Friday, November 22, 2024
Homeರಾಜ್ಯಹೆಚ್ಚಿದ ಬಿಸಿಲಿನ ಝಳ : ಮತಗಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ

ಹೆಚ್ಚಿದ ಬಿಸಿಲಿನ ಝಳ : ಮತಗಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ

ಬೆಂಗಳೂರು,ಮೇ5- ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಭಾರತದ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.

ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮತದಾರರಿಗೆ ಅನುಕೂಲವಾಗುವಂತೆ ಹಲವು ಸೌಲಭ್ಯಗಳನ್ನು ಮತಗಟ್ಟೆಯಲ್ಲಿ ಕಲ್ಪಿಸಲಾಗುತ್ತದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ಪ್ರಕಾರ, ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಪೀಠೋಪಕರಣ, ರ್ಯಾಂಪ್‌ ಸೌಲಭ್ಯಗಳಲ್ಲದೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಹಾಗೂ ಮತದಾರರಿಗೆ ಸಹಾಯವಾಗಲು ಸಂಕೇತ ಫಲಕಗಳನ್ನು ಅಳವಡಿಸಲಾಗಿದೆ.

ಮತಗಟ್ಟೆಯ ಅಕ್ಕಪಕ್ಕದ ಕೊಠಡಿಗಳನ್ನು ವಿಶ್ರಾಂತಿ ಕೊಠಡಿಗಳನ್ನಾಗಿ ಮಾರ್ಪಡಿಸಿ ಸಿದ್ದವಿರಿಸಲಾಗಿದೆ. ಮತಗಟ್ಟೆ ಆವರಣದಲ್ಲಿ ಶಾಮಿಯಾನ ಮತ್ತು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಮತಗಟ್ಟೆ ಆವರಣದಲ್ಲಿ ಶುಶ್ರೂಷಕರು, ಆಶಾ ಕಾರ್ಯಕರ್ತೆಯರೊಂದಿಗೆ ಓಆರ್‌ಎಸ್‌, ವೈದ್ಯಕೀಯ ಕಿಟ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತುರ್ತು ಸಂದರ್ಭಗಳಿಗಾಗಿ ಆಂಬ್ಯುಲೆನ್ಸ್ ಸೇವಾ ಸೌಲಭ್ಯವಿರುತ್ತದೆ ಎಂದು ತಿಳಿಸಿದೆ.

ರಾಜಕೀಯ ಪಕ್ಷಗಳ ತಾತ್ಕಾಲಿಕ ಕಚೇರಿ:
ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾನದ ದಿನದಂದು ಮತಗಟ್ಟೆ ಕೇಂದ್ರದಿಂದ 200 ಮೀಟರ್‌ ಹೊರಗಿನ ಜಾಗದಲ್ಲಿ ನೆರಳಿಗಾಗಿ ತಾತ್ಕಾಲಿಕ ಟೆಂಟ್‌ ಹಾಕಿಕೊಂಡು ಪ್ರತಿ ಬೂತ್‌ಗೆ ಕೇವಲ ಒಂದು ಟೇಬಲ್‌ ಎರಡು ಕುರ್ಚಿಗಳನ್ನು ಮಾತ್ರ ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ಯಾವುದೇ ರೀತಿಯ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ಈ ರೀತಿ ಕೆಲವು ನಿರ್ಬಂಧಗಳನ್ನು ಆಯೋಗ ಅಭ್ಯರ್ಥಿಗಳಿಗೆ ವಿಧಿಸಿದೆ.

RELATED ARTICLES

Latest News