Wednesday, May 13, 2026
Homeರಾಜಕೀಯಸಂಪುಟ ಸರ್ಜರಿಗೆ ಸಮ್ಮತಿ : ನಾಯಕತ್ವ ಬದಲಾವಣೆಗೆ ಮುಂದುವರೆದ ಗೊಂದಲ

ಸಂಪುಟ ಸರ್ಜರಿಗೆ ಸಮ್ಮತಿ : ನಾಯಕತ್ವ ಬದಲಾವಣೆಗೆ ಮುಂದುವರೆದ ಗೊಂದಲ

Cabinet reshuffle approved: Confusion continues over leadership change

ಬೆಂಗಳೂರು, ಮೇ 6- ಕುರ್ಚಿ ಕದನ ಬಗೆಹರಿಸಲೇಬೇಕೆಂದು ಸಂಪುಟದ ಪ್ರಭಾವಿ ಸಚಿವರು ಒತ್ತಡ ಹಾಕುತ್ತಿರುವುದರಿಂದ ಹೈಕಮಾಂಡ್‌ ಇಕ್ಕಟ್ಟಿಗೆ ಸಿಲುಕಿದ್ದು, ಸಚಿವ ಸಂಪುಟ ಪುನರ್‌ರಚನೆಗೆ ಅನುಮತಿಸಿ, ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿದೆ.

ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಚಿವರೇ ಹೇಳುತ್ತಿರುವುದರಿಂದ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಕಳೆದ ಎರಡೂವರೆ ವರ್ಷದಿಂದಲೂ ನಾಯಕತ್ವದ ಬದಲಾವಣೆ ಬಗ್ಗೆ ಪದೇಪದೇ ಚರ್ಚೆಗಳಾಗುತ್ತಿವೆ.

ಸಿದ್ದರಾಮಯ್ಯಅವರನ್ನು ಶಾಸ ಕಾಂಗ ಸಭೆಯಲ್ಲಿ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯನ್ನಾಗಿ
ಆಯ್ಕೆ ಮಾಡಲಾಗಿದೆ. ಒಂದು ವೇಳೆ ಬದಲಾವಣೆ ಮಾಡಬೇಕು ಎಂದಾಗಿದ್ದರೆ, ಅದರ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಬೇಕು. ಹೈಕಮಾಂಡ್‌ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಪ್ತರು ಪ್ರತಿಪಾದಿಸುತ್ತಿದ್ದಾರೆ.

ನಾಯಕತ್ವದ ಬಗ್ಗೆ ಗೊಂದಲ ಸೃಷ್ಟಿಸಿರುವುದು ಹೈಕಮಾಂಡ್‌ ಅಲ್ಲ, ರಾಜ್ಯದ ನಾಯಕರು ಗೊಂದಲ ಮಾಡಿಕೊಂಡಿದ್ದಾರೆ. ಅವರೇ ಸರಿಪಡಿಸಿಕೊಳ್ಳಲಿ ಎಂದು ಒಂದು ಹಂತದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ, ಗೊಂದಲಕ್ಕೂ ತಮಗೂ ಸಂಬಂಧವಿಲ್ಲ ಎಂದು ನುಣಿಚಿಕೊಳ್ಳುವ ಪ್ರಯತ್ನ ಮಾಡಿದರು.

ಆದರೆ ಡಿ.ಕೆ.ಶಿವಕುಮಾರ್‌ ಬಣ ಇದಕ್ಕೆ ಅವಕಾಶ ನೀಡಲಿಲ್ಲ, ಹಲವಾರು ಶಾಸಕರು ದೆಹಲಿ ಯಾತ್ರೆ ಕೈಗೊಳ್ಳುವ ಮೂಲಕ ವಿವಾದವನ್ನು ಜೀವಂತವಾಗಿರಿಸಿದರು. ಅನಿವಾರ್ಯವಾಗಿ ಗೊಂದಲ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಗೊಂದಲವನ್ನು ಹೇಗೆ ಬಗೆ ಹರಿಸಬೇಕು ಎಂಬ ದಾರಿ ಮಾತ್ರ ಕಾಣದಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆಸಿ, ನಾಯಕತ್ವವನ್ನು ಬಗೆ ಹರಿಸುವುದಾಗಿ ನಂತರ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಆದರೆ ಈವರೆಗೂ ದೆಹಲಿಗೆ ಕರೆಸಲು ಸಾಧ್ಯವಾಗಲಿಲ್ಲ.

ರಾಜ್ಯದಲ್ಲಿ ಎರಡು ಬಾರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಉಪಾಹಾರ ಕೂಟ ನಡೆದಿದ್ದನ್ನು ಹೊರತು ಪಡಿಸಿದರೆ, ಹೈಕಮಾಂಡ್‌ ಸಮುಖದಲ್ಲಿ ಇಬ್ಬರೂ ನಾಯಕರು ಒಟ್ಟಿಗೆ ಕುಳಿತು ಚರ್ಚೆ ಮಾಡಲು ಸಾಧ್ಯವಾಗಿಲ್ಲ. ಇದು ಬಗೆ ಹರಿಯುವುದಿಲ್ಲ ಎಂಬ ಸುಳಿವು ಅರಿತ ಸಿದ್ದರಾಮಯ್ಯ ಬೆಂಬಲಿಗರು ಸಂಪುಟ ಪುನರ್‌ರಚನೆಗೆ ಒತ್ತಡ ಹಾಕುತ್ತಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರ ಸಮಕ್ಷಮದಲ್ಲೇ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದಿದ್ದರು. ಕೆಲ ಹಿರಿಯ ಶಾಸಕರು ಸಂಪುಟ ಪುನರ್‌ ರಚನೆಗಾಗಿ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್‌ ಮೇಲೆ ಒತ್ತಡ ತರುತ್ತೇವೆ ಎಂದು ತಮ ಬಳಿ ಹೇಳಿದಾಗ ನಿಮ ಇಷ್ಟ ಎಂದು ತಿಳಿಸಿದ್ದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಆದರೆ ಡಿ.ಕೆ.ಶಿವಕುಮಾರ್‌ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರಿಗೆ ನಾಯಕತ್ವ ಬದಲಾಗಬೇಕು, ಸಿದ್ದರಾಮಯ್ಯ ಬಣಕ್ಕೆ ಸಂಪುಟ ಪುನರ್‌ ರಚನೆಯಾಗಬೇಕು. ಇಷ್ಟು ದಿನ ಪಂಚ ರಾಜ್ಯಗಳ ಚುನಾವಣೆಯ ನೆಪ ಹೇಳಿ ಕಾಂಗ್ರೆಸ್‌‍ ಹೈಕಮಾಂಡ್‌ ಕಾಲಹರಣ ಮಾಡಿತ್ತು. ಆದರೆ ಈಗ ನೆಪ ಹೇಳಲು ಯಾವುದೇ ಕಾರಣಗಳಿಲ್ಲ, ಕ್ರಮ ಕೈಗೊಳ್ಳಲೇ ಬೇಕಾದ ಅನಿವಾರ್ಯತೆ ಇದೆ.

ಇದಕ್ಕೆ ಪೂರಕವಾಗಿ ಸಂಪುಟದ ಹಿರಿಯ ಸಚಿವರಾದ ಡಾ. ಜಿ.ಪರಮೇಶ್ವರ್‌, ಸತೀಶ್‌ ಜಾರಕಿಹೊಳಿಯವರು ಹೈಕಮಾಂಡ್‌ ನಾಯಕತ್ವದ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇಬೇಕು. ಇನ್ನೂ ವಿಳಂಬ ಮಾಡುವುದು ಸೂಕ್ತ ಅಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಹಲವು ಬಾರಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌ಗಾಂಧಿ ಅವರನ್ನು ಸಂಧಿಸಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರು ಹೈಕಮಾಂಡ್‌ ಹೇಳಿದರೆ, ಅದರಲ್ಲೂ ರಾಹುಲ್‌ ಗಾಂಧಿ ಸೂಚನೆ ನೀಡಿದರೆ, ಕುರ್ಚಿ ಬಿಟ್ಟುಕೊಡುವುದಾಗಿ ನುಡಿದಿದ್ದಾರೆ.
ಡಿ.ಕೆ.ಶಿವಕುಮಾರ್‌ ಹುಟ್ಟುಹಬ್ಬದೊಳಗೆ ಸಿಹಿ ಸುದ್ದಿ ಬರಬಹುದು ಎಂದು ನಂಬಿಕೊಂಡಿದ್ದ ಬೆಂಬಲಿಗರಿಗೆ ನಿರಾಶೆಯಾಗುವ ಸಾಧ್ಯತೆ ಇದೆ. ಸಂಪುಟ ಪುನರ್‌ ರಚನೆಯಾದರೆ ನಾಯಕತ್ವ ಬದಲಾವಣೆಯ ವಿವಾದ ತಣ್ಣಗಾಗಲಿದೆ. ಹೀಗಾಗಿ ಸಂಪುಟ ಪುನರ್‌ ರಚನೆಗೆ ಅವಕಾಶ ನೀಡುವುದು ಸೂಕ್ತ ಎಂದು ಕಾಂಗ್ರೆಸ್‌‍ ಹೈಕಮಾಂಡ್‌ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಕೇರಳ ಮುಖ್ಯಮಂತ್ರಿ ಆಯ್ಕೆಯ ಪ್ರಸಂಗ ಮುಗಿದ ಬಳಿಕ ರಾಜ್ಯ ರಾಜಕೀಯ ಕುರಿತು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.ಡಿ.ಕೆ.ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಎರಡರಲ್ಲೂ ಮುಂದುವರೆಸುವ ಮೂಲಕ ಸಮಾಧಾನ ಪಡಿಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವರ ಬಣದಿಂದ ಒಬ್ಬರಿಗೆ ಒಂದೇ ಹುದ್ದೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯಂತಹ ಬೇಡಿಕೆಗಳು ಪುನರಾವರ್ತನೆಯಾಗಬಾರದು ಎಂಬ ಷರತ್ತು ವಿಧಿಸುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ್‌ ಅವರು ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಬೇಕೆಂದು ಶಕ್ತಿ ಮೀರಿ ಪ್ರಯತ್ನಿಸಿದ್ದರು. ಆದರೆ ಹೈಕಮಾಂಡ್‌ನ ನಿರಸ ಪ್ರತಿಕ್ರಿಯೆಯಿಂದ ನಿರಾಶರಾಗಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ನಾಯಕತ್ವ ಬದಲಾದರೆ, ಡಿ.ಕೆ.ಶಿವಕುಮಾರ್‌ ಬದಲಾಗಿ ಪರಮೇಶ್ವರ್‌ ಅಥವಾ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಒಂದು ಬಣ ಆಗ್ರಹಿಸುತ್ತಿದೆ.

RELATED ARTICLES

Latest News