Homeರಾಜಕೀಯತಲೆಕೆಳಗಾದ ರೆಬಲ್ಸ್ ತಂತ್ರಗಾರಿಕೆ : ವಿಜೆಯೇಂದ್ರಗೆ ಬಲ ತುಂಬಿದ ನಿತಿನ್‌ ನಬೀನ್‌ ರಾಜ್ಯ ಭೇಟಿ

ತಲೆಕೆಳಗಾದ ರೆಬಲ್ಸ್ ತಂತ್ರಗಾರಿಕೆ : ವಿಜೆಯೇಂದ್ರಗೆ ಬಲ ತುಂಬಿದ ನಿತಿನ್‌ ನಬೀನ್‌ ರಾಜ್ಯ ಭೇಟಿ

Rebels' strategy reversed: National President Nitin visits the state to strengthen Vijayendra

ಬೆಂಗಳೂರು, ಮೇ 25- ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆಯಲ್ಲಿದೆ. ಕಮಲ ಪಡೆಯಲ್ಲಿ ರೆಬೆಲ್‌ ಬಣ ಇದಕ್ಕಾಗಿ ಕಾಯುತ್ತಿದೆ. ಪಕ್ಷದಿಂದ ಉಚ್ಛಾಟನೆಗೊಂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಪಕ್ಷದಲ್ಲೇ ಇದ್ದುಕೊಂಡು ಬಿ.ಎಸ್‌‍.ಯಡಿಯೂರಪ್ಪ ಕುಟುಂಬ ವಿರುದ್ದ ಬುಸುಗುಡುತ್ತಿರುವ ಬಂಡಾಯಗಾರರು ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ, ಸದ್ಯದ ಬೆಳವಣಿಗೆ ಈ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಕಾರಣ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಅವರು ಬಿ.ಎಸ್‌‍.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ಜೊತೆಗೆ ನಡೆದುಕೊಂಡ ರೀತಿ ರೆಬೆಲ್‌ ಬಣಕ್ಕೆ ತಲೆನೋವು ಉಂಟುಮಾಡಿದೆ.

ಬಿಜೆಪಿ ರಾಷ್ಟ್ರೀಯ ನಾಯಕತ್ವ ಯೂಡಿಯೂರಪ್ಪ ಅವರ ಕುಟುಂಬದ ವಿರುದ್ದ ಇದೆ ಎಂಬ ವಾದವನ್ನು ರೆಬೆಲ್ಗಳು ಮಂಡನೆ ಮಾಡುತ್ತಿದ್ದರು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿತ್ತು. ಅಲ್ಲದೆ, ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಇದೆ ಎಂಬ ವಾದವನ್ನು ರೆಬೆಲ್‌ಗಳು ಮಾಡುತ್ತಾ ಬಂದಿದ್ದಾರೆ. ಈ ಎಲ್ಲಾ ಬೆಳವಣಿಗಳು ಪಕ್ಷದಲ್ಲಿ ಗೊಂದಲಕ್ಕೆ ಕಾರಣವಾಗಿದ್ದವು. ಅಲ್ಲದೆ, ಆಡಳಿತ ಪಕ್ಷದ ವಿರುದ್ಧ ಸೂಕ್ತ ರೀತಿಯಲ್ಲಿ ಹೋರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದವು.

ಅಷ್ಟೇ ಅಲ್ಲದೆ, ಬಿಜೆಪಿಯ ರಾಷ್ಟ್ರೀಯ ನಾಯಕತ್ವ ವಿಜಯೇಂದ್ರ ಅವರ ಬಗ್ಗೆ ಅಸಮಾಧಾನಗೊಂಡಿದೆ ಎಂಬ ವಿಚಾರವನ್ನು ರೆಬೆಲ್‌ ಟೀಂ ಮುನ್ನಲೆಗೆ ತರುತ್ತಿತ್ತು. ಹೀಗಿರುವಾಗ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಅವರ ರಾಜ್ಯ ಭೇಟಿ ಹಾಗೂ ನಂತರದ ಬೆಳವಣಿಗೆಗಳು ಬಂಡಾಯ ಟೀಂ ಅಭಿಪ್ರಾಯವನ್ನು ಬದಲಾವಣೆ ಮಾಡಿದೆ. ನಬಿನ್‌ ಅವರು ರೆಬೆಲ್‌ಗಳಿಗೆ ಮಣೆ ಹಾಕುವ ಬದಲಾಗಿ ಬಿಎಸ್‌‍ವೈ ಕುಟುಂಬಕ್ಕೆ ಆದ್ಯತೆ ಕೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ರಾಜ್ಯದಲ್ಲಿ ಅದ್ದೂರಿ ಆತಿಥ್ಯ! :
ರಾಜ್ಯಕ್ಕೆ ಆಗಮಿಸಿದ್ದ ನಬೀನ್‌ ಅವರಿಗೆ ವಿಜಯೇಂದ್ರ ಹಾಗೂ ಬಿಜೆಪಿ ಪಡೆ ಅದ್ದೂರಿ ಆತಿಥ್ಯ ನೀಡಿದೆ. ನಬೀನ್‌ ಅವರ ಹುಟ್ಟುಹಬ್ಬದ ದಿನದಂದೇ ರಾಜ್ಯದಲ್ಲಿ ಭರ್ಜರಿ ಸ್ವಾಗತ ನೀಡಲಾಗಿತ್ತು. ಅಲ್ಲದೆ, ಬಿ.ಎಸ್‌‍.ಯಡಿಯೂರಪ್ಪ ಅವರ ನಿವಾಸದಲ್ಲಿ ಅದ್ದೂರಿ ಉಪಹಾರ ಕೂಟವನ್ನು ಹಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಂಪೂರ್ಣ ಆತಿಥ್ಯದ ಹೊಣೆಯನ್ನು ಸ್ವತಃ ವಿಜಯೇಂದ್ರ ಅವರೇ ವಹಿಸಿಕೊಂಡಿದ್ದರು. ಈ ಮೂಲಕ ನಿತಿನ್‌ ವಿಶ್ವಾಸ ಗಳಿಸುವಲ್ಲಿ ವಿಜಯೇಂದ್ರ ಅವರು ಯಶಸ್ವಿ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟಾಂಗ್‌ :
ಇದೇ ಸಂದರ್ಭದಲ್ಲಿ ನಿತಿನ್‌ ನಬೀನ್‌ ಹಾಗೂ ವಿಜಯೇಂದ್ರ ಅವರ ಕೆಲವೊಂದು ಭಾವಾಚಿತ್ರವನ್ನು ಮುಂದಿಟ್ಟುಕೊಂಡು ಯತ್ನಾಳ್‌ ಮತ್ತು ರೆಬೆಲ್‌ ಟೀಂಗೆ ವಿಜಯೇಂದ್ರ ಅಭಿಮಾನಿಗಳು ಟಾಂಗ್‌ ಕೊಟ್ಟಿದ್ದಾರೆ. ನೀವು ಮುಂದೆ ಯಾವ ನಿರೀಕ್ಷೆ ಇಟ್ಟುಕೊಳ್ಳದೆ ಬೇರೆ ಪಕ್ಷ ಕಟ್ಟಿ ಎಂದು ಕಾಲೆಳೆದಿದ್ದಾರೆ. ಈ ಮೂಲಕ ನಿತಿನ್‌ ನಬೀನ್‌ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಚಾರವಾಗಿ ಒಂದು ಸಂದೇಶವನ್ನು ರವಾನಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ.

ಇನ್ನು ಇದಕ್ಕೂ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌ ಅವರು ವಿಜಯೇಂದ್ರ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂಬ ಅರ್ಥದಲ್ಲೇ ಹೇಳಿಕೆ ನೀಡಿದ್ದಾರೆ. ಇನ್ನು ಆಂತರಿಕವಾಗಿ ಕೆಲವು ಹಿರಿಯರ ಜೊತೆ ನಡೆದ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಅವರ ಪರವಾಗಿ ಅಭಿಪ್ರಾಯ ಬಹುತೇಕರಿಂದ ವ್ಯಕ್ತವಾಗಿದೆ ಎಂಬ ಮಾಹಿತಿಯೂ ಇದೆ.

ರಾಜ್ಯ ಪ್ರವಾಸದ ಸಂದರ್ಭದಲ್ಲಿ ನಿತಿನ್‌ ನಬೀನ್‌ ಅವರು ಬಿಜೆಪಿ ನಾಯಕರಿಗೆ ಒಗ್ಗಟ್ಟು ಪ್ರದರ್ಶನದ ಸಂದೇಶ ನೀಡಿದ್ದಾರೆ. ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎಂದು ಕಿವಿ ಮಾತು ಹೇಳಿದ್ದಾರೆ. ಆದರೆ, ಇದು ಸಂಘಟನೆಯಲ್ಲಿ ಸಾಧ್ಯವಾಗುತ್ತಾ? ಎಂಬುವುದು ಸದ್ಯದ ಕುತೂಹಲವಾಗಿದೆ.

RELATED ARTICLES

Latest News