ಬೆಂಗಳೂರು,ಮಾ.2- ನಗರದ ನೀರಿನ ಹಾಹಾಕಾರವನ್ನು ತಗ್ಗಿಸಲು ಖಾಸಗಿ ಬೋರ್‍ವೆಲ್‍ಗಳು ಮತ್ತು ಟ್ಯಾಂಕರ್‍ಗಳನ್ನು ವಶಕ್ಕೆ ತೆಗೆದುಕೊಂಡು ಬಿಬಿಎಂಪಿಯಿಂದಲೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತಂತೆ ಮಹತ್ವದ ಘೋಷಣೆ ಹೊರಡಿಸಿದ ಅವರು, ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 200 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರ ಇದೆ. ಬೆಂಗಳೂರಿನಲ್ಲೂ ಅಂತರ್ ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಟ್ಯಾಂಕರ್ ಮಾಫಿಯಾ ದಂಧೆ ನಡೆಸಲು ಅವಕಾಶ ನೀಡುವುದಿಲ್ಲ ಎಂದರು.
ಬೆಂಗಳೂರಿನಲ್ಲಿಂದು ಕುಡಿಯುವ ನೀರಿಲ್ಲ. ನಾನು ಪ್ರತಿ ವಿಧಾನಸಭಾ ಕ್ಷೇತ್ರದ ಮೇಲೂ ನಿಗಾ ಇರಿಸಿದ್ದೇನೆ. ಬಿಬಿಎಂಪಿಯ ವಿಶೇಷ ನಿಧಿಯನ್ನು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ನೀರು ಪೂರೈಸುವ ಟ್ಯಾಂಕರ್‍ಗಳು ಹಾಗೂ ಬೋರ್‍ವೆಲ್‍ಗಳನ್ನು ಗುರುತಿಸಿದ್ದಾರೆ.ಅವುಗಳನ್ನು ಬಿಬಿಎಂಪಿಯಲ್ಲಿ ನೋಂದಾಯಿಸಿಕೊಳ್ಳಲು ಒಂದು ವಾರದ ಕಾಲಾವಕಾಶ ನೀಡಲಾಗಿದೆ.
ಪೊಲೀಸರು ಮತ್ತು ಆರ್‍ಟಿಓ ಅಧಿಕಾರಿಗಳು ನೋಂದಾವಣಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ಬಳಿಕ ಅವುಗಳನ್ನು ವಶಕ್ಕೆ ತೆಗೆದುಕೊಂಡು ಬಿಬಿಎಂಪಿಯಿಂದಲೇ ನೀರನ್ನು ಪೂರೈಸಲಾಗುವುದು ಎಂದರು. ನೀರಿನ ಸಮಸ್ಯೆ ನಿವಾರಣೆಗೆ ಪ್ರತಿದಿನ ಬಿಬಿಎಂಪಿ ಆಯುಕ್ತರು ಸಭೆ ನಡೆಸಿ, ಚರ್ಚೆ ನಡೆಸುತ್ತಿದ್ದಾರೆ. ಮಾ.7 ರವರೆಗೆ ನೋಂದಾವಣಿಗೆ ಕಾಲಾವಕಾಶವಿದ್ದು, ಆ ನಂತರ ಎಲ್ಲೆಲ್ಲಿ ನೀರಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡು ಕೊರತೆ ಇರುವ ಕಡೆ ಸರಬರಾಜು ಮಾಡಲಾಗುವುದು ಎಂದರು. ಸೋಮವಾರ ಗಣಿ ಮತ್ತು ಭೂ ವಿಜ್ಞಾನ, ಸಣ್ಣ ನೀರಾವರಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.