ಬೆಂಗಳೂರು, ಸೆ.19-ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (84) ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಕೆಲವು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದ ಅವರು ವಿಶ್ರಾಂತಿ ಪಡೆಯುತ್ತಿದ್ದರು.
ಇಂದು ಬೆಳಿಗ್ಗೆ 10 ಗಂಟೆಯ ಸಂದರ್ಭದಲ್ಲಿ ಕೆಂಪಣ್ಣ ಅವರಿಗೆ ಎದೆನೋವು ಕಾಣಿಸಿಕೊಂಡು ಏಕಾಏಕಿ ಹೊಸಕೋಟೆ ಸಮೀಪದ ಜ್ಯೋತಿಪುರದಲ್ಲಿರುವ ಅವರ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಶೇ.40 ಕಮಿಷನ್ ಆರೋಪ ಹೊರಿಸಿ ಅದು ಪ್ರಧಾನಿ ಕಚೇರಿವರೆಗೂ ತಲುಪಿತ್ತು. ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿತ್ತು. ಸರ್ಕಾರ ಬದಲಾದರೂ ಒಂದೂವರೆ ವರ್ಷ ಕಳೆದರೂ ಗುತ್ತಿಗೆದಾರರ ಸಮಸ್ಯೆ ಬಗೆಹರಿದಿಲ್ಲ. ಮತ್ತೆ ಕಮಿಷನ್ ಹಾವಳಿ ಇನ್ನೂ ಹೆಚ್ಚಾಗಿದೆಯೆಂದು ಟೀಕಾ ಪ್ರಹಾರ ನಡೆಸಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಕೂಡ ಅವರನ್ನು ಕರೆಸಿಕೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೂ ಗುತ್ತಿಗೆದಾರರು ಇವರ ಬಳಿ ಬಂದು ನೋವು ತೋಡಿಕೊಳ್ಳುತ್ತಿದ್ದರು.ಕಳೆದ ಒಂದು ತಿಂಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರರ ಸಮಸ್ಯೆ ಬಗೆಹರಿಯದಿದ್ದಲ್ಲಿ ಕಾಮಗಾರಿಯನ್ನು ನಿಲ್ಲಿಸುವುದಾಗಿ ಸರ್ಕಾರಕ್ಕೆ ಚಾಟಿ ಬೀಸಿದ್ದರು.
ಕಳೆದ 50 ವರ್ಷಗಳಿಂದ ಅವರು ಗುತ್ತಿಗೆದಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಯಾವುದೇ ಅಂಜಿಕೆ ಅಳುಕಿಲ್ಲದೆ ನೇರವಾಗಿ ಮಾತನಾಡುವ ಗುಣ ಹೊಂದಿದ್ದ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮೇಲೆ ಹೊಸ ವರ್ಚಸ್ಸು ನೀಡಿದ್ದರು.ಮೂವರು ಪುತ್ರಿಯರು ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಿಬಿಎಂಪಿ ಗುತ್ತಿಗೆದಾರರ ಸಂಘ, ನೌಕರರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ಕೂಡ ಕೆಂಪಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿ ಆಸೆ ಆಮಿಷಗಳಿಗೆ ಒಳಗಾಗದೆ ನೇರವಾಗಿದ್ದ ಕೆಂಪಣ್ಣ ಅವರ ಅಗಲಿಕೆ ನನಗೆ ನೋವು ತಂದಿದೆ ಅವರ ಆತಕ್ಕೆ ಶಾಂತಿ ಸಿಗಲಿಯೆಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಇವರ ಅಂತ್ಯಕ್ರಿಯೆ ಮಧ್ಯಾಹ್ನ 3 ಗಂಟೆಗೆ ನಡೆಯಲಿವೆಯೆಂದು ಕುಟುಂಬ ಮೂಲಗಳು ತಿಳಿಸಿವೆ.