Saturday, May 18, 2024
Homeರಾಜ್ಯ2ನೇ ಹಂತದ ಚುನಾವಣೆಗೆ ಕ್ಷಣಗಣನೆ, ಇಂದು ಸಂಜೆ ಪ್ರಚಾರಕ್ಕೆ ತೆರೆ

2ನೇ ಹಂತದ ಚುನಾವಣೆಗೆ ಕ್ಷಣಗಣನೆ, ಇಂದು ಸಂಜೆ ಪ್ರಚಾರಕ್ಕೆ ತೆರೆ

ಬೆಂಗಳೂರು,ಮೇ5- ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ.

ಮತದಾರರು ಅಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಆಯಾ ಕ್ಷೇತ್ರ ಬಿಟ್ಟು ತೆರಳಬೇಕಿದೆ. ಮೇ7ರಂದು ಮತದಾನ ನಡೆಯಲಿದ್ದು, ಮತದಾನ ಮುಕ್ತಾಯವಾಗುವ 48 ಗಂಟೆ ಮುಂಚಿನ ಅವಧಿಯನ್ನು ಶೂನ್ಯ ಅವಧಿ ಎಂದು ಘೋಷಿಸಲಾಗಿದ್ದು, ಆ ಅವಧಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕ ಸಭೆಗಳನ್ನು ನಡೆಸಲು ಧ್ವನಿವರ್ಧಕಗಳನ್ನು ಬಳಸಲು ನಿರ್ಬಂಧಿಸಲಾಗಿದೆ.

ಇಂದು ಸಂಜೆ 6 ಗಂಟೆಯ ನಂತರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ. ಆದರೆ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸುವಂತಿಲ್ಲ. ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ವಸತಿ ಗೃಹಗಳು ಹಾಗೂ ಅತಿಥಿಗೃಹಗಳನ್ನು ಪರಿಶೀಲಿಸಿ ಹೊರಗಿನಿಂದ ಚುನಾವಣಾ ಪ್ರಚಾರಕ್ಕಾಗಿ ಬಂದವರು ಉಳಿದುಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ಚುನಾವಣಾಧಿ ಕಾರಿಗಳು ಹಾಗೂ ಪೊಲೀಸ್‌ ಅಧಿ ಕಾರಿಗಳು ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಆಯಾ ಕ್ಷೇತ್ರದ ಗಡಿಗಳಲ್ಲಿ ಚೆಕ್‌ಪೋಸ್‌್ಟಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನಗಳ ಮೇಲೆ ನಿಗಾವಹಿಸುವಂತೆ ನಿರ್ದೇಶನ ನೀಡಿದೆ. ಆಯಾ ಕ್ಷೇತ್ರದ ಮತದಾರರೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಗುರುತಿನ ಚೀಟಿಯನ್ನು ಪರಿಶೀಲಿಸಲು ಸೂಚಿಸಿದೆ. ಸಂಜೆ 6 ಗಂಟೆಯಿಂದ ಮತದಾನ ನಡೆಯುವ ಜಿಲ್ಲೆಗಳಲ್ಲಿ ರಾಜ್ಯದ ಗಡಿಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿ ಕಾರಿ (ಸಿಇಒ) ಕಚೇರಿ ತಿಳಿಸಿದೆ.

ಮದ್ಯ ಮಾರಾಟಕ್ಕೆ ನಿಷೇಧ:

ಮತದಾನದ ಅವಧಿ ಮುಗಿಯುವವರೆಗೆ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಬೇರೆ ರಾಜ್ಯಗಳಿಂದಲೂ ಮದ್ಯ ತರುವಂತಿಲ್ಲ. ಕರ್ನಾಟಕ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಇತರ ರಾಜ್ಯಗಳ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಉತ್ತರಕನ್ನಡ, ಬೆಳಗಾವಿ ಮತ್ತು ವಿಜಯಪುರ ತೆಲಂಗಾಣ, ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿವೆ.

ಸಾರ್ವತ್ರಿಕ ರಜೆ:
ನೆರೆಯ ರಾಜ್ಯಗಳ ರಾಜ್ಯ ಸರ್ಕಾರಗಳಿಗೆ ಮತದಾನ ಮಾಡಲು ಅವಕಾಶ ನೀಡಲು ಎಲ್ಲಾ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಮೇ 7ರಂದು ವೇತನ ಸಹಿತ ರಜೆ ನೀಡುವಂತೆ ವಿನಂತಿಸಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮತದಾನದ ದಿನ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ.

ಅಲ್ಲದೆ, ವ್ಯಾಪಾರ ಉದ್ಯಮಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳು ದಿನಗೂಲಿ ನೌಕರರು ಮತ್ತು ಅವರೊಂದಿಗೆ ಕೆಲಸ ಮಾಡುವ ಕಾಯಂ ಸಿಬ್ಬಂದಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲು ವೇತನ ಸಹಿತ ರಜೆಯನ್ನು ಮಂಜೂರು ಮಾಡುವಂತೆ ಸೂಚಿಸಲಾಗಿದೆ.

ಉತ್ತರ ಕರ್ನಾಟಕದ ಹಲವು ಮಂದಿ ಮಹಾರಾಷ್ಟ್ರ, ಹೈದರಾಬಾದ್‌ ಮತ್ತಿತರ ಕಡೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕರೆಸಿ ಆಯಾ ಕ್ಷೇತ್ರಕ್ಕೆ ಬಂದು ಮತದಾನ ಮಾಡುವಂತೆ ಮನವೊಲಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಯಾವುದೇ ಅಭಿಪ್ರಾಯ ಸಂಗ್ರಹಕ್ಕೆ ಅವಕಾಶವಿಲ್ಲ ಎಂದು ಚುನಾವಣಾಧಿ ಕಾರಿಗಳು ತಿಳಿಸಿದ್ದಾರೆ. ಮತಗಟ್ಟೆ ಅಭಿಪ್ರಾಯ ಸಂಗ್ರಹದ ಮೇಲೆ ಈ ನಿರ್ಬಂಧಗಳನ್ನು ಹೇರಲಾಗಿದೆ. ಏಪ್ರಿಲ್‌ 19ರಿಂದ ಜೂನ್‌ 1ರ ಸಂಜೆ 6.30ರವರೆಗೆ ಈ ನಿಷೇಧವಿದೆ.

227 ಅಭ್ಯರ್ಥಿಗಳು:
ಕಲಬುರಗಿಯ ಉತ್ತರಕರ್ನಾಟಕ ಭಾಗದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬಾರ್ಗ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಒಟ್ಟು 2,59,52,958 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಎಲ್ಲಾ 14 ಕ್ಷೇತ್ರಗಳಲ್ಲೂ ಸ್ಫರ್ಧಿಸಿವೆ. ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 73 ಹಾಗೂ 117 ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ 206 ಪುರುಷರು, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.

RELATED ARTICLES

Latest News