Homeರಾಜಕೀಯಸಚಿವ ಸ್ಥಾನ ಸಿಗದ ಶಾಸಕರಿಂದ ಗಂಭೀರ ಹೋರಾಟಕ್ಕೆ ಸಿದ್ಧತೆ

ಸಚಿವ ಸ್ಥಾನ ಸಿಗದ ಶಾಸಕರಿಂದ ಗಂಭೀರ ಹೋರಾಟಕ್ಕೆ ಸಿದ್ಧತೆ

ಬೆಂಗಳೂರು, ಆ.4- ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಕಾಂಗ್ರೆಸ್‌ ಶಾಸಕರ ಅಸಮಾಧಾನ ತೀವ್ರಗೊಳ್ಳುತ್ತಿದ್ದು, ಹಿರಿಯ ಹಾಗೂ ಅನುಭವಿ ಶಾಸಕರು ಸಂಘಟಿತರಾಗಿ ಮುಂದಿನ ರಾಜಕೀಯ ನಡೆ ಕುರಿತು ಸಮಾಲೋಚನೆ ಆರಂಭಿಸಿದ್ದಾರೆ.ಸಾಮೂಹಿಕವಾಗಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಜೊತೆಗೆ, ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಸಾಮೂಹಿಕ ರಾಜೀನಾಮೆ ಸೇರಿದಂತೆ ಕಠಿಣ ನಿರ್ಧಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಕೆಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ರಾಜೀನಾಮೆ ನೀಡಿದರೆ ಅದನ್ನು ಕೂಡಲೇ ಅಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೆಲವರು ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಆದರೂ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಿ ಮುಂದಿನ ರಾಜಕೀಯ ಹೆಜ್ಜೆ ಕುರಿತು ಚರ್ಚಿಸಲು ಮುಂದಾಗಿರುವುದು ಕಾಂಗ್ರೆಸ್‌ ವಲಯದಲ್ಲಿ ಸಂಚಲನ ಮೂಡಿಸಿದೆ. ಸಚಿವ ಸ್ಥಾನ ವಂಚಿತರಾದ ಕೆ.ಎನ್‌.ರಾಜಣ್ಣ, ಟಿ.ಬಿ.ಜಯಚಂದ್ರ, ಎಂ.ವೈ. ಗೋಪಾಲಕೃಷ್ಣ, ತನ್ವೀರ್‌ ಸೇಠ್‌, ದಿನೇಶ್‌ ಗುಂಡೂರಾವ್‌, ಆರ್‌.ವಿ.ದೇಶಪಾಂಡೆ, ಅಪ್ಪಾಜಿ ನಾಡಗೌಡ, ಡಾ. ಎಚ್‌.ಸಿ.ಮಹದೇವಪ್ಪ, ಎಂ.ವೈ. ಪಾಟೀಲ, ಶಿವಾನಂದ ಪಾಟೀಲ, ಕೆ. ವೆಂಕಟೇಶ್‌, ಎಸ್‌.ಆರ್‌.ಶ್ರೀನಿವಾಸ್‌, ವೆಂಕಟಶಿವಾರೆಡ್ಡಿ, ಬಸವರಾಜ ನೀಲಪ್ಪನವರ್‌, ರಹೀಂ ಖಾನ್‌, ಎಂ.ಕೃಷ್ಣಪ್ಪ, ಬಿ.ಕೆ.ಸಂಗಮೇಶ್ವರ, ಪ್ರಸಾದ್‌ ಅಬ್ಬಯ್ಯ, ಪಿ.ಎಂ.ಅಶೋಕ್‌, ಗಣೇಶ್‌ ಹುಕ್ಕೇರಿ, ಬೇಳೂರು ಗೋಪಾಲಕೃಷ್ಣ, ಎ.ಆರ್‌.ಕೃಷ್ಣಮೂರ್ತಿ, ಹಂಪನಗೌಡ ಬಾದರ್ಲಿ, ಎಸ್‌.ಎನ್‌.ನಾರಾಯಣಸ್ವಾಮಿ, ಎಚ್‌.ಕೆ.ಪಾಟೀಲ, ಜಿ.ಟಿ.ಪಾಟೀಲ, ಬಿ.ಆರ್‌.ಪಾಟೀಲ, ಆರ್‌.ಬಿ.ತಿಮ್ಮಾಪುರ, ಕೆ.ಷಡಕ್ಷರಿ, ಎನ್‌.ಎ.ಹ್ಯಾರಿಸ್‌, ಯಶವಂತರಾಯಗೌಡ ಪಾಟೀಲ, ಕಂಪ್ಲಿ ಗಣೇಶ್‌ ಎಚ್‌.ಆರ್‌., ಗವಿಯಪ್ಪ, ಕೋನರೆಡ್ಡಿ, ಕೊತ್ತನೂರು ಮಂಜುನಾಥ್‌, ಕೆ.ವೈ.ನಂಜೇಗೌಡ, ಟಿ.ಡಿ.ರಾಜೇಗೌಡ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಹಾಗೂ ಕಿರಿಯ ಶಾಸಕರನ್ನೊಳಗೊಂಡ ನಿಯೋಗವು ಶೀಘ್ರದಲ್ಲೇ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯಲ್ಲಿ ಉಂಟಾಗಿರುವ ಅಸಮಾಧಾನ, ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನದ ಕೊರತೆ ಮತ್ತು ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ಮನವರಿಕೆ ಮಾಡಿಕೊಡುವ
ಚಿಂತನೆ ನಡೆಸಿದೆ. ಬೇಡಿಕೆಗಳನ್ನು ಪರಿಗಣಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡಿ ಸರ್ಕಾರಕ್ಕೆ ರಾಜಕೀಯ ಮುಜುಗರ ಉಂಟುಮಾಡುವ ಆಯ್ಕೆಯ ಬಗ್ಗೆಯೂ ಕೆಲ ನಾಯಕರು ಚರ್ಚಿಸಿರುವುದಾಗಿ ತಿಳಿದುಬಂದಿದೆ.

ಈ ಬೆಳವಣಿಗೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಅಸಮಾಧಾನಿತ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನೂತನ ಸಚಿವರ ಪಟ್ಟಿಯ ಬಗ್ಗೆ ಅಸಮಾಧಾನ ಹೊಂದಿದ್ದು, ಅಸಮಾಧಾನಿತ ಶಾಸಕರೊಂದಿಗೆ ನಡೆಯುತ್ತಿರುವ ಸಂಧಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನೊಂದೆಡೆ ಸಚಿವ ಸ್ಥಾನದ ಖುದ್ದು ಆಕಾಂಕ್ಷಿಯಾಗಿದ್ದ ಬಿ.ಕೆ.ಹರಿಪ್ರಸಾದ್‌ ಅವರು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊಂದಿರುವುದಾಗಿ ಮೂಲಗಳು ತಿಳಿಸಿವೆ. ಸಂಪುಟ ವಿಸ್ತರಣೆ ವೇಳೆ ಸಚಿವರ ಪಟ್ಟಿಯನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ ಎಂಬ ಚರ್ಚೆಯೂ ಪಕ್ಷದೊಳಗೆ ನಡೆಯುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಮಂಕಾಳ ವೈದ್ಯ ಹಾಗೂ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಟ್ಟು, ಪ್ರಭಾವಿ ಕುಟುಂಬದ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರಿಗೆ ಅವಕಾಶ ನೀಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೈದ್ಧಾಂತಿಕ ಬದ್ಧತೆಗೆ ಬೆಲೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಹಲವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಹೊಸ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಕಾಂಗ್ರೆಸ್‌ ವಲಯದಲ್ಲಿ ಜೋರಾಗಿವೆ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನ ಲೋಪಗಳನ್ನು ಸರಿಪಡಿಸುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಹಿರಿಯ-ಕಿರಿಯ ಶಾಸಕರ ನಿಯೋಗ ಮುಂದಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೇ ವೇಳೆ ಸಚಿವ ಸ್ಥಾನ ವಂಚಿತರ ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಎಂ. ಕೃಷ್ಣಪ್ಪ ಹಾಗೂ ಎನ್‌.ಎ.ಹ್ಯಾರಿಸ್‌ ಬೆಂಬಲಿಗರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಹಂಪನಗೌಡ ಬಾದರ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಕಾರ್ಯಕರ್ತರ ಅಸಮಾಧಾನ ಬಹಿರಂಗಗೊಂಡಿದೆ.

RELATED ARTICLES
spot_img

Latest News