Saturday, July 27, 2024
Homeರಾಜ್ಯಪ್ರಜ್ವಲ್‌ ರೇವಣ್ಣಗೆ ಸದ್ಯದಲ್ಲಿಯೇ ಪುರುಷತ್ವ ಪರೀಕ್ಷೆ?

ಪ್ರಜ್ವಲ್‌ ರೇವಣ್ಣಗೆ ಸದ್ಯದಲ್ಲಿಯೇ ಪುರುಷತ್ವ ಪರೀಕ್ಷೆ?

ಬೆಂಗಳೂರು, ಜೂ.1- ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ, ಸದ್ಯ ಎಸ್‌‍ಐಟಿ ವಶದಲ್ಲಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಸದ್ಯದಲ್ಲಿಯೇ ಪುರುಷತ್ವ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ. ಅತ್ಯಾಚಾರ ಪ್ರಕರಣದ ಆರೋಪಿಯು ಸಂತ್ರಸ್ಥ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಪುರುಷತ್ವ ಪರೀಕ್ಷೆ ಮಾಡಲಾಗುತ್ತದೆ.

ಆರೋಪಿ ತನಿಖೆಗೆ ಸಹಕರಿಸಲು ದೈಹಿಕ-ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಪ್ರಜ್ವಲ್‌ ರೇವಣ್ಣ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದು, ಅವರ ತಾಯಿ ಭವಾನಿ ರೇವಣ್ಣ ಅವರು ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.

ಈ ಪ್ರಕರಣದಲ್ಲಿ ಭವಾನಿ ಆರೋಪಿಯಲ್ಲದಿದ್ದರೂ, ಆಕೆಯ ಪಾತ್ರದ ಬಗ್ಗೆ ತನಿಖೆ ನಡೆಸಲು ಎಸ್‌‍ಐಟಿ ಬಯಸಿದೆ ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌‍ಐಟಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಅಶ್ಲೀಲ ವಿಡಿಯೋವನ್ನು ತಾನು ಮಾಡಿಲ್ಲ ಎಂದು ಪ್ರಜ್ವಲ್‌ ಅಫಿಡವಿಟ್‌ ಸಲ್ಲಿಸಿದರೆ, ಪ್ರಜ್ವಲ್‌ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ತಾನು ಅತ್ಯಾಚಾರ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್‌ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌‍ಐಟಿ ಮಾಡಿಸಲಿದೆ.

ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್‌ ಡಿಎನ್‌ಎಗೂ ತಾಳೆ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್‌ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

ಪುರುಷತ್ವ ಪರೀಕ್ಷೆ? :
ಇದು ಲೈಂಗಿಕ ಸಾಮಥ್ರ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ.
1) ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ. ಆಂಡೋಲಜಿಸ್ಟ್‌ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ.
2) ನಂತರ ವೀರ್ಯ ವಿಶ್ಲೇಷಣೆ ನಡೆಯುತ್ತದೆ. ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದು.
3) ಡಾಪ್ಲರ್‌ ಅಲ್ಟ್ರಾಸೌಂಡ್‌ ಪರೀಕ್ಷೆ ನಡೆಯಲಿದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ರಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯುವ ಪರೀಕ್ಷೆ ಇದಾಗಿದೆ. ವಯಾಗ್ರಾದಂಥ ಮೆಡಿಸಿನ್‌ ಸೇವಿಸಿದರೂ ಕೂಡ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತೆ.
4) ಎನ್‌ಪಿಟಿ ಟೆಸ್ಟ್‌ : ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ ಇದು. ಆರೋಪಿಯ ಖಾಸಗಿ ಅಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದು. ಈ ಮೂರು ಟೆಸ್ಟ್‌ ಮೂಲಕ ಆರೋಪಿಯ ಪುರುಷತ್ವ ಪರೀಕ್ಷೆ ನಡೆಯುತ್ತವೆ. ಇದರಲ್ಲಿ ಬರುವ ವೈದ್ಯಕೀಯ ವರದಿ ಅತ್ಯಾಚಾರ ಪ್ರಕರಣದಲ್ಲಿ ಬಹಳ ಮುಖ್ಯವಾಗುತ್ತವೆ
ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋಗಳು ಸೋರಿಕೆಯಾದ ನಂತರ ಪ್ರಜ್ವಲ್‌ ರೇವಣ್ಣ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.

RELATED ARTICLES

Latest News