Sunday, April 12, 2026
Homeರಾಜಕೀಯಬಿಜೆಪಿಗೆ ಅಗ್ನಿ ಪರೀಕ್ಷೆಯಾದ ಉಪಚುನಾವಣೆ

ಬಿಜೆಪಿಗೆ ಅಗ್ನಿ ಪರೀಕ್ಷೆಯಾದ ಉಪಚುನಾವಣೆ

By-elections a test for BJP

ಬೆಂಗಳೂರು, ಮಾ.21 – ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿರುವ ಬಿಜೆಪಿಗೆ ಈ ಉಪಚುನಾವಣೆ ಒಂದು ರೀತಿಯಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ.

2023ರ ವಿಧಾನಸಭೆ, 2024ರ ಲೋಕಸಭೆ ನಂತರ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ತೀರ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ.

ಪರಸ್ಪರ ಕಚ್ಚಾಟ, ನಾಯಕರ ನಡುವೆ ವೈಮನಸ್ಸು, ಭಿನ್ನಮತ, ಒಬ್ಬರನ್ನು ಕಂಡರೆ ಒಬ್ಬರು ಕತ್ತಿ ಮಸೆಯುವುದು, ಹೊಂದಾಣಿಕೆ ಇಲ್ಲದಿರುವುದು, ಗೊಂದಲಕಾರಿ ಹೇಳಿಕೆಗಳು, ನಾಯಕರ ನಡುವೆ ತಪ್ಪಿದ ತಾಳಮೇಳದಿಂದಾಗಿ ಬಿಜೆಪಿ ‘ಮನೆಯೊಂದು ನೂರು ಬಾಗಿಲು’ ಎಂಬಂತಿತ್ತು.

ಉಪಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನ ಈ ಜನ್ಮದಲ್ಲಿ ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಎಂಬಂತಿದ್ದ ಪಕ್ಷದಲ್ಲಿ ಬಣಬಡಿದಾಟಕ್ಕೆ ನಿಧಾನವಾಗಿ ಕಡಿವಾಣ ಬಿದ್ದಿರುವುದು ಹೊಸ ಬೆಳವಣಿಗೆಯಾಗಿದೆ.

ಅದರಲ್ಲೂ ಮಧ್ಯ ಕರ್ನಾಟಕದ ರಾಜಧಾನಿಯಂತಿರುವ ದಾವಣಗೆರೆಯಲ್ಲಿ ಯಾರೇ ಬಂದರೂ ಭಿನ್ನಮತವನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನಡುವಿನ ಕಿತ್ತಾಟ ಪಕ್ಷವನ್ನೇ ಹಾಳು ಮಾಡುವ ಸ್ಥಿತಿಗೆ ಬಂದಿತ್ತು.

ಯಾವಾಗ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಧ್ಯಪ್ರವೇಶ ಮಾಡಿ ಸಂಧಾನವನ್ನು ಒಂದು ಹಂತಕ್ಕೆ ತರುವಲ್ಲಿ ಯಶಸ್ವಿಯಾದರು. ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎರಡೂ ಬಣಗಳ ನಡುವೆ ಯಾರಿಗೆ ಟಿಕೆಟ್ ಕೊಟ್ಟರೂ ಹಿನ್ನಡೆ ಎಂಬುದನ್ನು ಅರಿತ ಕೇಂದ್ರ ವರಿಷ್ಠರು ಅಚ್ಚರಿಯಾಗಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಮಣೆ ಹಾಕಿದರು.

ಪರಸ್ಪರ ಹಾದಿಬೀದಿಯಲ್ಲಿ ರಂಪಾಟ ನಡೆಸುತ್ತಿದ್ದ ಸಿದ್ದೇಶ್ವರ್ ಮತ್ತು ರೇಣುಕಾಚಾರ್ಯ ಬಣಗಳು ಮೊದಲ ಬಾರಿಗೆ ಒಂದಾಗಿ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲಾ ಭಿನ್ನಮತವನ್ನು ಬದಿಗೊತ್ತಿ ಶ್ರಮಿಸುವುದಾಗಿ ವಾಗ್ದಾನ ಮಾಡಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ದಾವಣಗೆರೆ ದಕ್ಷಿಣಕ್ಕೆ ಹೋಲಿಸಿದರೆ ಬಾಗಲಕೋಟೆಯಲ್ಲಿ ಅಂತಹ ಭಿನ್ನಮತ ಕಾಣುತ್ತಿಲ್ಲ. ಮಾಜಿ ಶಾಸಕ ವೀರಣ್ಣ ಚರಂತಿಮ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಒಂದೆರಡು ಅಪಸ್ವರ ಬಿಟ್ಟರೆ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗಿದೆ.

ವಿಜಯೇಂದ್ರಗೆ ಸವಾಲು:
ಈ ಉಪಚುನಾವಣೆ ವಿಶೇಷವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಅವರಿಗೆ ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಸಮುದಾಯದ ಜೊತೆಗೆ ಬೇರೆ ಸಮುದಾಯಗಳನ್ನು ಸೆಳೆದು ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಬೇಕಾಗಿದೆ.

ಈಗಾಗಲೇ ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿರುವ ಅವರು ಪಕ್ಷದಲ್ಲಿರುವ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇನ್ನೊಂದೆಡೆ ಜೆಡಿಎಸ್ ಈ ಎರಡೂ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದೆ. ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಪಕ್ಷದ ಹಿರಿಯರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಅವರ ಮೇಲಿದೆ.

ಹೀಗಾಗಿ ಈ ಎರಡು ಕ್ಷೇತ್ರಗಳ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಶತಾಯಗತಾಯ ಗೆದ್ದು ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗ ಉಂಟು ಮಾಡಲು ವಿಶೇಷ ಕಾರ್ಯತಂತ್ರ ರೂಪಿಸುವತ್ತ ಮಗ್ನವಾಗಿದೆ.

ಪಕ್ಷದ ಕಾರ್ಯತಂತ್ರ ಎಷ್ಟರಮಟ್ಟಿಗೆ ಕೈ ಹಿಡಿಯಲಿದೆ ಎಂಬುದು ಏ. 4ರ ಫಲಿತಾಂಶದವರೆಗೆ ಕಾಯಬೇಕು.

RELATED ARTICLES

Latest News