ಬೆಂಗಳೂರು,ಮೇ5- ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 44.7 ಡಿ.ಸೆ.ನಷ್ಟು ದಾಖಲಾಗಿದೆ. ಕಲ್ಯಾಣ ಕರ್ನಾಟಕ ಅಕ್ಷರಶಃ ಬಿಸಿಲ ನಾಡಾಗಿ ಪರಿಣಮಿಸಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ 3ರಿಂದ 4 ಡಿ.ಸೆ.ನಷ್ಟು ಸರಾಸರಿಗಿಂತ ಹೆಚ್ಚು ದಾಖಲಾಗುತ್ತಿದ್ದು, ಜನರು ತತ್ತರಿಸುವಂತೆ ಮಾಡಿದೆ.
ರಾಜ್ಯದಲ್ಲಿ ಒಣಹವೆ ಮುಂದುವರೆದಿದ್ದು, ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳೆರಡರಲ್ಲೂ 2ರಿಂದ 3 ಡಿ.ಸೆ.ನಷ್ಟು ಹೆಚ್ಚಳವಾಗಿರುವುದು ಕಂಡುಬರುತ್ತಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಲಬುರಗಿಯಲ್ಲಿ 44.7 ಡಿ.ಸೆ.ನಷ್ಟು ಗರಿಷ್ಠ ತಾಪಮಾನ ದಾಖಲಾಗಿದ್ದರೆ, ಧಾರವಾಡದಲ್ಲಿ 20.4 ಡಿ.ಸೆ ಕನಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದಲ್ಲಿ ಈಗಾಗಲೇ ಒಂದೆರಡು ಜಿಲ್ಲೆಗಳ ಹೊರತುಪಡಿಸಿದರೆ ಗರಿಷ್ಠ ತಾಪಮಾನ 37 ಡಿ.ಸೆ ಗಡಿ ದಾಟಿದೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ್ 42, ವಿಜಯಪುರ, ಬಾಗಲಕೋಟೆ 42.5, ಕೊಪ್ಪಳ 43.3, ರಾಯಚೂರು 44.4, ಕಾರವಾರ 34.4, ಬೆಳಗಾವಿ ನಗರ 39, ಧಾರವಾಡ 39.6, ಹಾವೇರಿ 37.2, ಗದಗ 40.2, ಬೆಂಗಳೂರು 37.6, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 39.2, ಚಾಮರಾಜನಗರ 38.1, ಚಿತ್ರದುರ್ಗ 38.9, ದಾವಣಗೆರೆ 38.5, ಹಾಸನ 37.2, ಮಂಡ್ಯ 38.2, ಮೈಸೂರು 38.1, ಶಿವಮೊಗ್ಗದಲ್ಲಿ 38.4 ಡಿ.ಸೆ.ನಷ್ಟು ಗರಿಷ್ಠ ತಾಪಮಾನ ದಾಖಲಾಗಿವೆ.
ಹವಾಮಾನ ಮುನ್ಸೂಚನೆ ಪ್ರಕಾರ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.
ಕೆಲವೆಡೆ ಚದುರಿದಂತೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಬಹುದು. ಕೆಲವೆಡೆ ಗಾಳಿಯ ಆರ್ಭಟವು ಹೆಚ್ಚಾಗಿರುವ ಸಾಧ್ಯತೆಗಳಿವೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದ್ದು, ಮೇ 7ರಿಂದ 9ರ ನಡುವಿನ ಅವಧಿಯಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.