ಬೆಂಗಳೂರು,ಅ.29- ಈ ವರ್ಷದ ಕನ್ನಡ ರಾಜ್ಯೋತ್ಸವ (ನವೆಂಬರ್ 1) ಭಾನುವಾರದಂದು ಬಂದಿದ್ದರೂ ಸಹ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಕರ್ನಾಟಕ ಸರ್ಕಾರ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ.
ರಾಜ್ಯದ ಪ್ರತಿಯೊಂದು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ (ಖಾಸಗಿ) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ರಾಜ್ಯೋತ್ಸವವನ್ನು ಗೌರವಪೂರ್ವಕವಾಗಿ ಆಚರಿಸುವುದು ಕಡ್ಡಾಯವಾಗಿದೆ.ಅಕ್ಟೋಬರ್ 15 ರಂದು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಸುತ್ತೋಲೆಯ ಪ್ರಕಾರ, ರಾಷ್ಟ್ರೀಯ ಮತ್ತು ರಾಜ್ಯ ಹಬ್ಬಗಳನ್ನು ನಿಯಮಗಳಂತೆ ನಿಗದಿತ ದಿನದಂದೇ ಆಚರಿಸಬೇಕು.
ರಾಜ್ಯದಾದ್ಯಂತ ಎಲ್ಲಾ ಶಾಲೆಗಳಲ್ಲಿಯೂ ಈ ಆಚರಣೆಗಳು ಸಮರ್ಪಕವಾಗಿ ನಡೆಯುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆ ದಿನ ರಜಾದಿನವಿದೆ (ಭಾನುವಾರ) ಎಂಬ ಕಾರಣ ನೀಡಿ ರಾಜ್ಯ ಹಬ್ಬಗಳ ಆಚರಣೆಯನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಯಾರೂ ನಿರ್ಲಕ್ಷಿಸಬಾರದು. ಇದು ಪ್ರತಿಯೊಬ್ಬ ಕನ್ನಡಿಗರ ಹಬ್ಬ ಮತ್ತು ನಮೆಲ್ಲರ ಹೆಮೆಯ ಹಬ್ಬ ಎಂದು ದಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಅವರು ತಿಳಿಸಿದ್ದಾರೆ.
