Friday, September 20, 2024
Homeರಾಜಕೀಯ | Politicsಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರೇಕೆ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ..? : ಪ್ರಿಯಾಂಕ್‌ ಖರ್ಗೆ

ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರೇಕೆ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ..? : ಪ್ರಿಯಾಂಕ್‌ ಖರ್ಗೆ

Priyank Kharge on BJP

ಬೆಂಗಳೂರು,ಸೆ.2- ಕೋವಿಡ್‌ ಕಾಲದಲ್ಲಿ ನಡೆದ ಹಗರಣಗಳ ತನಿಖೆ ನಡೆಸಿದ ನ್ಯಾಯಾಂಗ ಆಯೋಗ ಮಧ್ಯಂತರ ವರದಿ ನೀಡುತ್ತಿದ್ದಂತೆ ಬಿಜೆಪಿಯವರು ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದು ಹೇಳಿಕೆ ನೀಡಿರುವುದು ಹಗರಣ ನಡೆದಿರುವುದನ್ನು ದೃಢಪಡಿಸಿದಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ? ಕೋವಿಡ್‌ ಹಗರಣದ ತನಿಖಾ ವರದಿ ಏನಿದೆ ಎಂದು ಗೊತ್ತಿಲ್ಲ. ವರದಿ ಸಲ್ಲಿಕೆಯಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ತಪ್ಪೇ ಮಾಡದಿದ್ದ ಮೇಲೆ ಕಾನೂನು ಹೋರಾಟ ಏಕೆ?, ಇದರರ್ಥ ಏನು?, ಒಂದು ಜೈಲಿಗೆ ಹೋಗಬೇಕು, ಇಲ್ಲವೇ ಜಾಮೀನು ಪಡೆಯಬೇಕು ಎಂದಲ್ಲವೇ! ಎಂದರು.

ಕೈಗಾರಿಕಾ ನಿವೇಶನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅದಕ್ಕೆ ಸಚಿವ ಎಂ.ಬಿ.ಪಾಟೀಲ್‌ರವರು ಇಂಚಿಂಚೂ ಸ್ಪಷ್ಟನೆ ನೀಡಿದ್ದಾರೆ. ನಾವು ಎಲ್ಲಿಯೂ ಓಡಿ ಹೋಗಿಲ್ಲ. ಈ ವಿಚಾರ ಚರ್ಚೆ ಮಾಡಬಾರದು ಎಂಬ ತಡೆಯಾಜ್ಞೆಯನ್ನು ತಂದಿಲ್ಲ ಎಂದರು.

ಬಿಜೆಪಿಯವರು ಸಿಡಿ ಇದೆ ಎಂದರೆ ಒಂದಷ್ಟು ಮಂದಿ ತಡೆಯಾಜ್ಞೆ ತರುತ್ತಾರೆ. ಕೋವಿಡ್‌ ಹಗರಣದ ಮಧ್ಯಂತರ ವರದಿ ಬಂದಾಕ್ಷಣ ಒಂದಷ್ಟು ಜನ ಕಾನೂನು ಹೋರಾಟದ ಮಾತನಾಡುತ್ತಾರೆ. ವರದಿಯಲ್ಲಿ ಏನಿದೆ ಎಂಬುದು ತಿಳಿಯದೆ ಇವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸ್ಪಷ್ಟೀಕರಿಸುತ್ತಿದೆ ಎಂದು ಹೇಳಿದರು.

ವರದಿಯನ್ನು ತರಾತುರಿಯಲ್ಲಿ ಪಡೆಯಲಾಯಿತು ಎಂಬುದು ಹಾಸ್ಯಾಸ್ಪದ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆದಿದೆ. ಈವರೆಗೂ ಒಂದು ಹಗರಣದ ವರದಿ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಕೆಲವರು ಟೀಕೆ ಮಾಡಿದರು. ಈಗ ವರದಿ ಪಡೆದುಕೊಂಡರೆ ತರಾತುರಿಯಲ್ಲಿ ವರದಿ ಪಡೆಯಲಾಗಿದೆ ಎಂಬ ಆರೋಪಗಳಿವೆ. ನಾವು ಏನು ಮಾಡಿದರೂ ತಪ್ಪು ಎಂದು ಭಾವಿಸುವವರಿಗೆ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಅವಧಿಯಲ್ಲಿ ನಡೆದ 21 ಹಗರಣಗಳನ್ನು ವಿಧಾನಮಂಡಲದಲ್ಲಿ ಪ್ರಸ್ತಾಪಿಸಲಾಗಿದೆ. ಅವುಗಳಿಗೆ ತಾರ್ಕಿಕ ಅಂತ್ಯ ಕಾಣಿಸುವುದು ನಮ ಜವಾಬ್ದಾರಿ. ಕೋವಿಡ್‌ ಸಂದರ್ಭದಲ್ಲಿ ಚಾಮರಾಜನಗರದ ಆಮ್ಲಜನಕ ಕೊರತೆಯಿಂದಾದ ದುರಂತ, ಪಿಪಿ ಕಿಟ್‌ ಖರೀದಿ, ಕೆಎಸ್‌‍ಆರ್‌ಟಿಸಿ ಪ್ರಯಾಣ ದರ ದ್ವಿಗುಣಗೊಳಿಸುವುದು ಸೇರಿದಂತೆ ಹಲವು ವಿಚಾರಗಳು ಆಳ ಅಗಲದ ತನಿಖೆ ನಡೆಯಲಿವೆ ಎಂದರು.

ಪಿಎಸ್‌‍ಐ ನೇಮಕಾತಿ ಹಗರಣದ ವಿಚಾರಣಾ ವರದಿ ಬಂದಿದೆ. ಅದರ ಕ್ರಿಮಿನಲ್‌ ತನಿಖೆಗಾಗಿ ಎಸ್‌‍ಐಟಿ ರಚನೆ ಮಾಡಲಾಗಿದೆ. ಬಿಟ್‌ ಕಾಯಿನ್‌ ಹಗರಣದ ತನಿಖೆ ಯಾವ ಹಂತದಲ್ಲಿದೆ ಎಂದು ತಮಗೆ ಗೊತ್ತಿಲ್ಲ. ಸಂಬಂಧಪಟ್ಟ ಸಚಿವರು ಆದರ ಬಗ್ಗೆ ಪ್ರತಿಕ್ರಿಯಿಸಬೇಕು. ಈ ಹಿಂದೆ ಬಿಟ್‌ ಕಾಯಿನ್‌ ಬಗ್ಗೆ ತಾಂತ್ರಿಕ ಅಂಶಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಾವು ವಿವರಣೆ ನೀಡಿದ್ದರಿಂದಾಗಿ ಆ ಹಗರಣದಲ್ಲಿ ನನ್ನ ಹೇಳಿಕೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ಹೇಳಿದರು.

ಕೈಗಾರಿಕಾ ಸಿಎ ನಿವೇಶನ ಪಡೆದ ಬಗ್ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ತಮಗೂ ನೋಟಿಸ್‌‍ ಕೊಟ್ಟು ವಿವರಣೆ ಕೇಳಿದ್ದಾರೆ. ಕಾಂಗ್ರೆಸಿಗರ ವಿರುದ್ಧ ಆರೋಪಗಳು ಬಂದಾಗ ಬೆಳಕಿನ ವೇಗದಲ್ಲಿ ರಾಜಭವನ ಕ್ರಮ ಕೈಗೊಳ್ಳುತ್ತದೆ. ಅದೇ ಬಿಜೆಪಿ-ಜೆಡಿಎಸ್‌‍ ವಿರುದ್ಧ ದೂರುಗಳು ಬಂದರೆ ಕಂಡೂ ಕಾಣದಂತೆ ಇರಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News