Friday, September 20, 2024
Homeರಾಜಕೀಯ | Politicsಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ : ವಿಪಕ್ಷಗಳಿಗೆ ಸಿದ್ದು ತಿರುಗೇಟು

ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ : ವಿಪಕ್ಷಗಳಿಗೆ ಸಿದ್ದು ತಿರುಗೇಟು

ಮೈಸೂರು, ಆ.7- ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್‌ ಮಾಡಿ ಸರ್ಕಾರ ಅಸ್ಥಿರ ಮಾಡಲು ಬಿಜೆಪಿ- ಜೆಡಿಎಸ್‌‍ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನತೆ ಅವರ ಸುಳ್ಳನ್ನು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳುಗಳಿಂದ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಇದರಲ್ಲಿ ಬಿಜೆಪಿ- ಜೆಡಿಎಸ್‌‍ ನವರು ಯಶಸ್ವಿಯಾಗಲ್ಲ. ಈ ಹಿಂದೆ ಆಪರೇಷನ್‌ ಕಮಲ ಮಾಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಈಗ ನನ್ನನ್ನು ಮತ್ತೆ ಟಾರ್ಗೆಟ್‌ ಮಾಡಿದ್ದಾರೆ ಎಂದು ನೇರವಾಗಿ ಟೀಕಿಸಿದರು.

ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟೀಸ್‌‍. ಅದಕ್ಕೆ ಉತ್ತರ ನೀಡಿದ್ದೇನೆ. ಈ ನಡುವೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ರವರು ರಾಜ್ಯಪಾಲರನ್ನು ಭೇಟಿ ಮಾಡಿರುವುದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನಾತಕವಾಗಿ ನನ್ನ ತಪ್ಪಿಲ್ಲ ಎಂದು ರಾಜ್ಯಪಾಲರಿಗೆ ಮನವರಿಕೆಯಾಗಿರುತ್ತದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳು ಎಷ್ಟೇ ಸುಳ್ಳು ಹೇಳಿದರೂ ಅದನ್ನು ಎದುರಿಸುವ ಶಕ್ತಿ ನನಗಿದೆ. ಈ ಹಿಂದೆ ಬಿಜೆಪಿ ಭ್ರಷ್ಟಸರ್ಕಾರ ಆಡಳಿತ ನಡೆಸಿತ್ತು. ಅದರ ತನಿಖೆ ನಡೆಯುತ್ತಿದೆ.

ಹೀಗಿರುವಾಗ ಯಾವ ನೈತಿಕತೆಯಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಮತ್ತು ರಾಜೀನಾಮೆ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬಿಎಸ್‌‍ ಯಡಿಯೂರಪ್ಪ ಅವರು ಕೋರ್ಟ್‌ ದಯೆಯಿಂದ ಹೊರಗಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ. ರಾಜಕೀಯ ನಿವೃತ್ತಿಯಾಗಬೇಕಿತ್ತು.

ಆದರೆ ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ನೀಡುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಏನು ಹೇಳಬೇಕೋ ಗೊತ್ತಿಲ್ಲ ಎಂದು ಟೀಕಿಸಿದರು.ಕಳೆದ 2014ರಲ್ಲಿ ನಾನು ಸಿಎಂ ಆಗಿದ್ದಾಗ ನನ್ನ ಪತ್ನಿ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮೂಡಾ ಅಧಿಕಾರಿಗಳೇ ನನ್ನ ಗಮನಕ್ಕೆ ತಂದಿದ್ದರು. ಆಗ ನಾನು ಒಂದು ಗುಂಟೆ ಜಾಗವನ್ನೂ ಕೊಡಬೇಡಿ ಎಂದು ಹೇಳಿದ್ದೆನೆಂದು ಇದೇ ವೇಳೆ ತಿಳಿಸಿದರು.

2021ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದಾಗ ಬಿಜೆಪಿ ಸರ್ಕಾರವಿತ್ತು. ಅವರು ಕಾನೂನು ರೀತಿಯಲ್ಲಿ ಬದಲಿ ನಿವೇಶನ ಕೊಟ್ಟಿದ್ದಾರೆ. ನಾನು ಸೈಟು ಪಡೆಯಬೇಕು ಎಂಬ ಉದ್ದೇಶವಿದ್ದಿದ್ದರೆ ಸಿಎಂ ಆಗಿದ್ದಾಗಲೇ ಸೈಟು ಕೊಡಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದರು.

ನಾನು ಯಾವುದೇ ಅಧಿಕಾರ ಪ್ರಭಾವ ಬಳಸಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ. ಈಗಿನ ನನ್ನ ಮೇಲೆ ಬಂದಿರುವ ಆರೋಪಗಳೇ ಬೇರೆ ಎಂದು ಹೇಳಿದರು.ಮೈಸೂರಿನಲ್ಲಿ ಆ. 9ರಂದು ಬೃಹತ್‌ ಸಮಾವೇಶ ನಡೆಯಲಿದೆ. ಆ ಸಂದರ್ಭದಲ್ಲಿ ಎಲ್ಲರ ಹಗರಣಗಳನ್ನು ನಿಮ ಮುಂದೆ ಇಡುತ್ತೇನೆ ಎಂದು ಸಿಎಂ ಗುಡುಗಿದ್ದಾರೆ.

RELATED ARTICLES

Latest News