳೆ ಕೊರತೆ ಮತ್ತು ಬರದ ಪರಿಸ್ಥಿತಿ ಇರುವುದರಿಂದ ನೀರಿನ ಲಭ್ಯತೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸೂಚನೆಯಂತೆ, ಬ್ರಹ್ಮೋತ್ಸವದ ನಂತರ ನೀರನ್ನು ಮುಖ್ಯವಾಗಿ ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆಗಳ ಕಾಲ ಮಾತ್ರ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಭವನಕ್ಕೆ ನಾಲ್ಕು ನೀರಿನ ಟ್ಯಾಂಕರ್ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಮುಂಗಡ ಕಾಯ್ದಿರಿಸಿದವರಿಗೆ ಮಾತ್ರ ವಸತಿ :
ನೀರಿನ ಮಿತ ಬಳಕೆಯ ಹಿನ್ನೆಲೆಯಲ್ಲಿ ಕರ್ನಾಟಕ ಭವನದಲ್ಲಿ ಸ್ಥಳದಲ್ಲೇ ಕೊಠಡಿ ಕಾಯ್ದಿರಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೂರು ತಿಂಗಳ ಮುಂಚಿತವಾಗಿ ಆನ್ಲೈನ್ ಮೂಲಕ ಕೊಠಡಿ ಕಾಯ್ದಿರಿಸಿದ ಭಕ್ತರಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅವರಿಗೂ ಸ್ನಾನ ಮತ್ತು ಶೌಚಾಲಯದಂತಹ ಅಗತ್ಯ ಬಳಕೆಗಳಿಗೆ ಮಾತ್ರ ನೀರು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರಿನ ಕೊರತೆ ತಿರುಮಲದ ಇತರ ವಸತಿ ಸಂಕೀರ್ಣಗಳು, ಅತಿಥಿಗೃಹಗಳು ಮತ್ತು ಸಾರ್ವಜನಿಕ ಶೌಚಾಲಯಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ನೀರಿನ ಬಳಕೆಗೆ ನಿರ್ಬಂಧ ವಿಧಿಸುವುದು ಅನಿವಾರ್ಯವಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುವ ತಿರುಮಲದಲ್ಲಿ ನೀರಿನ ಕೊರತೆ ಮುಂದುವರಿದರೆ, ವಸತಿ ವ್ಯವಸ್ಥೆ ಮತ್ತು ನೈರ್ಮಲ್ಯ ನಿರ್ವಹಣೆಯ ಮೇಲೆ ಮತ್ತಷ್ಟು ಒತ್ತಡ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವುದು, ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಹಾಗೂ ಪರ್ಯಾಯ ನೀರು ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸುವುದು ಪ್ರಮುಖವಾಗಿದೆ.
ತಿರುಮಲದಲ್ಲಿ ನೀರಿನ ಅಭಾವ ತೀವ್ರಗೊಂಡಿರುವುದು ಯಾತ್ರಿಕರ ವಸತಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಕರ್ನಾಟಕ ಭವನದಲ್ಲಿ ಕೊಠಡಿ ಕಾಯ್ದಿರಿಸುವಿಕೆಗೆ ವಿಧಿಸಿರುವ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದ್ದು, ತಿರುಮಲಕ್ಕೆ ತೆರಳುವ ಭಕ್ತರು ತಮ ವಸತಿ ವ್ಯವಸ್ಥೆಯನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.
